ಮಕ್ಕಳಲ್ಲಿ ಆಕ್ರಮಣಕಾರಿ ವರ್ತನೆಗೆ ಆಧುನಿಕ ಸಮಾಜದಿಂದ ಸ್ಫೂರ್ತಿ

ಬದಲಾಗುತ್ತಿರುವ ಜೀವನಶೈಲಿಯಿಂದ ಮಕ್ಕಳಲ್ಲಿ ಖಿನ್ನತೆಯಂಟಾಗುವುದಲ್ಲದೆ ಅವರ ಸ್ವಭಾವದಲ್ಲಿ .....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಲಕ್ನೊ: ಬದಲಾಗುತ್ತಿರುವ ಜೀವನಶೈಲಿಯಿಂದ ಮಕ್ಕಳಲ್ಲಿ ಖಿನ್ನತೆಯಂಟಾಗುವುದಲ್ಲದೆ ಅವರ ಸ್ವಭಾವದಲ್ಲಿ ಆಕ್ರಮಣಕಾರಿ ಮನೋಭಾವ ಕಂಡುಬಂದು ಇದು ನಮ್ಮ ಸಮಾಜದ ಕೌಟುಂಬಿಕ ವ್ಯವಸ್ಥೆ ಮತ್ತು ಸಂಸ್ಕೃತಿಯಲ್ಲಿ ಎಚ್ಚರಿಕೆಯ ಸೂಚನೆಯಾಗಿದೆ. ಶಾಲೆಯಲ್ಲಿ ರಜೆ ಬೇಕೆಂದು 6ನೇ ತರಗತಿಯ ಬಾಲಕಿ ಒಂದನೇ ತರಗತಿ ಬಾಲಕನಿಗೆ ಹೊಡೆದು ಗಲಭೆ  ಸೃಷ್ಟಿಸುವುದು, ಪರೀಕ್ಷೆ ರದ್ದಾಗಲೆಂದು 16 ವರ್ಷದ ಬಾಲಕ 2ನೇ ತರಗತಿ ಬಾಲಕನನ್ನು ಕೊಂದನೆಂಬ ಸುದ್ದಿ ಇತ್ತೀಚೆಗೆ ರಾಷ್ಟ್ರಮಟ್ಟದಲ್ಲಿ ಸದ್ದು ಮಾಡಿದ್ದನ್ನು ಕೇಳಿದ್ದೇವೆ.

ಇಂದಿನ ವೇಗದ ಆಧುನಿಕ ಜೀವನಶೈಲಿಯಲ್ಲಿ ತಮ್ಮ ಭವಿಷ್ಯವನ್ನು ಮತ್ತು ಅಸ್ತಿತ್ವವನ್ನು ಕಾಪಾಡಿಕೊಳ್ಳಲು ಯುವಜನಾಂಗ ಎಲ್ಲರ ಗಮನ ಸೆಳೆಯಲು ಬಯಸುತ್ತದೆ. ಇಂತಹ ಸಂದರ್ಭದಲ್ಲಿ ತಂದೆ ತಾಯಿ, ಕೌಟುಂಬಿಕ ವ್ಯವಸ್ಥ, ಸಂಪ್ರದಾಯ, ಸಂಸ್ಕೃತಿಗಳೆಲ್ಲವೂ ಗೌಣವಾಗುತ್ತದೆ.

 ಮನೋವಿಜ್ಞಾನಿಗಳು, ಮಾನವ ಶಾಸ್ತ್ರಜ್ಞರು ಮತ್ತು ಅಂತರ್ಜಾಲ ಸಂಶೋಧಕರ ಪ್ರಕಾರ, 5ರಿಂದ 15 ವರ್ಷದೊಳಗಿನ ಮಕ್ಕಳು ಇತ್ತೀಚಿನ ದಿನಗಳಲ್ಲಿ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗುವ ಸಂಖ್ಯೆಗಳು ಹೆಚ್ಚಾಗುತ್ತಿವೆ. ಮಕ್ಕಳಲ್ಲಿ ಈ ರೀತಿಯ ಮನೋಭಾವ ಬೆಳೆಯಲು ಪೋಷಕರು, ಸುತ್ತಮುತ್ತಲಿನ ಪರಿಸರ, ಆಧುನಿಕ ಪಾಶ್ಚಿಮಾತ್ಯ ಜೀವನಶೈಲಿಗೆ ಮಾರುಹೋಗುವುದು, ನಮ್ಮ ಸಂಸ್ಕೃತಿಯನ್ನು ಮರೆತು ಗ್ಲಾಮರ್, ಇಂಟರ್ನೆಟ್ ಜಗತ್ತಿಗೆ ಹೆಚ್ಚೆಚ್ಚು ತೆರೆದುಕೊಳ್ಳುವುದು ಕಾರಣ ಎಂದು ವಿಶ್ಲೇಷಿಸುತ್ತಿದ್ದಾರೆ.

ಲಕ್ನೊ ಮಾನವಶಾಸ್ತ್ರ ಶಾಲೆಯ ಮುಖ್ಯಸ್ಥ ಹಾಗೂ ಖ್ಯಾತ ಮಾನವಶಾಸ್ತ್ರಜ್ಞ ಪ್ರೊ.ಉದಯ್ ಪ್ರತಾಪ್ ಸಿಂಗ್ ಅವರ ಪ್ರಕಾರ, ಸಾಮರಸ್ಯ, ಸಮಾನತೆ, ಪ್ರೀತಿ, ಸಹೋದರತ್ವ ಮತ್ತು ಸಹಕಾರದ ನಮ್ಮ ಭಾರತೀಯ ಸಮಾಜ ಇತ್ತೀಚಿನ ದಿನಗಳಲ್ಲಿ ಪಾಶ್ಚಿಮಾತ್ಯ ಭೌತಿಕ ಸಂಸ್ಕೃತಿಯ ಪ್ರಭಾವಕ್ಕೊಳಗಾಗುತ್ತಿದೆ.ಸಂಪ್ರದಾಯ ಮತ್ತು ಧಾರ್ಮಕ ಮೌಲ್ಯಗಳಿಗಿಂತ ಭೌತಿಕ ಮತ್ತು ಪ್ರಾಪಂಚಿಕ ಸುಖ, ಸಂತೋಷಗಳು  ಭಾರತದ ಮೂಲ ಸಂಸ್ಕೃತಿ ಮತ್ತು ಧಾರ್ಮಿಕತೆಯನ್ನು ಅಲುಗಾಡಿಸುತ್ತಿವೆ ಎನ್ನುತ್ತಾರೆ.

ಕೈಗಾರಿಕೀಕರಣ, ನಗರೀಕರಣ ಕುಟುಂಬ ಸದಸ್ಯರ ನಡುವಿನ ಸಂಬಂಧಗಳನ್ನು ವಿಭಜಿಸುತ್ತಿದ್ದು ಇಂದಿನ ಯುವಜನತೆಯನ್ನು ದೊಡ್ಡ ನಗರಗಳತ್ತ  ಅಧಿಕ ಆದಾಯ ಮತ್ತು ಉತ್ತಮ ಉದ್ಯೋಗದತ್ತ ಹೊರಳುವಂತೆ ಮಾಡುತ್ತಿದೆ. ವಿಭಜಿತ ಕುಟುಂಬ  ನಗರಗಳಲ್ಲಿ ಫ್ಲ್ಯಾಟ್ ಸಂಸ್ಕೃತಿಯತ್ತ ಹೊರಳುತ್ತಿದ್ದು ತಮ್ಮ ಮಕ್ಕಳ ಬಗ್ಗೆ ಗಮನ ಹರಿಸಲು ಸಮಯವಿಲ್ಲದಂತಾಗಿದೆ ಎನ್ನುತ್ತಾರೆ ಉದಯ್ ಪ್ರತಾಪ್ ಸಿಂಗ್.

ಭಾರತ ಸಂಸ್ಕೃತಿ ಸಮಾಜದಲ್ಲಿ ಸಮೀಪದ ಮತ್ತು ದೂರದ ವೈಯಕ್ತಿಕ ಸಂಬಂಧಗಳು ಮೂಲಭೂತ ಅಂಶವಾಗಿವೆ. ಇಂದಿನ ಆಧುನಿಕ ನಗರೀಕರಣ ಸಮಾಜದಲ್ಲಿ ಕುಟುಂಬದ ಸಮೀಪದ ಮತ್ತು ದೂರದ ಸಂಬಂಧಿಕರಿಗಿಂತ ಮಕ್ಕಳಿಗೆ ಆಯಾಗಳು, ಪ್ಲೇಹೋಂ, ಶಿಶುವಿಹಾರಗಳು ಅಜ್ಜಿ, ತಾತಂದಿರ ಮನೆಯಾಗಿ ಮಾರ್ಪಟ್ಟಿವೆ. ತಂದೆ-ತಾಯಂದಿರಿಗೆ  ಮಕ್ಕಳಿಗೆ ಹೆಚ್ಚಿನ ಸಮಯ ನೀಡಲು ಸಾಧ್ಯವಾಗದಿರುವುದರಿಂದ ಕ್ರಮೇಣ ಮಕ್ಕಳಲ್ಲಿ ಖಿನ್ನತೆ, ಆಕ್ರೋಶ ಮನೋವೃತ್ತಿ ಬೆಳೆಯುತ್ತದೆ ಎಂದು ವಿಶ್ಲೇಷಿಸುತ್ತಾರೆ.

ಇಂದು ಗುರು ಶಿಷ್ಯರ ಸಂಬಂಧ, ಪೋಷಕರು ಮತ್ತು ಮಕ್ಕಳ ಶಿಕ್ಷಕರ ನಡುವಿನ ಸಂಬಂಧ ಹಣದ ಮೇಲೆ ನಿರ್ಧಾರವಾಗುತ್ತದೆ ಎನ್ನುತ್ತಾರೆ ಸಿಂಗ್.

ಖ್ಯಾತ ಮಕ್ಕಳ ಮನೋವಿಜ್ಞಾನಿಯಾದ ಲಕ್ನೊ ವಿಶ್ವವಿದ್ಯಾಲಯದ ಪ್ರೊ.ಪಿ.ಸಿ.ಮಿಶ್ರಾ, ಪೋಷಕರು ತಮ್ಮ ಮಕ್ಕಳ ಬೌದ್ಧಿಕ ಮಟ್ಟ, ಗುಣ, ನಡತೆ ಮತ್ತು ಸಾಮರ್ಥ್ಯಗಳ ಬಗ್ಗೆ ಅಭಿಪ್ರಾಯವನ್ನು ಹೊಂದಿರುತ್ತಾರೆ. ತಮ್ಮ ಮಕ್ಕಳನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗದಿರುವ ಸಂದರ್ಭದಲ್ಲಿ ಪೋಷಕರು ತಮ್ಮ ಮಕ್ಕಳನ್ನು ತಪ್ಪಾಗಿ ತೀರ್ಮಾನಿಸಬಹುದು ಅಥವಾ ಅಭಿಪ್ರಾಯವ್ಯಕ್ತಪಡಿಸಬಹುದು. ಕೆಲವೊಮ್ಮೆ  ಈ ಅಭಿಪ್ರಾಯ ಮತ್ತು ತೀರ್ಮಾನಗಳು ಮಕ್ಕಳ ಮನಸ್ಸಿನ ಮೇಲೆ ಅಡ್ಡ ಪರಿಣಾಮ ಬೀರದಿರಬಹುದು ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಇದು ಮಕ್ಕಳಲ್ಲಿ ಸಿಟ್ಟು, ಆಕ್ರೋಶ ಮತ್ತು ಖಿನ್ನತೆಗೆ ಕಾರಣವಾಗುತ್ತದೆ ಎನ್ನುತ್ತಾರೆ.

ಹೀಗಾಗಿ ಮಕ್ಕಳ ಮಾನಸಿಕ ಸ್ಥಿತಿಗತಿ, ಬೆಳವಣಿಗೆ ಬಗ್ಗೆ ಪೋಷಕರಿಗೆ ಸ್ಪಷ್ಟ ತಿಳುವಳಿಕೆ ಮತ್ತು ಅರಿವು ಇರಬೇಕು. ಪೋಷಕರು ಮಕ್ಕಳ ಜೊತೆ ಎಷ್ಟು ಸಮಯ ಕಳೆಯುತ್ತಾರೆ ಎಂಬುದು ಕೂಡ ಮುಖ್ಯವಾಗುತ್ತದೆ ಎನ್ನುತ್ತಾರೆ ಪ್ರೊ ಮಿಶ್ರಾ.

ಮಕ್ಕಳು ಆಕ್ರೋಶಕಾರಿ ಮನೋವೃತ್ತಿ ತೋರಿಸಲು ಇನ್ನೊಂದು ಮುಖ್ಯ ಕಾರಣ ವಿಡಿಯೊ ಗೇಮ್ ಗಳು. ಹಿಂಸಾತ್ಮಕ ವಿಡಿಯೊ ಗೇಮ್ ಗಳು ಮಕ್ಕಳ ಮಾನಸಿಕ ಸ್ಥಿತಿ ಮತ್ತು ನಡತೆ ಮೇಲೆ ಪ್ರಭಾವ ಬೀರುತ್ತದೆ. ಹಿಂಸಾತ್ಮಕ ವಿಡಿಯೊ ಗೇಮ್ ಗಳನ್ನು ಮಕ್ಕಳು ನಿಜಜೀವನದಲ್ಲಿ ಪ್ರಯೋಗ ಮಾಡುವ ಮೂಲಕ ಅಪರಾಧ ಮನೋವೃತ್ತಿಯನ್ನು ಪ್ರದರ್ಶಿಸುತ್ತಾರೆ.

ದೊಡ್ಡವರಂತೆ ತಮ್ಮ ಆಲೋಚನೆಗಳಿಗೆ ಮತ್ತು ಭಾವನೆಗಳಿಗೆ ಮನೆಯಲ್ಲಿ ಪ್ರಾಮುಖ್ಯತೆ ಸಿಗುತ್ತಿಲ್ಲ ಎಂಬ ಭಾವನೆ ಮೂಡಿದರೆ ಕೂಡ ಆಕ್ರೋಶ ಮನೋವೃತ್ತಿ ಉಂಟಾಗುತ್ತದೆ. ಮಕ್ಕಳೊಂದಿಗೆ ದೊಡ್ಡವರು ಸರಿಯಾಗಿ ಮಾತನಾಡುವುದು, ಅವರ ಸಮಸ್ಯೆಗಳನ್ನು ಆಲಿಸುವುದು, ಸಂವಹನ ನಡೆಸುವುದು ಅವರ ಬೆಳವಣಿಗೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ.
ಇದಲ್ಲದೆ ಮಾಧ್ಯಮಗಳಿಗೆ ಮಕ್ಕಳು ಹೆಚ್ಚು ಹೆಚ್ಚು ತೆರೆದುಕೊಳ್ಳುವುದು ಕೂಡ ಮಾನಸಿಕ ಬೆಳವಣಿಗೆ ಮೇಲೆ ಪರಿಣಾಮ ಬೀರುತ್ತದೆ. ಧೂಮಪಾನ, ಮದ್ಯಪಾನ, ಡ್ರಗ್ಸ್, ಗ್ಲಾಮರ್ ಜಗತ್ತಿಗೆ ಹರೆಯದ ಮಕ್ಕಳು ಬೇಗನೆ ತೆರೆದುಕೊಳ್ಳುತ್ತಿದ್ದಾರೆ ಎಂದು ಪ್ರೊ,ಮಿಶ್ರಾ ಹೇಳುತ್ತಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com