ಪಶುವೈದ್ಯಾಧಿಕಾರಿ ಪರೀಕ್ಷೆ: ಲಂಚಕ್ಕಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ IAS ಅಧಿಕಾರಿ; ಪರೀಕ್ಷಾರ್ಥಿಗಳಿಂದ 30-40 ಲಕ್ಷ ರೂ ಸಂಗ್ರಹ- ED ಆರೋಪ!

ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪಡೆಯಲು ಪರೀಕ್ಷಾರ್ಥಿಗಳಿಂದ 30-40 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ.
IAS officer Gangwar
ಜ್ಞಾನೇಂದ್ರ ಕುಮಾರ್ ಗಂಗ್ವಾರ್
Updated on: 

ನವದೆಹಲಿ/ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ಮಾಜಿ ಪರೀಕ್ಷಾ ನಿಯಂತ್ರಕ ಮತ್ತು ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಗಂಗ್ವಾರ್ ಅವರು, ಅಕ್ರಮ ಹಣಕ್ಕಾಗಿ ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಮಧ್ಯವರ್ತಿಯೊಬ್ಬರಿಗೆ ಸೋರಿಕೆ ಮಾಡಿದ್ದಾರೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಬುಧವಾರ ಆರೋಪಿಸಿದೆ.

ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ಪಡೆಯಲು ಪರೀಕ್ಷಾರ್ಥಿಗಳಿಂದ 30-40 ಲಕ್ಷ ರೂಪಾಯಿಗಳನ್ನು ಸಂಗ್ರಹಿಸಲಾಗಿದೆ ಎಂಬುದು ತನಿಖೆಯಿಂದ ತಿಳಿದುಬಂದಿದೆ ಎಂದು ಇಡಿ ತಿಳಿಸಿದೆ.

2016ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿರುವ ಗಂಗ್ವಾರ್ ಅವರನ್ನು ಇದೇ ಪ್ರಕರಣದ ತನಿಖೆ ನಡೆಸುತ್ತಿರುವ ಕರ್ನಾಟಕ ಸಿಐಡಿ (CID) ವಶದಲ್ಲಿದ್ದಾಗಲೇ ಸೆಪ್ಟೆಂಬರ್ 18ರಂದು ಕೇಂದ್ರ ತನಿಖಾ ಸಂಸ್ಥೆ (ಇಡಿ) ಬಂಧಿಸಿತ್ತು. ಅವರು ಪ್ರಸ್ತುತ ಇಡಿ ವಶದಲ್ಲಿದ್ದಾರೆ. ತಮ್ಮ ವಿರುದ್ಧ ಇಡಿ ಮಾಡಿರುವ ಆರೋಪಗಳ ಕುರಿತು ಪ್ರತಿಕ್ರಿಯೆ ಪಡೆಯಲು ಆ ಅಧಿಕಾರಿ ಅಥವಾ ಅವರ ಕಾನೂನು ತಂಡವನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ.

400 ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿಗಾಗಿ ಕೆಪಿಎಸ್‌ಸಿ ನಡೆಸಿದ ಪರೀಕ್ಷೆಯಲ್ಲಿನ ಅಕ್ರಮಗಳ ಆರೋಪದ ಕುರಿತು ರಾಜ್ಯ ಪೊಲೀಸರು ದಾಖಲಿಸಿದ ಹಲವು ಎಫ್‌ಐಆರ್‌ಗಳ (FIR) ಆಧಾರದ ಮೇಲೆ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ಇಡಿ ಈ ಪ್ರಕರಣವನ್ನು ದಾಖಲಿಸಿದೆ. ಸಿಐಡಿ ಪ್ರಕರಣದ ಭಾಗವಾಗಿ ನ್ಯಾಯಾಂಗ ಬಂಧನದಲ್ಲಿದ್ದ ಬಸವರಾಜ ಕನ್ನಾಳೆ ಎಂಬ ಮಧ್ಯವರ್ತಿಯನ್ನೂ ಇಡಿ ಸೆಪ್ಟೆಂಬರ್ 17ರಂದು ಬಂಧಿಸಿತ್ತು.

ಕೆಪಿಎಸ್‌ಸಿ ನೇಮಕಾತಿ ಪರೀಕ್ಷೆಗಳನ್ನು ಪಾರದರ್ಶಕವಾಗಿ ಮತ್ತು ನ್ಯಾಯಯುತವಾಗಿ ನಡೆಸುವ ಜವಾಬ್ದಾರಿಯನ್ನು ಗಂಗ್ವಾರ್ ಅವರಿಗೆ ವಹಿಸಲಾಗಿತ್ತು ಮತ್ತು ಪ್ರಶ್ನೆ ಪತ್ರಿಕೆಗಳ ಮುದ್ರಣವನ್ನು ಅಂತಿಮಗೊಳಿಸುವುದು ಹಾಗೂ ಮೇಲ್ವಿಚಾರಣೆ ಮಾಡುವುದು ಮತ್ತು ಗೌಪ್ಯ ಪರೀಕ್ಷಾ ಸಾಮಗ್ರಿಗಳನ್ನು ಸುರಕ್ಷಿತವಾಗಿರಿಸುವುದು ಅವರ ಕರ್ತವ್ಯವಾಗಿತ್ತು ಎಂದು ಇಡಿ ಹೇಳಿಕೆಯಲ್ಲಿ ತಿಳಿಸಿದೆ.

"ಜ್ಞಾನೇಂದ್ರ ಕುಮಾರ್ ಗಂಗ್ವಾರ್ ತಮ್ಮ ಅಧಿಕೃತ ಹುದ್ದೆಯನ್ನು ದುರುಪಯೋಗಪಡಿಸಿಕೊಂಡಿದ್ದಾರೆ ಮತ್ತು ಅಕ್ರಮವಾಗಿ ಹಣ ಪಡೆಯಲು ಪರೀಕ್ಷೆಗೆ ಒಂದು ದಿನ ಮುಂಚಿತವಾಗಿ ಸರಿಯಾದ ಉತ್ತರಗಳನ್ನು ಒಳಗೊಂಡಿದ್ದ ಪಶುವೈದ್ಯಕೀಯ ಅಧಿಕಾರಿಗಳ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯನ್ನು ಬಸವರಾಜ ಕನ್ನಾಳೆಗೆ ಸೋರಿಕೆ ಮಾಡಲು ಸಹಕರಿಸಿದ್ದಾರೆ ಎಂಬುದು ತನಿಖೆಯಿಂದ ತಿಳಿದುಬಂದಿದೆ" ಎಂದು ಅದು ಹೇಳಿದೆ.

ಕೆಲವು ಅಭ್ಯರ್ಥಿಗಳನ್ನು ಬೆಂಗಳೂರಿನ ಹೊರವಲಯದಲ್ಲಿರುವ ರೆಸಾರ್ಟ್‌ವೊಂದಕ್ಕೆ ಕರೆದೊಯ್ಯಲಾಗಿತ್ತು ಮತ್ತು ಅಲ್ಲಿ ಅವರಿಗೆ ಸರಿಯಾದ ಉತ್ತರಗಳನ್ನೊಳಗೊಂಡ 'ಸೋರಿಕೆಯಾದ' ಪ್ರಶ್ನೆ ಪತ್ರಿಕೆಯನ್ನು ನೀಡಲಾಗಿತ್ತು ಎಂದು ತನಿಖಾ ಸಂಸ್ಥೆ ತಿಳಿಸಿದೆ. ಕನ್ನಾಳೆ ಮತ್ತು ಅವರ ಸಹಚರರ ಮೇಲ್ವಿಚಾರಣೆಯಲ್ಲಿ ಅಭ್ಯರ್ಥಿಗಳಿಗೆ ಆ ಉತ್ತರಗಳನ್ನು ಕಂಠಪಾಠ ಮಾಡಿಸಲಾಯಿತು. ಈ ಅಭ್ಯರ್ಥಿಗಳನ್ನು ಕನ್ನಾಳೆ ಮತ್ತು ಅವರ ಸಹಚರರು 'ಏರ್ಪಡಿಸಿದ್ದ' ವಾಹನಗಳಲ್ಲಿ ಪರೀಕ್ಷಾ ಕೇಂದ್ರಗಳಿಗೆ ಕರೆದೊಯ್ಯಲಾಗಿತ್ತು ಎಂದು ಸಂಸ್ಥೆ ಹೇಳಿದೆ.

IAS officer Gangwar
ಚಿನ್ನ ಖರೀದಿಗಷ್ಟೇ ಅಲ್ಲ, ಪ್ರೇಯಸಿ ಜೊತೆ ಪ್ರವಾಸಕ್ಕೂ IAS ಅಧಿಕಾರಿ ಜ್ಞಾನೇಂದ್ರ ಕುಮಾರ್‌ಗೆ ಹಣ ನೀಡಿದ್ದ ಕನ್ನಾಳೆ; CID ತನಿಖೆಯಲ್ಲಿ ಬಯಲು!

ಆರೋಪಿಗಳು ಅಂತಹ ಅಭ್ಯರ್ಥಿಗಳಿಂದ ತಲಾ 80 ಲಕ್ಷ ರೂಪಾಯಿಗಳನ್ನು ಬೇಡಿಕೆ ಇಟ್ಟಿದ್ದರು ಮತ್ತು ನಂತರದ ಮಾತುಕತೆಯ ಬಳಿಕ ಆ ಮೊತ್ತವನ್ನು 30-40 ಲಕ್ಷ ರೂಪಾಯಿಗಳಿಗೆ ನಿಗದಿಪಡಿಸಲಾಯಿತು. ಕೆಲವು ಮೊತ್ತವನ್ನು ನಗದು ಮತ್ತು ಬ್ಯಾಂಕಿಂಗ್ ಮಾರ್ಗಗಳ ಮೂಲಕ 'ಮುಂಗಡ'ವಾಗಿ ಪಡೆಯಲಾಗಿತ್ತು. ಆದರೆ ಉಳಿದ ಮೊತ್ತವನ್ನು ಸಹಿ ಮಾಡಿದ ಖಾಲಿ ಚೆಕ್‌ಗಳು ಮತ್ತು ಪ್ರಾಮಿಸರಿ ನೋಟ್‌ಗಳ (ಭರವಸೆಯ ಪತ್ರಗಳ) ರೂಪದಲ್ಲಿ ಪಡೆಯಲಾಗಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದ ಶೋಧ ಕಾರ್ಯಾಚರಣೆಯ ವೇಳೆ ಜಾರಿ ನಿರ್ದೇಶನಾಲಯವು (ED) ಈ ಚೆಕ್‌ಗಳು ಮತ್ತು ನೋಟ್‌ಗಳನ್ನು ವಶಪಡಿಸಿಕೊಂಡಿದೆ. ಅಭ್ಯರ್ಥಿಗಳಿಂದ ಪಡೆದ ಹಣವನ್ನು ಚಿನ್ನದ ಆಭರಣಗಳನ್ನು ಖರೀದಿಸಲು, ವಿಮಾನ ಪ್ರಯಾಣದ ವೆಚ್ಚವನ್ನು ನಗದು ರೂಪದಲ್ಲಿ ಪಾವತಿಸಲು ಮತ್ತು ಇತರ ನಗದು ವಹಿವಾಟುಗಳಿಗೆ ಬಳಸಿಕೊಳ್ಳಲಾಗಿತ್ತು ಎಂದು ಸಂಸ್ಥೆ ತಿಳಿಸಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com