
ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಭಿಮಾನಿಗಳು ಎಂದೂ ಮರೆಯದ ವರ್ಷ 2014. ಏಕೆಂದರೆ ಅಕ್ರಮ ಆಸ್ತಿ ಗಳಿಕೆ ಪ್ರಕರಣ ಜಯಲಲಿತಾ ಅವರನ್ನು ಇನ್ನಿಲ್ಲದಂತೆ ಕಾಡಿತ್ತು. ಸ್ನೇಹಿತೆಯ ಪುತ್ರ ಸುಧಾಕರನ್ ಅವರ ಮದುವೆಯನ್ನು ಅದ್ಧೂರಿಯಾಗಿ ನೆರವೇರಿಸುವ ಮೂಲಕ ರಾಜಕೀಯ ಶತ್ರುಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಇನ್ನು ಇದೇ ವಿಚಾರವನ್ನು ಮುಂದಿಟ್ಟುಕೊಂಡು ಜನತಾಪಕ್ಷದ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ನ್ಯಾಯಾಲಯದಲ್ಲಿ ದೂರು ಸಲ್ಲಿಕೆ ಮಾಡಿದ್ದರು. ದೂರಿನ ವಿಚಾರಣೆ ಸಿಬಿಐ ನ್ಯಾಯಾಲಯಕ್ಕೆ ಹಸ್ತಾಂತರವಾಗಿತ್ತು.
ಬೆಂಗಳೂರಿನ ಪರಪ್ಪನ ಅಗ್ರಹಾರದ ಆವರಣದಲ್ಲಿರುವ ಸಿಬಿಐ ವಿಶೇಷ ನ್ಯಾಯಾಲಯ ಸತತ ವಿಚಾರಣೆ ನಡೆಸಿ ಅಂತಿಮವಾಗಿ ಕಳೆದ ಸೆಪ್ಟೆಂಬರ್ 27ರಂದು ತೀರ್ಪು ನೀಡಿತ್ತು. ಪ್ರಕರಣದಲ್ಲಿ ಜಯಲಲಿತಾ ಅವರಿಗೆ 4 ವರ್ಷ ಜೈಲು ಶಿಕ್ಷೆಯಾಗಿತ್ತು. ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಇಡೀ ತಮಿಳುನಾಡು ರಾಜ್ಯ ಒಂದು ಕ್ಷಣ ಸ್ಥಬ್ದವಾಗಿತ್ತು. ಅಂದೇ ಜಯಲಲಿತಾ ಅವರನ್ನು ಪರಪ್ಪನ ಅಗ್ರಹಾರದ ಜೈಲಿಗೆ ರವಾನೆ ಮಾಡಲಾಗಿತ್ತು. ಜಯಲಲಿತಾ ಅವರ ವಿರುದ್ಧವಾಗಿ ತೀರ್ಪು ಬರುತ್ತದೆ ಎನ್ನುವ ಕಲ್ಪನೆಯನ್ನೂ ಮಾಡಿರದ ಅವರ ಬೆಂಬಲಿಗರು ಏಕಾಏಕಿ ತಮಿಳುನಾಡಿನಾದ್ಯಂತ ಪ್ರತಿಭಟನೆಗೆ ಇಳಿದರು.
ಜಯಲಲಿತಾ ಅವರ ಸ್ಥಾನಕ್ಕೆ ಅವರ ಕಟ್ಟಾ ಬೆಂಬಲಿಗರಾಗಿದ್ದ ಪನ್ನೀರ್ ಸೆಲ್ವಂ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಕೊನೆಗೆ ಸತತ 21 ದಿನಗಳ ಜೈಲು ವಾಸದ ಬಳಿಕ ಕರ್ನಾಟಕ ಹೈಕೋರ್ಟ್ ಜಯಲಲಿತಾ ಅವರಿಗೆ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿತ್ತು. ಕರ್ನಾಟಕ ಹೈಕೋರ್ಟ್‌ನಲ್ಲಿ ತೀರ್ಪಿನ ವಿರುದ್ಧದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಯಲಿದ್ದು, ಇನ್ನು ಮೂರು ತಿಂಗಳಲ್ಲಿ ಅರ್ಜಿಯ ವಿಚಾರಣೆ ಪೂರ್ಣಗೊಳ್ಳಲಿದೆ.
Advertisement