

ಬೆಂಗಳೂರು: ಉಪ್ಪಿನ ಅತಿಯಾದ ಸೇವನೆಯಿಂದ ಉಂಟಾಗಬಹುದಾದ ಆರೋಗ್ಯ ಸಮಸ್ಯೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಹೊರಡಿಸಲು ಮುಂದಾಗಿದೆ.
ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರೋಗ್ಯ ಸಚಿವ ಯುಟಿ ಖಾದರ್, ಅತಿಯಾದ ಉಪ್ಪು ಸೇವನೆ ಒಳ್ಳೆಯದಲ್ಲ. ಉಪ್ಪು ಸೇವನೆ ಕುರಿತು ಮಾರ್ಗಸೂಚಿ ತರಲು ಸಿದ್ಧತೆ ನಡೆಸಿದ್ದೇವೆ ಎಂದರು.
ಆರೋಗ್ಯಕ್ಕೆ ಪೂರಕವಾದ ಉಪ್ಪು ಮಾರುಕಟ್ಟೆಗೆ ಬರಬೇಕು. ಈ ಉದ್ದೇಶದಿಂದ ಉಪ್ಪು ಸೇವನೆ ಬಗ್ಗೆ ಮಾರ್ಗಸೂಚಿ ತರಲು ನಿರ್ಧಾರ ಮಾಡಿದ್ದೇವೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.
ಮದ್ಯದ ಬಾಟಲಿಗಳ ಮೇಲೆ ಆರೋಗ್ಯ ಹಾನಿಕರ ಎಂಬ ಎಚ್ಚರಿಕೆ ಸಂದೇಶ ಮುದ್ರಿಸುವ ಅಥವಾ ಅಂಟಿಸುವ ರೀತಿಯಲ್ಲೇ ಉಪ್ಪಿನ ಪ್ಯಾಕೆಟ್‌ಗಳ ಮೇಲೂ ಎಚ್ಚರಿಕೆ ಸ್ಟಿಕ್ಕರ್‌ಗಳನ್ನು ಹಾಕುವ ಚಿಂತನೆ ಇದೆ ಸಚಿವರು ಹೇಳಿದ್ದಾರೆ.
ಉಪ್ಪು ನಮ್ಮ ದೈನಂದಿನ ಆಹಾರದ ಪ್ರಮುಖ ಭಾಗವಾಗಿದ್ದರೂ, ಅದರ ಅತಿಯಾದ ಬಳಕೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅತಿಯಾದ ಉಪ್ಪು ಸೇವನೆಯಿಂದ ರಕ್ತದೊತ್ತಡ, ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ಸಚಿವರು ಹೇಳಿದ್ದಾರೆ.
ದುಬಾರಿ ಆದರೂ ಚಿಂತೆ ಇಲ್ಲ
ಉಪ್ಪಿನ ದರ ದುಬಾರಿ ಆದರೂ ಚಿಂತೆ ಇಲ್ಲ. ಜನ ಆಗ ಕಡಿಮೆ ಸೇವಿಸ್ತಾರೆ. ಆರೋಗ್ಯಕ್ಕೆ ಪೂರಕವಾಗಿರಬೇಕು. ಎಷ್ಟು ಅಗತ್ಯವೋ ಅಷ್ಟು ಮಾತ್ರ ತಗೊಬೇಕು. ಉಪ್ಪನ್ನು ಔಷಧ ರೀತಿಯಲ್ಲಿ ಬಳಸಬೇಕು. ಉಪ್ಪಿನ ಪ್ಯಾಕೆಟ್ ಮೇಲೂ ಅಗತ್ಯಕ್ಕಿಂತ ಉಪ್ಪು ಸೇವನೆ ಮಾಡಿದ್ರೆ ಏನ್ನೆಲ್ಲಾ ಆರೋಗ್ಯ ಸಮಸ್ಯೆ, ರೋಗ ಬರುತ್ತೆ ಅಂತ ಪ್ರಿಂಟ್ ಮಾಡಬೇಕು. ಜನರಿಗೂ ಅರಿವಿರಬೇಕು, ಜನರಿಗೆ ಜಾಗೃತಿ ಮೂಡಿಸುವುದು ನಮ್ಮ ಕರ್ತವ್ಯ ಎಂದು ಖಾದರ್ ಹೇಳಿದ್ದಾರೆ.
ಜನರು, ಆರೋಗ್ಯ ಇಲಾಖೆ ಹೇಳಿದ್ದನ್ನು ಕೇಳಬೇಕು. ಅಷ್ಟೇ ಅಲ್ಲೇ ಆರೋಗ್ಯ ಇಲಾಖೆಯ ನಿಯಮ ಪಾಲಿಸಬೇಕು. ಶಾಲಾ-ಕಾಲೇಜುಗಳಿಗೆ ಪ್ರತ್ಯೇಕ ಮಾರ್ಗಸೂಚಿ ಬಿಡುಗಡೆ ಮಾಡಲಿದ್ದೇವೆ. ಇದಕ್ಕಾಗಿ ತಜ್ಞರು ಸಂಶೋಧನೆ ಮಾಡಿ, ಮಾಹಿತಿ ಕೊಡಲಿದ್ದಾರೆ. ಆರೋಗ್ಯಕ್ಕೆ ಮಾರಕವಾದ ಯಾವುದೇ ಆಹಾರ ಪದ್ಧತಿ ತಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.