ಫೇಸ್ ಬುಕ್ ಬಳಕೆದಾರರಲ್ಲಿ ನಾಲ್ಕು ವಿಧ:ಅಧ್ಯಯನ

ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ತಿಂಗಳಿಗೆ ಸುಮಾರು 2 ಶತಕೋಟಿ ಗ್ರಾಹಕರು ಬಳಕೆ ಮಾಡುತ್ತಾರೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಸಾಮಾಜಿಕ ಮಾಧ್ಯಮ ಫೇಸ್ ಬುಕ್ ನಲ್ಲಿ ತಿಂಗಳಿಗೆ ಸುಮಾರು 2 ಶತಕೋಟಿ ಗ್ರಾಹಕರು ಬಳಕೆ ಮಾಡುತ್ತಾರೆ. ಇವರಲ್ಲಿ ಫೇಸ್ ಬುಕ್ ನ್ನು ನಾಲ್ಕು ವಿಧಗಳಲ್ಲಿ ಬಳಕೆ ಮಾಡುವವರು ಇರುತ್ತಾರೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. 
ಸಾಮಾಜಿಕ ಮಾಧ್ಯಮವೆಂಬ ಸಂಪರ್ಕ ಜಾಲದಲ್ಲಿ ಸಂಬಂಧವನ್ನು ವಿಸ್ತರಿಸಿಕೊಳ್ಳಲು ಬಳಕೆ ಮಾಡಿಕೊಳ್ಳುವವರಿಂದ ಹಿಡಿದು ಲೈಕ್ಸ್ ಮತ್ತು ಗಮನ ಸೆಳೆಯಲು ಬಳಕೆ ಮಾಡುವವರು ಇರುತ್ತಾರೆ.
ಪ್ರತಿನಿತ್ಯ ವಿಶ್ವದಲ್ಲಿ ಸುಮಾರು 1.28 ಶತಕೋಟಿ ಜನರು ಫೇಸ್ ಬುಕ್ ನ್ನು ನೋಡುತ್ತಿರುತ್ತಾರೆ. ಇತ್ತೀಚಿನ ಅಂದಾಜು ಪ್ರಕಾರ, ಬಳಕೆದಾರರು ಸರಾಸರಿ ದಿನಕ್ಕೆ 35 ನಿಮಿಷಗಳವರೆಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ಇರುತ್ತಾರೆ.
ಇಂದು ಫೇಸ್ ಬುಕ್ ಎಂಬ ಸಾಮಾಜಿಕ ಮಾಧ್ಯಮ ವಿಶ್ವಾದ್ಯಂತ ಹೇಗೆ ತಲುಪಿದೆ ಎಂಬುದರ ಕುರಿತು ಅಧ್ಯಯನ ಮಾಡಲು ಬ್ರಿಗಮ್ ಯಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಟಾಮ್ ರಾಬಿನ್ಸನ್ ಎಂಬ ಪ್ರಮುಖ ಲೇಖಕರ ತಂಡ 48 ಹೇಳಿಕೆಗಳನ್ನು ಸಂಗ್ರಹಿಸಿ ಜನರು ಫೇಸ್ ಬುಕ್ ನ್ನು ಏಕೆ ಬಳಸುತ್ತಾರೆ ಎಂದು ಕಾರಣಗಳನ್ನು ತಿಳಿದುಕೊಂಡಿದ್ದಾರೆ.
ಆಗ ಅವರಿಗೆ ನಾಲ್ಕು ವಿಭಾಗಗಳ ಫೇಸ್ ಬುಕ್ ಬಳಕೆದಾರರನ್ನು ಕಂಡಿದ್ದಾರೆ. ಸಂಬಂಧ ಬೆಳೆಸುವವರು, ತಮ್ಮ ಸುತ್ತಮುತ್ತ ನಡೆಯುವ ವಿಷಯಗಳನ್ನು ಸಾಮಾಜಿಕ ಮಾಧ್ಯಮದ ಮೂಲಕ ಹಂಚುವವರು(ಟೌನ್ ಕ್ರೈಯರ್ಸ್), ಸೆಲ್ಫಿ ತೆಗೆದುಕೊಳ್ಳುವವರು ಮತ್ತು ವಿಂಡೊ ಶಾಪರ್ಸ್ ಗಳು.
ಸಂಬಂಧ ಬೆಳೆಸಿಕೊಳ್ಳಲು ನೋಡುವವರು ಇತರರ ಪೋಸ್ಟ್ ಗಳಿಗೆ ಪ್ರತಿಕ್ರಿಯೆ ನೀಡುತ್ತಾರೆ ಮತ್ತು ಫೇಸ್ ಬುಕ್ ನಲ್ಲಿರುವ ಕೆಲವು ವೈಶಿಷ್ಟ್ಯತೆಗಳನ್ನು ಬಳಸುತ್ತಾರೆ. ತಮ್ಮ ವಾಸ್ತವ ಜೀವನವನ್ನು ವಿಸ್ತರಿಸಿಕೊಳ್ಳಲು ತಮ್ಮ ಕುಟುಂಬದವರು ಮತ್ತು ಸ್ನೇಹಿತರೊಂದಿಗೆ ಇವರು ಫೇಸ್ ಬುಕ್ ಬಳಸುತ್ತಾರೆ ಎನ್ನುತ್ತಾರೆ ರಾಬಿನ್ಸನ್.
ಟೌನ್ ಕ್ರೈಯರ್ಸ್ ಗಳು ಫೋಟೋ, ಕಥೆಗಳು ಅಥವಾ ತಮಗೆ ಸಂಬಂಧಪಟ್ಟ ಇತರ ಮಾಹಿತಿಗಳನ್ನು ಹಂಚಿಕೊಳ್ಳಲು ಇಷ್ಟಪಡುವುದಿಲ್ಲ. ಬದಲಾಗಿ ಸಮಾಜದಲ್ಲಿ ಮತ್ತು ನಮ್ಮ ಸುತ್ತಮುತ್ತ ಏನು ನಡೆಯುತ್ತಿದೆ ಎಂಬ ಬಗ್ಗೆ ಪ್ರತಿಯೊಬ್ಬರಿಗೆ ತಿಳಿಸಲು ಇಷ್ಟಪಡುತ್ತಾರೆ. ಮಾಹಿತಿಗಳನ್ನು ಹೊರಹಾಕುತ್ತಾರೆ ಎನ್ನುತ್ತಾರೆ ರಾಬಿನ್ಸನ್.
ಸೆಲ್ಫಿ ವಿಭಾಗದ ಫೇಸ್ ಬುಕ್ ಬಳಕೆದಾರರು, ತಮ್ಮನ್ನು ಪ್ರಚಾರ ಮಾಡಿಕೊಳ್ಳಲು ಬಳಸುತ್ತಾರೆ. ಅವರು ಕೂಡ ಫೋಟೋಗಳು, ವಿಡಿಯೋಗಳು ಮತ್ತು ಸಂದೇಶಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಆದರೆ ಬೇರೆಯವರ ಗಮನ ಸೆಳೆಯಲು ಬಯಸುತ್ತಾರೆ, ಲೈಕ್ಸ್, ಕಮೆಂಟ್ಸ್ ಗಿಟ್ಟಿಸಿಕೊಳ್ಳಲು ಹಾತೊರೆಯುತ್ತಾರೆ. ಅವರ ಫೋಟೋಗಳಿಗೆ ಹೆಚ್ಚೆಚ್ಚು ಲೈಕ್ಸ್ ಗಳು ಸಿಕ್ಕಿದಷ್ಟು ಖುಷಿಯಾಗುತ್ತಾರೆ.
ಇನ್ನು ವಿಂಡೊ ಶಾಪರ್ಸ್ ಬಳಕೆದಾರರು ಟೌನ್ ಕ್ರೈಯರ್ಸ್ ಗಳಂತೆ ಸಾಮಾಜಿಕ ಬದ್ಧತೆಯನ್ನು ಫೇಸ್ ಬುಕ್ ನಲ್ಲಿ ತೋರಿಸಿಕೊಳ್ಳುತ್ತಾರೆ. ಅವರು ತಮ್ಮ ಖಾಸಗಿ ಮಾಹಿತಿಗಳನ್ನು ಬಹಿರಂಗಪಡಿಸುವುದು ತೀರಾ ಕಡಿಮೆ. ಬೇರೆಯವರು ಏನು ಮಾಡುತ್ತಾರೆ ಎಂದು ತಿಳಿದುಕೊಳ್ಳಲು ಇವರು ಬಯಸುತ್ತಾರೆ. ನೋಡುವ ಜನರಿಗೆ ಸಮನಾಗಿ ಸಾಮಾಜಿಕ ಮಾಧ್ಯಮವಿರುತ್ತದೆ ಎನ್ನುತ್ತಾರೆ ಬ್ರಿಗಮ್ ಯಂಗ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಕ್ಲಾರ್ಕ್ ಕಲ್ಲಹನ್.
ನಾವಿಂದು ದಿನನಿತ್ಯ ಮಾಡುವ ಪ್ರತಿಯೊಂದು ಕೆಲಸಗಳಲ್ಲಿ ಸಾಮಾಜಿಕ ಮಾಧ್ಯಮ ಹಾಸುಹೊಕ್ಕಿದೆ. ಅನೇಕ ಮಂದಿಗೆ ಅವರು ಏನು ಮಾಡುತ್ತಿದ್ದಾರೆ ಎಂಬುದೇ ಗೊತ್ತಿಲ್ಲ. ಆದರೆ ಜನರು ತಮ್ಮ ಅಭ್ಯಾಸಗಳನ್ನು ಗುರುತಿಸಿಕೊಂಡರೆ ಜಾಗೃತಿ ಮೂಡಿಸಬಹುದು ಎನ್ನುತ್ತಾರೆ ಅದೇ ವಿಶ್ವವಿದ್ಯಾಲಯದ ಮತ್ತೊಬ್ಬ ಪ್ರಾಧ್ಯಾಪಕ ಕ್ರಿಸ್ ಬೋಯ್ಲೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com