ಅಡುಗೆ ಮನೆಯಲ್ಲಿದೆ ಆರೋಗ್ಯದ ಕೀಲಿ ಕೈ

ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಬಹಳ ವೇಗವಾಗಿ ಬೆಳೆಯುತ್ತಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ವಿಜ್ಞಾನ ಮತ್ತು ತಂತ್ರಜ್ಞಾನ ಇಂದು ಬಹಳ ವೇಗವಾಗಿ ಬೆಳೆಯುತ್ತಿದೆ. ಜನರಿಗೆ ಹಲವು ಕಾಯಿಲೆಗಳು ಕಾಣಿಸಿಕೊಳ್ಳುತ್ತಿದ್ದಂತೆ ಮಾರುಕಟ್ಟೆಯಲ್ಲಿ ಅದಕ್ಕೆ ಬೇಕಾದ ಹಲವು ಔಷಧಗಳು, ಡ್ರಗ್ಸ್ ಗಳು ಸಿಗುತ್ತವೆ. ಆದರೆ ಅವುಗಳ ಬೆಲೆ ಕೂಡ ಅಷ್ಟೇ ದುಬಾರಿಯಾಗಿರುತ್ತದೆ. ಬಡ, ಕೆಳ ಮಧ್ಯಮ ಮತ್ತು ಮಧ್ಯಮ ಕುಟುಂಬ ವರ್ಗದ ಜನರಿಗೆ ಕೆಲವು ಚಿಕಿತ್ಸೆಗಳು ಲಭ್ಯವಾಗದ ರೀತಿಯಲ್ಲಿ ಇವೆ.

ಕಾಯಿಲೆ ಬಂದಾಗ ಚಿಕಿತ್ಸೆ ಪಡೆದು ಗುಣಪಡಿಸದೆ ಬೇರೆ ದಾರಿಯಿಲ್ಲ. ಎಲ್ಲಾದರೂ ಸಾಲ ಸೋಲ ಮಾಡಿಯಾದರೂ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಲೇಬೇಕು. ಚಿಕಿತ್ಸೆ ಪಡೆದ ನಂತರ ಜನರು ಆಹಾರ, ಆರೋಗ್ಯದಲ್ಲಿ ಕಾಳಜಿ ವಹಿಸುತ್ತಾರೆ, ಪಥ್ಯ ಮಾಡುತ್ತಾರೆ.
ಇಂತಹ ವಾತಾವರಣದಲ್ಲಿ ನಾವು ಅಸೌಖ್ಯಕ್ಕೀಡಾದಾಗ ನಮ್ಮ ಆಹಾರ, ಪಥ್ಯಗಳ ಬಗ್ಗೆ ಗಮನ ಹರಿಸುವ ಬದಲಿಗೆ ನಾವು ಆರೋಗ್ಯವಿರುವಾಗಲೇ ನಾವು ಸೇವಿಸುವ ಆಹಾರದ ಕಡೆಗೆ ಗಮನ ಹರಿಸಿದರೆ ಅನಾರೋಗ್ಯವನ್ನು ತಡೆಯಬಹುದು.

ಇತ್ತೀಚಿನ ದಿನಗಳಲ್ಲಿ ಜಗತ್ತಿನಾದ್ಯಂತ ಜೀವನ ಶೈಲಿಯ ಕಾಯಿಲೆಗಳು ಅಥವಾ Non-communicable diseases(NCDs) ಹೆಚ್ಚಾಗಿ ಕಂಡುಬರುತ್ತಿದೆ. ಹೃದಯಾಘಾತ, ಹೃದ್ರೋಗ, ಉಸಿರಾಟದ ತೊಂದರೆ, ಮಧುಮೇಹ ಮೊದಲಾದ ಕಾಯಿಲೆಗಳು ಶೇಕಡಾ 80ರಷ್ಟು ಜೀವನಶೈಲಿಯ ಕಾಯಿಲೆಗಳಾಗಿವೆ.

ಕೆಲವು ವರ್ಷಗಳ ಹಿಂದೆ ಜೀವನಶೈಲಿಯ ಕಾಯಿಲೆಗಳು ವಯಸ್ಸಾದವರಲ್ಲಿ ಮತ್ತು ಪ್ರಭಾವಶಾಲಿ ಉನ್ನತ ವರ್ಗದ ಕುಟುಂಬದಲ್ಲಿ ಹೆಚ್ಚಾಗಿತ್ತು. ಆದರೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ರಾಷ್ಟ್ರವಾದ ಭಾರತದಂತಹ ದೇಶಗಳಲ್ಲಿ ಒಂದೆಡೆ ಮಕ್ಕಳಿಗೆ ಸಂಪೂರ್ಣ ಪೌಷ್ಟಿಕಾಂಶಯುಕ್ತ ಆಹಾರ ಸಿಗದಿರುವ ಸಮಸ್ಯೆಯಾದರೆ ಇನ್ನೊಂದೆಡೆ ಜೀವನಶೈಲಿಯ ಕಾಯಿಲೆಗಳು ಅಧಿಕವಾಗಿದೆ. ಇತ್ತೀಚಿನ ವರ್ಷಗಳಲ್ಲಿ ಯುವಜನತೆಯಲ್ಲಿ ಕೂಡ ಇಂತಹ ಅನಾರೋಗ್ಯ ಸಮಸ್ಯೆ ಕಾಣಿಸಿಕೊಂಡಿರುವುದು ಇನ್ನಷ್ಟು ಆತಂಕಕಾರಿ.

ಅನಾರೋಗ್ಯಕರ ತಿನ್ನುವ ವಿಧಾನ, ಶಾರೀರಿಕ ಚಟುವಟಿಕೆ ಕಡಿಮೆಯಾಗಿರುವುದು, ಆಲ್ಕೋಹಾಲ್ ಅಧಿಕ ಸೇವನೆ ಮತ್ತು ತಂಬಾಕು ಸೇವನೆ ಈ ಕಾಯಿಲೆಗಳಿಗೆ ಹೆಚ್ಚು ಕಾರಣವಾಗಿರುತ್ತದೆ. ಒಂದು ವಿಷಯ ಇಲ್ಲಿ ಮುಖ್ಯವಾದುದೆಂದರೆ ಜೀವನಶೈಲಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡರೆ ಇಂತರ ಕಾಯಿಲೆಗಳಲ್ಲಿ ಶೇಕಡಾ 80ರಷ್ಟನ್ನು ತಡೆಗಟ್ಟಬಹುದು.

ಉತ್ತಮ ಜೀವನ ಶೈಲಿಗೆ ಪಥ್ಯ ಅತಿಮುಖ್ಯವಾಗಿರುತ್ತದೆ. ಎಲ್ಲಿ, ಎಷ್ಟು ಹೊತ್ತಿಗೆ, ಏನು ಆಹಾರ ತಿನ್ನುತ್ತೇವೆ ಎಂಬುದು ಮುಖ್ಯವಾಗುತ್ತದೆ. ಈ ಎಲ್ಲಾ ಅಂಶಗಳನ್ನು ಹುಡುಕುತ್ತಾ ಹೋದರೆ ನಾವು ಕೊನೆಗೆ ಬಂದು ನಿಲ್ಲುವುದು ನಮ್ಮ ನಮ್ಮ ಮನೆಯ ಅಡುಗೆ ಮನೆಗೆ. ಅಂಗೈಯಲ್ಲಿ ಆರೋಗ್ಯ ಎಂಬಂತೆ ಅಡುಗೆ ಮನೆಯಲ್ಲಿಯೇ ಮನೆಯ ಸದಸ್ಯರ ಆರೋಗ್ಯದ ಶೇಕಡಾ 90 ಭಾಗ ನಿರ್ಧಾರವಾಗುತ್ತದೆ.

ಸಾಮಾನುಗಳ ಖರೀದಿ: ರೇಷನ್ ಅಂಗಡಿ, ತರಕಾರಿ ಅಂಗಡಿಯಲ್ಲಿ ಸಾಮಾನು ಖರೀದಿಸುವಾಗ ನಮ್ಮ ಆರೋಗ್ಯದ ಬಗ್ಗೆ ಗಮನ ಹರಿಸುವುದು ಒಳಿತು. ಆರೋಗ್ಯಕರ, ರುಚಿಕರ ಬೇಳೆ, ಕಾಳುಗಳನ್ನು ಖರೀದಿಸಿ ಮನೆಯ ಅಡುಗೆ ಮನೆಗೆ ತರುವುದು ಒಳ್ಳೆಯದು.
ಸಮಯ ಪಕ್ಕಾ ಇರಲಿ: ಬೆಳಗ್ಗೆ ತಿಂಡಿ ಸೇವನೆಯಿಂದ ಹಿಡಿದು ರಾತ್ರಿ ಮಲಗುವವರೆಗೆ ಸೇವಿಸುವ ಪ್ರತಿಯೊಂದು ಆಹಾರವೂ ವ್ಯಕ್ತಿಯ ಆರೋಗ್ಯದಲ್ಲಿ ಮುಖ್ಯವಾಗುತ್ತದೆ. ಸಿಕ್ಕ ಸಿಕ್ಕ ಸಮಯದಲ್ಲಿ ಆಹಾರ ಸೇವನೆಯಿಂದ ರಕ್ತದೊತ್ತಡ ಹೆಚ್ಚಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚಾಗುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗುತ್ತದೆ.

ಮನೆಯಲ್ಲಿಯೇ ಮದ್ದು: ಸಾಮಾನ್ಯ ಶೀತದಿಂದ ಹಿಡಿದು ಕ್ಯಾನ್ಸರ್ ನಂತಹ ಭಯಾನಕ ಕಾಯಿಲೆಯವರೆಗೆ ದೇಹದ ತೂಕ ಹೆಚ್ಚಳ ಮತ್ತು ಕಡಿಮೆಯಾಗುವುದಕ್ಕೆ ಮನೆಯಲ್ಲಿಯೇ ಹಲವು ಔಷಧಿಗಳಿವೆ. ಸರಿಯಾದ ಪೌಷ್ಟಿಕಾಂಶಗಳು ದೇಹಕ್ಕೆ ಹೋದರೆ ದೇಹ ಆರೋಗ್ಯವಾಗಿರುತ್ತದೆ. ಅದಕ್ಕೆ ವೈದ್ಯರ ಸಲಹೆ ಪಡೆಯುವುದು ಕೂಡ ಮುಖ್ಯ.

ಆರ್ಥಿಕ ಅಂಶ:
ವ್ಯಕ್ತಿಯ ಆರ್ಥಿಕ ಹಿನ್ನಲೆ ಕೂಡ ಅವನು ಸೇವಿಸುವ ಆಹಾರವನ್ನು ಅವಲಂಬಿಸಿರುತ್ತದೆ.

ಭಾವನಾತ್ಮಕ ಆರೋಗ್ಯ:
ಮನೆಯಲ್ಲಿ ಒಟ್ಟಿಗೆ ಜೊತೆಯಲ್ಲಿ ಕುಳಿತು ಊಟ ತಿಂಡಿ ಮಾಡಿದರೆ ತಿನ್ನುವ ಆಹಾರ ಪ್ರಮಾಣದಲ್ಲಿ ವ್ಯತ್ಯಾಸವಿರುತ್ತದೆ. ಕೂಡಿ ಬಾಳಿ ಸೇವಿಸುವ ಆಹಾರ ಆರೋಗ್ಯಕ್ಕೆ ಒಳ್ಳೆದು.

ವೃತ್ತಿಪರ ಸಹಾಯ:
ವ್ಯಕ್ತಿ ಅದು ಪುರುಷನೇ ಆಗಿರಲಿ, ಮಹಿಳೆ ಆಗಿರಲಿ ವೃತ್ತಿಯಲ್ಲಿ ಉತ್ತಮವಾಗಿದ್ದರೆ ಆತ/ಆಕೆ ಸೇವಿಸುವ ಆಹಾರ ಮೇಲೆ ಪರಿಣಾಮ ಬೀರುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com