ಕೋವಿಡ್ ಎದುರಿಸಲು ಇಲ್ಲಿವೆ ಸರಳ ಟಿಪ್ಸ್: ಆತಂಕ ಬಿಡಿ, ಆರಾಮಾಗಿರಿ!

ಕೊರೋನಾಗಿಂತಲೂ ಹೆಚ್ಚಾಗಿ ಹರಡುತ್ತಿರುವುದು ಏನಾದರೂ ಇದ್ದರೆ ಅದು ಈ ಸಾಂಕ್ರಾಮಿಕದಿಂದ ನಮ್ಮ ಜೀವ- ಜೀವನಗಳ ಮೇಲೆ, ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಮೇಲೆ ಬೀರುವ ಪರಿಣಾಮ, ಭಯ ಮತ್ತು ಆತಂಕಗಳಾಗಿವೆ. 
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಕೊರೋನಾಗಿಂತಲೂ ಹೆಚ್ಚಾಗಿ ಹರಡುತ್ತಿರುವುದು ಏನಾದರೂ ಇದ್ದರೆ ಅದು ಈ ಸಾಂಕ್ರಾಮಿಕದಿಂದ ನಮ್ಮ ಜೀವ- ಜೀವನಗಳ ಮೇಲೆ, ಆರ್ಥಿಕ ಪರಿಸ್ಥಿತಿ, ಸಂಬಂಧಗಳ ಮೇಲೆ ಬೀರುವ ಪರಿಣಾಮ, ಭಯ ಮತ್ತು ಆತಂಕಗಳಾಗಿವೆ. 

ಹಾಗಾದರೆ ಈ ಭಯ ಮತ್ತು ಆತಂಕಗಳೆಂದರೆ ಏನು ಎಂಬುದನ್ನು ತಿಳಿದುಕೊಳ್ಳೋಣ. ನಮ್ಮ ಸುತ್ತ ನಡೆಯುತ್ತಿರುವುದಕ್ಕೆ ನಮ್ಮ ದೇಹದ ಸ್ವಾಭಾವಿಕ ಪ್ರತಿಕ್ರಿಯೆಯೇ ಈ ಭಯ ಮತ್ತು ಆತಂಕಗಳು. 

ಕೊರೋನಾದಿಂದ ನಮ್ಮ ಜೀವಗಳನ್ನು ರಕ್ಷಿಸಿಕೊಳ್ಳಲು ಅಗತ್ಯವಿರುವುದು ನಮ್ಮ ಅಸ್ತಿತ್ವಕ್ಕಾಗಿ ಹೋರಾಡಿದಂತೆ. ಆ ನಿಟ್ಟಿನಲ್ಲಿ ಅಗತ್ಯವಿರುವುದನ್ನು ಮಾಡುವುದಕ್ಕೆ ನಮ್ಮನ್ನು ಕಾರ್ಯಪ್ರವೃತ್ತರನ್ನಾಗಿಸುವ "ಹೋರಾಡು, ಹೋರಾಡು" ಎಂಬ ಪರಿಸ್ಥಿತಿಗೆ ಬದಲಾಯಿಸಿಕೊಳ್ಳುವುದು ಬಹುಮುಖ್ಯವಾಗುತ್ತದೆ. 

ಆದರೆ ಒಂದು ವೇಳೆ ನಾವು ಭಯ ಅಥವಾ ಆತಂಕದಲ್ಲೇ ಸಿಲುಕಿಕೊಂಡರೆ, ಅವು ನಮ್ಮನ್ನು ಯಾವುದೇ ಕ್ರಮವನ್ನೂ ಕೈಗೊಳ್ಳದಂತಾಗಿಸುತ್ತವೆ. 

ಹೌದು, ನಮಗೆ ಭಯವಿದೆ, ಆತಂಕವಿದೆ, ಇನ್ನು ವೈದ್ಯಕೀಯ ಸರಬರಾಜಿನ ಕೊರತೆ ಬಗ್ಗೆ ವಿಶೇಷವಾಗಿ ಹೇಳಬೇಕಿಲ್ಲ ಎಂಬುದು ಸಹಜವೆನಿಸಿದರೂ, ಭಯಪಡುವುದರಿಂದ ಆತಂಕಪಡುವುದರಿಂದ ನಮಗೆ ಏನೂ ಸಿಗುವುದಿಲ್ಲ ಹಾಗೂ ಉತ್ತಮ ಎನಿಸುವಂತೆ ಆಗುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. 

ಒತ್ತಡ, ಆತಂಕಗಳು ನಮ್ಮ ರೋಗನಿರೋಧಕ ವ್ಯವಸ್ಥೆಯನ್ನು ಹೇಗೆ ಕುಗ್ಗಿಸುತ್ತದೆ, ರಕ್ತದ ಒತ್ತಡವನ್ನು ಅದು ಹೇಗೆ ಹೆಚ್ಚಿಸುತ್ತದೆ, ಬ್ಲಡ್ ಶುಗರ್ ಮಟ್ಟವನ್ನು ಹೇಗೆ ಹೆಚ್ಚಿಸುತ್ತದೆ, ಉಸಿರಾಟದ ಸಮಸ್ಯೆ ಉಂಟಾಗುವುದೂ ಮೊದಲಾದ ಸಮಸ್ಯೆಗಳನ್ನೆಲ್ಲಾ ಹೇಗೆ ತಂದೊಡ್ಡುವ ಮೂಲಕ ನಮ್ಮನ್ನು ಮತ್ತಷ್ಟು ವಿಷವರ್ತುಲದಲ್ಲಿ ಸಿಲುಕಿಸುತ್ತಿದೆ ಎಂಬುದನ್ನು ವಾಸ್ತವದಲ್ಲಿ ನಮ್ಮ ಇಂದಿನ ವಿಜ್ಞಾನವೂ ಹೇಳುತ್ತಿದೆ.
 
ಕೋವಿಡ್-19 ಪ್ರಾರಂಭವಾದಾಗಿನಿಂದಲೂ ನಮ್ಮಲ್ಲಿ ಸಹಸ್ರಾರು ಮಂದಿ ರೋಗಿಗಳು ಬಂದಿದ್ದರು, ಈಗಲೂ ಬರುತ್ತಿದ್ದಾರೆ. ಕೆಲವು ಮಂದಿಗೆ ಆಸ್ಪತ್ರೆಯ ಚಿಕಿತ್ಸೆ ಅಗತ್ಯವಿರುತ್ತದೆ, ಇನ್ನೂ ಕೆಲವು ಮಂದಿ ದುರದೃಷ್ಟವಶಾತ್ ವೈರಾಣುವಿನಿಂದ ಸಾವನ್ನಪ್ಪುತ್ತಿದ್ದಾರೆ. ಹಾಗಾದರೆ ಬಹುತೇಕ ಇರುವ ಮನೆಯಲ್ಲಿಯೇ ಆರಾಮಾಗಿ ಗುಣಹೊಂದುತ್ತಿರುವ ರೋಗಲಕ್ಷಣ ರಹಿತ ಮಂದಿಯ ಕಥೆಯೇನು? ಅವರುಗಳೆಲ್ಲಾ, ತಮ್ಮ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿಭಾಯಿಸುವುದಕ್ಕೆ ತಮ್ಮ ಜೀವನಶೈಲಿಯಲ್ಲಿ ಸರಳವಾದ ಬದಲಾವಣೆಗಳನ್ನು ಮಾಡಿಕೊಂಡಿದ್ದಾರೆ. ಅವರು ಬದಲಾವಣೆ ಮಾಡಿಕೊಂಡಂತೆ ನೀವೂ ಮಾಡಿದಲ್ಲಿ ಅವರಲ್ಲಿ ನೀವೂ ಒಬ್ಬರಾಗಬಹುದು!! 

ಈಗಲೇ ನೀವು ಮಾಡಬಹುದಾದ ಒಂದಷ್ಟು ಅಂಶಗಳು ಹೀಗಿವೆ... 

  1. ಮನೆಯಲ್ಲಿಯೇ ಇರಿ
    ಮನೆಯಲ್ಲಿಯೇ ಇರುವುದು ನೀವು ಕೈಗೊಳ್ಳಬಹುದಾದ ಅತ್ಯಂತ ಸುಲಭವಾದ ಹಾಗೂ ಅತ್ಯಂತ ಪ್ರಭಾವಿಯಾದ ಕ್ರಮ, ಈ ರೀತಿ ಮಾಡುವುದರಿಂದ ನಿಮಗೆ ಅಷ್ಟೇ ಒಳಿತಾಗುವುದರ ಜೊತೆಗೆ ಎಲ್ಲರಿಗೂ ಒಳಿತಾಗಲಿದೆ, ಏಕೆಂದರೆ ಪ್ರತಿಯೊಬ್ಬರೂ ಕೋವಿಡ್-19 ಸೋಂಕು ಹರಡುವಿಕೆ ಸರಪಳಿಯನ್ನು ಒಂದೋ ಬೆಳೆಸುತ್ತಿದ್ದಾರೆ, ಇಲ್ಲವೇ ತುಂಡು ಮಾಡುತ್ತಿದ್ದಾರೆ. 
  2. ಆರಾಮಾಗಿರಿ, ನಿದ್ದೆ ಮಾಡಿ
    ನೀವು ಎಷ್ಟೇ ಸಾಂಬಾರ ಪದಾರ್ಥಗಳನ್ನು ಬಳಕೆ ಮಾಡಿದರೂ ರೋಗನಿರೋಧಕ ಶಕ್ತಿ ಹೆಚ್ಚಿಸುವ ಪದಾರ್ಥಗಳನ್ನು ಸೇವಿಸಿದರೂ, ನೀವು ಚೇತರಿಕೆ ಹೊಂದುವುದು ಸರಿಯಾದ ನಿದ್ದೆಯಿಂದ ಅಷ್ಟೇ ಸಾಧ್ಯ! ನಿದ್ದೆ, ಕಡಿಮೆ ರೋಗನಿರೋಧಕ ಶಕ್ತಿ, ಚೇತರಿಕೆಯಲ್ಲಿ ವಿಳಂಬದ ಸುತ್ತ ಅಸಂಖ್ಯ ವೈಜ್ಞಾನಿಕ ಮತ್ತು ಕ್ಲಿನಿಕಲ್ ಅಧ್ಯಯನಗಳು ನಡೆದಿವೆ. ಆದರೆ ಈ ಸ್ವಾಭಾವಿಕ ಪ್ರಕ್ರಿಯೆಯನ್ನು ಮಾತ್ರ ನಾವು ತೀರಾ ಲಘುವಾಗಿ ಪರಿಗಣಿಸುತ್ತೇವೆ. ಆದ್ದರಿಂದ ನೀವು ಕೋವಿಡ್ ಬಾರದಂತೆ ತಡೆಯುತ್ತಿದ್ದೀರೋ ಅಥವಾ ಈಗಾಲೇ ಚೇತರಿಕೆ ಕಂಡಿದ್ದೀರೋ ಅದರ ಸ್ಥಿತಿ ಏನೇ ಇರಲಿ, ನಿಸರ್ಗದತ್ತವಾಗಿರುವ ನಿದ್ದೆಯೆಂಬ ವ್ಯವಸ್ಥೆಯನ್ನು ಮಾನ್ಯ ಮಾಡಿ ಪ್ರತಿ ರಾತ್ರಿಯೂ ಗುಣಮಟ್ಟದ ನಿದ್ದೆಯನ್ನು ಮಾಡಿ.
  3. ವಿಟಮಿನ್ ಸಿ, ಜಿಂಕ್, ಸೆಲೆನಿಯಮ್, ವಿಟಮಿನ್ ಡಿ3 ಮುಂತಾದ ರೋಗನಿರೋಧಕ ಉತ್ತೇಜನದ ಪೋಷಕಾಂಶಗಳನ್ನು ಸೇವಿಸಿ
    ಇವು ಮೂಲದಲ್ಲಿಯೇ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಪೋಷಕಾಂಶಗಳಾಗಿದ್ದು, ಜಾಗತಿಕ ಮಟ್ಟದಲ್ಲಿ ವೈದ್ಯಕೀಯವಾಗಿ ಶಿಫಾರಸು ಮಾಡಲಾಗುತ್ತಿರುವ ಅಂಶಗಳಾಗಿವೆ. ಶ್ವಾಸಕೋಶಕ್ಕೆ ಸಂಬಂಧಿಸಿದ ಬೆಳವಣಿಗೆ, ಬಲವರ್ಧನೆ, ಸರಿಪಡಿಸುವಿಕೆ, ಚೇತರಿಕೆ, ಉರಿಯೂತದ ಸಮಸ್ಯೆಗಳನ್ನು ಕಡಿಮೆ ಮಾಡುವುದಕ್ಕೆ ಇವುಗಳು ಕಾರಣವಾಗುತ್ತವೆ. ನಾವು ಅದನ್ನು ಆಹಾರದ ಮೂಲಕವೂ ಪಡೆಯಬಹುದಾಗಿದೆ, ಆದರೆ ಈ ಹಂತದಲ್ಲಿ ನಿಮಗೆ ಅಗತ್ಯವಿದ್ದಲ್ಲಿ, ಪ್ರಬಲ ಪರಿಣಾಮ ಬೇಕಾದಲ್ಲಿ ಈ ಪೂರಕಾಂಶಗಳನ್ನು ವೈದ್ಯರ ಸಲಹೆ ಪಡೆದು ಸೇವಿಸಬಹುದಾಗಿದೆ. 
  • ವಿಟಮಿನ್ ಸಿ ಮೂಲ: ನಿಂಬೆ ಹಣ್ಣು, ಕಿತ್ತಳೆ, ಪೈನ್ ಆಪಲ್, ನೆಲ್ಲಿಕಾಯಿ, ಸೀಬೆಹಣ್ಣು, ಕ್ಯಾಪ್ಸಿಕಂ ಅಥವಾ  ಬೆಲ್ ಪೆಪರ್(ದೊಡ್ಡ ಮೆಣಸಿನಕಾಯಿ), ಪಪಾಯಗಳನ್ನು ಸೇವಿಸಬಹುದಾಗಿದೆ. 
  • ಜಿಂಕ್ ಮೂಲಗಳು: ಕುಂಬಳಕಾಯಿ ಬೀಜಗಳು, ಮನೆ ಹುರುಳಿ ಎಂದು ಕರೆಯಲ್ಪಡುವ ಮನೆ ಹುರುಳಿ, ಬೇಯಿಸಿದ ಕಡಲೆ, ಸೂರ್ಯಕಾಂತಿ ಬೀಜಗಳು, ಸೀಗಡಿಗಳು, ಆಯ್ಸ್ಟರ್ (ಸಿಂಪಿ), ಗೋಡಂಬಿ ಬೀಜಗಳು. ಬಾದಾಮಿ, ಮೊಟ್ಟೆ, ಏಡಿಗಳು, ಮಾಂಸ, ಚಿಕನ್, ಡೈರಿ ಉತ್ಪನ್ನಗಳು
  • ಸೆಲೆನಿಯಮ್ ಮೂಲಗಳು: ಬ್ರೆಜಿಲ್ ಬೀಜಗಳು, ಇಡಿಯಾದ ಮೊಟ್ಟೆಗಳು, ಕಾಟೇಜ್ ಚೀಸ್, ಮೃದುಗಿಣ್ಣು, ಮಶ್ರೂಮ್ ಗಳು, ಡೈರಿ ಉತ್ಪನ್ನಗಳು 
  • ವಿಟಮಿನ್ ಡಿ3: ರೋಗನಿರೋಧಕ ಶಕ್ತಿ ಮೂಲಭೂತ ಅಂಶಗಳಿಲ್ಲದೇ ಕೆಲಸ ಮಾಡುವುದಿಲ್ಲ. ವಿಟಮಿನ್ ಡಿ3 ರೋಗನಿರೋಧಕ ಶಕ್ತಿಗೆ ಮೂಲಭೂತವಾದ ಅಂಶವಾಗಿದ್ದು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕಾಗಿ ಇದು ಅತ್ಯುತ್ತಮವಾದದ್ದಾಗಿದೆ. ಇದಕ್ಕಾಗಿ ಸಪ್ಲಿಮೆಂಟ್ ಗಳನ್ನು ತೆಗೆದುಕೊಳ್ಳಬೇಕಾಗಬಹುದೇನೋ, ಆದರೆ ನೈಸರ್ಗಿಕವಾಗಿ ಸೂರ್ಯನ ಬೆಳಕು, ಅಣಬೆಗಳು, ಮೊಟ್ಟೆಗಳು ಇದರ ಮೂಲವಾಗಿದೆ. 

 4. ಸಾಕಷ್ಟು ಪ್ರಮಾಣದಲ್ಲಿ ಪೌಷ್ಟಿಕಾಂಶ ಸೇವಿಸಿ: ರೋಗನಿರೋಧಕ ಜೀವಕೋಶಗಳೂ ಸೇರಿದಂತೆ ನಮ್ಮ ದೇಹದ ಪ್ರತಿ ಜೀವಕೋಶಗಳನ್ನೂ ನಿರ್ಮಿಸುವ ಅಂಶ ಪ್ರೊಟೀನ್ ಆಗಿದೆ. 

ಸಸ್ಯಹಾರ ಮೂಲಗಳು: ಹಸಿರು ಬಟಾಣಿ, ಮಸೂರ ದ್ವಿದಳ ಧಾನ್ಯಗಳು, ಬೀನ್ಸ್, ರೋಸ್ಟೆಡ್ ಚನ್ನ ಅಥವಾ ಸಟ್ಟು, ಕಿಚಡಿ ಸಹ ನಿಮ್ಮ ಆರೋಗ್ಯಕ್ಕೆ ಉತ್ತಮವಾಗಬಲ್ಲದು 

ಸಸ್ಯಹಾರೇತರ ಮೂಲಗಳು: ಉತ್ತಮವಾಗಿ ಬೇಯಿಸಿದ ಫ್ರೀ ರೇಂಜ್ ಮೊಟ್ಟೆಗಳು, ಮರ್ಕ್ಯುರಿ ಫ್ರೀ ಮೀನು, ಮಾಂಸ, ಚಿಕನ್

5. ಆವಿ ತೆಗೆದುಕೊಳ್ಳುವುದು (ಸ್ಟೀಮ್ ಇನ್ಹಲೇಷನ್)

ನೆಗಡಿ, ಕಫ ಹೊರಹಾಕುವುದಕ್ಕೆ, ಸೈನಸ್ ಗಳ ಸಮಸ್ಯೆಯಿಂದ ಸ್ವಲ್ಪ ಮಟ್ಟಿಗಿನ ಪರಿಹಾರ ಪಡೆಯುವುದಕ್ಕಾಗಿ ಆವಿ ತೆಗೆದುಕೊಳ್ಳುವುದು ಅತ್ಯಂತ ಪರಿಣಾಮಕಾರಿಯಾಗಿದೆ. 

ಅಜೈನ್ (ಕ್ಯಾರಮ್ ಬೀಜಗಳು) ಎಂದೂ ಹೇಳುತ್ತಾರೆ, ಅರಿಶಿನದ ಪುಡಿ, 2-3 ಚಮಚದಷ್ಟು ನೀಲಗಿರಿ ಎಣ್ಣೆಯನ್ನು ಸ್ಟೀಮರ್ ಗೆ ಹಾಕಿ 3-5 ನಿಮಿಷ ಆವಿ ತೆಗೆದುಕೊಳ್ಳಿ, ಕಫ ಹೆಚ್ಚಾಗಿದ್ದಲ್ಲಿ ಹಾಲಿನ ಉತ್ಪನ್ನಗಳು ಅದನ್ನು ಹೆಚ್ಚು ಮಾಡುವುದರಿಂದ ಅದನ್ನು ನಿಲ್ಲಿಸಿ.

6. ಕುಂಬಳಕಾಯಿ ರಸ: ಮಧ್ಯಾಹ್ನದ ಊಟ ಅಥವಾ- ರಾತ್ರಿಯ ಊಟದ ಜೊತೆಗೆ ಒಂದು ಬೌಲ್ ನಷ್ಟು ಕುಂಬಳಕಾಯಿ ರಸ ಸೇವನೆ ಮಾಡಿದರೆ ರೋಗನಿರೋಧಕ ಶಕ್ತಿ ಹೆಚ್ಚಾಗಲಿದೆ.
 
ರೆಸಿಪಿ: 1 ಈರುಳ್ಳಿ, 2 ಕ್ಯಾರೆಟ್, ಅದಾಗಲೇ ನೆನೆಸಿಟ್ಟ ಕೆಂಪು ಮಸೂರ, ಬಟಾಣಿಯನ್ನು ಒಂದು ಹಿಡಿಯಷ್ಟು ತೆಗೆದುಕೊಳ್ಳಿ, 1 ಕಪ್ ನಷ್ಟು ಕುಂಬಳಕಾಯಿ(ಹಳದಿ) 1 ಟೇಬಲ್ ಸ್ಪೀನ್ ನಷ್ಟು ತಾಜಾ ಜಿಂಜರ್ ಗಾರ್ಲಿಕ್ ಪೇಸ್ಟ್, 4 ಕಪ್ ನಷ್ಟು ನೀರು, ಕರಿ ಮೆಣಸು, ಅರಿಶಿನ, ಪಿಂಕ್ ಹಿಮಾಯನ್ ಸಾಲ್ಟ್, ಕೆಂಪು ಮೆಣಸು, ರುಚಿಗೆ ಥೈಮ್, 1 ಟೇಬಲ್ ಸ್ಪೂನ್ ನಷ್ಟು ಪಾರ್ಸ್ಲಿ, 1 ಕಪ್, ಪಾಲಕ್ ಎಲೆಗಳು, 1 ಟೇಬಲ್ ಸ್ಪೂನ್ ನಷ್ಟು ಕೋಲ್ಡ್ ಪ್ರೆಸ್ಡ್ ತೆಂಗಿನ ಎಣ್ಣೆ 

ಪಾಕ ವಿಧಾನ: ಈರುಳ್ಳಿ, ಕ್ಯಾರೆಟ್ ಗಳನ್ನು ಹೆಚ್ಚಿಕೊಂಡು ಟೆಬಲ್ ಸ್ಪೂನ್ ನಷ್ಟು ತೆಂಗಿನ ಎಣ್ಣೆ ಹಾಕಿ, ತರಕಾರಿಗಳನ್ನು ಸೇರಿಸಿ, ತರಕಾರಿಗಳು ಮೃದುವಾಗುವವರೆಗೂ ಕೆಲವು ನಿಮಿಷಗಳ ಕಾಲ ಬೇಯಿಸಿ, ನಂತರ ಕುಂಬಳಕಾಯಿ, ಜಿಂಜರ್ ಗಾರ್ಲಿಕ್ ಪೇಸ್ಟ್, ಮಸೂರ, ಬಟಾಣಿ ಹಾಕಿ ನೀರನ್ನು ಸೇರಿಸಿ, ಕಡಿಮೆ ಉರಿಯಲ್ಲಿ ಸುಮಾರು 30 ನಿಮಿಷಗಳ ಕಾಲ ಬೇಯಿಸಿ.

7. ಮ್ಯಾಜಿಕ್ ಲಂಗ್ ಟೀ: ಉರಿಯೂತದ ಸಮಸ್ಯೆಯನ್ನು ಕಡಿಮೆ ಮಾಡುವುದಕ್ಕಾಗಿ ಈ ಸರಳವಾದ ಕುದಿಸಿದ ಪೇಯ ಇದಾಗಿದೆ. 

ರೆಸಿಪಿ: ಹಿಸುಕಿದ ಶುಂಠಿಯನ್ನು ಅಥವಾ ಒಣಶುಂಠಿಯನ್ನು ಒಂದು ಟೀ ಸ್ಪೂನ್ ನಷ್ಟು ತೆಗೆದುಕೊಳ್ಳಿ,1 ಸಣ್ಣ ದಾಲ್ಚಿನ್ನಿ, ಅರ್ಧ ಟೀ ಸ್ಪೂನ್ ನಷ್ಟು ತುಳಸಿ ಎಲೆಗಳು( ತಾಜಾ ಅಥವಾ ಒಣಗಿದ್ದು) 1 ಟೀ ಸ್ಪೂನ್ ನಷ್ಟು ಓರೆಗಾನೊ (ಅಡುಗೆಗೆ ಬಳಸುವ ಕಾಡು ಮಾರ್ಜರಂ ಸೊಪ್ಪು) 3 ಕಾಳುಮೆಣಸು, 2 ಏಲಕ್ಕಿ ಪುಡಿಮಾಡಿ, 1-2 ಜಜ್ಜಿದ ಬೆಳ್ಳುಳ್ಳಿ ಲವಂಗ ¼ ಟಿ ಸ್ಪೂನ್ ನಷ್ಟು ಸೋಂಪು ಕಾಳು ಒಂದು ಚಿಟಿಕೆಯಷ್ಟು ಅಜ್ವೈನ್, ¼ ಟಿ ಸ್ಪೂನ್ ನಷ್ಟು ಜೀರಿಗೆ

ಇವೆಲ್ಲವನ್ನೂ 10 ನಿಮಿಷಗಳ ಕಾಲ ನೀರಲ್ಲಿ ಕುದಿಸಿ, ನಂತರ ಬಿಸಿ ಇದ್ದಾಗಲೇ ಸೇವಿಸಿ

8. ಸರಳ, ಲಘುವಾದ ಉಸಿರಾಟದ ವ್ಯಾಯಾಮ ಮಾಡಿ 

ಒಂದು ವೇಳೆ ನಿಮಗೆ ಆಯಾಸವಾಗುತ್ತಿದ್ದರೆ ಸಂಪೂರ್ಣ ವಿಶ್ರಾಂತಿ ತೆಗೆದುಕೊಳ್ಳಿ. ಸಾಧ್ಯವಾದಲ್ಲಿ ಬೆಳಿಗ್ಗೆ ಸಣ್ಣ ಪ್ರಮಾಣದ ವಾಕಿಂಗ್ ಮಾಡಿ, ಯೋಗ, ಪ್ರಾಣಾಯಾಮದ ಮೂಲಕ ಸರಳವಾದ ಉಸಿರಾಟದ ವ್ಯಾಯಾಮ ಮಾಡಿ.

ಸಣ್ಣ ಪ್ರಮಾಣದ ಚಟುವಟಿಕೆಗಳು ಉರಿಯೂತದಂತಹ ಸಮಸ್ಯೆಗಳನ್ನು ನಿರ್ವಹಣೆ ಮಾಡುವುದಕ್ಕೆ ಸಹಕಾರಿಯಾಗಿದೆ. ಹಾಗಂತ ಒಂದೇ ಬಾರಿಗೆ ಎಲ್ಲವನ್ನೂ ಮಾಡಿ ಆಯಾಸ ಮಾಡಿಕೊಳ್ಳಬೇಡಿ. 

ನೀವು ಪ್ರಯತ್ನಿಸಬಹುದಾದ ಉಸಿರಾಟದ ಚಟುವಟಿಕೆಗಳು ಹೀಗಿವೆ:

ಬಾಕ್ಸ್ ಬ್ರೀತಿಂಗ್ 

ಇದು ಶ್ವಾಸಕೋಶಕ್ಕೆ ಸರ್ವಾಂಗೀಣ ವ್ಯಾಯಾಮವಾಗಿದೆ. ಆಮ್ಲಜನಕವನ್ನು ಉಚ್ವಾಸ- ಶ್ವಾಸ ಹಿಡಿದುಕೊಳ್ಳುವುದು ಹಾಗೂ ನಿಶ್ವಾಸ- ಶ್ವಾಸ ಹಿಡಿದುಕೊಳ್ಳುವುದನ್ನು ಈ ಕ್ರಮದಲ್ಲಿ 4:4:4:4 ಅಥವಾ 8:8:8:8 ಸಮಯದ ಅಂತರದಲ್ಲಿ ಮಾಡಿ.

ಪದ್ಮಾಸನದ ಭಂಗಿಯಲ್ಲಿ ಕುಳಿತುಕೊಂಡು ಭುಜಗಳನ್ನು ಸ್ವಲ್ಪ ಹಿಂದಕ್ಕೆ ಇರಿಸಿಕೊಳ್ಳಿ.

ಈ ಭಂಗಿಯಲ್ಲಿ ಕುಳಿತ ನಂತರ 4 ಸೆಂಕೆಂಡ್ ಗಳ ಕಾಲ ಉಚ್ವಾಸ-ನಂತರ ಶ್ವಾಸವನ್ನು 4 ಸೆಕೆಂಡ್ ಗಳ ಕಾಲ ಹಿಡಿದುಕೊಳ್ಳಿ ಹಾಗೂ 4 ಸೆಕೆಂಡ್ ಗಳ ಕಾಲ ನಿಶ್ವಾಸ, ನಂತರ 4 ಸೆಕೆಂಡ್ ಗಳ ಕಾಲ ಮತ್ತೆ ಶ್ವಾಸ ಹಿಡಿದಿಟ್ಟುಕೊಳ್ಳಿ.

ಶ್ವಾಸವನ್ನು 4 ಸೆಕೆಂಡ್ ಗಳ ಕಾಲ ಹಿಡಿದಿಟ್ಟುಕೊಳ್ಳುವುದಕ್ಕೆ ಸಾಧ್ಯವಾಗದೇ ಇದ್ದಲ್ಲಿ 2 ಸೆಕೆಂಡ್ ಗಳಿಗೆ ಇಳಿಸಿ. ಈ ಅಂತರ ಶ್ವಾಸಕೋಶದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ ಹಾಗೂ ಆಮ್ಲಜನಕವನ್ನು ಹಿಡಿದಿಟ್ಟುಕೊಳ್ಳುವ ಹಿಮೋಗ್ಲೋಬಿನ್ ನ ಸಾಮರ್ಥ್ಯ ಹೆಚ್ಚಿಸುತ್ತದೆ ಆದ್ದರಿಂದ ಅತ್ಯಂತ ಮುಖ್ಯವಾಗಿದೆ. 

ಈ ರೀತಿಯ ಉಸಿರಾಟದ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಆಮ್ಲಜನಕ ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಹೆಚ್ಚಾಗುತ್ತದೆ. ಇದು ಒತ್ತಡ ಹೆಚ್ಚಿದಾಗ ಉಸಿರಾಟದ ಸಮಸ್ಯೆ ನಿರ್ವಹಣೆಯಲ್ಲಿ ಉಪಯುಕ್ತವಾಗಿದೆ.

ಬಲೂನ್ ಉಸಿರಾಟ
ಸರಳವಾದ ಉಸಿರಾಟದ ಮತ್ತೊಂದು ಚಟುವಟಿಕೆ ಇದಾಗಿದ್ದು, ಬಲೂನ್ ಊದುವುದೇ ಶ್ವಾಸಕೋಶಕ್ಕೆ ಒಂದು ಪರಿಣಾಮಕಾರಿಯಾದ ಚಟುವಟಿಕೆಯಾಗಿದೆ. ಉಸಿರಾಟಕ್ಕೆ ಪ್ರಮುಖವಾಗಿರುವ ಇಂಟರ್ಕೊಸ್ಟಲ್ ಸ್ನಾಯುಗಳಿಗೆ ಇದು ಅತ್ಯಂತ ಸಹಕಾರಿಯಾಗಿದೆ. ಈ ಸ್ನಾಯುಗಳನ್ನು ಉಸಿರಾಟದ ಸ್ನಾಯುಗಳೆಂದೂ ಹೇಳುತ್ತಾರೆ. ಉಸಿರಾಟದ ಸ್ನಾಯುಗಳ ಚಟುವಟಿಕೆ ಹೆಚ್ಚಿದಷ್ಟೂ ಶ್ವಾಸಕೋಶದ ಸಾಮರ್ಥ್ಯ ಹೆಚ್ಚಾಗುತ್ತದೆ. ವಾಸ್ತವದಲ್ಲಿ ಈ ಚಟುವಟಿಕೆ ಆಕ್ಸಿಜನ್ ಸ್ಯಾಚುರೇಷನ್ ಮಟ್ಟ (ಎಸ್ ಪಿಒ2) ಹೆಚ್ಚಿಸುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ.

ಬಲೂನ್ ಊದುವುದು ಮನೆಯಲ್ಲಿ ಮಕ್ಕಳ ಸ್ನೇಹಿ ಚಟುವಟಿಕೆಯೂ ಆಗಿದ್ದು, ಮನೆಯಲ್ಲಿ ಬಲೂನ್ ಗಳಿಲ್ಲದೇ ಇದ್ದಲ್ಲಿ, ಬಲೂನ್ ಊದುವ ರೀತಿಯಲ್ಲಿ ಬಾಯಿ ಮುಚ್ಚಿ ದೀರ್ಘವಾದ ಉಸಿರಾಟದ ಮೂಲಕವೂ ಈ ಚಟುವಟಿಕೆ ಮಾಡಬಹುದಾಗಿದೆ.

9. ನಿಮ್ಮ ಮನಸ್ಸನ್ನು ಕಾರ್ಯನಿರತವಾಗಿ ಇಡಿ

ಸಕಾರಾತ್ಮಕವಾದ, ಉತ್ಪಾದಕ ವಿಷಯಗಳತ್ತ ನಿಮ್ಮ ಮನಸ್ಸನ್ನು ಕಾರ್ಯನಿರತವಾಗಿ ಇಡಿ. ಇದರಿಂದ ನೀವು ಖುಷಿಯಾಗಿರುತ್ತೀರಿ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಮತ್ತೊಬ್ಬರಿಗೆ ಸಹಾಯ ಮಾಡುವುದು ಸಂತಸವಾಗಿರುವುದಕ್ಕೆ ಇರುವ ಒಳ್ಳೆಯ ಮಾರ್ಗವಾಗಿದೆ.

ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಸಹಾಯ ಎಂದರೆ ಅದು ಹಣ, ದೇಣಿಗೆ ನೀಡಬೇಕೆಂಬುದೇ ಅಲ್ಲ, ಪ್ರಾರ್ಥನೆ ಸಲ್ಲಿಸಿ, ನಿಮಗೆ ಪರಿಚಯ ಇರುವವರಿಗೆ ಕರೆ ಮಾಡಿ ಯೋಗ-ಕ್ಷೇಮ ವಿಚಾರಿಸಿ, ಸಹಾಯ ಮಾಡುವುದಕ್ಕೆ ಹಲವಾರು ವಿಧಾನಗಲಿವೆ..

10. ಕೋವಿಡ್-19 ನಂತರದಲ್ಲಿ ನೋವು ಮತ್ತು ಆಯಾಸಗಳನ್ನು ನಿರ್ವಹಣೆ ಮಾಡುವ ವಿಧಾನವನ್ನು ತಿಳಿದುಕೊಳ್ಳಿ
ನೋವು ಸೋಂಕಿನ ಉರಿಯೂತದಿಂದಾಗುವ ಪರಿಣಾಮ. ವೈದ್ಯರು ನೀಡುವ ಔಷಧಗಳೊಂದಿಗೆ ನೀವೇನು ಮಾಡಬಹುದು ಎಂಬುದು ಇಲ್ಲಿದೆ.

ನಿಮ್ಮ ಅಡುಗೆ ಮನೆಯಲ್ಲಿ ಅರಿಶಿನ, ಶುಂಠಿ, ಬೆಳ್ಳುಳ್ಳಿ, ಲವಂಗ, ಕರಿಮೆಣಸು, ದಾಲ್ಚಿನ್ನಿಗಳಿವೆಯೇ? ಉರಿಯೂತ ನಿವಾರಿಸುವ ಇವುಗಳನ್ನು ಟೀ, ಮಸಾಲೆ ಪುಡಿಗಳು, ಔಷಧೀಯ ಗುಣದ ಮಿಶ್ರಣಗಳು, ದಾಲ್, ಸೂಪ್ ಗಳೊಂದಿಗೆ ಬಳಸಿ, ಒಂದು ಟಿ ಸ್ಪೂನ್ ನಷ್ಟು ತೆಂಗಿನ ಎಣ್ಣೆ ಅಥವಾ ತುಪ್ಪವನ್ನು ಬಳಸಬಹುದಾಗಿದೆ. ಈ ಮಿಶ್ರಣ ಕೊಬ್ಬೊನ ಜೊತೆ ಒಳ್ಳೆಯ ಫಲಿತಾಂಶ ನೀಡುತ್ತದೆ.

ತಾಜಾ ನಿಂಬೆಹಣ್ಣು ಅಥವಾ ಮೂಸಂಬಿ ಜೂಸ್ ನ್ನು ಸೇವಿಸಿ (ಒಂದು ವೇಳೆ ಶುಗರ್ ಪ್ರಮಾಣ ಹೆಚ್ಚಿದ್ದಲ್ಲಿ, ವೈದ್ಯರ ಸಲಹೆ ಪಡೆದು ಸೇವಿಸಿ)

ಒಂದು ಟಿ ಸ್ಪೂನ್ ನಿಂದ ಟೇಬಲ್ ಸ್ಪೂನ್ ನಷ್ಟು ಹೆಚ್ಚುವರಿ ವರ್ಜಿನ್ ಆಲಿವ್ ಎಣ್ಣೆ ಸೇರಿಸಿ, ಸಲಾಡ್, ಹಮ್ಮಸ್ ಮೇಲೆ ಉದುರಿಸಿ 

ಉಪ್ಪುರಹಿತ- ಬಾದಾಮಿ, ವಾಲ್ ನಟ್, ಗೋಡಂಬಿಗಳು 

ಒಮೇಗಾ-3 ರಿಚ್ ಫುಡ್: ಫ್ಲಾಕ್ಸ್ ಸೀಡ್ಸ್ (ಅಗಸೆ ಬೀಜಗಳು) ಫ್ಯಾಟಿ ಫಿಶ್, ಚಿಯಾ ಬೀಜಗಳು, ತಾಜಾ ಗ್ರೀನ್ ಟೀ ಅಥವಾ ಬ್ಲಾಕ್ ಟೀ ಎಲೆಗಳನ್ನು ಸಕ್ಕರೆ ರಹಿತವಾಗಿ ಸೇವಿಸಿದರೆ ಉರಿಯೂತದ ಸಮಸ್ಯೆ ಕಡಿಮೆಯಾಗುತ್ತದೆ.

ಹೈಪರ್ ಅಸಿಡಿಟಿ ಅಥವಾ ಅಲ್ಸರ್ ಇಲ್ಲದೇ ಇದ್ದಲ್ಲಿ ಕೆಂಪು ಅಥವಾ ಹಸಿ ಮೆಣಸಿನ ಕಾಯಿ ಆಹಾರದ ಜೊತೆ ಸೇವಿಸಿ

ಉರಿಯೂತಕ್ಕೆ ಕಾರಣವಾಗುವ ಸಕ್ಕರೆ, ಸಂಸ್ಕರಿಸಿದ ಮಾಂಸ, ಜಂಕ್ ಪದಾರ್ಥಗಳು, ರೀಫೈಂಡ್ ಕಾರ್ಬ್ಸ್, ರೀಫೈಂಡ್ ಆಯಿಲ್, ಸಿಗರೇಟ್, ಮದ್ಯ ಸೇವನೆಯನ್ನು ಬಿಡಿ 

11. ಕೊನೆಯದಾಗಿ, ಸುದ್ದಿ, ಸಾಮಾಜಿಕ ಜಾಲತಾಣಗಳಲ್ಲಿ ನೀವು ನೋಡುವ ಅಂಶಗಳ ಬಗ್ಗೆಯೂ ಎಚ್ಚರದಿಂದ ಇರಿ

ನೀವು ನೋಡುವ ಅಂಶಗಳು ನಿಮ್ಮ ಮಾನಸಿಕ, ಭಾವನಾತ್ಮಕ ಆರೋಗ್ಯದ ಮೇಲೂ ಪರಿಣಾಮ ಬೀರಲಿದೆ. ಸಾಮಾಜಿಕ ಜಾಲತಾಣದಲ್ಲಿ ವ್ಯಯಿಸುವ ಸಮಯವನ್ನು ಕಡಿಮೆ ಮಾಡಿ. 

ಬುದ್ದಿಹೀನ ಸ್ಕ್ರೋಲಿಂಗ್, ಫಾರ್ವರ್ಡ್ ಮೆಸೇಜ್ ಗಳು, ಗಾಸಿಪ್ ಹಾಗೂ ವದಂತಿಗಳಿಂದ ದೂರವಿರಿ, ಇವುಗಳಿಂದ ಭಯ ಇನ್ನಷ್ಟು ಜಾಸ್ತಿಯಾಗುತ್ತದೆ.

ಕೆಲವು ಮಂದಿ ಸಾವನ್ನಪ್ಪಿದರೆ, ಹಲವಾರು ಮಂದಿ ಚೇತರಿಸಿಕೊಳ್ಳುತ್ತಿದ್ದಾರೆ. ಆದರೆ ಚೇತರಿಕೆಯಾಗುತ್ತಿರುವುದನ್ನು ಸಾಮಾಜಿಕ ಜಾಲತಾಣಗಳು, ನ್ಯೂಸ್ ಚಾನಲ್ ಗಳು ಕಡಿಮೆ ತೋರಿಸುತ್ತವೆ. ಅವುಗಳಲ್ಲಿ ಬಹುತೇಕ ಸಾವು-ನೋವುಗಳದ್ದೇ ವಿಷಯ.

ಕೇವಲ ಮಾಹಿತಿ ಪಡೆಯುವುದಕ್ಕೂ, ನಿಮ್ಮನ್ನೇ ಆವರಿಸುವ ಸುದ್ದಿಯಲ್ಲೇ ಮುಳುಗುವುದಕ್ಕೂ ವ್ಯತ್ಯಾಸವಿದೆ.

ಹೀಗಿದ್ದಾಗ ಭಯ, ಆತಂಕ, ಯಾತನೆಗಳು ನಿಮ್ಮ ಸುತ್ತಲೂ ಇರುವಾಗ, ನೀವು ಯಾವ ಕ್ರಮ ಕೈಗೊಳ್ಳುತ್ತೀರಿ? ಬಲಿಪಶುವಾಗಿ, ಭಯಭೀತರಾಗಿದ್ದರೆ ಅದು ಸಹಾಯ ಮಾಡುವುದಿಲ್ಲ. ಆದರೆ ಆ ಭಯವನ್ನೇ, ಬುದ್ಧಿವಂತಿಕೆಯಿಂದ ಅಗತ್ಯವಿರುವ ಕ್ರಮ ಕೈಗೊಳ್ಳುವುದಕ್ಕೆ ಚಾಲನಾ ಶಕ್ತಿಯನ್ನಾಗಿ ಬಳಸಿದರೆ, ಭಯಕ್ಕೆ, ಜೀವನಶೈಲಿಯಲ್ಲಿ ಅಗತ್ಯ ಬದಲಾವಣೆ ತಂದುಕೊಂಡಲ್ಲಿ ಖಂಡಿತವಾಗಿಯೂ ಸಹಾಯವಾಗುತ್ತದೆ.

ನೆನಪಿಡಿ, ಪ್ರತಿಯೊಬ್ಬ ಮನುಷ್ಯನಿಗೂ ಹೊಂದಿಕೊಳ್ಳುವುದಕ್ಕಾಗಿ ಆಂತರಿಕವಾಗಿ ಬಲಿಷ್ಠವಾದ ವ್ಯವಸ್ಥೆ ಇದೆ. ನಮ್ಮನ್ನು ನಾವು ಅವಕಾಶ ಮಾಡಿಕೊಂಡಲ್ಲಿ  ಹೊಂದಿಕೊಳ್ಳುವುದಕ್ಕೆ ಸಾಧ್ಯವಿದೆ. ಪ್ರತಿರೋಧ ತೋರುವುದನ್ನು ಬಿಡಿ, ಅಡೆತಡೆಗಳನ್ನು ತೆಗೆಯಿರಿ, ಮನುಷ್ಯನ ಅತ್ಯದ್ಭುತ ದೇಹವನ್ನು ಹೊಂದಿಕೊಳ್ಳುವುದಕ್ಕೆ ಬಿಡಿ, ನಿಮ್ಮನ್ನು ನೀವು ಬಲಿಷ್ಠಗೊಳಿಸಿಕೊಳ್ಳುವುದೇ ಮಾಡಲು ಸಾಧ್ಯವಿರುವ ಕೆಲಸ, ಮನೆಯಲ್ಲಿರಿ, ಆರಾಮಾಗಿರಿ, ಪ್ರಾರ್ಥನೆ ಸಲ್ಲಿಸಿ ಯಾವೆಲ್ಲಾ ಕ್ರಮಗಳನ್ನು ಅನುಸರಿಸಲು ಸಾಧ್ಯವಿದೆಯೋ ಸೂಕ್ತ ಸಮಯದಲ್ಲಿ ಆದನ್ನು ಪಾಲಿಸಿ.

- ಲ್ಯೂಕ್ ಕೌಟಿನ್ಹೊ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com