ಆಹಾರದಲ್ಲಿ ಮೈಕ್ರೊಗ್ರೀನ್ ಬಳಸಿ ಅಡುಗೆ ಮಾಡುವ ಟ್ರೆಂಡೊಂದು ನಿಧಾನವಾಗಿ ಜನಪ್ರಿಯವಾಗುತ್ತಿದ್ದು, ಬೆಂಗಳೂರಿನ ಬಹುತೇಕ ರೆಸ್ಟೋರೆಂಟ್‌ಗಳು ಈ ಟ್ರೆಂಡ್ ಅನುಸರಿಸುತ್ತಿವೆ. ಮೈಕ್ರೊಗ್ರೀನ್ಸ್ ಹಾಕಿ ಮಾಡಿದ ಆಹಾರ ಅತ್ಯಂತ ಪೌಷ್ಟಿಕವಾಗಿರುತ್ತದೆ.
ಈವರೆಗೆ ತಾರಸಿ ತೋಟದಲ್ಲಿ ಸೊಪ್ಪು, ತರಕಾರಿ, ಹಣ್ಣು ಹಾಗೂ ಹೂಗಳನ್ನು ಬೆಳೆಯುತ್ತಿದ್ದ ಜನರು ಇದೀಗ ಆಹಾರದಲ್ಲಿ ಪೌಷ್ಟಿಕಾಂಶ ಹಾಗೂ ಸತ್ವಯುತವಾದ ‘ಮೈಕ್ರೊಗ್ರೀನ್ಸ್’ (ಮೊಳಕೆ ಸಸಿಗಳು) ಬೆಳೆಯುವತ್ತ ಒಲವು ತೋರುತ್ತಿದ್ದಾರೆ.
ಹೆಚ್ಚುತ್ತಿರುವ ಕಾಯಿಲೆಗಳಿಗೆ ಬದಲಾದ ಆಹಾರ ಪದ್ಧತಿಯೇ ಕಾರಣವಾಗಿದ್ದು. ಈ ನಿಟ್ಟಿನಲ್ಲಿ ಮೈಕ್ರೊಗ್ರೀನ್ಸ್ ಉತ್ತಮ ಹಾಗೂ ಆರೋಗ್ಯ ವೃದ್ಧಿಸುವ ಆಹಾರವಾಗಿದೆ. ಮಕ್ಕಳಿಂದ ವೃದ್ಧರವರೆಗೂ ಎಲ್ಲರೂ ಇಷ್ಟಪಡುವ ಪದಾರ್ಥವಾಗಿದೆ. ಹೀಗಾಗಿ ನಗರದ ಜನರು ತಾರಸಿ ತೋಟಗಳಲ್ಲಿ ಮೈಕ್ರೊಗ್ರೀನ್ಸ್ ಬೆಳೆಯುವ ಮೂಲಕ ಆರೋಗ್ಯ ಕಾಪಾಡಿಕೊಳ್ಳುವತ್ತ ಮುಖಮಾಡುತ್ತಿದ್ದಾರೆ. ಆರೋಗ್ಯದ ಬಗ್ಗೆ ಕಾಳಜಿ ಹೊಂದಿರುವವರು ಇದಕ್ಕಾಗಿ ಹೊಟೇಲ್, ರೆಸ್ಟೋರೆಂಟ್‌ಗಳಿಗೆ ಹೋಗುವ ಬದಲು ಮನೆಯ ತಾರಸಿಯಲ್ಲೇ ಸಣ್ಣ ಸಣ್ಣ ಕುಂಡಗಳಲ್ಲಿ ಮೈಕ್ರೊಗ್ರೀನ್ಸ್ ಬೆಳೆಯುತ್ತಿದ್ದಾರೆ.
ಮೈಕ್ರೊಗ್ರೀನ್ ಅಂದರೆ ಹಸಿರು ಸಸ್ಯಗಳ ಎಳೆ ಚಿಗುರು. ಈ ಹಸಿರು ಚಿಗುರುಗಳನ್ನು ತೆಗೆದು ಅದನ್ನು ಖಾದ್ಯಗಳಿಗೆ ಮಿಕ್ಸ್ ಮಾಡಿ ಅಥವಾ ಅಲಂಕಾರ ಮಾಡಿ ಸರ್ವ್ ಮಾಡಲಾಗುತ್ತದೆ. ಕೆಲವರು ಮೈಕ್ರೊಗ್ರೀನ್ ಅನ್ನು ಮೊಳಕೆಯೊಡೆದ ಕಾಳುಗಳ ಎಳೆ ಗಿಡ ಎಂದು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. ಆದರೆ, ಮೈಕ್ರೊಗ್ರೀನ್ ಇದಕ್ಕಿಂತ ಭಿನ್ನ. ಇದನ್ನು ಪ್ರತ್ಯೇಕವಾಗಿ ಒಂದು ಸಣ್ಣ ಕುಂಡದಲ್ಲಿ ಕೇವಲ ಎರಡು ಇಂಚಿನಷ್ಟು ಉದ್ದಕ್ಕೆ ಬೆಳೆಸಿ ಆಮೇಲೆ ತೆಗೆಯಲಾಗುತ್ತದೆ.
ಏಕೆ ಬೆಳೆಸಬೇಕು?
ಸಾಂಪ್ರದಾಯಿಕ ವಿಧಾನದಲ್ಲಿ ಬೆಳೆಸಿದ ಸೊಪ್ಪಿಗಿಂತ ಮೈಕ್ರೊಗ್ರೀನ್ ಸೊಪ್ಪಿನಲ್ಲಿ ಹೆಚ್ಚಿನ ಪೌಷ್ಟಿಕಾಂಶಗಳಿರುತ್ತವೆ. ತರಕಾರಿಗಳಿಗಿಂತ ಶೇ 30ರಷ್ಟು ಹೆಚ್ಚಿನ ಪೌಷ್ಟಿಕಾಂಶಗಳಿರುತ್ತವೆ. ಕ್ಲೋರಿಫಿಲ್, ವಿಟಮಿನ್ ಎ, ಸಿ ಮತ್ತು ಕೆ, ಕ್ಯಾರಿಟಿನಾಡ್ಸ್ ಮತ್ತು ಕಿಣ್ವಗಳು ಇರುತ್ತವೆ. ಈ ಎಲ್ಲ ಅಂಶಗಳು ಯಾವ ಸೊಪ್ಪು ಬೆಳೆಯುತ್ತೀರಿ, ಯಾವಾಗ ಕೊಯ್ಯತ್ತೀರಿ ಮತ್ತು ಯಾವ ಬೆಳೆಯುವ ಮಾಧ್ಯಮ ಬಳಸಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತವೆ. ಆದರೂ ಉತ್ತಮ ಬಣ್ಣದಿಂದ ಕೂಡಿದ ಮೈಕ್ರೊಗ್ರೀನ್‌ಗಳು ಹೆಚ್ಚಿನ ಪೌಷ್ಟಿಕಾಂಶಗಳನ್ನು ಹೊಂದಿರುತ್ತವೆ.
ಮಾರುಕಟ್ಟೆಗಳಲ್ಲಿ ಇಡುವ ಸೊಪ್ಪಿನ ಮೇಲೆ ನೀರು ಚಿಮುಕಿಸಿ ತಾಜಾ ಆಗಿಸುವ ಪ್ರಯತ್ನ ಮಾಡಲಾಗುತ್ತದೆ. ಮಾಲ್‌ಗಳಲ್ಲಿ ಶೀತಲೀಕರಣ ಸೌಲಭ್ಯ ಬಳಸಲಾಗುತ್ತದೆ. ಸಾಮಾನ್ಯವಾಗಿ ಸೊಪ್ಪಿನ ಜೀವಿತಾವಧಿಯೇ ಕಡಿಮೆ. ಆದ್ದರಿಂದ ಕತ್ತರಿಸಿದ ಕೂಡಲೇ ಅವುಗಳನ್ನು ಬಳಸಬೇಕು. ಮೈಕ್ರೊಗ್ರೀನ್ ಸೊಪ್ಪನ್ನು ಸರಿಯಾದ ಪ್ಯಾಕೇಜ್ ಮಾಡಿದರೆ 14 ದಿನಗಳವರೆಗೆ ಇಡಬಹುದು. ಯಾವುದೇ ರಸಗೊಬ್ಬರ ಬಳಸದೆ ಬೆಳೆದ ಬೆಳೆಯಾದ ಕಾರಣ ಇದರ ಜೀವಿತಾವಧಿ ಹೊರಗಿನ ಸೊಪ್ಪಿಗಿಂತ ಹೆಚ್ಚಿರುತ್ತದೆ.
ಮಹಾನಗರಗಳಲ್ಲಿ ಬೃಹತ್ ಪ್ರಮಾಣದಲ್ಲಿ ಮೈಕ್ರೊಗ್ರೀನ್ ಬೆಳೆದು ರೆಸ್ಟೋರೆಂಟ್‌ಗಳಿಗೆ ಮಾರಾಟ ಮಾಡುವುದು ಹೊಸ ಟ್ರೆಂಡ್ ಆಗಿದೆ. ಹೀಗಾಗಿ ತಾಜಾ ಸೊಪ್ಪನ್ನು ನಾವೇ ಬೆಳೆಯುವುದರಿಂದ ತಿನ್ನುವ ಆಹಾರದ ಮೇಲೆ ನಾವೇ ಹಿಡಿತ ಸಾಧಿಸಬಹುದು. ಮಾರುಕಟ್ಟೆಯ ಸೊಪ್ಪಿಗೆ ಯಾವ ಔಷಧ ಸಿಂಪಡಿಸಿದ್ದಾರೆ, ಯಾವ ರಸಗೊಬ್ಬರ ಬಳಸಿದ್ದಾರೆ ಎಂಬುದು ತಿಳಿಯುವುದಿಲ್ಲ. ಆದರೆ, ಮೈಕ್ರೊಗ್ರೀನ್‌ನಲ್ಲಿ ವಿಷಯುಕ್ತ ಅಂಶ ಹೊಟ್ಟೆ ಸೇರುವುದಿಲ್ಲ. ವಿವಿಧ ಬಗೆಯ ಸೊಪ್ಪು ಬೆಳೆದು ಊಟದ ಟೇಬಲ್ ಮೇಲೆ ವೈವಿಧ್ಯ ಮೂಡಿಸಬಹುದು.
ಮನೆಯಲ್ಲೇ ಬೆಳೆಸಬಹುದು...
ಸಾಸಿವೆ, ಮೆಂತ್ಯೆ ಮುಂತಾದ ಸಸಿಗಳನ್ನು ಮನೆಯಲ್ಲಿಯೇ ಸಾವಯವ ಪದ್ಧತಿಯಲ್ಲಿ ಬೆಳೆಸಿ ಅದರಿಂದ ಮೈಕ್ರೊಗ್ರೀನ್‌ಗಳನ್ನು ತೆಗೆಯಬಹುದು. ಇದು ಮಾಲ್‌ಗಳಲ್ಲಿಯೂ ಸಿಗುತ್ತದೆ. ವಿಟಮಿನ್, ಖನಿಜ ಮತ್ತು ಆ್ಯಮಿನೊ ಆ್ಯಸಿಡ್‌ನ ಮೂಲವಾಗಿರುವ ಇದು ಈಗಿನ ಹೊಸ ಫುಡ್ ಟ್ರೆಂಡ್ ಕೂಡಾ ಹೌದು.
ಯಾವುದನ್ನು ಬೆಳೆಯಬಹುದು?
ಯಾವುದೇ ಧಾನ್ಯ ಅಥವಾ ಬೀಜವನ್ನು ಮೈಕ್ರೊಗ್ರೀನ್‌ನಲ್ಲಿ ಬೆಳೆಬಹುದು. ಮನೆಯಲ್ಲೇ ಲಭ್ಯವಿರುವ ಕಾಳುಗಳನ್ನು ಹಸಿರಾಗಿಸಬಹುದು. ಗೋಧಿ, ಮೆಕ್ಕೆಜೋಳ, ರಾಗಿ, ಹುಲ್ಲುಜೋಳ, ಬೀನ್ಸ್, ಬಟಾಣಿ, ದ್ವಿದಳ ಧಾನ್ಯ, ಸೂರ್ಯಕಾಂತಿ, ಸಾಸಿವೆ, ಎಲೆಕೋಸು, ಹೂ ಕೋಸು, ಕ್ಯಾರೆಟ್, ಮೂಲಂಗಿ, ಬೀಟ್‌ರೂಟ್, ಪಾಲಕ್, ತುಳಸಿ, ಕೊತ್ತಂಬರಿ, ಫೆನ್ನೆಲ್‌ಗಳನ್ನು ಬೆಳೆಯಬಹುದು. ಇವುಗಳಿಗೆ ಹೆಚ್ಚಿನ ಬೆಳಕಿನ ಅಗತ್ಯವಿರುತ್ತದೆ. ಸೂರ್ಯನ ಬೆಳಕು ಹಾಗೂ ಕಡಿಮೆ ತೇವಾಂಶ, ಗಾಳಿಯಾಡುವ ಜಾಗ ಇದ್ದರೂ ಬೆಳೆಯುತ್ತವೆ. ಅಲ್ಲದೆ ರೋಗಕ್ಕೆ ತುತ್ತಾಗುವುದಿಲ್ಲ.
ಮೈಕ್ರೊಗ್ರೀನ್ಸ್ ಬೆಳೆಸಲು ಹೆಚ್ಚು ಸಮಯ ಬೇಕಿಲ್ಲ. ಎರಡರಿಂದ ಮೂರು ಇಂಚು ಆಳವಿರುವ ಯಾವುದೇ ಟ್ರೇ ಅಥವಾ ಪಾತ್ರೆ, ಪ್ಲಾಸ್ಟಿಕ್ ಕಂಟೈನರ್ ಅಥವಾ ಮಣ್ಣಿನ ಕುಂಡಗಳಲ್ಲಿ ಮಣ್ಣು, ಗೊಬ್ಬರ ತುಂಬಿಸಿ ನೀರು ಹಾಕಿ ಹದಗೊಳಿಸಿ, ನಂತರ ಬೀಜಗಳನ್ನು ಮಣ್ಣಿನಲ್ಲಿ ಸೇರಿಸಬೇಕು. ನಿತ್ಯ ಬೆಳಗ್ಗೆ, ಸಂಜೆ ನೀರು ಸಿಂಪಡಿಸಬೇಕು. ಬಿತ್ತಿದ ವಾರದಲ್ಲೇ ಮೊಳಕೆಯೊಡೆದು 20 ದಿನಗಳಲ್ಲಿ ಎಲೆಗಳು ತಳೆಯುತ್ತವೆ. ಅವು 2-3 ಇಂಚು ಬೆಳದಾಗ ಕೊಯ್ಲಿಗೆ ಉತ್ತಮ.
ಮೈಕ್ರೊಗ್ರೀನ್ ಬೆಳೆಸಲು ಆಯ್ಕೆ ಮಾಡುವ ಮಣ್ಣಿನ ಕುಡಿಕೆ ಇಲ್ಲವೇ ಪ್ಲಾಸ್ಟಿಕ್ ಟ್ರೇಗಳು ಹೇಗಿರಬೇಕೆಂದರೆ, ನೀರು ಹರಿದು ಹೋಗಲು ರಂಧ್ರಗಳಿರುವಂತಿರಬೇಕು.
ಮಣ್ಣಿನ ಜೊತೆ ಸಗಣಿ ಬಳಸಿದ ಕಾಂಪೋಸ್ಟ್ ಮಿಶ್ರಣ ಮಾಡಬಹುದು (ಪ್ಲಾಸ್ಟಿಕ್ ತಿನ್ನುವ ಜಾನುವಾರುಗಳ ಬಗ್ಗೆ ಎಚ್ಚರ ಅಗತ್ಯ). ತೆಂಗಿನ ನಾರನ್ನು ಬಳಸಬಹುದು.
ಮೈಕ್ರೊಗ್ರೀನ್‌ಗಳು ಸಾಮಾನ್ಯ ವಾತಾವರಣದಲ್ಲಿ 5 ರಿಂದ 10 ದಿನಗಳಲ್ಲಿ ಬೆಳೆಯುತ್ತವೆ. ಚಳಿ ಇದ್ದರೆ 14ರಿಂದ 28 ದಿನ ಬೇಕು. ಹೆಚ್ಚು ಬೆಳೆಯಲು ಬಿಡದೆ ಇವುಗಳನ್ನು ಕತ್ತರಿಸಿ ಉಪ ಯೋಗಿಸಬೇಕು. ಇಲ್ಲವಾದರೆ ಅವು ಬಣ್ಣ, ರುಚಿ ಹಾಗೂ ಪೌಷ್ಟಿಕಾಂಶ ಕಳೆದುಕೊಳ್ಳುತ್ತವೆ.
ನೀವು ಇದನ್ನೂ ದೊಡ್ಡ ಪ್ರಮಾಣದಲ್ಲಿ ಬೆಳೆದು ವ್ಯಾಪಾರ ಮಾಡಲು ಬಯಸಿದರೆ, ನಿಮ್ಮ ಮನೆಯ ಕೋಣೆಯಲ್ಲಿ ಇದಕ್ಕಾಗಿ ಒಂದು ಘಟಕವನ್ನು ಮಾಡಿ. ಈ ಘಟಕವನ್ನು ತಾರಸಿಯಲ್ಲಿ ಅಥವಾ ಮನೆಯಲ್ಲಿ ಸಾಕಷ್ಟು ಸೂರ್ಯನ ಬೆಳಕು ಇರುವ ಕೋಣೆಯಲ್ಲಿ ಬೆಳಸಬಹುದು.
ಸೂಪರ್ ಟಿಪ್...
ಕೊಯ್ಲು ಮಾಡಿದ ಮೈಕ್ರೊಗ್ರೀನ್‌ಗಳನ್ನು ಫ್ರಿಡ್ಜ್‌ನಲ್ಲಿ ಟಿಶ್ಯೂ ಪೇಪರ್‌ನಿಂದ ಮುಚ್ಚಿದ ಸ್ಟೀಲ್ ಕಂಟೇನರ್‌ನಲ್ಲಿ ಸಂಗ್ರಹಿಸಬೇಕು. ಇದರಿಂದ ಹಲವು ದಿನಗಳವರೆಗೆ ಇದರ ತಾಜಾತನವನ್ನು ಕಾಪಾಡಿಕೊಳ್ಳಬಹುದು.
Advertisement