2015ರಲ್ಲಿ ಸದ್ದು ಮಾಡಿದ ಸುದ್ದಿಗಳು

ನೋಡ ನೋಡುತ್ತಿದ್ದಂತೆಯೇ ವರ್ಷ ಕಳೆದು ಹೋಯಿತು. 2015ಕ್ಕೆ ವಿದಾಯ ಹೇಳಿ, 2016ಕ್ಕೆ ಸ್ವಾಗತ ಕೋರುವ ಸಮಯವಿದು. 2015ರಲ್ಲಿ ಸಾಕಷ್ಟು ವಿಚಾರಗಳು ಮತ್ತು ಸುದ್ದಿಗಳು ಭಾರಿ ಸದ್ದು ಮಾಡಿವೆ.
2015ರಲ್ಲಿ ಸದ್ದು ಮಾಡಿದ ಸುದ್ದಿಗಳು
2015ರಲ್ಲಿ ಸದ್ದು ಮಾಡಿದ ಸುದ್ದಿಗಳು
Updated on
ನೋಡ ನೋಡುತ್ತಿದ್ದಂತೆಯೇ ವರ್ಷ ಕಳೆದು ಹೋಯಿತು. 2015ಕ್ಕೆ ವಿದಾಯ ಹೇಳಿ, 2016ಕ್ಕೆ ಸ್ವಾಗತ ಕೋರುವ ಸಮಯವಿದು. ಸುದ್ದಿಲೋಕದಲ್ಲಿ 2015ರಲ್ಲಿ ಸಾಕಷ್ಟು ವಿಚಾರಗಳು ಮತ್ತು ಸುದ್ದಿಗಳು ಭಾರಿ ಸದ್ದು ಮಾಡಿದ್ದು, ಆ ಸುದ್ದಿಗಳ ವಿವರ ಇಲ್ಲಿದೆ.
ಕಳ್ಳನ ಚಾಕುವಿಗೆ ಬಲಿಯಾದ ಪ್ರಾಮಾಣಿಕ ದಕ್ಷ ಅಧಿಕಾರಿ ಎಸ್ ಐ ಜಗದೀಶ್ ಹತ್ಯೆ
ಕಳ್ಳತನ ಮಾಡಿ ಪೊಲೀಸರಿಂದ ತಪ್ಪಿಸಿಕೊಂಡು ತಿರುಗುತ್ತಿದ್ದ ಕಳ್ಳರಿಬ್ಬರನ್ನು ಸೆರೆಹಿಡಿಯಲು ತೆರಳಿದ್ದ ಪೊಲೀಸ್ ಸಬ್ ಇನ್ಸ್ ಪಕ್ಟರ್ ಜಗದೀಶ್ (38)ಅವರನ್ನು ಆರೋಪಿಯೇ ಹಾಡಹಗಲೇ ಚಾಕುವಿನಿಂದ ಇರಿದು  ಭೀಕರವಾಗಿ ಹತ್ಯೆ ಮಾಡಿದ ಘಟನೆ ರಂದು ನಡೆದಿತ್ತು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ಠಾಣೆ ಪಿಎಸ್ ಐ ಜಗದೀಶ್ ಅವರು ತಮ್ಮ ನಾಲ್ವರು ಸಿಬ್ಬಂದಿಗಳ ಜೊತೆ ತಪ್ಪಿಸಿಕೊಂಡು  ಓಡುತ್ತಿದ್ದ ಆರೋಪಿಯನ್ನು  ಸೆರೆಹಿಡಿಯಲು ನೆಲಮಂಗಲದ ಸಿಎನ್ ಆರ್ ಗ್ರ್ಯಾನೈಟ್ ಫ್ಯಾಕ್ಟರಿ ಸಮೀಪ ತೆರಳಿದ್ದರು. ಈ ಸಂದರ್ಭದಲ್ಲಿ ಬೈಕ್ ಕಳ್ಳತನ ಮಾಡಿದ ಆರೋಪಿಯೇ ತಪ್ಪಿಸಿಕೊಳ್ಳುವ ಬರದಲ್ಲಿ ಪಿಎಸ್ ಐ  ಜಗದೀಶ್ ಅವರನ್ನು ಹತ್ಯೆಗೈದು ಪರಾರಿಯಾಗಿದ್ದ. ಪ್ರಸ್ತುತ ಈ ಇಬ್ಬರು ಕಳ್ಳರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದು, ವಿಚಾರಣೆ ನ್ಯಾಯಾಲಯದ ಹಂತದಲ್ಲಿದೆ.
ಬೆಳಕಿಗೆ ಬಂದ ಶೀನಾ ಬೋರಾ ಹತ್ಯಾ ಪ್ರಕರಣ
ಇದು ಸ್ವಂತ ತಾಯಿಯೇ ತನ್ನ ಮಗಳನ್ನು ಕೊಲೆಗೈದ ಕಥೆ. ಮಾಧ್ಯಮ ಸಮೂಹವೊಂದರ ಮಾಲಕಿಯಾಗಿರುವ ಇಂದ್ರಾಣಿ ಮುಖರ್ಜಿ ಮತ್ತು ಆಕೆಯ ಪತಿಯನ್ನು ಜೈಲಿಗಟ್ಟಿದ ಪ್ರಕರಣ ಇದು. ಆಸ್ತಿಗಾಗಿಯೋ ಅಥವಾ  ಅಂತಸ್ತಿಗಾಗಿಯೋ ಸ್ವಂತ ಮಗಳನ್ನೇ ತನ್ನ ಮಾಜಿ ಪತಿ ಸಂಜೀವ್ ಖನ್ನಾ ಮತ್ತು ಕಾರು ಚಾಲಕ ಶ್ಯಾಮ್ ವರ್ ರೈ ಎಂಬಾತನೊಂದಿಗೆ ಸೇರಿ ಇಂದ್ರಾಣಿ ಮುಖರ್ಜಿ ತನ್ನ ಸ್ವಂತ ಮಗಳಾದ ಶೀನಾ ಬೋರಾಳನ್ನು  ಹತ್ಯೆಗೈದಿದ್ದಳು. ಪ್ರಕರಣದಲ್ಲಿ ದಿನಕಳದಂತೆ ಹಲವು ಟ್ವಿಸ್ಟ್ ಗಳು ಎದುರಾಗಿದ್ದವು. ಇಡೀ ದೇಶದ ಗಮನ ಸೆಳೆದಿದ್ದ ಈ ಪ್ರಕರಣ ಬಾಲಿವುಡ್ ಚಿತ್ರವನ್ನು ನೆನಪಿಸುವಂತಿದೆ. ಪ್ರಸ್ತುತ ಪ್ರಕರಣ ಸಂಬಂಧ ಶೀನಾ  ಬೋರಾಳ ತಾಯಿ ಇಂದ್ರಾಣಿ ಮುಖರ್ಜಿ, ಆಕೆಯ ಮಾಜಿ ಗಂಡ ಸಂಜೀವ್ ಖನ್ನಾ ಮತ್ತು ಇಂದ್ರಾಣಿ ಮಾಜಿ ಕಾರು ಚಾಲಕ ಶ್ಯಾಮ್ ವರ್ ರೈ ವಿರುದ್ಧ ಅಪಹರಣ, ಕೊಲೆ, ಕ್ರಿಮಿನಲ್ ಸಂಚು, ಸಾಕ್ಷ್ಯಾಧಾರ ನಾಶ  ಸೇರಿದಂತೆ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.
ರಾಜ್ಯದ ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನಿಸಿದ ಕಬ್ಬನ್ ಪಾರ್ಕ್ ಗ್ಯಾಂಗ್ ರೇಪ್ ಪ್ರಕರಣ
ನವೆಂಬರ್ 11 ಬುಧವಾರ ರಾತ್ರಿ ಟೆನ್ನಿಲ್ ಕಲಿಕೆಗಾಗಿ ಬೆಂಗಳೂರಿಗೆ ಆಗಮಿಸಿದ್ದ ಮಹಿಳೆಯೊಬ್ಬಳನ್ನು ಕಬ್ಬನ್ ಪಾರ್ಕಿನ ಇಬ್ಬರು ಭದ್ರತಾ ಸಿಬ್ಬಂದಿಗಳೇ ಸಾಮೂಹಿಕ ಅತ್ಯಾಚಾರವೆಸಗಿದ್ದ ಪ್ರಕರಣ ರಾಜ್ಯಾದ್ಯಂತ  ಸುದ್ದಿಯಾಗಿತ್ತು. ಮೂಲತಃ ತುಮಕೂರಿನವಳಾದ ಮಹಿಳೆ (30) ಬೆಂಗಳೂರಿನ ಟೆನ್ನಿಸ್ ಕ್ಲಬ್ ಗೆ ಸದಸ್ಯತ್ವ ಸ್ಥಾನ ಪಡೆಯಲು ಆಗಮಿಸಿದ್ದಳು. ಅಲ್ಲಿ ಎಲ್ಲಾ ಕೆಲಸ ಕಾರ್ಯಗಳು ಮುಗಿಯುವುದು ತಡವಾದ ಕಾರಣ  ಅಲ್ಲಿನ ಭದ್ರತಾ ಸಿಬ್ಬಂದಿ ಬಳಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಡಬೇಕೆಂದು ಕೇಳಿದ್ದಾಳೆ. ಇದನ್ನೇ ಬಂಡವಾಳವನ್ನಾಗಿಸಿಕೊಂಡ ಅವರು ಆಕೆಯ ಮೇಲೆ  ಅತ್ಯಾಚಾರ ಎಸಗಿದ್ದರು. ಪ್ರಕರಣ ಸಂಬಂಧ ಇಬ್ಬರೂ  ಭದ್ರತಾ ಸಿಬ್ಬಂದಿಗಳನ್ನು ಬಂಧಿಸಿರುವ ಕಬ್ಬನ್ ಪಾರ್ಕ್ ಪೊಲೀಸರು ಅವರನ್ನು 376ರ ಪೋಕ್ಸೋ ಕಾಯ್ದೆ ಅಡಿ ಬಂಧಿಸಿದ್ದಾರೆ.
1993 ಮುಂಬೈ ಸ್ಫೋಟ ಪ್ರಕರಣ ಅಪರಾಧಿ ಯಾಕೂಬ್ ಮೆಮನ್ ಗೆ ಗಲ್ಲು
ಯಾಕೂಬ್ ಅಬ್ದುಲ್ ರಜಾಕ್ ಮೆಮನ್ 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ರೂವಾರಿ. ಟಾಡಾ ಪ್ರಕರಣದಲ್ಲಿ 1994ರಲ್ಲಿ ಕಠ್ಮಂಡುವಿನಲ್ಲಿ ಬಂಧಿತನಾಗಿದ್ದ ಯಾಕೂಬ್ ಮೆಮನ್ ಪ್ರಕರಣ  ನ್ಯಾಯಾಲಯದಲ್ಲಿ ವರ್ಷಾನುಗಟ್ಟಲೆ ವಿಚಾರಣೆ ನಡೆಯಿತಾದರೂ ಅಂತಿಮವಾಗಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಕ್ಷಮಾದಾನ ಅರ್ಜಿಯನ್ನು ತಿರಸ್ಕರಿಸುವುದರೊಂದಿಗೆ ಆತನಿಗೆ ಗಲ್ಲು ಶಿಕ್ಷೆ ಖಾಯಂ ಆಯಿತು.  2015ರ ಜುಲೈ 31 ರಂದು ಮಹಾರಾಷ್ಟ್ರದ ನಾಗಪುರದಲ್ಲಿರುವ ಕೇಂದ್ರ ಕಾರಾಗೃಹದಲ್ಲಿ ಯಾಕೂಬ್ ನನ್ನು ಗಲ್ಲಿಗೇರಿಸಲಾಗಿತ್ತು. ಈತನ ಸಹೋದರ ಟೈಗರ್ ಮೆಮನ್ ಇಂದಿಗೂ ತಲೆಮರೆಸಿಕೊಂಡಿದ್ದು, ಆತನ  ಬಂಧನಕ್ಕೆ ಬಲೆ ಬೀಸಲಾಗಿದೆ.
ಭೂಗತ ಪಾತಕಿ ಚೋಟಾ ರಾಜನ್ ಬಂಧನ..!
ನೂರಾರು ಕೊಲೆ ಪ್ರಕರಣದಲ್ಲಿ ಭಾಗಿಯಾಗಿ ಭಾರತೀಯ ಪೊಲೀಸರಿಂದ ರೆಡ್ ಕಾರ್ನರ್ ನೊಟಿಸ್ ಪಡೆದಿದ್ದ ಭೂಗತ ಪಾತಕಿ ಚೋಟಾ ರಾಜನ್ ನನ್ನು ಇಂಡೋನೇಷ್ಯಾ ಪೊಲೀಸರು ಕಳೆದ ಅಕ್ಟೋಬರ್ ನಲ್ಲಿ  ಬಂಧಿಸಿದ್ದರು. ಸಿಡ್ನಿಯಿಂದ ಬಾಲಿ ಬೀಚ್ ರೆಸಾರ್ಟ್ ಗೆ ರಾಜನ್ ಆಗಮಿಸಿರುವ ಕುರಿತು ಮಾಹಿತಿ ಪಡೆದ ಇಂಡೋನೇಷ್ಯಾ ಪೊಲೀಸರು ಕೂಡಲೇ ಕಾರ್ಯಾಚರಣೆ ನಡೆಸಿ 55 ವರ್ಷದ ಭೂಗತ ಪಾತಕಿ ಛೋಟಾ  ರಾಜನ್ ಅಲಿಯಾಸ್ ರಾಜೇಂದ್ರ ಸದಾಶಿವ ನಿಖಲ್ಜೆಯನ್ನು ಬಂಧಿಸಿದರು.ವಿವಿಧ ಪಾತಕ ಕಾರ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ರಾಜನ್ ನೂರಾರು ಹತ್ಯಾ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಭಾರತದ  ಪೊಲೀಸರಿಗೆ ಹೆದರಿ ವಿದೇಶಕ್ಕೆ ಹಾರಿದ್ದ  ಛೋಟಾರಾಜನ್ ನನ್ನು ಬಂಧಿಸಿಲು 1995ರಲ್ಲಿ ಕೇಂದ್ರ ಸರ್ಕಾರ ಮತ್ತು ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಹೊರಡಿಸಿತ್ತು. ಇದಾಗ್ಯೂ ವಿವಿಧ ವೇಷ ಧರಿಸಿ  ತಲೆಮರೆಸಿಕೊಂಡಿದ್ದ  ರಾಜನ್ ನಾನಾ ದೇಶಗಳಿಗೆ ಪರಾರಿಯಾಗುತ್ತಿದ್ದ.
ಸಂಚಲನ ಮೂಡಿಸಿದ ಕಲಾವಿದೆ ಹೇಮಾ ಕೊಲೆ
ಕಲಾವಿದೆ ಹೇಮಾ ಉಪಾಧ್ಯಾಯ, ಆಕೆಯ ವಕೀಲ ಹರೀಶ್ ಭಂಭಾನಿ ಜೋಡಿಕೊಲೆ ಪ್ರಕರಣ ಇದೀಗ ದೇಶದಲ್ಲೇ ಸಂಚಲನ ಮೂಡಿಸಿದೆ. ಪ್ರಕರಣ ಸಂಬಂಧ ಪೊಲೀಸರು ಈಗಾಗಲೇ ಟ್ರಕ್ ಡ್ರೈವರ್, ಇಬ್ಬರು ವೇರ್  ಹೌಸ್ ನೌಕರರು, ಸಾಧು ರಾಜ್‍ಭರ್ ಈ ನಾಲ್ವರನ್ನು ಬಂಧಿಸಿದ್ದರೂ, ಇನ್ನೂ ಮೂವರನ್ನು ಶಂಕಿತರೆಂದು ಗುರುತಿಸಲಾಗಿದೆ. ಕಲಾಕೃತಿಗಳ ರು.5ಲಕ್ಷ ರುಪಾಯಿ ವಿಷಯದಲ್ಲಿ ಹೇಮಾ ಮತ್ತು ಗೋದಾಮು ಮಾಲೀಕ  ವಿದ್ಯಾಧರ್ ರಾಜ್‍ಭಾರ್ ನಡುವೆ ಜಗಳವಾದದ್ದು, ಕೊಲೆಯಾಗುವ ದಿನ ಸಂಜೆ 6.30ಗೆ ಗೋಟು ಹೇಮಾಗೆ ಮಾಡಿದ್ದೇ ಕೊನೆಯ ಫೋನ್ ಕರೆ ಆಗಿರುವುದು ಅನುಮಾನಕ್ಕೆ ಪುಷ್ಟಿ ನೀಡಿದೆ. ಆದರೆ ಈ ಗೋಟು  ಎಲ್ಲಿದ್ದಾನೆಂದು ಇನ್ನೂ ಪತ್ತೆಯಾಗಿಲ್ಲ.
ಹಿಟ್ ಅಂಡ್ ರನ್ ಪ್ರಕರಣ ಖುಲಾಸೆಯಾದ ನಟ ಸಲ್ಮಾನ್ ಖಾನ್
2015 ವರ್ಷ ಯಾರಿಗೆ ಎಷ್ಟು ಖುಷಿ ನೀಡಿದೆಯೋ ತಿಳಿದಿಲ್ಲ. ಆದರೆ ಬಾಲಿವುಡ್ ಕೆಲ ನಿರ್ಮಾಪಕರಿಗೆ ಮತ್ತು ಸಲ್ಮಾನ್ ಖಾನ್ ಅಭಿಮಾನಿಗಳಿಗೆ ಮಾತ್ರ ಭಾರಿ ಖುಷಿ ನೀಡಿದೆ. ಏಕೆಂದರೆ ದಶಕದಿಂದ ನಟ ಸಲ್ಮಾನ್  ಖಾನ್ ರ ಬೆನ್ನು ಬಿಡದೇ ಅಂಟಿಕೊಂಡಿದ್ದ ಹಿಟ್ ಅಂಡ್ ರನ್ ಪ್ರಕರಣಕ್ಕೆ ಬಾಂಬೇ ಹೈಕೋರ್ಟ್ ತಾರ್ಕಿಕವಾಗಿ ಅಂತ್ಯವಾಡಿದೆ. ಪ್ರಕರಣ ಸಂಬಂಧ ಪ್ರಾಸಿಕ್ಯೂಷನ್ ಸಲ್ಮಾನ್ ಅಪರಾಧಿ ಎಂದು ಸಾಬೀತು  ಪಡಿಸುವಲ್ಲಿ ವಿಫಲವಾಗಿದೆ ಎಂದು ಹೇಳಿದ ಹೈಕೋರ್ಟ್ ಆತನನ್ನು ನಿರಪರಾಧಿ ಎಂದು ಘೋಷಣೆ ಮಾಡಿದೆ. ಅಲ್ಲದೆ ಪ್ರಕರಣ ಸಂಬಂಧ ಪೊಲೀಸರು ನೀಡಿದ ಸಾಕ್ಷ್ಯಾಧಾರಗಳು ಸರಿಇಲ್ಲ ಎಂದು ನ್ಯಾಯಾಲಯ  ಅಭಿಪ್ರಾಯಪಟ್ಟಿದೆ.
ಆತ್ಮಹತ್ಯೆಗೆ ಶರಣಾದ ದಕ್ಷ ಐಎಎಸ್ ಅಧಿಕಾರಿ ಡಿ.ಕೆ. ರವಿ
ಕೋಲಾರ ಮರಳು ಮಾಫಿಯಾವನ್ನು ತಮ್ಮ ದಕ್ಷತೆ ಹಾಗೂ ಪ್ರಾಮಾಣಿಕವಾಗಿ ಎದುರಿಸಿದ ದಕ್ಷ ಐಎಎಸ್ ಅಧಿಕಾರಿ ಡಿಕೆರವಿ ಬೆಂಗಳೂರಿನ ತಮ್ಮ ಫ್ಲಾಟ್ ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಇದು ಇಡೀ ರಾಜ್ಯವನ್ನೇ  ತಲ್ಲಣಿಸಿದ ಪ್ರಕರಣವಾಗಿದ್ದು, ಕೇವಲ ರಾಜ್ಯಮಾತ್ರವಲ್ಲದೇ ದೇಶದ ಕೆಲ ಐಎಎಸ್ ಅಧಿಕಾರಿಗಳು ಡಿಕೆರವಿ ಸಾವಿಗೆ ಸ್ಪಂಧಿಸಿದ್ದರು. ರವಿ ಸಾವು ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಶಂಕೆ ವ್ಯಕ್ತವಾಗಿತ್ತು.  ಅಂತಿಮವಾಗಿ ಪ್ರಕರಣವನ್ನು ಬೇಧಿಸಿದ ಸಿಬಿಐ ಅಧಿಕಾರಿಗಳು ರವಿ ಸಾವು ಆತ್ಮಹತ್ಯೆ ಎಂದು ವರದಿ ನೀಡುವುದರೊಂದಿಗೆ ಪ್ರಕರಣದೊಂದಿಗೆ ತಳುಕು ಹಾಕಿಕೊಂಡಿದ್ದ ಹಲವು ಊಹಾಪೋಹಗಳಿಗೆ ತೆರೆಬಿದ್ದಿತು.
ಪೊಲೀಸ್ ಇಲಾಖೆಯ ಮುಜುಗರಕ್ಕೆ ಕಾರಣವಾದ ಒಂದಂಕಿ ಲಾಟರಿ ಹಗರಣ
ವರ್ಷಗಳ ಹಿಂದೆ ನಿಷೇಧಕ್ಕೆ ಒಳಗಾದ ಒಂದಂಕಿ ಲಾಟರಿ ಹಗರಣ 2015ರಲ್ಲಿ ಮತ್ತೆ ಭಾರಿ ಸುದ್ದಿಗೆ ಕಾರಣವಾಯಿತು. ದಶಕಗಳ ಹಿಂದೆಯೇ ಕರ್ನಾಟಕದಲ್ಲಿ ಲಾಟರಿ ನಿಷೇಧವಿದ್ದರೂ ಹೊರಗಡೆ ಮುದ್ರಿಸಿ ರಾಜ್ಯದಲ್ಲಿ  ಅಕ್ರಮವಾಗಿ ಲಾಟರಿ ಮಾರಲಾಗುತ್ತಿತ್ತು. ಸ್ಥಳೀಯ ಪೊಲೀಸರಿಗೆ ಮಾಹಿತಿ ಇದ್ದರೂ, ಮೇಲಧಿಕಾರಿಗಳ ಸೂಚನೆಯಂತೆ ಸುಮ್ಮನಿದ್ದರು. ಇದಕ್ಕಾಗಿ ಪೊಲೀಸ್‌ ಇಲಾಖೆಗೆ ಪ್ರತಿ ತಿಂಗಳೂ "ಕಾಣಿಕೆ' ಸಲ್ಲುತ್ತಿತ್ತು ಎಂದು  ಆರೋಪಿಸಲಾಗಿತ್ತು. ಆದರೆ ಇನ್ನೂ ಅಚ್ಚರಿ ಎಂದರೆ ಈ ಹೈ ಪ್ರೊಫೈಲ್ ಪ್ರಕರಣದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ದಕ್ಷ ಅಧಿಕಾರಿಗಳು ಎಂದು ಖ್ಯಾತಿಗಳಿಸಿದ್ದ ಅಲೋಕ್ ಕುಮಾರ್ ರಂತಹ ಅಧಿಕಾರಿಗಳೇ  ಲಾಭ ಪಡೆದ ಆರೋಪದ ಮೇಲೆ ಅಮಾನತುಗೊಂಡಿದ್ದ ಪ್ರಕರಣದ ಗಂಭೀರತೆಯನ್ನು ತೋರಿಸುತ್ತಿತ್ತು. ಪ್ರಕರಣ ಸಂಬಂಧ ಸಿಐಡಿ ನೀಡಿದ್ದ ವರದಿಯನ್ವಯ ಅಮಾನತುಗೊಂಡಿದ್ದ ಅಲೋಕ್ ಕುಮಾರ್ ಅವರು  ಪ್ರಸ್ತುತ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.
ಉಪಹಾರ್ ಬೆಂಕಿ ದುರಂತ: 60 ಕೋಟಿ ದಂಡ ಕಟ್ಟಿದ ಅನ್ಸಾಲ್ ಸಹೋದರರು
ಈ ಪ್ರಕರಣ ಕೂಡ ಹಳೆಯ ಪ್ರಕರಣವೇ ಆದರೂ, ಪ್ರಕರಣ ಸಂಬಂಧ ತೀರ್ಪು ಹೊರಬಿದ್ದಿದ್ದು 2015ರಲ್ಲಿ. 1997ರಲ್ಲಿ ಉಪಹಾರ ಚಿತ್ರಮಂದಿರದಲ್ಲಿ ನಡೆದ ಅಗ್ನಿ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು  ನೀಡಿದ್ದ ಸುಪ್ರೀಂ ಕೋರ್ಟ್ ಚಿತ್ರಮಂದಿರದ ಮಾಲೀಕರಾದ ಅನ್ಸಾಲ್ ಸಹೋದರರಿಗೆ ಬರೊಬ್ಬರಿ 60 ಕೋಟಿ ದಂಡವಿಧಿಸಿತ್ತು. 1997 ಜೂನ್ 13ರಂದು ಉಪಹಾರ್ ಚಿತ್ರ ಮಂದಿರದಲ್ಲಿ ನಡೆದ ಅಗ್ನಿ ದುರಂತದಲ್ಲಿ   59 ಮಂದಿ ಸಾವನ್ನಪ್ಪಿ, 100 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಚಿತ್ರಮಂದಿರದಲ್ಲಿ ಅಗ್ನಿ ನಿಯಂತ್ರಕ ಸಾಧನಗಳಿಲ್ಲದೇ ಇದ್ದುದರಿಂದ ದುರಂತದಲ್ಲಿ ಸಾವಿನ ಸಂಖ್ಯೆ ಹೆಚ್ಚಾಯಿತು ಎಂದು  ನ್ಯಾಯಾಲಯದಲ್ಲಿ ಆರೋಪಿಸಲಾಗಿತ್ತು.
2015ರಲ್ಲಿ ಗತಿಸಿದ ಮತ್ತಷ್ಟು ಸುದ್ದಿಗಳ ಸಂಪೂರ್ಣ ವಿವರ ಹಿನ್ನೋಟ-2015 ವಿಶೇಷ ಪುಟದಲ್ಲಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com