ದೇಶದಲ್ಲಿ ಅಸಹಿಷ್ಣುತೆಯ ವಿಷಯ ಸೃಷ್ಟಿಸಿದ ವಿವಾದ ಮತ್ತು ಗೊಂದಲಗಳು

ಈ ವರ್ಷ ಸಾಹಿತ್ಯ ಲೋಕದಲ್ಲಿ ಕೇಳಿಬಂದ, ಜನರ ಬಾಯಲ್ಲಿ ಹೆಚ್ಚು ಚರ್ಚೆಗೆ ಬಂದ ವಿಷಯ ಅಸಹಿಷ್ಣುತೆ...
ಅಸಹಿಷ್ಣುತೆ ವಿರೋಧ ಪ್ರತಿಭಟನೆ
ಅಸಹಿಷ್ಣುತೆ ವಿರೋಧ ಪ್ರತಿಭಟನೆ

ಈ ವರ್ಷ ಸಾಹಿತ್ಯ ಲೋಕದಲ್ಲಿ ಕೇಳಿಬಂದ, ಜನರ ಬಾಯಲ್ಲಿ ಹೆಚ್ಚು ಚರ್ಚೆಗೆ ಬಂದ ವಿಷಯ ಅಸಹಿಷ್ಣುತೆ. ಜನ ಸಾಮಾನ್ಯರ ಬಾಯಿಯಿಂದ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ, ಸಂಸತ್ತಿನಲ್ಲಿ ಕೂಡ ಚರ್ಚೆಗೆ ಬಂತು. ನಮ್ಮ ದೇಶದ ಗಡಿಯಾಚೆಗೂ ಇದರ ವ್ಯಾಪ್ತಿ ವಿಸ್ತರಿಸಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮಾ ಕೂಡ ಪ್ರತಿಕ್ರಿಯಿಸಿದ್ದರು. ಭಾರತದಲ್ಲಿ ಕಳೆದ ಕೆಲವು ವರ್ಷಗಳಲ್ಲಿ ಧಾರ್ಮಿಕ ಅಸಹಿಷ್ಣುತೆ ನಡೆಯುತ್ತಿದೆ. ಮಹಾತ್ಮ ಗಾಂಧಿ ಬದುಕಿದ್ದಿದ್ದರೆ ಆಘಾತಕ್ಕೊಳಗಾಗುತ್ತಿದ್ದರು ಎಂದು ಬರಾಕ್ ಒಬಾಮಾ ಪ್ರತಿಕ್ರಿಯಿಸಿದ್ದರು.

ಆಂಗ್ಲಭಾಷೆಯಲ್ಲಿ ಇದಕ್ಕೆ Intolerance' ಎಂದು ಕರೆಯುತ್ತಾರೆ. ಸಹಿಷ್ಣುತೆಗೆ ವಿರುದ್ಧವಾದದ್ದು, ಅಂದರೆ ಸಹಜತೆಗೆ, ಸಹಿಸುವಿಕೆಗೆ ವಿರುದ್ಧವಾಗಿ ಏನಾದರೂ ನಡೆದರೆ ಅದನ್ನು ಅಸಹಿಷ್ಣುತೆ ಎಂದು ಹೇಳುತ್ತೇವೆ.

ಅದರ ಪ್ರತಿಕ್ರಿಯೆಯೇ ಸಮಾಜದ ಹಲವು ಪ್ರಸಿದ್ಧ ಸಾಹಿತಿಗಳು, ವ್ಯಕ್ತಿಗಳು ತಮಗೆ ಸಿಕ್ಕಿದ ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಹಿಂತಿರುಗಿಸಿರುವುದು. ಇವರಲ್ಲಿ ಸಾಹಿತಿಗಳು ಮಾತ್ರವಲ್ಲದೆ ವೈದ್ಯರು, ಕಲಾವಿದರು ಸೇರಿದ್ದಾರೆ. ನಮ್ಮ ಕನ್ನಡ ನಾಡಿನ ಹಿರಿಯ ಚಿಂತಕ ಡಾ.ಎಂ.ಎಂ.ಕಲ್ಬುರ್ಗಿಯವರ ಹತ್ಯೆ, ಮಹಾರಾಷ್ಟ್ರದ ಚಿಂತಕ ಗೋವಿಂದ ಪನ್ಸಾರೆಯವರ ಹತ್ಯೆ, ಉತ್ತರ ಪ್ರದೇಶದ ದಾದ್ರಿಯಲ್ಲಿ ಮುಸಲ್ಮಾನ ವ್ಯಕ್ತಿಯೊಬ್ಬ ಗೋ ಮಾಂಸ ಸೇವನೆ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಹತ್ಯೆಗಳನ್ನು ಖಂಡಿಸಿ ಪ್ರಾರಂಭವಾದ ಪ್ರಶಸ್ತಿ ಹಿಂದಿರುಗಿಸುವಿಕೆಯ ಕಾರ್ಯವು ಇಂದು ರಾಷ್ಟ್ರಮಟ್ಟದಲ್ಲಿ ಸರೋದ್ ವಾದಕರಿಂದ ಹಿಡಿದು ಸಾಮಾನ್ಯ ಪ್ರಶಸ್ತಿಗಳನ್ನು ಪಡೆದವರವರೆಗೂ ಹಬ್ಬಿದೆ.

ಅಸಹಿಷ್ಣುತೆಗೆ ಪೂರಕ ಘಟನೆಗಳು
ಗೋ ಮಾಂಸ ಸೇವನೆ ನಿಷೇಧ: ಅಸಹಿಷ್ಣುತೆ ಬೃಹತ್ ಮಟ್ಟದಲ್ಲಿ ನಡೆದಿದೆ ಎಂಬುದಕ್ಕೆ ಈ ವರ್ಷ ನಡೆದ ಉದಾಹರಣೆಗಳೇ ಸಾಕ್ಷಿ. ಮಹಾರಾಷ್ಟ್ರ, ಹರ್ಯಾಣ, ಜಮ್ಮು ಮತ್ತು ಕಾಶ್ಮೀರ ರಾಜ್ಯಗಳಲ್ಲಿ ಯಾವಾಗ ಗೋ ಮಾಂಸ ಸೇವನೆಗೆ ನಿಷೇಧ ಹೇರಲಾಯಿತೋ ಆಗಲೇ ಬಹುಶಃ ಅಸಹಿಷ್ಣುತೆಯ ಆರೋಪ ಕೇಳಿಬಂದಿರಬೇಕು. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಕೂಡ ಗೋ ಮಾಂಸ ಸೇವನೆ ನಿಷೇಧ ಕಾನೂನು ಜಾರಿಗೆ ತರಲು ಯೋಜನೆ ರೂಪಿಸಿತ್ತು.  

ದಾದ್ರಿ ಘಟನೆ:
ಗೋ ಮಾಂಸ ಸೇವನೆ ನಿಷೇಧದ ಕಿಡಿ ಕೊಲೆಯವರೆಗೂ ಸಾಗಿತು. ಉತ್ತರ ಪ್ರದೇಶ ರಾಜ್ಯದ ದಾದ್ರಿ ಎಂಬಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬನ ಮನೆಯಲ್ಲಿ ಗೋ ಮಾಂಸವನ್ನು ಶೇಖರಿಸಿಡಲಾಗಿದೆ ಎಂಬ ಸಂಶಯದಿಂದ ಹಿಂದೂ ಜನರ ಗುಂಪೊಂದು ಅವನನ್ನು ಮನೆಯಿಂದ ಹೊರಗೆ ಕರೆತಂದು ಕೊಂದು ಹಾಕಿದ್ದರು. ಘಟನೆ ಇಡೀ ದೇಶವನ್ನು ತಲ್ಲಣಿಸಿತ್ತು.

ಶಿವ ಸೇನೆಯ ಪಾಕ್ ವಿರೋಧಿ ಪ್ರತಿಭಟನೆ: ರಾಜಕಾರಣಿ ಮತ್ತು ಬರಹಗಾರ ಸುದೀಂಧ್ರ ಕುಲಕರ್ಣಿ ಮುಖದ ಮೇಲೆ ಕಪ್ಪು ಶಾಯಿಯನ್ನು ಬಳಿದಿದ್ದು, ಪಾಕಿಸ್ತಾನದ ಗಜಲ್ ಗಾಯಕ ಗುಲಾಂ ಅಲಿ ಮುಂಬೈಯಲ್ಲಿ ಸಂಗೀತ ಗೋಷ್ಠಿ ನಡೆಸದಂತೆ ಶಿವಸೇನೆ ತಡೆದಿದ್ದು ಶಿವಸೇನಾದ ಭಾರೀ ವಿರೋಧ, ಪ್ರತಿಭಟನೆಗಳಲ್ಲಿ ಪ್ರಮುಖವಾಗಿವೆ. ಪಾಕಿಸ್ತಾನವನ್ನು ವಿರೋಧಿಸಿ ಶಿವಸೇನೆ ಮಾಡಿದ ಕ್ರಿಯೆಗಳಿವು.

ಅಸಹಿಷ್ಣುತೆ ಬಗ್ಗೆ ಶಾರೂಖ್ ಖಾನ್, ಅಮೀರ್ ಖಾನ್ ಹೇಳಿಕೆ: ಅಸಹಿಷ್ಣುತೆ ಬಗ್ಗೆ ವಾದ-ವಿವಾದಗಳು ನಡೆಯುತ್ತಿರಬೇಕಾದರೆ ಸಂದರ್ಶನವೊಂದರಲ್ಲಿ ಶಾರೂಖ್, ನಮ್ಮ ದೇಶದಲ್ಲಿ ಅಸಹಿಷ್ಣುತೆ ಜಾಸ್ತಿಯೇ ಇದೆ. ಅದು ಹೆಚ್ಚಾಗುತ್ತಾ ಹೋಗುತ್ತಿದೆ. ಇನ್ನೊಂದೆಡೆ ಅಮೀರ್ ಖಾನ್ ಪತ್ರಿಕೋದ್ಯಮ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ದೇಶದಲ್ಲಿ ನಡೆಯುತ್ತಿರುವ ಘಟನೆ ಬಗ್ಗೆ ನನ್ನ ಪತ್ನಿ ಆತಂಕಕ್ಕೀಡಾಗಿದ್ದಾಳೆ. ಮಕ್ಕಳ ಸುರಕ್ಷೆ ದೃಷ್ಟಿಯಿಂದ ದೇಶ ಬಿಟ್ಟು ಬೇರೆ ದೇಶಕ್ಕೆ ಹೋಗೋಣವೇ ಎಂದು ಕೇಳುತ್ತಾಳೆ ಎಂದು ಹೇಳಿದ್ದರು. ಇವರಿಬ್ಬರ ಹೇಳಿಕೆಗಳು ಭಾರೀ ವಿವಾದ ಟೀಕೆಗಳಿಗೆ ಗುರಿಯಾಗಿದ್ದವು.

ಪ್ರಶಸ್ತಿ ಹಿಂತಿರುಗಿಸುವಿಕೆ: ಭಾರತ ದೇಶದಲ್ಲಿ ಜಾತ್ಯಾತೀತತೆ ಮರೆಯಾಗುತ್ತಿದೆ ಎಂದು ಆರೋಪಿಸಿ ದೇಶಾದ್ಯಂತ 30ಕ್ಕೂ ಹೆಚ್ಚು ಸಾಹಿತಿಗಳು, ಕಲಾವಿದರು, ವಿಜ್ಞಾನಿಗಳು, ವೈದ್ಯರು ತಮಗೆ ಸಿಕ್ಕಿರುವ ಪ್ರಶಸ್ತಿಗಳನ್ನು ಹಿಂತಿರುಗಿಸಿದ್ದರು.

ಅಸಹಿಷ್ಣುತೆ ವಿವಾದಕ್ಕೆ ಪ್ರತಿಭಟನೆ: ಒಂದೆಡೆ ಅಸಹಿಷ್ಣುತೆ ಪರ-ವಿರೋಧ ಪ್ರತಿಭಟನೆಗಳು ಸಾಗುತ್ತಲೇ ಇರುವಾಗ ದೇಶದಲ್ಲಿ ಅಸಹಿಷ್ಣುತೆ ಇದೆ ಎಂದು ಪ್ರತಿಭಟಿಸುವವರ ವಿರುದ್ಧ ಪ್ರತಿಭಟನೆ ನಡೆದವು. ಬಾಲಿವುಡ್ ನಟ ಅನುಪಮ್ ಖೇರ್  ನೇತೃತ್ವದಲ್ಲಿ ದೆಹಲಿಯಲ್ಲಿ ಅಸಹಿಷ್ಣುತೆ ವಿವಾದ, ಪ್ರಶಸ್ತಿ ಹಿಂತಿರುಗಿಸುವಿಕೆಯನ್ನು ವಿರೋಧಿಸಿ ಜಾಥಾ, ಪ್ರತಿಭಟನೆ ನಡೆಸಿದರು. ಅನುಪಮ್ ಖೇರ್ ತಮ್ಮ ಅನುಯಾಯಿಗಳೊಂದಿಗೆ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿ ಸಹ ಚರ್ಚೆ ನಡೆಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com