

ಬೆಳಗ್ಗೆ ಎದ್ದ ತಕ್ಷಣ ಬಹಳಷ್ಟು ಜನರಿಗೆ ಟೀ ಅಥವಾ ಕಾಫಿ ಇಲ್ಲದೆ ದಿನ ಶುರುವಾಗಲ್ಲ. ಕೆಲವರಿಗೆ ಸ್ನ್ಯಾಕ್ಸ್ ಜೊತೆ ಸಂಜೆ ಕೂಡ ಟೀ ಕಾಫಿ ಬೇಕೇ ಬೇಕು. ಆದರೆ ಟೀ-ಕಾಫಿ ಜೊತೆ ನಾವು ತಿನ್ನುವ ಕೆಲವು ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ತಪ್ಪಾದ ಕಾಂಬಿನೇಷನ್ ನಿಂದ ಜೀರ್ಣಕ್ರಿಯೆ ಸಮಸ್ಯೆ ಮತ್ತು ಪೋಷಕಾಂಶದ ಕೊರತೆ ಉಂಟಾಗಬಹುದು. ಹಾಗಾಗಿ ಟೀ-ಕಾಫಿ ಕುಡಿಯುವಾಗ ಈ ವಸ್ತುಗಳನ್ನು ಯಾವುದೇ ಕಾರಣಕ್ಕೂ ಜೊತೆಗೆ ಸೇರಿಸಬೇಡಿ.
ಹಾಲು ಮತ್ತು ಟೀ ಕಾಫಿ ಜೊತೆ ಬಾಳೆಹಣ್ಣು ಬೇಡ
ಬಾಳೆಹಣ್ಣಿನಲ್ಲಿ ನೈಸರ್ಗಿಕ ಸಕ್ಕರೆ ಮತ್ತು ಪಿಷ್ಟ ಹೆಚ್ಚು ಇರುತ್ತದೆ. ಟೀ ಕಾಫಿಯಲ್ಲಿರುವ ಟ್ಯಾನಿನ್ ಜೊತೆ ಸೇರಿದಾಗ ಜೀರ್ಣಕ್ರಿಯೆ ನಿಧಾನವಾಗುತ್ತದೆ. ಇದರಿಂದ ಹೊಟ್ಟೆ ಉಬ್ಬರ ಮತ್ತು ಅನಿಲದ ಸಮಸ್ಯೆ ಬರಬಹುದು. ಬಾಳೆ ತಿನ್ನಬೇಕಾದರೆ ಟೀ ಕಾಫಿ ಕುಡಿದು ಕನಿಷ್ಠ 30 ನಿಮಿಷ ಬಿಡಬೇಕು.
ನಿಂಬೆ ಮತ್ತು ಸಿಟ್ರಸ್ ಹಣ್ಣುಗಳು ಅಪಾಯಕಾರಿ
ಟೀ ಕಾಫಿ ಈಗಾಗಲೇ ಆಮ್ಲೀಯ ಸ್ವಭಾವ ಹೊಂದಿದೆ. ಇದಕ್ಕೆ ನಿಂಬೆ ಕಿತ್ತಳೆ ಅಥವಾ ಆರೆಂಜ್ ಜ್ಯೂಸ್ ಸೇರಿಸಿದರೆ ಆಮ್ಲೀಯತೆ ಇನ್ನೂ ಹೆಚ್ಚಾಗುತ್ತದೆ. ಇದರಿಂದ ಹೊಟ್ಟೆ ನೋವು ಗ್ಯಾಸ್ ಮತ್ತು ಎದೆಯುರಿ ಸಮಸ್ಯೆ ಬರಬಹುದು. ಹುಳಿ ಹಣ್ಣುಗಳನ್ನು ಟೀ ಕಾಫಿಯಿಂದ ದೂರವಿಡುವುದು ಒಳ್ಳೆಯದು.
ಕಬ್ಬಿಣಾಂಶ ಇರುವ ಆಹಾರಗಳ ಜೊತೆ ಸೇಡಿಸಬೇಡಿ
ಪಾಲಕ್ ಸೊಪ್ಪು ಡ್ರೈ ಫ್ರೂಟ್ಸ್ ಮತ್ತು ರಾಗಿ ಟೀ ಕಾಫಿ ಜೊತೆ ತಿನ್ನಬಾರದು. ಟೀ ಕಾಫಿಯಲ್ಲಿರುವ ಟ್ಯಾನಿನ್ ಮತ್ತು ಕೆಫೀನ್ ಕಬ್ಬಿಣದ ಹೀರಿಕೊಳ್ಳುವಿಕೆಯನ್ನು 60 ಪ್ರತಿಶತದಷ್ಟು ಕಡಿಮೆ ಮಾಡುತ್ತದೆ. ರಕ್ತಹೀನತೆ ಇರುವವರು ಇದರ ಬಗ್ಗೆ ವಿಶೇಷ ಎಚ್ಚರ ವಹಿಸಬೇಕು. ಕಬ್ಬಿಣಾಂಶದ ಆಹಾರ ತಿಂದ ಒಂದು ಗಂಟೆ ನಂತರ ಟೀ ಕಾಫಿ ಕುಡಿಯಿರಿ.
ಮಸಾಲೆ ಮತ್ತು ಎಣ್ಣೆಯುಕ್ತ ತಿಂಡಿಗಳು ಬೇಡ
ಸಮೋಸಾ ಪಕೋಡಾ ಮತ್ತು ಮಸಾಲೆ ಬಿಸ್ಕಟ್ ನಂತಹ ಎಣ್ಣೆಯುಕ್ತ ತಿಂಡಿಗಳನ್ನು ಟೀ ಜೊತೆ ತಿನ್ನುವುದು ಸಾಮಾನ್ಯ. ಆದರೆ ಟೀ ಕಾಫಿ ಜೊತೆಗೆ ಕೊಬ್ಬು ಹೆಚ್ಚಿರುವ ಆಹಾರ ಸೇರಿದಾಗ ಜೀರ್ಣಕ್ರಿಯೆ ಕಷ್ಟವಾಗುತ್ತದೆ. ಇದು ಆಸಿಡಿಟಿ ಮತ್ತು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಇದರ ಬದಲು ಡ್ರೈ ಬಿಸ್ಕಟ್ ಅಥವಾ ರಸ್ಕ್ ಆಯ್ಕೆ ಮಾಡಬಹುದು.
ಸಕ್ಕರೆ ಮತ್ತು ಸಿಹಿ ತಿಂಡಿಗಳನ್ನು ಕಡಿಮೆ ಮಾಡಿ
ಟೀ ಕಾಫಿಗೆ ಈಗಾಗಲೇ ಸಕ್ಕರೆ ಸೇರಿಸುತ್ತೇವೆ. ಜೊತೆಗೆ ಲಡ್ಡು ಕೇಸರಿ ಬಾತ್ ನಂತಹ ಸಿಹಿ ತಿನ್ನುವುದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಏಕಾಏಕಿ ಹೆಚ್ಚಿಸುತ್ತದೆ. ಇದು ಮಧುಮೇಹ ಮತ್ತು ಸ್ಥೂಲಕಾಯಕ್ಕೆ ಕಾರಣವಾಗಬಹುದು. ಟೀ ಕಾಫಿ ವೇಳೆ ಸಕ್ಕರೆ ಕಡಿಮೆ ಮಾಡಿ ಮತ್ತು ಉಪ್ಪು ಬಿಸ್ಕಟ್ ನಂತಹ ಹಗುರ ತಿಂಡಿ ಆಯ್ಕೆ ಮಾಡಿ.