ಫಿಟ್ ನೆಸ್ ಮಾಯೆಯೋ, ಮೋಹವೋ; ಸಿನಿಮಾ ತಾರೆಯರಿಗೆ ಪೂರಕವೋ, ಮಾರಕವೋ?

ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬದುಕಲು ದೇಹ ಗಟ್ಟಿಮುಟ್ಟಾಗಿ ಆರೋಗ್ಯವಾಗಿರಬೇಕು ಆದರೆ ದೇಹದಾರ್ಡ್ಯತೆಯೊಂದೇ ಬದುಕಿನಶ್ರೇಷ್ಠತೆಗೆ ಮಾನದಂಡ ಎಂದೆಣಿಸಬಾರದು. ಇಂದು ಪುನೀತ್ ರಾಜ್ ಕುಮಾರ್ ಸಾವನ್ನು ಕಂಡಾಗ ಹೀಗೆನ್ನಿಸಿತು. ಸ್ಯಾಂಡಲ್ ವುಡ್ ನಲ್ಲಿ ಇದು ಎರಡನೇ ಘಟನೆ, ಕಳೆದ ವರ್ಷ ಯುವನಟ ಚಿರಂಜೀವಿ ಸರ್ಜಾ ಕೂಡ ಹೀಗೇ ಅಕಾಲಿಕ ಸಾವನ್ನು ಕಂಡಿದ್ದರು. ಅಂದೂ ಸಹ ಇಡೀ ಕನ್ನಡ ನಾಡು ಶೋಕದಲ್ಲಿತ್ತು.

ಇಂದು ವರನಟ ಡಾ. ರಾಜ್ ಕುಟುಂಬದ ಕುಡಿ, ದೊಡ್ಮನೆ ಹುಡ್ಗ ಪುನೀತ್ ನಮ್ಮನ್ನಗಲಿದ್ದಾರೆ. ಈ ಸಂದರ್ಭದಲ್ಲಿ  ಒಬ್ಬ ಕಲಾವಿದನಿಗೆ ದೇಹದಾರ್ಡ್ಯತೆ ಎಷ್ಟರ ಮಟ್ಟಿಗೆ ಮುಖ್ಯ? ಫಿಟ್ ನೆಸ್ ಇದ್ದವರಿಗೆ ಮಾತ್ರ ಚಿತ್ರದಲ್ಲಿ ನಾಯಕನಾಗುವುದು ಸಾಧ್ಯವೆ? ಒಂದೊಮ್ಮೆ ಫಿಟ್ ನೆಸ್ ಇಲ್ಲದಿದ್ದರೆ ಅಥವಾ ಸಾಕಷ್ಟು ದೇಹದಾರ್ಡ್ಯತೆ ಪ್ರದರ್ಶಿಸದೆ ಹೋದರೆ ಚಿತ್ರೋದ್ಯಮದಲ್ಲಿ ಅಂತಹ ನಾಯಕರಿಗೆ ಅವಕಾಶ ಇಲ್ಲವಾಗುತ್ತದೆಯೆ? ಎಂಬತ್ತ ಗಮನ ಹರಿಸಬೇಕಿದೆ.

ನಟ ಪುನೀತ್ ಸೇರಿ ಅನೇಕರು ತಾವು ಫಿಟ್ ಆಗಿರಬೇಕೆಂದು ಬಯಸುತ್ತಾರೆ. ಅದು ತಪ್ಪಲ್ಲ. ಆದರೆ ಫಿಟ್ ನೆಸ್ ಕಾಪಾಡಿಕೊಳ್ಳುವ ಉಮೇದಿನಲ್ಲಿ ದೇಹದ ಆರೋಗ್ಯದ ಬಗ್ಗೆ ಗಮನಿಸುವುದೇ ಇಲ್ಲ! ಒಂದು ಚಿತ್ರಕ್ಕಾಗಿ ಅದರಲ್ಲಿನ ಕೆಲ ದೃಶ್ಯಗಳಿಗಾಗಿ ತಮ್ಮ ತೂಕ ಹೆಚ್ಚಿಸಿಕೊಳ್ಳುವ ಅಥವಾ ಇಳಿಸಿಕೊಳ್ಳುವ ನಟ ನಟಿಯರು ಇತ್ತೀಚೆಗೆ ಹೆಚ್ಚುತ್ತಿದ್ದಾರೆ. ಹಾಗೆ ತಮ್ಮ ಅವಶ್ಯಕತೆಗೆ ತಕ್ಕಂತೆ ದೇಹವನ್ನು ಕರಗಿಸುವ, ಬೆಳೆಸಿಕೊಳ್ಳುವ ಅವರು ಇದರಿಂದ ತಮ್ಮ ಹೃದಯಕ್ಕೆ ಹಾಗೂ ವಿವಿಧ ಅಂಗಾಂಗಗಳಿಗೆ ಆಗಬಹುದಾದ ಪರಿಣಾಮದ ಬಗ್ಗೆ ಕಿಂಚಿತ್ತೂ ಯೋಚಿಸುವುದಿಲ್ಲ.

ಅಯ್ಯೋ ಇದೇನೂ ಹೊಸದಲ್ಲ ಹಿಂದಿನ ಕಾಲದಿಂದ ಬಂದದ್ದು, ರಾಜ್ ಕುಮಾರ್, ವಿಷ್ಣುವರ್ಧನ್ ಕಾಲದಲ್ಲಿಯೂ ದೇಹದ ಪುಷ್ಟಿದಾಯಕತೆಗೆ ಒತ್ತು ನೀಡಲಾಗುತ್ತಿತ್ತು ಎನ್ನಬಹುದು. ಹೌದು. ವರನಟ ಡಾ, ರಾಜ್ ಪ್ರತಿದಿನವೂ ಯೋಗ ಸಾಧನೆ ಮಾಡುತ್ತಾ ಬಂದಿದ್ದರು. ಅಲ್ಲದೆ ಇನ್ನಿತರೆ ನಟರೂ ಸಹ ಯೋಗ, ಆಸನಗಳ ಅಭ್ಯಾಸ ಮಾಡುತ್ತಿದ್ದರು.

ಆದರೆ ಇಂದಿನ ಆಧುನಿಕ ಕಾಲಘಟ್ಟದಲ್ಲಿ ಆಹಾರ ಪದ್ದತಿ ಬದಲಾಗಿದೆ. ಕೆಲಸದ ಒತ್ತಡ ಅಧಿಕವಾಗಿ ಊಟ, ನಿದ್ರೆ ಸರಿಯಾದ ಸಮಯಕ್ಕೆ ಆಗುತ್ತಿಲ್ಲ. ಹೀಗಿರುವಾಗ ಇದರ ನಡುವೆ ಫಿಟ್ ನೆಸ್ ಗಾಗಿ ಜಿಮ್ ಗಳ ಮೊರೆ ಹೋಗಿ ವಿಪರೀತವಾಗಿ ದೇಹದಂಡನೆ ಮಾಡಿಕೊಳ್ಳುವುದರಿಂದ ಮಾನವ ದೇಹದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಬಹುದು. ಹಾಲಿವುಡ್ ನಲ್ಲಿ ನಟರು ಅಪಾಯಕಾರಿ ಪ್ರಮಾಣದಲ್ಲಿ ಪಾತ್ರಗಳಿಗಾಗಿ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುತ್ತಾರೆ ಹಾಗೂ ಇಳಿಸಿಕೊಳ್ಳುತ್ತಾರೆ. ನಟಿಯರೂ ಸಹ ತಾವು ಮಗುವನ್ನು ಪಡೆದ ನಂತರ ಮತ್ತೆ ತಮ್ಮ ಹಿಂದಿನ ಫಾರ್ಮ್ ಗೆ ಮರಳಲು ಅನೇಕ ಬಗೆಯಲ್ಲಿ ಕಸರತ್ತುಗಳನ್ನು ನಡೆಸುತ್ತಾರೆ. ಆದರೆ ತೆರೆ ಮೇಲೆ ಸುಂದರವಾಗಿ ಕಾಣಿಸುವ ಸಲುವಾಗಿ ಮಾಡುವ ಈ ತಯಾರಿ ನಟ ನಟಿಯರ ಆರೋಗ್ಯ ದೃಷ್ಟಿಯಿಂದ ಸೂಕ್ತವಾದುದ್ದಲ್ಲ.

ಡಯಟ್ ಫುಡ್ ಕಂಪನಿಗಳು ಪ್ರಸಿದ್ದ ನಟ ನಟಿಯರು ತಮ್ಮ ಉತ್ಪನ್ನಗಳನ್ನು ಬಳಸಿದ್ದಾರೆಂದು ಪ್ರಚಾರಪಡಿಸಲು ಬಯಸುತ್ತವೆ. ಹಾಗಾದಾಗ ಜನರೂ ಅಂತಹಾ ಉತ್ಪನ್ನಗಳ ಖರೀದಿಗಿಳಿಯುತ್ತಾರೆ ಎಂದು ಭಾವಿಸಿದೆ. ಅದಕ್ಕಾಗಿ ಅಂತಹಾ ಸಂಸ್ಥೆಗಳು ಎಂಡಾರ್ಸ್‌ಮೆಂಟ್ ಡೀಲ್‌ಗಳಿಗಾಗಿ ಸೆಲೆಬ್ರಿಟಿಗಳನ್ನು ನೇಮಿಸಿಕೊಳ್ಳುತ್ತಾರೆ.

ಇನ್ನು ಆಹಾರದಲ್ಲಿನ ಪೌಷ್ಟಿಕಾಂಶಗಳ  ಕುರಿತು ವಿಶೇಷ ತಜ್ಞರು ನಟನಟಿಯರು ಸೇವಿಸುವ ಆಹಾರಗಳ ಬಗ್ಗೆ ಅವರೊಂದಿಗೆ ಆಗಾಗ ಚರ್ಚಿಸುತ್ತಾರೆ.ಅದು ಅವರ ತೂಕದಲ್ಲಿನ ನಷ್ಟ ಅಥವಾ ಹೆಚ್ಚಳದ ಯಶಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ನಟನಿಗೆ ವಿವರವಾದ ಮತ್ತು ವೈಯಕ್ತಿಕವಾಗಿ ಸೂಚಿಸಿದ ಆಹಾರದ ಪಟ್ಟಿ ನೀಡಬಹುದು.  ಇನ್ನೂ ಕೆಲವರು ತೂಕ ಇಳಿಸಿಕೊಳ್ಲಲು ತಮ್ಮದೇ ತಂತ್ರವನ್ನು ಬಳಸಿಕೊಳ್ಳುತ್ತಾರೆ. ನಟಿ ಬೆಯೋನ್ಸ್ ಅವರು ತಮ್ಮ ಚಲನಚಿತ್ರ ಗಳಲ್ಲಿನ  ಡ್ರೀಮ್‌ಗರ್ಲ್ಸ್‌ ನಂತಹಾ ಪಾತ್ರಕ್ಕಾಗಿ  20 ಪೌಂಡ್‌ಗಳನ್ನು ಇಳಿಸಲು ಮಾಸ್ಟರ್ ಕ್ಲೀನ್ಸ್ ಸಿಸ್ಟಮ್ ಅನ್ನು ಬಳಸಿದ್ದಾರೆಂದು ವರದಿಯಾಗಿತ್ತು.  ಮಾಸ್ಟರ್ ಕ್ಲೀನ್ಸ್ ಸಿಸ್ಟಮ್ ಎನ್ನುವುದು ದೇಹದ ತೂಕ ಇಳಿಕೆ ಮಾಡಲು ನಿಂಬೆ ಪಾನಕ ಆಧಾರಿತ ಮಿಶ್ರಣವನ್ನು ಹೊರತುಪಡಿಸಿ ಏನನ್ನೂ ತಿನ್ನಬಾರದೆಂದು ತಾಕೀತು ಮಾಡುತ್ತದೆ.  ಇದು ಶೀಘ್ರದಲ್ಲಿ ತೂಕವನ್ನು ಇಳಿಸಬಲ್ಲದು ಆದರೆ ಇದರಿಂದ ನಿಮಗೆ ಇತರೆ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತದೆ.

ವೈಯಕ್ತಿಕ ತರಬೇತುದಾರರು ನಟರು ತಮ್ಮ ತೂಕವನ್ನು ಕಳೆದುಕೊಳ್ಳಲು ಮತ್ತು ಉತ್ತಮ ಮೈಕಟ್ಟು ಪಡೆಯಲು ಪ್ರತಿದಿನ ವರ್ಕ್ ಔಟ್ ಮಾಡಲು ಪ್ರೇರೇಪಿಸುವ ಮೂಲಕ ಅತ್ಯುತ್ತಮವಾಗಿ ಕಾಣುವಂತೆ ಸಲಹೆ ನೀಡುತ್ತಾರೆ. ಕೆಲವರು  ಜಿಮ್‌ನಲ್ಲಿ ದಿನಕ್ಕೆ ಮೂರು ಗಂಟೆಗಳ ಕಾಲ ಕಳೆಯುತ್ತಾರೆ ಮತ್ತು ಅವರ ಕಡೆಯಿಂದ ಪರವಾನಗಿ ಪಡೆದ ತರಬೇತುದಾರರು ತಮ್ಮ ರೂಪದ ಕುರಿತು ಕಮೆಂಟ್ ಮಾಡಲು ಬಯಸುತ್ತಾರೆ. ಅಲ್ಲದೆ ಅಂತಹವರಿಗೆ ದಿನನಿತ್ಯ ವ್ಯಾಯಾಮ ಮಾಡಲು ಕೆಲ ಸಲಹೆ ಸೂಚನೆಗಳನ್ನು ಸಹ ನೀಡಲಾಗುವುದು. ಆದರೆ ಇದೆಲ್ಲವೂ ನಿಯಮಿತವಾಗಿದ್ದಲ್ಲಿ ಉತ್ತಮ ಹಾಗೆಂದು ಅತಿಯಾದರೆ ಅದು ನಟ ನಟಿಯರ ದೇಹದ ಮೇಲೆ ದುಷ್ಪರಿಣಾಮ ಬೀರುತ್ತದೆ. ಪ್ರಾಣಕ್ಕೂ ಸಂಚಕಾರ ತರುತ್ತದೆ.

ಚಿರಂಜೀವಿ ಸರ್ಜಾ, ಪುನೀತ್ ಗೆ ನಿಜಕ್ಕೂ ಆದದ್ದೇನು?

ಚಿರಂಜೀವಿ ಸರ್ಜಾ ಸಾವಿನ ಹಿಂದಿನ ದಿನ ಭಾನುವಾರ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಪ್ರಜ್ಞೆ ಕಳೆದುಕೊಂಡಿದ್ದರು. ಆ ತಕ್ಷಣ ಅಂಬ್ಯುಲೆನ್ಸ್ ಕರೆದು ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಅವರಿಗೆ ಹೃದಯ ಸ್ತಂಭನವಾಗಿತ್ತು. ಅದಕ್ಕೆ ಮುನ್ನ ಮನೆಯಲ್ಲಿದ್ದಾಗಲೇ ಚಿರಂಜೀವಿಯವರಿಗೆ ಒಮ್ಮೆ ಪ್ರಜ್ಞೆ ಮರುಕಳಿಸಿತ್ತು ಆ ವೇಳೆ ಪತ್ನಿ ಮೇಘನಾರನ್ನು ಕರೆದು ನೀನು ಗಾಬರಿಯಾಗಬೇಡ, ನನಗೇನೂ ಆಗುವುದಿಲ್ಲ ಎಂದಿದ್ದರು. ಎಂದು ಚಿರಂಜೀವಿಯವರ ಒಂದನೇ ವರ್ಷದ ಪುಣ್ಯತಿಥಿಯ ವೇಳೆ ಮೇಘನಾ ನೆನಪು ಮಾಡಿಕೊಂಡಿದ್ದಾರೆ.

ಪುನೀತ್ ರಾಜ್ ಕುಮಾರ್ ಸಹ ದಿನನಿತ್ಯ ಮನೆಯಲ್ಲೇ ಇದ್ದ ಜಿಮ್ ನಲ್ಲಿ ಗಂಟೆ ಗಟ್ಟಲೆ ವರ್ಕ್ ಔಟ್ ಮಾಡುತಿದ್ದರು. ಅವರಿಗೆ ನಿನ್ನೆ ಸಂಜೆಯಿಂದಲೇ ಚಿಕ್ಕದಾಗಿ ಎದೆನೋವಿತ್ತು ಎಂದೂ ವರದಿಯಾಗಿದ್ದು ಹೆಚ್ಚಿನ ಸಮಸ್ಯೆ ಆಗಲಿಕ್ಕಿಲ್ಲ ಎಂಬ ನಿರ್ಲಕ್ಷವೇ ಅವರ ಪ್ರಾಣವನ್ನು ತಿಂದು ಹಾಕಿತೆ? ಇದಕ್ಕೆ ಆ ಸಾವೇ ಉತ್ತರಿಸಬೇಕು. ಆದರೆ ಒಂದಂತೂ ನಿಜ ಕನ್ನಡ ಚಿತ್ರೋದ್ಯಮ ಮಾತ್ರವಲ್ಲದೆ ಭಾರತೀಯ ಚಿತ್ರರಂಗ ಇಂದು ಮಹತ್ವದ ಸದಭಿರುಚಿಯ ನಟನನ್ನು ಕಳೆದುಕೊಂಡಿದೆ. ಅವರ ಅಭಿಮಾನಿಗಳಿಗೆ ಭರಿಸಲಾಗದ ದುಃಖವಾಗಿದೆ. ಇನ್ನು ಈ ಎರಡು ಸಾವಿನ ನಂತರವಾದರೂ ಚಿತ್ರೋದ್ಯಮದ ನಟ ನಟಿಯರು ಫಿಟ್ ನೆಸ್ ಎಂಬ ಮಾಯೆಯಿಂದ ಹೊರಬರುತ್ತಾರೆಯೆ ಎಂದು ಕಾದು ನೋಡಬೇಕಿದೆ.

- ರಾಘವೇಂದ್ರ ಅಡಿಗ ಎಚ್ ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com