ಗ್ಯಾಜೆಟ್ ಗೀಳು ಮತ್ತು ಆಡುವ ಅಸ್ವಸ್ಥತೆ; ವ್ಯಸನದಿಂದ ಹೊರಬರಲು ಈ ಸಲಹೆಗಳನ್ನು ಅನುಸರಿಸಿ

ಮೊದಲನೆಯದಾಗಿ ನಾವೆಲ್ಲರೂ ಇದೊಂದು ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ ವ್ಯಸನ ಎಂಬುದನ್ನು ಒಪ್ಪಿಕೊಳ್ಳಬೇಕು. ಜೊತೆಗೆ ತಮ್ಮನ್ನು ತಾವು ತಿದ್ದಿಕೊಳ್ಳಲು ತಯಾರಾಗಬೇಕು.
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ
"ತಂತ್ರಜ್ಞಾನ ಇರುವುದೇ ನಮ್ಮ ಸಮಾಜದಲ್ಲಿರುವ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದಕ್ಕೆ ಆದರೆ, ಅದೇ ತಂತ್ರಜ್ಞಾನವೇ ಕೆಲವೊಂದು ಹೊಸ ಸಮಸ್ಯೆಗಳನ್ನು ತಂದೊಡ್ಡುತ್ತದೆ, ಮತ್ತೆ ಆ ಸಮಸ್ಯೆಗಳಿಗೆ ಪರಿಹಾರ ಇನ್ನೊಂದು ತಂತ್ರಜ್ಞಾನದಿಂದ ಸಿಗುತ್ತದೆ. ಬಹುಷಃ ಹೀಗೆಯೇ ಕಾಲ ನಡೆದುಕೊಂಡು ಹೋಗುತ್ತದೆ" ಅಮೆರಿಕಾದ ಅಲ್ಟೈರ್ ಅನ್ನುವ ಕಂಪೆನಿಯ ಸಿ.ಒ.ಒ. ಆಗಿರುವ ಬ್ರೆಟ್ ಚೌಯನಾರ್ಡ್ ಅವರು ನನ್ನೊಡನೆ ಹಂಚಿಕೊಂಡ ಮಾತಿದು.
ನಾನು ಅವರನ್ನು ಕೇಳಿದ ಪ್ರಶ್ನೆ ಬಹಳ ಸರಳವಾಗಿತ್ತು. "ತಂತ್ರಜ್ಞಾನವನ್ನು ಬೆಳೆಸುವವರು ಅದೇ ತಂತ್ರಜ್ಞಾನದಿಂದಾಗುವ ಮನುಷ್ಯ ಹಾಗೂ ಸಮಾಜ ಸಂಬಂಧಿ ಸಮಸ್ಯೆಗಳ ಕುರಿತು ಎಷ್ಟರ ಮಟ್ಟಿಗೆ ಚಿಂತಿತರಾಗಿದ್ದಾರೆ?" ನನ್ನ ಪ್ರಶ್ನೆಯನ್ನು ಪುಷ್ಟೀಕರಿಸಲು ನಾನು ಉದಾಹರಣೆಯಾಗಿ ಕೊಟ್ಟದ್ದು ಮೊಬೈಲ್ ಕುರಿತು ಮಕ್ಕಳು ಬೆಳೆಸಿಕೊಂಡಿರುವ ವ್ಯಸನ.
ಗಂಭೀರ ಸಮಸ್ಯೆಯಾಗಿರುವ ’ಆಡುವ ಅಸ್ವಸ್ಥತೆ’
ಈಗೊಂದು ವಾರದ ಹಿಂದೆ, ಮೊಬೈಲ್‌ನಲ್ಲಿ ಆಡುವ ವ್ಯಸನವನ್ನು ವಿಶ್ವ ಆರೋಗ್ಯ ಸಂಸ್ಥೆಯು ’ಆಡುವ ಅಸ್ವಸ್ಥತೆ’ (gaming disorder) ಅಂತಲೇ ಗುರುತಿಸಿದೆ. ಮೊಬೈಲ್ ಗೇಮ್ ಮತ್ತು ಅಂತರ್ಜಾಲದ ವ್ಯಸನವಿರುವವರಲ್ಲಿ ಶೇಕಡಾ 7 ರಷ್ಟು ಮಂದಿ ಖಿನ್ನತೆ, ಭಯ, ಆತಂಕ ಹಾಗು ನಡವಳಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನು ತೋರ್ಪಡಿಸಿದ್ದಾರೆ. ಮಾನಸಿಕ ರೋಗಗಳ ಕುರಿತು ಬಹಳ ಮುಖ್ಯವಾದ ಗ್ರಂಥವಾದ ’ದಿ ಡಯಾಗ್ನಾಸ್ಟಿಕ್ ಆಂಡ್ ಸ್ಟಾಟಿಸ್ಟಿಕಲ್ ಮ್ಯಾನುವಲ್ ಆಫ್ ಮೆಂಟಲ್ ಡಿಸಾರ್ಡರ್ಸ್’ ನಲ್ಲಿ ಈ ಮೊದಲೇ ಈ ವ್ಯಸನವನ್ನು ಮಾನಸಿಕ ಅಸ್ವಸ್ಥತೆ ಅಂತ ಗುರುತಿಸಿಯಾಗಿತ್ತು. ಇದೀಗ ವಿಶ್ಚ ಆರೋಗ್ಯ ಸಂಸ್ಥೆಯೂ ಗುರುತಿಸಿರುವುದು ಸಮಸ್ಯೆಯ ಗಂಭೀರತೆಯನ್ನು ಪ್ರತಿಫಲಿಸುತ್ತದೆ.
ನವೆಂಬರ್ 2017 ರಲ್ಲಿ ನಡೆದ ವಿಶ್ವ ಮಾನಸಿಕ ಆರೋಗ್ಯ ಸಮ್ಮೇಳನದಲ್ಲೂ ಮೊಬೈಲ್ ಹಾಗೂ ಅಂತರ್ಜಾಲದ ವ್ಯಸನದ ಕುರಿತು ಗಂಭೀರವಾದ ಚರ್ಚೆಯಾಗಿತ್ತು. ಯಾಕೆಂದರೆ ಅದು ಮುಂದಿನ ಜನಾಂಗವನ್ನೇ ಮಾನಸಿಕ ರೋಗಿಗಳನ್ನಾಗಿ ಮಾಡುವ ತೀವ್ರತೆಯನ್ನು ಹೊಂದಿದೆ. ಮತ್ತು ಈ ವ್ಯಸನದಿಂದ ಮಕ್ಕಳನ್ನು ಬಿಡಿಸುವುದು ಅಷ್ಟೊಂದು ಸುಲಭವಲ್ಲ. ಯಾಕೆಂದರೆ ಈಗ ಸ್ಮಾರ್ಟ್‌ಫೋನ್‌ಗಳು ಬಹಳ ಸುಲಭವಾಗಿ ಮಕ್ಕಳ ಕೈಗೆಟಕುತ್ತದೆ. ಎಷ್ಟೋ ಬಾರಿ ಮಕ್ಕಳನ್ನು ಓಲೈಸಲೂ ಈ ಎಲೆಕ್ಟ್ರಾನಿಕ್ ಉಪಕರಣಗಳನ್ನು ಬಳಸಲಾಗುತ್ತದೆ. ಇದರಿಂದಾಗಿ ಎಷ್ಟೋ ಮಕ್ಕಳು ಭಾಷೆಯನ್ನು ಕಲಿತುಕೊಳ್ಳುವ ಸಾಮರ್ಥ್ಯವನ್ನೂ ಕಳೆದುಕೊಳ್ಳುತ್ತಿದ್ದಾರೆ ಎಂದು ಕೆಲವು ಅಧ್ಯಯನಗಳು ತಿಳಿಸಿವೆ. ಅವರುಗಳು ಇತರೆ ಮಕ್ಕಳೊಂದಿಗೆ ಬೆರೆಯದೆ ಏಕಾಂಗಿಯಾಗಿರುವುದು, ಕಲಿಕೆಯಲ್ಲಿ ಹಿಂದುಳಿಯುವುದು, ಸ್ಥೂಲಕಾಯ, ಏಕಾಗ್ರಹೀನತೆ ಮುಂತಾದ ವಿವಿಧ ಸಮಸ್ಯೆಗಳಿಂದ ಬಳಲುತ್ತಾರೆ. ಆದರೆ ದುಷ್ಪರಿಣಾಮಗಳು ಗೋಚರಿಸುವಾಗ ಸಮಯ ಬಹಳ ಮೀರಿರುತ್ತದೆ.
ಮೊಬೈಲ್ ನಲ್ಲಿ ಆಟವಾಡುವ ವ್ಯಸನದ ಜೊತೆಗೆ ಚಾಟ್ ಮಾಡುವುದು, ಸೆಲ್ಫೀ ತೆಗೆದುಕೊಳ್ಳುವುದು, ಸಾಮಾಜಿಕ ಜಾಲತಾಣಗಳಲ್ಲೇ ವಿಹರಿಸುತ್ತಿರುವುದು ಮುಂತಾದ ಅನೇಕ ಸಮಸ್ಯೆಗಳು ಇತ್ತೀಚೆಗೆ ಯುವ ಜನತೆಯಲ್ಲಿ ಕಾಣಿಸುತಿದೆ. ಮೊಬೈಲ್ ನ್ನು ಆಗಾಗ ಸುಮ್ಮನೇ ಆನ್ ಮಾಡಿ ನೋಡುವುದೂ ಗೀಳೇ. ಇತ್ತೀಚೆಗಿನ ನಿಮ್ಹಾನ್ಸ್ ನ ಅಧ್ಯಯನದ ಪ್ರಕಾರ 15 ನಿಮಿಷಕ್ಕೆ 150 ಸೆಲ್ಫೀ ತೆಗೆಯುವ ಗೀಳಿರುವ ಯುವಜನರೂ ಇದ್ದಾರೆ.
ಹೀಗೆ ನಮ್ಮ ನಿತ್ಯ ಜೀವನದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಎಷ್ಟೊಂದು ಆವರಿಸಿಕೊಂಡು ಬಿಟ್ಟಿವೆ ಅಂದರೆ, ಸ್ವಲ್ಪ ಹೊತ್ತು ಅವಿಲ್ಲದೆ ಹೋದರೆ ಏನೋ ಕಳೆದುಕೊಂಡಂತಹ ಭಾವ ಅನೇಕರಲ್ಲಿ ಮೂಡುತ್ತದೆ. ವಿಲವಿಲ ಒದ್ದಾಡುತ್ತಾರೆ. ಅದಿಲ್ಲದಿದ್ದರೆ ತಮ್ಮ ಅಸ್ತಿತ್ವವೇ ಇಲ್ಲವೇನೋ ಎಂಬಂತೆ ವಿಚಿತ್ರವಾಗಿ ಆಡುತ್ತಾರೆ. ಗಂಡ - ಹೆಂಡಿರು ಜೊತೆಯಲ್ಲೇ ಕುಳಿತಿದ್ದರೂ, ಪರಸ್ಪರ ಮಾತುಕತೆಗೆ ಸಮಯವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ಹಿಂದಿನ ಕಾಲದಲ್ಲಿ ಎದ್ದ ತತ್‌ಕ್ಷಣ "ಕರಾಗ್ರೇ ವಸತೇ ಲಕ್ಷ್ಮೀ, ಕರಮಧ್ಯೇ ಸರಸ್ವತಿ" ಎನ್ನುತ್ತಿದ್ದ ಸಂಸ್ಕೃತಿಯಿಂದ ಬಹುದೂರ ಬಂದು ಕರದ ತುಂಬ ದೊಡ್ಡದೊಂದು ಮೊಬೈಲ್ ಆವರಿಸಿಕೊಂಡು, ಎದ್ದ ಕೂಡಲೇ ಎಷ್ಟು ಮೆಸೇಜ್ ಬಂದಿದೆ, ಸಾಮಾಜಿಕ ಜಾಲತಾಣದಲ್ಲಿ ಯಾರು ’ಲೈಕ್’ ಮಾಡಿದ್ದಾರೆ, ಯಾರು ಕಮೆಂಟ್ ಮಾಡಿದ್ದಾರೆ ಎನ್ನುವ ಕಾತುರ ನಮ್ಮೆಲ್ಲರಲ್ಲೂ ಕಾಣಿಸುತ್ತಿದೆ. ನನ್ನ ಬಳಿ ಶುಶ್ರೂಷೆಗೆ ಬರುವ ಅನೇಕ ಕಾಲೇಜು ವಿದ್ಯಾರ್ಥಿಗಳು ಮೊಬೈಲ್ ನ ಕಾರಣದಿಂದಾಗಿ ನಿದ್ರಾ ಹೀನತೆಯಿಂದ ಬಳಲುತ್ತಿದ್ದಾರೆ. 
ಇಂತಹ ಪರಿಸ್ಥಿತಿಯಿಂದ ಹೊರಬರುವುದೆಂತು? ಈ ಸಲಹೆಗಳನ್ನು ಗಂಭೀರವಾಗಿ ಪರಿಗಣಿಸಿ
ಯುವಜನರಿಗೆ
  1. ಮೊದಲನೆಯದಾಗಿ ನಾವೆಲ್ಲರೂ ಇದೊಂದು ಇತರೆ ಮಾನಸಿಕ ರೋಗಗಳಿಗೆ ಎಡೆಮಾಡಿಕೊಡಬಹುದಾದಂತಹ  ವ್ಯಸನ ಎಂಬುದನ್ನು ಒಪ್ಪಿಕೊಳ್ಳಬೇಕು. ಜೊತೆಗೆ ತಮ್ಮನ್ನು ತಾವು ತಿದ್ದಿಕೊಳ್ಳಲು ತಯಾರಾಗಬೇಕು.
  2. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ನಿಯಮಿತಗೊಳಿಸಬೇಕು. ಪ್ರತಿದಿನಕ್ಕೆ ಇಷ್ಟೇ ಬಳಸುವುದು ಎಂದು ನಮಗೆ ನಾವೇ ಲಗಾಮು ಹಾಕಿಕೊಳ್ಳಬೇಕು. (ಸಾಮಾಜಿಕ ಜಾಲತಾಣಗಳಲ್ಲಿ ಎಷ್ಟು ಲೈಕುಗಳು ಬರುತ್ತವೆ ಎನ್ನುವುದು ನಿಮ್ಮ ಭವಿಷ್ಯವನ್ನು ನಿರ್ಧರಿಸಿಲ್ಲ. ಮತ್ತು ನಿಮ್ಮ ಜೀವನದಲ್ಲಿ ನೀವು ಉತ್ತಮ ಸಾಧನೆಯನ್ನು ಮಾಡಿದರೆ, ಲೈಕುಗಳಿಗೆ ಬರವಿರುವುದೂ ಇಲ್ಲ!)
  3. ಕೆಲಸ ಮಾಡುತ್ತಿರುವ ಸಂದರ್ಭದಲ್ಲಿ ಮೊಬೈಲನ್ನು ವೈಬ್ರೇಟ್ ಕೂಡಾ ಆಗದಂತೆ ನಿಶ್ಶಬ್ದಗೊಳಿಸಬೇಕು ಮತ್ತು ನಿಮ್ಮಿಂದ ಸ್ವಲ್ಪ ದೂರದಲ್ಲಿಡಬೇಕು. ಏಕಾಗ್ರತೆಗೆ ಭಂಗಬರಿಸಿಕೊಳ್ಳಬಾರದು.
  4. ಕೆಲವೊಮ್ಮೆ ಕೆಲವೊಂದು ಸಂದೇಶಗಳಿಗೆ ಉತ್ತರ ಬರೆಯಲಾಗದಿದ್ದರೂ, ಅಥವಾ ಕೆಲವೊಂದು ಕರೆಗಳನ್ನು ಸ್ವೀಕರಿಸಲಾಗದಿದ್ದರೂ ಚಿಂತೆಯಿಲ್ಲ ಎಂಬ ಮನಸ್ಥಿತಿಯನ್ನು ಹೊಂದಬೇಕು. (ಹಿಂದಿನ ಕಾಲದಲ್ಲಿ ಪತ್ರಗಳು ತಲುಪಲು ವಾರಗಳೇ ಬೇಕಾಗುತ್ತಿದ್ದುವು. ಹಾಗಿದ್ದೂ ಜನರು ಸಂಪರ್ಕದಲ್ಲಿರುತ್ತಿದ್ದರು. ಪ್ರೇಮಿಗಳು ದೂರವಿದ್ದೂ, ಒಬ್ಬರಿಗೊಬ್ಬರು ಹತ್ತಿರವಾಗಿದ್ದರು.)
ಹೆತ್ತವರಿಗೆ
  1. ಹೆತ್ತವರು ಮಕ್ಕಳಿಗೆ ಮಾದರಿಯಾಗಬೇಕು. ನೀವು ಟಿ.ವಿ. ಅಥವಾ ಮೊಬೈಲ್‌ನಲ್ಲಿ ಸಮಯ ಕಳೆಯುವುದನ್ನು ನಿಲ್ಲಿಸದ ಹೊರತು, ಮಕ್ಕಳನ್ನು ದೂರಿ ಪ್ರಯೋಜನವಿಲ್ಲ. ಮನೆಗಳಲ್ಲಿ ಲ್ಯಾಂಡ್‌ಲೈನ್ ಫೋನುಗಳನ್ನಿಟ್ಟುಕೊಂಡು ಅಗತ್ಯವಿದ್ದಲ್ಲಿ ಅದರಿಂದಲೇ ಮಾತನಾಡಬಹುದು. 
  2. ಹಿಂದಿನ ಕಾಲದಲ್ಲೂ ಮಕ್ಕಳು ಅಳುತ್ತಿದ್ದರು; ಊಟ ಮಾಡಲು ಒಲ್ಲೆ ಎನ್ನುತ್ತಿದ್ದರು. ಆಗ ಮಕ್ಕಳಿಗೆ ಚಂದಿರನನ್ನು ತೋರಿಸಿ ಉಣ್ಣಿಸುತ್ತಿದ್ದುದು ಈಗಿನ ಯುವ ಹೆತ್ತವರಿಗೆ ತಮ್ಮ ಬಾಲ್ಯದ ನೆನಪಾಗಿ ಖಂಡಿತವಾಗಿಯೂ ಮನಸ್ಸಿನಲ್ಲಿರಬಹುದು. ಈಗಿನ ನಗರದ ಮನೆಗಳಲ್ಲಿ ಚಂದಿರ ಕಾಣದೇ ಇದ್ದರೆ, ಅಂತಹುದೇ ಇನ್ನೇನಾದರೂ ಉಪಾಯವನ್ನು ಮಾಡಬೇಕೇ ಹೊರತು, ಎಲೆಕ್ಟ್ರಾನಿಕ್ ಉಪಕರಣಗಳ ಮೊರೆ ಹೋಗಬಾರದು.
  3. ಒಂದು ವೇಳೆ ಶಿಕ್ಷಣದ ದೃಷ್ಟಿಯಿಂದ ಟಿ.ವಿ. ಅಥವಾ ಟ್ಯಾಬ್‌ಗಳನ್ನು ಬಳಸಿದರೂ, ಅದರ ಉಪಯೋಗವನ್ನು ಕಟ್ಟುನಿಟ್ಟಾಗಿ ಸೀಮಿತಗೊಳಿಸಬೇಕು.
  4. ಮಕ್ಕಳನ್ನು ಚಿತ್ರ ಬಿಡಿಸುವತ್ತ, ಕುಸುರಿ ಕೆಲಸ ಮಾಡುವತ್ತ ಓಲೈಸಬೇಕು.
  5. ದೈಹಿಕ ಚಟುವಟಿಕೆಗಳು ಮಕ್ಕಳ ಶಾರೀರಿಕ ಹಾಗೂ ಮಾನಸಿಕ ಬೆಳವಣಿಗೆ ಹಾಗೂ ಆರೋಗ್ಯಕ್ಕೆ ಬಹಳ ಅಗತ್ಯ. ಅವುಗಳಿಗಾಗಿಯೇ ಮಕ್ಕಳಿಗೋಸ್ಕರ ಒಂದಷ್ಟು ಸಮಯವನ್ನು ಮೀಸಲಿಡಬೇಕು.
  6.  ಮಕ್ಕಳಲ್ಲಿ ಪುಸ್ತಕಗಳನ್ನು ಓದುವ ಹವ್ಯಾಸವನ್ನು ಬೆಳೆಸಬೇಕು.
  7.  ಒಂದು ವೇಳೆ ಮಗು ಎಲ್ಲಾದರೂ ಅಸ್ವಾಭಿಕ ವರ್ತನೆಯನ್ನು ತೋರಿಸಿದರೆ, ಕೂಡಲೇ ಮಾನಸಿಕ ತಜ್ಞರಲ್ಲಿಗೆ ಕರೆದುಕೊಂಡು ಹೋಗಬೇಕು.
ಹೀಗೆ ತಂತ್ರಜ್ಞಾನದಿಂದ ಮನಸ್ಸಿನ ಮೇಲಾಗುತ್ತಿರುವ ದುಷ್ಪರಿಣಾಮಗಳನ್ನು ಅರಿತುಕೊಂಡು ಈಗಲೇ ಎಚ್ಚೆತ್ತುಕೊಳ್ಳದಿದ್ದರೆ, ಭವಿಷ್ಯದಲ್ಲಿ ಬಿಕ್ಕಟ್ಟಿನ ಪರಿಸ್ಥಿತಿ ಎದುರಾಗುವುದರಲ್ಲಿ ಸಂಶಯವಿಲ್ಲ. ನಮಗೆಷ್ಟು ಬೇಕೋ ಅಷ್ಟಕ್ಕೇ ಮಿತಿಗೊಳಿಸಿ, ಅದರ ಸದುಪಯೋಗವನ್ನು ಪಡೆದುಕೊಂಡು ಜೀವನವನ್ನು ಉತ್ತಮವಾಗಿಸಬಹುದು. ಮನಸ್ಸಿದ್ದರೆ ಮಾರ್ಗ. 
- ಅಕ್ಷರ ದಾಮ್ಲೆ
ಮಾನಸಿಕ ತಜ್ಞರು, ಮನೋಸಂವಾದ
aksharadamle@manosamvaada.com

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com