DK Shivakumar and cabinet swearing-in LIVE updates | ಮುಖ್ಯಮಂತ್ರಿಯಾಗಿ ಬುಧವಾರ ಡಿ.ಕೆ ಶಿವಕುಮಾರ್ ಪ್ರಮಾಣವಚನ ಸ್ವೀಕಾರ

Congress Party flags and banners put up near Lok Bhavan on Tuesday, ahead of the CM swearing-in ceremomy.
ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೂ ಮುನ್ನ ಮಂಗಳವಾರ ಲೋಕ ಭವನದ ಬಳಿ ಕಾಂಗ್ರೆಸ್ ಪಕ್ಷದ ಧ್ವಜಗಳು ಮತ್ತು ಬ್ಯಾನರ್‌ಗಳನ್ನು ಹಾಕಲಾಗಿದೆ.Express Photo: Kevin Nashon

ಡಿಕೆಶಿ ಪದಗ್ರಹಣಕ್ಕೂ ಮುನ್ನವೇ ಸಿದ್ದರಾಮಯ್ಯಗೆ ಮಹತ್ವದ ಸ್ಥಾನ: ಕಾಂಗ್ರೆಸ್‌ ಪರಮೋಚ್ಚ ಸಮಿತಿಗೆ ನೇಮಕ

ಮೇ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವ ಮೂಲಕ ತಮ್ಮ ಉಪಮುಖ್ಯಮಂತ್ರಿಯಾಗಿದ್ದ ಡಿಕೆ ಶಿವಕುಮಾರ್ ಅವರಿಗೆ ಅತ್ಯಂತ ಗೌರವಯುತವಾಗಿ ಅಧಿಕಾರ ಹಸ್ತಾಂತರ ಮಾಡಿದ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಂಗಳವಾರ ಮಹತ್ವದ ಹುದ್ದೆ ನೀಡಿದೆ.

ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ, ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯೂಸಿ) ಸದಸ್ಯ ಸ್ಥಾನ ನೀಡಿ ಆದೇಶ ಹೊರಡಿಸಿದೆ. ಈ ಮೂಲಕ ಸಿದ್ದರಾಮಯ್ಯ ಅವರು ಮತ್ತೆ ಪರಮೋಚ್ಚ ಸಮಿತಿಗೆ ಮರಳಿದ್ದಾರೆ.

ಹಿಂದೆ 2018 ರಲ್ಲಿ ಆಗಿನ ಪಕ್ಷದ ಮುಖ್ಯಸ್ಥ ರಾಹುಲ್ ಗಾಂಧಿಯವರ ಪುನರ್ರಚನೆಯಲ್ಲಿ, ಸಿದ್ದರಾಮಯ್ಯ ಅವರನ್ನು ಸಿಡಬ್ಲ್ಯೂಸಿಗೆ ಸೇರಿಸಲಾಗಿತ್ತು. ಆದರೆ 2019 ರಲ್ಲಿ ಅವರನ್ನು ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕರನ್ನಾಗಿ ನೇಮಿಸಿದಾಗ ಸಿಡಬ್ಲ್ಯೂಸಿ ಸ್ಥಾನದಿಂದ ಕೈಬಿಡಲಾಗಿತ್ತು.

ಇಷ್ಟು ವರ್ಷ ಪಟ್ಟ ಪರಿಶ್ರಮ, ಬದ್ಧತೆಗೆ ದೊರೆತ ಪ್ರತಿಫಲ- ಡಿ.ಕೆ ಶಿವಕುಮಾರ್

ಮುಖ್ಯಮಂತ್ರಿ ಹುದ್ದೆ ತಡವಾಗಿ ಬಂದಿರಬಹುದು, ಆದರೆ ನಿರಾಕರಿಸಿಲ್ಲ ಎಂದು ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಮಂಗಳವಾರ ಹೇಳಿದ್ದಾರೆ. ಇಷ್ಟು ವರ್ಷ ಪಟ್ಟ ಪರಿಶ್ರಮ, ಬದ್ಧತೆಗೆ ದೊರೆತ ಪ್ರತಿಫಲದ ಕ್ಷಣ ಎಂದು ಬಣ್ಣಿಸಿದ್ದಾರೆ.

ನಾಳೆ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪದಗ್ರಹಣ ಮಾಡಲು ಸಜ್ಜಾಗಿರುವಂತೆಯೇ ANI ವಿಶೇಷ ಸಂದರ್ಶದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ತನ್ನ ರಾಜಕೀಯ ಜೀವನ ವೈಯಕ್ತಿಕ ಮಹತ್ವಕಾಂಕ್ಷೆಗಿಂತಲೂ ಕಠಿಣ ಪರಿಶ್ರಮದ ಮೇಲೆ ರೂಪುಗೊಂಡಿದೆ. ಈ ಹಂತ ತಲುಪುವಲ್ಲಿ ಕಾಂಗ್ರೆಸ್ ಪಕ್ಷದ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ.

ಸ್ಪೀಕರ್ ಯುಟಿ ಖಾದರ್ ರಿಂದ ಸಿಬ್ಬಂದಿಗೆ ಔತಣಕೂಟ; ಪಕ್ಕಾ ಆಯ್ತಾ ಸಚಿವ ಸ್ಥಾನ?

ಕರ್ನಾಟಕ ವಿಧಾನಸಭಾ ಸಚಿವಾಲಯದ ಅಧಿಕಾರಿಗಳು ಮತ್ತು ನೌಕರರಿಗೆ ಮಂಗಳವಾರ ಸ್ಪೀಕರ್ ಯು.ಟಿ. ಖಾದರ್ ಅವರು ಔತಣಕೂಟ ಆಯೋಜಿಸಿದ್ದು, ಅವರು ನಿಯೋಜಿತ ಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದ ಹೊಸ ಸಚಿವ ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂಬ ಊಹಾಪೋಹಗಳಿಗೆ ಕಾರಣವಾಗಿದೆ.

ಅವರೊಂದಿಗೆ ಯುಟಿ ಖಾದರ್ ಅವರು ಸಹ ಸಚಿವರಾಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ.

"ಕರ್ನಾಟಕ ವಿಧಾನಸಭೆ ಸಚಿವಾಲಯದ ಎಲ್ಲಾ ಅಧಿಕಾರಿಗಳು ಮತ್ತು ನೌಕರರಿಗೆ ಸ್ಪೀಕರ್ ಖಾದರ್ ಅವರು ಇಂದು, ಸಂಜೆ 6 ಗಂಟೆಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಭೋಜನಕೂಟವನ್ನು ಆಯೋಜಿಸಿದ್ದರು" ಎಂದು ವಿಧಾನಸಭೆ ಸಚಿವಾಲಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ.

ಸ್ವಾಮೀಜಿ, ಫಾದರ್, ಮೌಲ್ವಿ ಸಮ್ಮುಖದಲ್ಲಿ ಮುಖ್ಯಮಂತ್ರಿಯಾಗಿ ಡಿಕೆಶಿ ಪ್ರಮಾಣವಚನ; ರಾಜ್ಯದ ಇತಿಹಾಸದಲ್ಲೇ ಮೊದಲು!

ನಿಯೋಜಿತ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬುಧವಾರ ಸಂಜೆ 4.05ಕ್ಕೆ ಲೋಕಭವನದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದು, ಈ ಸಮಾರಂಭ ಹಲವು ವಿಶೇಷತೆಗಳಿಗೆ ಸಾಕ್ಷಿಯಾಗುತ್ತಿದೆ.

ರಾಜ್ಯದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಡಿಕೆ ಶಿವಕುಮಾರ್ ಅವರು, ಸ್ವಾಮೀಜಿ, ಫಾದರ್ ಹಾಗೂ ಮೌಲ್ವಿ ಸೇರಿದಂತೆ ಸರ್ವಧರ್ಮಗಳ ಸ್ವಾಮೀಜಿಗಳ ಸಮ್ಮುಖದಲ್ಲಿ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ ಮಾಡಲಿದ್ದಾರೆ.

ಈ ಸಂಬಂಧ ಈಗಾಗಲೇ ಎಲ್ಲಾ ಧರ್ಮ, ಜಾತಿಗಳ ಸುಮಾರು 55 ಸ್ವಾಮೀಜಿಗಳಿಗೆ ಆಹ್ವಾನ ನೀಡಲು ಸೂಚನೆ ನೀಡಲಾಗಿದೆ. ಈ ಮೂಲಕ ಸರ್ವ ಧರ್ಮ ಸಹಿಷ್ಣುತೆ, ಪರಸ್ಪರ ಸಹಬಾಳ್ವೆ, ಶಾಂತಿ ಸೌಹಾರ್ದತೆಯ ಸಂದೇಶ ಸಾರಲು ಡಿಕೆಶಿ ಮುಂದಾಗಿದ್ದಾರೆ ಎನ್ನಲಾಗಿದೆ.

Summary

ಜೂನ್ 3 ರಂದು ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಕಾಂಗ್ರೆಸ್ ನಾಯಕ ಡಿ ಕೆ ಶಿವಕುಮಾರ್ ಪ್ರಮಾಣ ವಚನ ಸ್ವೀಕಾರಕ್ಕೆ ಲೋಕ ಭವನದಲ್ಲಿ ವ್ಯಾಪಕ ವ್ಯವಸ್ಥೆ ಮಾಡಲಾಗಿದೆ.

ವಿಧಾನಸೌಧ ಮತ್ತು ಲೋಕಭವನ ಪ್ರದೇಶದ ಸುತ್ತಲೂ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಡಿಕೆ ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ, ಕರ್ನಾಟಕದ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಮತ್ತು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ನಾಯಕರನ್ನು ಒಳಗೊಂಡ ಕಾಂಗ್ರೆಸ್ ಧ್ವಜಗಳು ಮತ್ತು ದೊಡ್ಡ ಬ್ಯಾನರ್‌ಗಳನ್ನು ಹಾಕಲಾಗಿದೆ.

ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಿವಕುಮಾರ್, ಬುಧವಾರ ಸಂಜೆ 4.05 ಗಂಟೆಗೆ ಲೋಕ ಭವನದಲ್ಲಿ ಸಚಿವ ಸಂಪುಟದ ಕೆಲವು ಸದಸ್ಯರೊಂದಿಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com