ಮಾರಕ ಎಬೋಲಾ ಉಪಟಳ

ಮಾರಕ ಎಬೋಲಾ ಉಪಟಳ
Updated on

ಇಂದಿಗೂ ಇಡೀ ವಿಶ್ವವನ್ನು ಮಾರಕವಾಗಿ ಕಾಡುತ್ತಿರುವ ಎಬೋಲಾ ರೋಗ ವ್ಯಾಪಕವಾಗಿ ಸುದ್ದಿಗೆ ಗ್ರಾಸವಾಗಿದ್ದು ಇದೇ 2014ರಲ್ಲಿ. ಮೊದಲ ಬಾರಿಗೆ ಎಬೋಲಾ ಪತ್ತೆಯಾಗಿದ್ದು 1976ರಲ್ಲಿಯೇ ಆದರೂ, ಇಡೀ ವಿಶ್ವಕ್ಕೆ ಅದರ ಕರಾಳ ಮುಖವನ್ನು ಪರಿಚಯವಾಗಿದ್ದು ಮಾತ್ರ 2014ರಲ್ಲಿ. ದಕ್ಷಿಣ ಆಫ್ರಿಕಾ, ದಕ್ಷಿಣ ಸುಡಾನ್, ಕಾಂಗೋ ಪ್ರದೇಶಗಳಲ್ಲಿ ಹರಡಿದ್ದ ಎಬೋಲಾ ನೋಡ ನೋಡುತ್ತಿದ್ದಂತೆಯೇ ಆಫ್ರಿಕಾ ಖಂಡದ ಇತರೆ ದೇಶಗಳಲ್ಲೆಡೆ ಆವರಿಸಿತು.

ಮಾತ್ರವಲ್ಲದೇ ರೋಗಿಗಳು ಸೇರಿದಂತೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರಿಗೂ ಕೂಡ ಎಬೋಲಾ ಹರಡುವ ಮೂಲಕ ತನ್ನ ಕರಾಳ ಮುಖವನ್ನು ಜಗತ್ತಿಗೆ ಪರಿಚಯಿಸಿತು. ಎಬೋಲಾದ ಪ್ರಭಾವ ಎಷ್ಟಿತ್ತು ಎಂದರೆ ಸುಡಾನ್, ಕಾಂಗೋ, ಗಿನಿಯಾ ದೇಶಗಳ ಪ್ರಧಾನಿ ಮತ್ತು ಅಧ್ಯಕ್ಷರು ಎಬೋಲಾಗೆ ಔಷಧಿ ನೀಡುವಂತೆ ವಿಶ್ವ ಸಮುದಾಯದ ಮುಂದೆ ಅಂಗಲಾಚಿದ್ದರು. ಮತ್ತೊಂದೆಡೆ ಎಬೋಲಾ ಕರಾಳಮುಖದ ಪರಿಚಯವಾಗುತ್ತಿದ್ದಂತೆಯೇ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಒ) ತನ್ನ ಸಿಬ್ಬಂದಿಗಳನ್ನು, ನುರಿತ ತಜ್ಞರನ್ನು ಎಬೋಲಾ ಪೀಡಿತ ದೇಶಗಳಿಗೆ ರವಾನಿಸಿತು. ವಿಪರ್ಯಾಸವೆಂದರೆ ಹೀಗೆ ವಿಶ್ವ ಆರೋಗ್ಯ ಸಂಸ್ಥೆಯಿಂದ ನಿಯೋಜನೆಗೊಂಡ ನೂರಾರು ವೈದ್ಯರಿಗೇ ಎಬೋಲಾ ಪಸರಿಸುವ ಮೂಲಕ ಸಾಕಷ್ಟು ವೈದ್ಯರು ಸಾವಿಗೀಡಾಗಿದ್ದರು.

ಪರಿಸ್ಥಿತಿಯನ್ನು ನಿಯಂತ್ರಿಸಲು ವಿಶ್ವಸಂಸ್ಥೆ ಎಷ್ಟೇ ಪ್ರಯತ್ನ ಪಟ್ಟರೂ ರೋಗ ಪೀಡಿತ ದೇಶಗಳಲ್ಲಿ ಪರಿಸ್ಥಿತಿ ನಿಯಂತ್ರಣಕ್ಕೆ ಬರಲೇ ಇಲ್ಲ. ಇಂದಿಗೂ ಎಬೋಲಾ ಪೀಡಿತ ದೇಶಗಳಲ್ಲಿ ಸಾಕಷ್ಟು ರೋಗ ಪೀಡಿತ ಜನರು ಸಾವಿಗೀಡಾಗುತ್ತಿದ್ದಾರೆ. ಇದನ್ನೇ ಬಂಡವಾಳವಾಗಿಸಿಕೊಂಡಿರುವ ಕೆಲ ಅಂತಾರಾಷ್ಟ್ರೀಯ ಔಷಧ ಸಂಸ್ಥೆಗಳು ಬಡ ಮತ್ತು ರೋಗ ಪೀಡಿತ ದೇಶಗಳಲ್ಲಿ ತಮ್ಮ ಔಷಧಿಗಳ ಪ್ರಯೋಗ ನಡೆಸುತ್ತಿದ್ದಾರೆ. ಅದು ಕೂಡ ಮಾನವರ ಮೇಲೆ. ಇದಕ್ಕೆ ವಿಶ್ವ ಆರೋಗ್ಯ ಸಂಸ್ಥೆ ಕೂಡ ಅನಿವಾರ್ಯವಾಗಿ ಅನುಮತಿ ನೀಡಿದ್ದು, ಸಾಕಷ್ಟು ಔಷಧ ನಿರ್ಮಾಣ ಸಂಸ್ಥೆಗಳು ಜೀವಂತ ಮನುಷ್ಯರ ಮೇಲೆ ತಮ್ಮ ಪ್ರಯೋಗ ನಡೆಸುತ್ತಿವೆ.

ಇನ್ನು ರೋಗಕ್ಕೆ ತುತ್ತಾಗಿ ಎಷ್ಟು ಮಂದಿ ಸಾವಿಗೀಡಾಗಿದ್ದಾರೆ ಎಂಬುದರ ಕುರಿತು ಇಂದಿಗೂ ನಿಖರ ಮಾಹಿತಿ ಲಭ್ಯವಾಗದೇ ಇದ್ದರೂ, ವಿವಿಧ ದೇಶಗಳಲ್ಲಿ ಸುಮಾರು 5 ಸಾವಿರಕ್ಕೂ ಅಧಿಕ ಎಬೋಲಾ ಬಾಧಿತರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಸ್ವತಃ ವಿಶ್ವದ ದೊಡ್ಡಣ್ಣ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಎಬೋಲಾ ರೋಗಕ್ಕೆ ತುರ್ತಾಗಿ ಔಷಧಿ ಕಂಡುಹಿಡಿಯಬೇಕು ಎಂದು ವಿಶ್ವ ಸಮುದಾಯದ ಮುಂದೆ ಮನವಿ ಮಾಡಿರುವುದು ಕರಾಳ ಪರಿಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಮತ್ತೊಂದು ಆಘಾತಕಾರಿ ಅಂಶವೆಂದರೆ ಇಂದಿಗೂ ಎಬೋಲಾ ರೋಗಕ್ಕೆ ಔಷಧಿ ಕಂಡುಹಿಡಿಯಲಾಗಿಲ್ಲ. ಇಡೀ ವಿಶ್ವ ಸಮುದಾಯವೇ ಇದೀಗ ಒಗ್ಗೂಡಿದ್ದು, ಎಬೋಲಾ ರೋಗಕ್ಕೆ ಮದ್ದು ಕಂಡುಹಿಡಿಯುವ ಕಾರ್ಯಕ್ಕೆ ಮುಂದಾಗಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com