ಗದಗದಲ್ಲಿ Namma Clinic ಮಹಾ ಎಡವಟ್ಟು; ಬಡ ರೋಗಿಗಳಿಗೆ 'expiry' ಮಾತ್ರೆ ವಿತರಣೆ, ಸಾರ್ವಜನಿಕರ ಆಕ್ರೋಶ..!

ಬೆಟಗೇರಿಯ ನಮ್ಮ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ವೈದ್ಯರು ಕೆಮ್ಮಿಗೆ ಸಂಬಂಧಿಸಿದ ಮಾತ್ರೆ ನೀಡಿದ್ದರು. ಆದರೆ, ಆ ಮಾತ್ರೆಯ ಅವಧಿ ಮುಗಿದಿರುವುದನ್ನು ವೈದ್ಯರು ಗಮನಿಸಿರಲಿಲ್ಲ ಎನ್ನಲಾಗಿದೆ.
Expired medicine at Namma Clinic in Betageri near Gadag
ಅವಧಿ ಮೀರಿದ ಔಷಧ.
Updated on: 

ಗದಗ: ಬಡವರು ಮತ್ತು ಸಾಮಾನ್ಯ ಜನರಿಗೆ ಉಚಿತ ಹಾಗೂ ಗುಣಮಟ್ಟದ ವೈದ್ಯಕೀಯ ಸೇವೆ ನೀಡಲೆಂದು ಆರಂಭಿಸಲಾದ 'ನಮ್ಮ ಕ್ಲಿನಿಕ್' ನಲ್ಲಿ ಗಂಭೀರ ನಿರ್ಲಕ್ಷ್ಯವೊಂದು ಬೆಳಕಿಗೆ ಬಂದಿದೆ.

ಗದಗದ ಬೆಟಗೇರಿಯ ಆಶ್ರಯ ಕಾಲೋನಿಯಲ್ಲಿರುವ ನಮ್ಮ ಕ್ಲಿನಿಕ್‌ನಲ್ಲಿ ರೋಗಿಗಳಿಗೆ ಅವಧಿ ಮೀರಿದ (Expired) ಮಾತ್ರೆಗಳನ್ನು ವಿತರಿಸಿರುವುದು ತೀವ್ರ ಆತಂಕ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಬೆಟಗೇರಿಯ ನಮ್ಮ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರಿಗೆ ವೈದ್ಯರು ಕೆಮ್ಮಿಗೆ ಸಂಬಂಧಿಸಿದ ಮಾತ್ರೆ ನೀಡಿದ್ದರು. ಆದರೆ, ಆ ಮಾತ್ರೆಯ ಅವಧಿ ಮುಗಿದಿರುವುದನ್ನು ವೈದ್ಯರು ಗಮನಿಸಿರಲಿಲ್ಲ ಎನ್ನಲಾಗಿದೆ. ಮಾತ್ರೆ ಸೇವಿಸುವ ಸಂದರ್ಭದಲ್ಲಿ ಅದರ ಮೇಲಿನ ಅವಧಿ ಮುಗಿದಿರುವುದನ್ನು ರೋಗಿ ಗಮನಿಸಿ ವೈದ್ಯರ ಗಮನಕ್ಕೆ ತಂದಿದ್ದಾರೆ.

ರೋಗಿ ಮಾತ್ರೆಯನ್ನು ವೈದ್ಯರಿಗೆ ತೋರಿಸಿದಾಗ, ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರು ಇದು ಮೊದಲ ಘಟನೆಯಲ್ಲ ಎಂದು ಆರೋಪಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದ ಬಡ ರೋಗಿಗಳ ಜೀವದೊಂದಿಗೆ ಆಟವಾಡಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರ ಪ್ರದೇಶಗಳ ಬಡವರು ಹಾಗೂ ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ನಮ್ಮ ಕ್ಲಿನಿಕ್ ಯೋಜನೆಯನ್ನು ಜಾರಿಗೆ ತಂದಿದೆ.

Expired medicine at Namma Clinic in Betageri near Gadag
ಸ್ಪೀಕರ್ ಯುಟಿ ಖಾದರ್ ರಿಂದ ಸಿಬ್ಬಂದಿಗೆ ಔತಣಕೂಟ; ಪಕ್ಕಾ ಆಯ್ತಾ ಸಚಿವ ಸ್ಥಾನ?

ರಾಜ್ಯಾದ್ಯಂತ ಈ ಯೋಜನೆಯಡಿ ಕ್ಲಿನಿಕ್‌ಗಳು ಕಾರ್ಯನಿರ್ವಹಿಸುತ್ತಿದ್ದು, ಗದಗ ಜಿಲ್ಲೆಯ ಬೆಟಗೇರಿ ಪ್ರದೇಶದಲ್ಲೂ ಕಳೆದ ವರ್ಷ ಹೊಸ ಕ್ಲಿನಿಕ್ ಆರಂಭಿಸಲಾಗಿತ್ತು.

ಬೆಟಗೇರಿ, ನೇಕಾರ ಕಾಲೋನಿ ಹಾಗೂ ಆಶ್ರಯ ಕಾಲೋನಿಯಂತಹ ಕಡಿಮೆ ಆದಾಯದ ಜನರು ವಾಸಿಸುವ ಪ್ರದೇಶಗಳ ನಿವಾಸಿಗಳಿಗೆ ಗುಣಮಟ್ಟದ ಆರೋಗ್ಯ ಸೇವೆ ಸುಲಭವಾಗಿ ದೊರೆಯುವಂತೆ ಮಾಡುವುದು ಈ ಕ್ಲಿನಿಕ್ ಸ್ಥಾಪನೆಯ ಪ್ರಮುಖ ಉದ್ದೇಶವಾಗಿತ್ತು.

ಆದರೆ, ಇದೀಗ ಬೆಟಗೇರಿಯ ನಮ್ಮ ಕ್ಲಿನಿಕ್‌ನ ವೈದ್ಯರು ಹಾಗೂ ಸಿಬ್ಬಂದಿಯ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರಲ್ಲಿ ಆಕ್ರೋಶ ವ್ಯಕ್ತವಾಗಿದೆ. ಬಡ ರೋಗಿಗಳ ಜೀವದ ಬಗ್ಗೆ ವೈದ್ಯರು ಹಾಗೂ ಸಿಬ್ಬಂದಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ.

ಈ ಹಿಂದೆ ಕೂಡ ನಮ್ಮ ಕ್ಲಿನಿಕ್‌ಗೆ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯೊಬ್ಬರನ್ನು ವೈದ್ಯರು ಪರೀಕ್ಷಿಸಿ ಅವಧಿ ಮೀರಿದ ಮಾತ್ರೆಗಳನ್ನು ನೀಡಿದ್ದರು ಎನ್ನಲಾಗಿದೆ. ಇಂತಹ ಘಟನೆಗಳು ಸಾರ್ವಜನಿಕರಲ್ಲಿ ತೀವ್ರ ಅಸಮಾಧಾನ ಹಾಗೂ ಆಕ್ರೋಶಕ್ಕೆ ಕಾರಣವಾಗಿವೆ.

ಹೆಸರು ಬಹಿರಂಗಪಡಿಸದಂತೆ ಮನವಿ ಮಾಡಿದ ನಮ್ಮ ಕ್ಲಿನಿಕ್‌ನ ವೈದ್ಯರೊಬ್ಬರು, “ಮಾತ್ರೆಯ ಅವಧಿ ಮುಗಿದಿರುವುದನ್ನು ನಾವು ಗಮನಿಸಿರಲಿಲ್ಲ. ಇದು ನಮ್ಮ ಕಡೆಯಿಂದಾದ ತಪ್ಪು. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಲಾಗುವುದು” ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com