ಬೇಸಿಗೆ ಬಂದಾಯ್ತು: ಮಕ್ಕಳಲ್ಲಿ ಎದುರಾಗುವ ಅತಿಸಾರ ಸಮಸ್ಯೆ ನಿಭಾಯಿಸುವುದು ಹೇಗೆ? ಈ ಸಲಹೆ ಪಾಲಿಸಿ...

ಬೇಸಿಗೆ ಬಂತೆಂದರೆ ಮಕ್ಕಳ ಆರೋಗ್ಯ ಕುರಿತು ಪೋಷಕರಿಗೆ ತಲೆನೋವು ಶುರುವಾಗುತ್ತದೆ. ಬೇಸಿಗೆಯಲ್ಲಿ ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ ಪ್ರಮುಖವಾದದ್ದು ಅತಿಸಾರ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಸಿಗೆ ಬಂತೆಂದರೆ ಮಕ್ಕಳ ಆರೋಗ್ಯ ಕುರಿತು ಪೋಷಕರಿಗೆ ತಲೆನೋವು ಶುರುವಾಗುತ್ತದೆ. ಬೇಸಿಗೆಯಲ್ಲಿ ಮಕ್ಕಳಲ್ಲಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಅದರಲ್ಲಿ ಪ್ರಮುಖವಾದದ್ದು ಅತಿಸಾರ. ಈ ಅತಿಸಾರ ಕೆಲವೊಮ್ಮೆ ಮಕ್ಕಳ ಪ್ರಾಣಕ್ಕೂ ಕುತ್ತು ತರುತ್ತವೆ. ಹೀಗಾಗಿ ಬೇಸಿಗೆ ಸಮಯದಲ್ಲಿ ಮಕ್ಕಳನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳಬೇಕಾಗುತ್ತದೆ. 

ಅತಿಸಾರ ಎಂದರೆ ಒಂದು ದಿನದಲ್ಲಿ ಮೂರು ಅಥವಾ ಮೂರಕ್ಕಿಂತ ಹೆಚ್ಚು ಬಾರಿ ಮಲ ವಿಸರ್ಜನೆಯಾಗುವುದು ಎಂದರ್ಥ. ಆ ಸಂದರ್ಭದಲ್ಲಿ ಹೊಟ್ಟೆ ಕಿವುಚಿದಂತಾಗುವುದು, ಹೊಟ್ಟೆ ಉಬ್ಬರಿಸುವುದು, ವಾಕರಿಕೆ, ಪದೇ ಪದೇ ಮಲವಿಸರ್ಜನೆ ಮಾಡಬೇಕೆಂದೆನಿಸುತ್ತದೆ. ಅತಿಸಾರ ಹೆಚ್ಚಾದ ಮಕ್ಕಳ ದೇಹವು ನಿರ್ಜಲೀಕರಣಗೊಳ್ಳುವುದುಂಟು. ಈ ಸಮಸ್ಯೆ ಕಾಣಿಸಿಕೊಂಡ ಬಳಿಕ ಮಕ್ಕಳ ದೇಹವು ನೀರು ಮತ್ತು ಲವಣಗಳನ್ನು ಕಳೆದುಕೊಳ್ಳಲು ಪ್ರಾರಂಭವಾಗುತ್ತದೆ. ನೀರು ಮತ್ತು ಲವಣ ಎರಡೂ ದೇಹಕ್ಕೆ ಅತ್ಯವಶ್ಯಕವಾದದ್ದು. ಅತಿಸಾರದಿಂದ ನೀರು ಮತ್ತು ಲವಣಗಳು ವೇಗವಾಗಿ ಕಳೆದುಕೊಳ್ಳುವುದರಿಂದ ದೇಹದಲ್ಲಿ ನಿರ್ಜಲೀಕರಣ ಸಮಸ್ಯೆ ಎದುರಾಗುತ್ತದೆ. ನಿರ್ಜಲೀಕರಣ ತೀವ್ರಗೊಂಡಾಗ ಸಾವು ಸಂಭವಿಸಬಹುದು. ಇಂತಹ ಸಂದರ್ಭದಲ್ಲಿ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಕೊಡಿಸುವುದು ಅತ್ಯವಶ್ಯಕ. 

ತೀವ್ರವಾದ ನೀರಿನಂಶದ ಅತಿಸಾರ, ತೀವ್ರ ರಕ್ತಸಿಕ್ತ ಅತಿಸಾರವನ್ನು ಭೇದಿ ಎಂದು ಕರೆಯಲಾಗುತ್ತದೆ. ಭೇದಿ ಸಾಮಾನ್ಯವಾಗಿ ಬ್ಯಾಕ್ಟೀರಿಯಾದ ಸೋಂಕಿನಿಂದ ಉಂಟಾಗುತ್ತದೆ ಮತ್ತು ಇದು ಅಪಾಯಕಾರಿಯಾಗಿರುತ್ತವೆ. ಅತಿಸಾರದ ಕಾರಣಗಳು ಮಗುವಿನ ವಯಸ್ಸಿಗೆ ಅನುಗುಣವಾಗಿ ಬದಲಾಗುತ್ತವೆ. ಸಾಮಾನ್ಯವಾಗಿ ಈ ಸಮಸ್ಯೆ ನೀರು ಹಾಗೂ ಸೇವನೆ ಮಾಡುವ ಆಹಾರದಿಂದ ಕಂಡು ಬರುವುದುಂಟು. ಹೀಗಾಗಿ ಶುದ್ಧ ನೀರನ್ನು ಬಳಕೆ ಮಾಡುವುದು, ಅಡುಗೆ ಮಾಡುವಾಗ ಶುಚಿತ್ವ ಕಾಪಾಡುವುದು ಅತ್ಯಂತ ಮುಖ್ಯವಾಗುತ್ತದೆ. 

ನವಜಾತ ಶಿಶುಗಳಲ್ಲಿ ಅತಿಸಾರ ಉಂಟಾಗುವುದು ಹೇಗೆ? 
ನವಜಾತ ಶಿಶುಗಳಲ್ಲಿ ಆಗಷ್ಟೇ ರೋಗನಿರೋಧಕ ಶಕ್ತಿ ವೃದ್ಧಿಯಾಗುತ್ತಿರುತ್ತವೆ. ಇಂತಹ ಸಂದರ್ಭದಲ್ಲಿ ಸೋಂಕು ಬೇಗನೆ ತಗುಲುತ್ತವೆ. ಹೀಗಾಗಿ 6 ತಿಂಗಳ ಕಾಲ ಮಕ್ಕಳಿಗೆ ತಾಯಿಯಂದಿರು ಹೆಚ್ಚಾಗಿ ಎದೆ ಹಾಲುಣಿಸಬೇಕು. ಈ ಎದೆಹಾಲು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಬಾಟಲಿ ಹಾಲನ್ನು ಕುಡಿಸುವಾಗ ಬಾಟಲಿಗಳ ಶುಚಿತ್ವವನ್ನು ಕಾಪಾಡುವುದು ಅತ್ಯಂತ ಮುಖ್ಯವಾಗುತ್ತದೆ. 

ಅತಿಸಾರದ ಲಕ್ಷಣಗಳಾವುವು?
ಅತಿಸಾರ ಮತ್ತು ನಿರ್ಜಲೀಕರಣವು ಪ್ರತಿವರ್ಷ ಸುಮಾರು 1.2 ಮಿಲಿಯನ್ ಮಕ್ಕಳ ಸಾವಿಗೆ ಕಾರಣವಾಗಿದೆ. ಈ ಸಮಸ್ಯೆಯಿಂದ ಬಳಲುತ್ತಿರುವ ಶೇಕಡಾ 50 ರಷ್ಟು ಮಕ್ಕಳನ್ನು ಆರೋಗ್ಯ ಕೇಂದ್ರಗಳಲ್ಲಿ ಲಭ್ಯವಾಗುವ ಒಆರ್'ಎಸ್ ಮೂಲಕವೇ ರಕ್ಷಣೆ ಮಾಡಬಹುದು. ಇನ್ನು ಶೇ.15-20ರಷ್ಟು ಮಕ್ಕಳನ್ನು ಸೂಕ್ತ ಚಿಕಿತ್ಸೆ ಮೂಲಕ ರಕ್ಷಣೆ ಮಾಡಬಹುದು. 

ಮಕ್ಕಳಲ್ಲಿ ಅತಿಸಾರ ಸಮಸ್ಯೆ ಎದುರಾದಾಗ ಬಾಯಿ ಒಣಗುವುದು, ಕಣ್ಣುಗಳಲ್ಲಿ ಆಯಾಸ ಕಂಡು ಬರುವುದು, ನಿಶ್ಯಕ್ತಿ, ಲವಲವಿಕೆಯಿಂದ ಇಲ್ಲದಿರುವುದು, ಕಡಿಮೆ ಮೂರ್ತ ವಿಸರ್ಜನೆ, ಕಿರಿಕಿರಿಯಾಗುವುದು, ನಿರಾಸಕ್ತಿ ಲಕ್ಷಣಗಳು ಕಂಡು ಬರುತ್ತವೆ.

ಇನ್ನು ತೀವ್ರ ಅತಿಸಾರದಿಂದ ಬಳಲುತ್ತಿರುವ ಮಕ್ಕಳಲ್ಲಿ ಆಗಾಗ ಮಲವಿಸರ್ಜನೆ, ಹೊಟ್ಟಮೆ ನೋವು, ವಾಕರಿಕೆ, ವಾಂತಿ, ಹಸಿವಾಗದೆ ಇರುವುದು, ನಿರ್ಜಲೀಕರಣ, ತೂಕ ಇಳಿಯುವುದು, ಹೊಟ್ಟ ಉಬ್ಬರಿಸುವ ಲಕ್ಷಣಗಳು ಕಂಡು ಬರುತ್ತವೆ. 

ಹೊಟ್ಟೆಯ ಆರೋಗ್ಯ ಕಾಪಾಡುವುದು ಹೇಗೆ?
ಮಕ್ಕಳಿಗೆ ಎಷ್ಟು ಬೇಕೋ ಅಷ್ಟು ಆಹಾರವನ್ನೇ ನೀಡಿ. ಬಲವಂತದಿಂದ ತಿನ್ನಿಸಬೇಡಿ. ಹೆಚ್ಚೆಚ್ಚು ತರಕಾರಿ, ಸೊಪ್ಪು ಹಾಗೂ ಹಣ್ಣುಗಳನ್ನು ನೀಡಿ.

ಹೆಚ್ಚೆಚ್ಚು ನೀರು, ಹಾಲು, ಮೊಸರು, ಎಳನೀರು ಕುಡಿಸಿ.

ಜೀರ್ಣಕ್ರಿಯೆ ಹೆಚ್ಚಿಸಲು ಮಕ್ಕಳ ಆಹಾರ ಪದಾರ್ಥದಲ್ಲಿ ಜೀರಿಗೆ, ಶುಂಠಿ, ಅರಿಶಿನ, ಇಂಗು, ದಾಲ್ಚಿನ್ನಿ, ಪುದೀನಾ, ಕರಿಬೇವು, ಮೇಥಿ ಬೀಜ, ಬೆಳ್ಳುಳ್ಳಿ, ಲವಂಗ, ಸಾಸಿವೆ, ಏಲಕ್ಕಿ, ಕಾಳು ಮೆಣಸು, ಜಾಯಿಕಾಯಿ ಇವುಗಳನ್ನು ಸೇರಿಸಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com