2015ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಗಳು

ಪ್ರಕೃತಿ ಮುನಿದರೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರಕೃತಿಯ ಎದುರು ಮನುಷ್ಯನ ಎಲ್ಲಾ ಪ್ರಯತ್ನಗಳು ಗೌಣ, ಪ್ರಕೃತಿ ಮುನಿದರೆ ಮನುಷ್ಯನ ಜೀವನ ಏನಾಗುತ್ತದೆ ಎಂಬುದಕ್ಕೆ 2015ರಲ್ಲಿ ಸಂಭವಿಸಿದ ನೇಪಾಳದ ಭೀಕರ ಭೂಕಂಪನ...
ನೇಪಾಳ ಭೂಕಂಪನ
ನೇಪಾಳ ಭೂಕಂಪನ

ಪ್ರಕೃತಿ ಮುನಿದರೆ ಯಾರೂ ಏನನ್ನೂ ಮಾಡಲು ಸಾಧ್ಯವಿಲ್ಲ. ಪ್ರಕೃತಿಯ ಎದುರು ಮನುಷ್ಯನ ಎಲ್ಲಾ ಪ್ರಯತ್ನಗಳು ಗೌಣ, ಪ್ರಕೃತಿ ಮುನಿದರೆ ಮನುಷ್ಯನ ಜೀವನ ಏನಾಗುತ್ತದೆ ಎಂಬುದಕ್ಕೆ 2015ರಲ್ಲಿ ಸಂಭವಿಸಿದ ನೇಪಾಳದ ಭೀಕರ ಭೂಕಂಪನ, ಚೆನ್ನೈನಲ್ಲಿ ಸುರಿದ ಭಾರೀ ಮಳೆ- ಇವೆರಡೂ ಘಟನೆಗಳನ್ನು ಉದಾಹರಣೆಯಾಗಿ ತೆಗೆದುಕೊಳ್ಳಬಹುದು.

ತಮಿಳುನಾಡು ಪ್ರವಾಹ
ಈ ವರ್ಷದ ಅತೀ ದೊಡ್ಡ ದುರ್ಘಟನೆ ಎನ್ನಬಹುದು. ಬಂಗಾಳಕೊಲ್ಲಿಯಲ್ಲಿ ಉಂಟಾದ ವಾಯುಭಾರ ಕುಸಿತ. ಶತಮಾನದಲ್ಲೇ ಕಂಡು ಕೇಳರಿಯದಷ್ಟು ಮಳೆಯಾಗುವಂತೆ ಮಾಡಿತು. ಭಾರೀ ಮಳೆಯು ಇಡೀ ಚೆನ್ನೈ ಮಹಾನಗರವನ್ನೇ ಅಕ್ಷರಶಃ ಮಹಾಸಾಗರವಾಗುವಂತೆ ಮಾಡಿಬಿಟ್ಟಿತು. ಮಳೆಯಾಗುವ ಮುನ್ಸೂಚನೆಯಿದ್ದರೂ ಈ ರೀತಿಯ ಅನಾಹುತಗಳನ್ನು ಸೃಷ್ಟಿಸುತ್ತದೆ ಎಂಬುದನ್ನು ಯಾರೊಬ್ಬರೂ ಊಹಿಸುವುದಕ್ಕೂ ಸಾಧ್ಯವಾಗಿರಲಿಲ್ಲ. ಚೆನ್ನೈನ ಮಹಾಮಳೆಗೆ ನೂರಾರು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು. ಲಕ್ಷಾಂತರ ಜನರು ತಮ್ಮ ಮನೆ ಹಾಗೂ ಆಸ್ತಿಪಾಸ್ತಿಗಳನ್ನು ಕಳೆದುಕೊಂಡಿದ್ದರು.

ವಿದ್ಯುತ್ ಸಮಸ್ಯೆ ಎದುರಾಗಿ ವೆಂಟಿಲೇಟರ್ ಇಲ್ಲದೇ ಸುಮಾರು ಹಲವು ಮಂದಿ ಸಾವನ್ನಪ್ಪಿದ್ದರು. ಸಾವಿರಾರು ಕೋಟಿ ರುಪಾಯಿಗಳು ನಷ್ಟವಾಯಿತು. ಪ್ರವಾಹದಿಂದಾಗಿ ಜನರು ನೀರು, ಆಹಾರಕ್ಕಾಗಿ ಪರದಾಡುವಂತಹ ಸ್ಥಿತಿ ಎದುರಾಗಿತ್ತು. ತುತ್ತು ಅನ್ನಕ್ಕಾಗಿ ಜನರು ಕೈ ಚಾಚಿಕೊಂಡು ನಿಂತ ದೃಶ್ಯ ಎಲ್ಲರ ಹೃದಯವನ್ನು ಕಲಕುವಂತೆ ಮಾಡಿತು. ಚೆನ್ನೈ ನಗರ ಜನಕ್ಕೆ ಸಂಘಸಂಸ್ಥೆಗಳು, ಸಿನಿತಾರೆಗಳು, ಕ್ರೀಡಾಪಟುಗಳು, ರಾಜಕಾರಣಿಗಳು, ಜನಸಾಮಾನ್ಯರು ಅಗತ್ಯ ಸಹಾಯಕ್ಕೆ ಮುಂದಾದರು.

ನೇಪಾಳ ಭೂಕಂಪ
ಪ್ರಪಂಚ ಭೂಪಟದ ಪುಟ್ಟ ದೇಶ ಈ ನೇಪಾಳ. ಹಿಂದೂಗಳೇ ಬಹುಸಂಖ್ಯಾತರಾಗಿರುವ ನೇಪಾಳದಲ್ಲಿ ಎಂದಿಗೂ ಕಂಡು ಕೇಳರಿಯದ ಭಯಂಕರ ಪ್ರಾಕೃತಿಕ ವಿಕೋಪ ಕಂಡುಬಂದಿತ್ತು. ನೇಪಾಳ ಭೂಕಂಪ 2015ರ ಭೀಕರ ಭೂಕಂಪವಾಗಿದೆ. ಈ ಭೂಂಕಪವು  6,300ಕ್ಕೂ ಹೆಚ್ಚು ಬಲಿ ತೆಗೆದುಕೊಂಡಿದ್ದು, ಅಲ್ಲದೆ, ದುಪ್ಪಟ್ಟು ಜನರು ಗಂಭೀರವಾಗಿ ಗಾಯಗೊಂಡಿದ್ದರು. ಏಪ್ರಿಲ್ 25ರಂದು ಸಂಭವಿಸಿದ ಈ ಭೂಕಂಪ ವಿಶ್ವವನ್ನೇ ನಡುಗಿಸಿತ್ತು. ಇಡೀ ದೇಶವನ್ನೇ ನಾಶ ಮಾಡಿದ ಈ ಭೂಕಂಪ 1832ರಲ್ಲಿ ನಿರ್ಮಾಣಗೊಂಡಿದ್ದ ಕಠ್ಮಂಡುವಿನ ಧರಹರಾ ಗೋಪುರವನ್ನು ನೆಲಕ್ಕಚ್ಚುವಂತೆ ಮಾಡಿತ್ತು.

ನೇಪಾಳಕ್ಕೆ ಅಂಟಿಕೊಂಡಿದ್ದ ಪರ್ವತಗಳಲ್ಲೂ ಕಂಪನದ ಅನುಭವವಾಗಿದ್ದರಿಂದ 19 ಪರ್ವತಾರೋಹಿಗಳು ಅಲ್ಲೇ ಮಣ್ಣುಪಾಲಾಗಿಬಿಟ್ಟರು. ಭೂಕಂಪನ ನಿಂತಿತು ಎಂದುಕೊಂಡು ನಿಟ್ಟಿಸಿರು ಬಿಡುತ್ತಿರುವಾಗಲೇ ಮತ್ತೆ ಮತ್ತೆ ಕಂಪನದ ದಾಳಿಯಾಗುತ್ತಿತ್ತು. ಬರೋಬ್ಬರಿ 46 ಬಾರಿ ಕಂಪನಗಳು ಮಾನವನ ಉಸಿರನ್ನೇ ನಿಲ್ಲಿಸಿಬಿಟ್ಟವು ಭಾರತ, ಪಾಕಿಸ್ತಾನ, ಅಮೆರಿಕ, ಚೀನಾ ಸೇರಿದಂತೆ ಜಗತ್ತಿನ ನಾನಾ ರಾಷ್ಟ್ರಗಳು ನೇಪಾಳಕ್ಕೆ ಸಹಾಯಹಸ್ತ ಚಾಚಿದವು. ಕರ್ನಾಟಕದಿಂದಲೂ ವಿಪತ್ತು ನಿರ್ವಹಣೆಯ ತಂಡ ಕಠ್ಮಂಡುವಿಗೆ ಹೋಗಿತ್ತು. ಈ ಭೀಕರ ಭೂಕಂಪ ನಡೆದು ಇದೀಗ 8 ತಿಂಗಳಾಗಿವೆ. ಆದರೂ ನೇಪಾಳ ಸಂಪೂರ್ಣವಾಗಿ ಚೇತರಿಸಿಕೊಳ್ಳಲು ಸಾಧ್ಯವಾಗಿಲ್ಲ.

ಮುಂದುವರೆದ ಎಬೋಲಾ ಮಾರಿ

ಪಶ್ಚಿಮ ಆಫ್ರಿಕಾದಲ್ಲಿ ಎಬೋಲಾ ಎಂಬ ಮಹಾಮಾರಿ ಕಾಣಿಸಿಕೊಂಡಿದ್ದು 2014ರ ಕೊನೆಯಲ್ಲೇ ಆದರೂ ಆದರ ಪರಿಣಾಮ ಹಾಗೂ ಏಟು ಬಿದ್ದಿದ್ದು 2015ರಲ್ಲಿ. ಎಬೋಲಾ ಎಂಬ ಹೆಮ್ಮಾರಿ ಗಿನಿಯಾ, ಲಿಬೇರಿಯಾ, ನೈಜೀರಿಯಾಗಳನ್ನು ದಾಟಿ ಅಮೆರಿಕ, ಇಟಲಿ, ಸ್ಪೇನ್ಗೂಕ ನುಗ್ಗಿತ್ತು. 2015ರಲ್ಲಿ ಒಟ್ಟು ಪತ್ತೆಯಾದ 28 ಸಾವಿರ ಪ್ರಕರಣಗಳಲ್ಲಿ ಸಾವನ್ನಪ್ಪಿದವರು 11,302 ಮಂದಿ. ಈ ಈ ಹೆಮ್ಮಾರಿ ರೋಗಕ್ಕೆ ಇನ್ನೂ ಚಿಕಿತ್ಸೆ ಕಂಡು ಹಿಡಿಯಲು ಸಾಧ್ಯವಾಗಿಲ್ಲ. ಎಬೋಲಾ ರೋಗಕ್ಕೆ ಚಿಕಿತ್ಸೆ ಕಂಡು ಹಿಡಿಯಲು ಈಗಲೂ ಹಲವು ದೇಶಗಳು ಸಂಶೋಧನೆ ನಡೆಯುತ್ತಲೇ ಇದೆ.

ಮಹಾ ಮಾರಿ ಹಂದಿಜ್ವರದ ರೌದ್ರಾವತಾರ
6 ವರ್ಷಗಳ ಹಿಂದೆ ದಾಳಿಯಿಟ್ಟಿದ್ದ ಹಂದಿ ಜ್ವರ ಈ ವರುಷವೂ ತನ್ನ ರೌದ್ರ ರೂಪವನ್ನು ಪ್ರದರ್ಶಿಸಿತ್ತು. 2015ರಲ್ಲಿ ಹಂದಿ ಜ್ವರದಿಂದಾಗಿ ಒಟ್ಟಾರೆ ಮಡಿದವರ ಸಂಖ್ಯೆ 1,895. ದೇಶದೆಲ್ಲೆಡೆ ಪತ್ತೆಯಾದ ರೋಗ ಪ್ರಕರಣಗಳು 31,974. ರಾಜಸ್ಥಾನ 6,559 ಪ್ರಕರಣ ಪತ್ತೆಯಾಗಿ 415 ಮಂದಿ ಮೃತಪಟ್ಟರು. ಗುಜರಾತ್ ನಲ್ಲಿ ಪತ್ತೆಯಾದ 6,495 ಪ್ರಕರಣಗಳಲ್ಲಿ 428 ಮಂದಿ ಸಾವನ್ನಪ್ಪಿದರು. ಫೆಬ್ರವರಿ- ಮಾರ್ಚ್ ನಲ್ಲಿ ಆರಂಭವಾದ ಇದರ ಹಾವಳಿ ಸೆಪ್ಟೆಂಬರ್ ತನಕವೂ ಇತ್ತು. ಇತ್ತೀಚೆಗೆ ನಾಸಿಕ್ ನಲ್ಲಿ ನಡೆದ ಕುಂಭಮೇಳದಲ್ಲೂ 9 ಮಂದಿ ಹಂದಿಜ್ವರದಿಂದಲೇ ಸಾವನ್ನಪಿದ್ದರು.

ಆಫ್ಘಾನಿಸ್ತಾನದ ಭಾರಿ ಹಿಮಪಾತ
ಫೆಬ್ರವರಿ ತಿಂಗಳಿನಲ್ಲಿ ಆಫ್ಘಾನಿಸ್ತಾನದಲ್ಲಿ ಭಾರಿ ಹಿಮಪಾತ ಉಂಟಾಗಿತ್ತು. ಆಫ್ಘಾನ್ ಪಂಜಿಶಿರ್ ಪ್ರದೇಶದಲ್ಲಿ ಹಿಮಪಾತದ ಪರಿಣಾಮ ಭೀಕರವಾಗಿತ್ತು. ಈ ಮೂರು ದಶಕಗಳಲ್ಲೇ ಅತಿ ದೊಡ್ಡ ಹಿಮಪಾತ ಇದಾಗಿದೆ. ಫೆ.24ರಿಂದ 28ರವರೆಗೆ ಕೇವಲ 5 ದಿನಗಳಲ್ಲಿ ಸುಮಾರು 40 ಬಾರಿ ಹಿಮಪಾತವಾಗಿತ್ತು. ಹಿಮಪಾತದ ಪರಿಣಾಮ 310ಕ್ಕಿಂತಲೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು. 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ನೂರಾರು ಮನೆಗಳು ನಾಶವಾದವು. ವಾತಾವರಣದಲ್ಲಿ ಉಷ್ಣತೆ ಹೆಚ್ಚಾಗಿದ್ದೇ ಈ ಅನಾಹುತಕ್ಕೆ ಕಾರಣ ಎಂದು ಹೇಳಲಾಗುತ್ತಿತ್ತು.

ಬಿಸಿಲ ಝಳಕ್ಕೆ ನಲುಗಿದ ಆಂಧ್ರ, ತೆಲಂಗಾಣ
ನೆರೆ ರಾಜ್ಯಗಳಾದ ಆಂಧ್ರಪ್ರದೇಶ ಹಾಗೂ ತೆಲಂಗಾಣದಲ್ಲಿಂಟಾದ ಬರದ ಛಾಯೆ ಸಾಕಷ್ಟು ಹಾನಿಯುಂಟು ಮಾಡಿತ್ತು. ಬಿಸಿಲ ಝಳಕ್ಕೆ ಸಾವಿರಾರು ಮಂದಿ ಸಾವನ್ನಪ್ಪಿದ್ದರು. ಬರದಿಂದ ನೂರಾರು ಎಕರೆ ಬೆಳೆ ನಷ್ಟವಾಗಿತ್ತು. ಅಲ್ಲದೆ ನೀರಿಗಾಗಿ ಪರಿತಪಿಸುವಂತಾಗಿತ್ತು. 443 ಮಂಡಲಗಳಲ್ಲಿ 231 ಮಂಡಲಗಳನ್ನು ಸ್ಥಳೀಯ ಸರ್ಕಾರ ಬರಪೀಡಿತ ಪ್ರದೇಶ ಎಂದು ಘೋಷಿಸಿತ್ತು. ಕರೀಂನಗರ ಮತ್ತು ಮೇದಿಕ್ ಜಿಲ್ಲೆಗಳಲ್ಲಿ ಬರದ ಪರಿಣಾಮ ಘೋರವಾಗಿದ್ದು, ಹೈದ್ರಾಬಾದ್ ಪ್ರಾಂತ್ಯ ಅಕ್ಷರಶಃ ಕೆಂಡದಂತಾಗಿತ್ತು. ತೆಲಂಗಾಣವೊಂದರಲ್ಲೇ 300ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದರು. 2015ರ ಮೇ- ಜೂನ್ನಶಲ್ಲಿ ಬೀಸಿದ ಬಿಸಿ ಗಾಳಿ ಸಿಂಧ್ ಪ್ರಾಂತ್ಯದಲ್ಲಿ ಭೀಕರ ಪರಿಸ್ಥಿತಿಯನ್ನು ಸೃಷ್ಟಿ ಮಾಡಿತ್ತು. ಈ ಬಿಸಿ ಗಾಳಿ ಭಾರತದ ಜನರು ಕಂಗಾಲಾಗುವಂತೆ ಮಾಡಿತ್ತು. ಎರಡೂ ಕಡೆ 46 ಡಿಗ್ರಿ ಸರಾಸರಿಯಲ್ಲಿ ಬಿಸಿ ಗಾಳಿ ಬೀಸಿತ್ತು. ಪಾಕಿಸ್ತಾನವನ್ನೊಳಗೊಂಡಂತೆ ಸಿಂಧ್ ಪ್ರಾಂತ್ಯದಲ್ಲಿ ಒಟ್ಟಾರೆ 500ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಆದರೆ, ಅದಕ್ಕಿಂತ ಭೀಕರ ಪರಿಸ್ಥಿತಿ ಆಂಧ್ರಪ್ರದೇಶದಲ್ಲಾಯಿತು. ಕೇವಲ ಆಂಧ್ರಪ್ರದೇಶವೊಂದರಲ್ಲೇ 1735 ಮಂದಿ ಸಾವನ್ನಪ್ಪಿದ್ದರು. ದೇಶದ ಇತರ ಭಾಗದಲ್ಲೂ ಸನ್ಸ್ಟ್ರೋ ಕ್, ಚರ್ಮದ ಕಾಯಿಲೆ, ದೇಹದಲ್ಲಿ ತಾಪ ಹೆಚ್ಚಿ ಸತ್ತವರ ಸಂಖ್ಯೆ 200 ದಾಟುತ್ತದೆ.

ಉತ್ತರ ಭಾರತದಲ್ಲಿ ಅಕಾಲಿಕ ಮಳೆ ತಂದ ಆಪತ್ತು
ಮಾರ್ಚ್ ನಲ್ಲಿ ಉತ್ತರ ಭಾರತದಲ್ಲಿ ಬಿದ್ದ ಅಕಾಲಿಕ ಮಳೆಯಿಂದಾಗಿ ಭಾರಿ ಪ್ರಮಾಣದ ಬೆಳೆ ನಷ್ಟವಾಗಿತ್ತು. ಒಟ್ಟಾರೆ 106 ಎಕರೆ ಪ್ರದೇಶದಲ್ಲಿದ್ದ ಬೆಳೆಗಳೆಲ್ಲ ಸರ್ವನಾಶವಾಗಿತ್ತು. ಪ್ರಕೃತಿ ಕೊಟ್ಟ ರೌದ್ರ ಶಾಕ್ ನಿಂದ ರೈತ ಹೊರಬರಲೇ ಇಲ್ಲ. ಉತ್ತರ ಭಾರತದ ಬೇರೆ ಬೇರೆ ಕಡೆ ಹಲವಾರು ರೈತರು ಆತ್ಮಹತ್ಯೆ ಮಾಡಿಕೊಂಡರು.

ಕುಸಿದ ಬಿದ್ದ ಮೌಂಟ್ ಎವರೆಸ್ಟ್
ನೇಪಾಳದಲ್ಲಿ ಉಂಟಾದ ಭೂಕಂಪದ ಪರಿಣಾಮ ಮೌಂಟ್ ಎವರೆಸ್ಟ್ 3 ಸೆಂ. ಮೀ.ನಷ್ಟು ನೈಋತ್ಯ ಭಾಗದಲ್ಲಿ ಕುಸಿತ ಕಂಡಿತ್ತು. ಕುಸಿತ ಕಂಡಿದ್ದರೂ ಮೌಂಟ್ ಎವರೆಸ್ಟ್ ಮಾತ್ರ ತನ್ನ ವಿಶ್ವದ ಅತಿದೊಡ್ಡ ಶಿಖರ ಎಂಬ ಹಣೆಪಟ್ಟಿ ಮಾತ್ರ ಕಳೆದುಕೊಂಡಿಲ್ಲ. ಇಂದಿಗೂ ಮೌಂಟ್ ಎವರೆಸ್ಟ್ ವಿಶ್ವ ಅತೀ ದೊಡ್ಡ ಶಿಖರಕ್ಕೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ರಾಜ್ಯದಲ್ಲಿ ಸಿಡಿಯಿತು ಬರದ ಛಾಯೆ
ಈ ವರ್ಷ ವರುಣ ಆಡಿದ ಕಣ್ಣಾಮುಚ್ಚಾಲೆ ಆಟಕ್ಕೆ ರಾಜ್ಯದ ಮೇಲೆ ಬರದ ಛಾಯೆಯೇ ಮೂಡಿತ್ತು. ಅವಧಿಗೂ ಮುನ್ನವೇ ದರ್ಶನ ನೀಡಿದ್ದ ಮಳೆರಾಯ ನಂತರ ತನ್ನ ದರ್ಶನವನ್ನು ನೀಡದೆಯೇ ರೈತರು ಸಂಕಷ್ಟದಲ್ಲಿ ಸಿಲುವಂತೆ ಮಾಡಿಬಿಟ್ಟಿದ್ದ. ಕಳೆದ 40 ವರ್ಷಗಳ ನಂತರ ರಾಜ್ಯವು ಗಂಭೀರ ಸ್ವರೂಪದ ಬರಕ್ಕೆ ತುತ್ತಾಗಿರುವುದು ಇದೇ ಮೊದಲು. ಸಂಕಷ್ಟ ಪರಿಸ್ಥಿತಿ ಎದುರಿಸಲು ಸಿದ್ಧವಾಗಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಬ್ಬೊಬ್ಬರ ಮೇಲೊಬ್ಬರು ಕೆಸರೆರಚಾಟಕ್ಕೆ ಮಾಡುವ ಕೆಲಸ ಮಾಡುತ್ತಿದ್ದರು. ಮುಂಗಾರು ಮಳೆ ಕೈಕೊಟ್ಟಾಗ ತಾತ್ಕಾಲಿಕವಾಗಿ 88 ಬರಪೀಡಿತ ತಾಲೂಕುಗಳೆಂದು ಗುರುತಿಸಲಾಯಿತು. ನಂತರ ಬರದ ಛಾಯೆವಿಸ್ತರಿಸುತ್ತಾ ಹೋದಂತೆ ರಾಜ್ಯದ 27 ಜಿಲ್ಲೆಗಳ 136 ಬರಪೀಡಿತ ತಾಲೂಕುಗಳೆಂದು ಘೋಷಿಸಲಾಯಿತು. ರಾಜ್ಯ ಹಾಗೂ ಕೇಂದ್ರ ಸರ್ಕಾರ ನಾಯಕರ ನಡುವಿನ ತಿಕ್ಕಾಟಕ್ಕೆ ಇಂದಿಗೂ ರೈತ ಬಲಿಯಾಗುತ್ತಿರುವುದು ವಿಪರ್ಯಾಸದ ಸಂಗತಿ.

ಅಸ್ಸಾಂ ಪ್ರವಾಹ
2015ರ ಆಗಸ್ಟ್ ನಲ್ಲಿ ಸುರಿದ ಭಾರೀ ಮಳೆ ಸಾಕಷ್ಟು ಹಾನಿಯುಂಟು ಮಾಡಿದ್ದು. ಭಾರೀ ಮಳೆಗೆ 42ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರು.21 ಜಿಲ್ಲೆಯ 1.65 ಮಿಲಿಯನ್ ರಷ್ಟು ಜನರು ಪ್ರವಾಹ ಭೀತಿಯನ್ನು ಎದುರಿಸುತ್ತಿದ್ದರು. ಸಾಕಷ್ಟು ಜನರ ಜೀವನ ಅಸ್ತವ್ಯಸ್ತವಾಗುವಂತೆ ಮಾಡಿತ್ತು. ಮಳೆಯಿಂದಾಗಿ 10ಲಕ್ಷಕ್ಕೂ ಹೆಚ್ಚು ಮಂದಿ ಹಾನಿಗೊಳಗಾಗಿದ್ದರು.

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com