
ನೂರಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಭಾರತೀಯ ಪೊಲೀಸರಿಂದ ರೆಡ್ ಕಾರ್ನರ್ ನೊಟಿಸ್ ಪಡೆದಿದ್ದ ಭೂಗತ ಪಾತಕಿ ಚೋಟಾ ರಾಜನ್ ನನ್ನು ಇಂಡೋನೇಷ್ಯಾ ಪೊಲೀಸರು ಕಳೆದ ಅಕ್ಟೋಬರ್ ನಲ್ಲಿ ಬಂಧಿಸಿದ್ದರು. ಸಿಡ್ನಿಯಿಂದ ಬಾಲಿ ಬೀಚ್ ರೆಸಾರ್ಟ್ ಗೆ ರಾಜನ್ ಆಗಮಿಸುವ ಕುರಿತು ಮಾಹಿತಿ ಪಡೆದಿದ್ದ ಇಂಡೋನೇಷ್ಯಾ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ 55 ವರ್ಷದ ಭೂಗತ ಪಾತಕಿ ಛೋಟಾ ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ ನಿಖಲ್ಜೆಯನ್ನು ಬಂಧಿಸಿದ್ದರು.
ಹತ್ಯೆ, ಹತ್ಯೆ ಸಂಚು, ಬೆದರಿಕೆ ಸೇರಿದಂತೆ ಹಲವು ಪ್ರಕರಣಗಳಲ್ಲಿ ಭಾಗಿಯಾದ ಛೋಟಾ ರಾಜನ್ ವಿರುದ್ಧ 1995ರಲ್ಲಿ ಕೇಂದ್ರ ಸರ್ಕಾರ ಮತ್ತು ಇಂಟರ್ ಪೋಲ್ ದಶಕದ ಹಿಂದೆಯೇ ರೆಡ್ ಕಾರ್ನರ್ ನೋಟಿಸ್ ಹೊರಡಿಸಲಾಗಿತ್ತು. ಭಾರತದಿಂದ ತಲೆಮರೆಸಿಕೊಂಡಿದ್ದ ರಾಜನ್ ಬಳಿಕ ಪಾಕಿಸ್ತಾನ, ದುಬೈ ಮತ್ತು ಇಂಡೋನೇಷ್ಯಾ ದೇಶಗಳಲ್ಲಿ ಅವಿತಿದ್ದ. ಕಳೆದ ಅಕ್ಟೋಬರ್ ನಲ್ಲಿ ಇದೇ ರಾಜನ್ ಬಾಲಿ ಬೀಚ್ ರೆಸಾರ್ಟ್ ಗೆ ತೆರಳಿರುವ ಕುರಿತು ಕ್ಯಾನ್ ಬೆರ್ರಾ ಪೊಲೀಸರಿಗೆ ಮಾಹಿತಿ ಬಂದಿತ್ತು. ಇದರ ಅನ್ವಯ ಕಾರ್ಯಾಚರಣೆ ನಡೆಸಿದ ಇಂಡೋನೇಷ್ಯಾ ಪೊಲೀಸರು ರಾಜನ್ ನನ್ನು ಬಾಲಿ ವಿಮಾನ ನಿಲ್ದಾಣದಲ್ಲಿಯೇ ಬಂಧಿಸಿದ್ದರು.
ರಾಜನ್ ಬಂಧನದ ಹಿಂದೆ ಭಾರತೀಯ ಗುಪ್ತಚರ ದಳ ಮತ್ತು ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರ ಪಡೆ ಕಾರ್ಯಾಚರಣೆ ನಡೆಸಿತ್ತು. ಪ್ರಸ್ತುತ ಛೋಟಾ ರಾಜನ್ ನನ್ನು ಭಾರತ ವಶಕ್ಕೆ ಪಡೆದಿದ್ದು, ಆತನ ವಿರುದ್ಧದ ಎಲ್ಲ ಪ್ರಕರಣಗಳ ವಿಚಾರಣೆಯ ಜವಾಬ್ದಾರಿಯನ್ನು ಮಹಾರಾಷ್ಟ್ರ ಸರ್ಕಾರ ಸಿಬಿಐಗೆ ವಹಿಸಿದೆ.
Advertisement