
ಅಗ್ನಿ-1 ಕ್ಷಿಪಣಿ ಯಶಸ್ವಿ ಪರೀಕ್ಷೆ
ಸ್ವದೇಶಿ ನಿರ್ಮಿತ ಅಗ್ನಿ-1 ಕ್ಷಿಪಣಿಯನ್ನು ಕಳೆದ ನವೆಂಬರ್ 22ರಂದು ಒಡಿಶಾದ ಅಬ್ದುಲ್ ಕಲಾಂ ಐಲ್ಯಾಂಡ್(ವೀಲರ್ ಐಲ್ಯಾಂಡ್)ನ ಸಂಚಾರಿ ಉಡಾವಣಾ ವಾಹನದಿಂದ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಸ್ವದೇಶಿ ನಿರ್ಮಿತ ಅಗ್ನಿ-1 ಕ್ಷಿಪಣಿ ಪ್ರತಿ ಸೆಕೆಂಡ್ ಗೆ 2.5 ಕಿ.ಮೀ ವೇಗದಲ್ಲಿ ಚಲಿಸಬಲ್ಲ ಸಾಮರ್ಥ್ಯ ಹೊಂದಿದೆ. 9 ನಿಮಿಷ 36 ಸೆಕೆಂಡ್ ನಲ್ಲಿ 700 ಕಿ.ಮೀ ಕ್ರಮಿಸಿ ಅಪ್ಪಳಿಸುತ್ತದೆ. ಅಗ್ನಿ ಕ್ಷಿಪಣಿ 12 ಟನ್ ತೂಕವಿದ್ದು, 15 ಮೀಟರ್ ಉದ್ದವಿದೆ.
ಪೃಥ್ವಿ-೨ ಜೋಡಿ ಕ್ಷಿಪಣಿ ಯಶಸ್ವಿ ಪರೀಕ್ಷೆ
ದೇಶೀಯವಾಗಿ ಅಭಿವೃದ್ಧಿಪಡಿಸಿದ ಪೃಥ್ವಿ-೨ ಜೋಡಿ ಕ್ಷಿಪಣಿಯನ್ನು ನವೆಂಬರ್ 21ರಂದು ಒರಿಸ್ಸಾದ ಚಂಡಿಪುರ್ ನಿಂದ ಯಶಸ್ವಿಯಾಗಿ ಪರೀಕ್ಷಿಸಲಾಗಿತ್ತು. ಮಧ್ಯಮ ವ್ಯಾಪ್ತಿಯ ನೆಲದಿಂದ ನೆಲಕ್ಕೆ ಹಾರುವ ಕ್ಷಿಪಣಿಯು 350 ಕಿ.ಮೀ ದೂರದ ಸಾಮರ್ಥ್ಯವನ್ನು ಹೊಂದಿದ್ದು, 500ರಿಂದ ಸಾವಿರ ಕೆಜಿ ತೂಕದ ಶಸ್ತ್ರಾಸ್ತ್ರವನ್ನು ಒಯ್ಯುವ ಸಾಮರ್ಥ್ಯವನ್ನು ಹೊಂದಿದೆ.
ಬ್ರಹ್ಮೋಸ್ 2 ಕ್ಷಿಪಣಿ ಯಶಸ್ವಿ ಪರೀಕ್ಷೆ
290 ಕಿ.ಮೀ ಸಾಮರ್ಥ್ಯದ ಬ್ರಹ್ಮೋಸ್ 2 ಕ್ಷಿಪಣಿಯನ್ನು ಕಳೆದ ಮೇ ತಿಂಗಳಲ್ಲಿ ಯಶಸ್ವಿಯಾಗಿ ಉಡಾಯಿಸಲಾಗಿತ್ತು. ಬ್ರಹ್ಮೋಸ್ 2 ಖಂಡಾಂತರ ಕ್ಷಿಪಣಿಯಾಗಿದ್ದು, 200-300 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ.
ಕೆ4 ಕ್ಷಿಪಣಿ ಪರೀಕ್ಷೆ
ಭಾರತದ ಬಹು ನಿರೀಕ್ಷಿತ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿ ಕೆ4 ಅನ್ನು ಕಳೆದ ಮಾರ್ಚ್ ತಿಂಗಳಲ್ಲಿ ಯಶಸ್ವಿಯಾಗಿ ಪರೀಕ್ಷೆ ನಡೆಸಲಾಗಿತ್ತು. ವಿಶಾಖಪಟ್ಟದಣ ಕರಾವಳಿ ಪ್ರದೇಶದಲ್ಲಿರುವ ಬಂಗಾಳಕೊಲ್ಲಿ ಸಮುದ್ರದೊಳಗೆ ರಹಸ್ಯವಾಗಿ ಈ ಕ್ಷಿಪಣಿಯನ್ನು ಪರೀಕ್ಷೆ ನಡೆಸಲಾಗಿತ್ತು. ಈ ಜಲಾಂತರ್ಗಾಮಿ ಖಂಡಾಂತರ ಕ್ಷಿಪಣಿಯು ಬರೊಬ್ಬರಿ 3500 ಕಿಮೀ ದೂರ ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ.
ಬರಾಕ್-8 ಕ್ಷಿಪಣಿ ಯಶಸ್ವಿ ಪರೀಕ್ಷೆ
ನೆಲದಿಂದ-ಗಾಳಿಗೆ ಜಿಗಿಯುವ ಬರಾಕ್ 8 ಕ್ಷಿಪಣಿಯನ್ನು ಭಾರತ ಕಳೆದ ಸೆಪ್ಟೆಂಬರ್ 8ರಂದು ಯಶಸ್ವಿಯಾಗಿ ಪರೀಕ್ಷೆ ನಡೆಸಿತ್ತು. ಒರಿಸ್ಸಾದ ಸಮುದ್ರ ತೀರದ ರಕ್ಷಣಾ ಇಲಾಖೆಯ ನೆಲೆಯಿಂದ ಕ್ಷಿಪಣಿ ಪರೀಕ್ಷೆ ನಡೆಸಲಾಗಿದ್ದು, 70 ಕಿಲೋಮೀಟರ್ ನಿಂದ 90 ಕಿಲೋಮೀಟರ್ ತ್ರಿಜ್ಯದಲ್ಲಿ ಗುರಿಯನ್ನು ಹೊಡೆಯುವ ಸಾಮರ್ಥ್ಯವನ್ನು ಈ ಕ್ಷಿಪಣಿ ಹೊಂದಿದ್ದು, ವಾಯುದಾಳಿಯ ಸಮಯದಲ್ಲಿ ರಕ್ಷಣೆಗಾಗಿ ಬಳಸಲು ಅಭಿವೃದ್ಧಿಪಡಿಸಲಾಗಿದೆ. ಪರಮಾಣು ಶಸ್ತ್ರಾಸ್ತ್ರವನ್ನು ಹೊರುವ ಸಾಮರ್ಥ್ಯ ಹೊಂದಿರುವ ಈ ಕ್ಷಿಪಣಿ 4.5 ಮೀಟರ್ ಉದ್ದವಿದ್ದು, 2.7 ಟನ್ ಕೆಜಿ ತೂಗುತ್ತದೆ.
ಸ್ವದೇಶಿ ನಿರ್ಮಿತ 'ಐಎನ್ಎಸ್ ಚೆನ್ನೈ' ನೌಕಾಪಡೆಗೆ ಸೇರ್ಪಡೆ
ಸ್ವದೇಶಿ ನಿರ್ಮಿತ ಮತ್ತು ವಿನ್ಯಾಸದ ಕೋಲ್ಕತಾ ದರ್ಜೆಯ ನಿರ್ದೇಶಿತ ಕ್ಷಿಪಣಿ ನಾಶಕ ಐಎನ್ಎಸ್ ಚೆನ್ನೈ ಅನ್ನು ನವೆಂಬರ್ 21ರಂದು ಸೇನಾಪಡೆಗೆ ಸೇರ್ಪಡೆಗೊಳಿಸಲಾಯಿತು. ಐಎನ್ಎಸ್ ಚೆನ್ನೈಯನ್ನು ಮುಂಬೈಯ ಮಡಗೌಂವ್ ಡಾಕ್ ಶಿಪ್ ಬಿಲ್ಡರ್ಸ್ ಲಿಮಿಟೆಡ್ ವಿನ್ಯಾಸಗೊಳಿಸಿದೆ. ಭಾರತಲ್ಲಿ ನಿರ್ಮಾಣಗೊಂಡ ಅತಿ ದೊಡ್ಡ ಕ್ಷಿಪಣಿ ನಾಶಕ ಹಡಗಾಗಿದ್ದು 164 ಮೀಟರ್ ಉದ್ದ ಮತ್ತು 7,500 ಟನ್ ತೂಕವನ್ನು ಹೊಂದಿದೆ.
ಸ್ವದೇಶಿ ನಿರ್ಮಾಣದ ರುಸ್ತಮ್-2 ಡ್ರೋನ್ ಯಶಸ್ವಿ ಹಾರಾಟ
ರುಸ್ತಮ್-2 ಮಾನವ ರಹಿತ ಯುದ್ಧ ವಿಮಾನದ ಪರೀಕ್ಷಾರ್ಥ ಹಾರಾಟವನ್ನು ಕಳೆದ ನವೆಂಬರ್ 8ರಂದು ಯಶಸ್ವಿಯಾಗಿ ನಡೆಸಲಾಗಿತ್ತು. ರುಸ್ತಮ್-2 ವಿಮಾನದ ಮೊದಲ ಹಾರಾಟ ಪರೀಕ್ಷೆಯನ್ನು ಚಿತ್ರದುರ್ಗದ ಚಳ್ಳಕೆರೆ ವರವು ಕಾಲವಿನ ವೈಮಾನಿಕ ಪರೀಕ್ಷಾ ತಾಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು. ಭೂ ಸೇನೆ, ವಾಯು ಸೇನೆ ಹಾಗೂ ನೌಕಾ ಪಡೆಗಳ ಗುಪ್ತಚರ ಚಟುವಟಿಕೆಗಳು ಹಾಗೂ ದಾಳಿಗೆ ಇದು ಸಹಕಾರಿಯಾಗಲಿದೆ. ಇನ್ನು ರುಸ್ತಮ್-2 ಸತತ 25 ತಾಸು ಹಾರಾಟ ನಡೆಸುವ ಸಾಮರ್ಥ್ಯ ಹೊಂದಿದೆ. ಹಗಲು ರಾತ್ರಿ ವೀಕ್ಷಣೆಗೆ ಸಾಧ್ಯವಿರುವ ಕ್ಯಾಮೆರಾ, ರೆಡಾರ್ ಹಾಗೂ ಶಸ್ತ್ರಾಸ್ತ್ರಗಳು ಇದರಲ್ಲಿವೆ. ಪ್ರಾಕೃತಿಕ ವಿಕೋಪಗಳ ಸಂದರ್ಭದಲ್ಲಿ ಇದರ ನೆರವು ಪಡೆಯಬಹುದು.
ಪಾಕಿಸ್ತಾನದ ಎಲ್ಲ ಪ್ರದೇಶಗಳನ್ನೂ ತಲುಪುವ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ದಿ!
ಗಡಿಯಲ್ಲಿ ತಂಟೆ ಮಾಡುತ್ತಿರುವ ಪಾಕಿಸ್ತಾನಕ್ಕೆ ಭಾರತ ಕಠಿಣ ಎಚ್ಚರಿಕೆ ನೀಡಲು ಮುಂದಾಗಿದ್ದು, ಪಾಕಿಸ್ತಾನ ದೇಶದ ಮೂಲೆ ಮೂಲೆಯನ್ನೂ ತಲುಪ ಬಲ್ಲ ಬ್ರಹ್ಮೋಸ್ ಕ್ಷಿಪಣಿಗಳನ್ನು ಅಭಿವೃದ್ಧಿ ಪಡಿಸಲು ರಷ್ಯಾದೊಂದಿಗೆ ಭಾರತ ಕಳೆದ ಅಕ್ಟೋಬರ್ ನಲ್ಲಿ ಒಪ್ಪಂದ ಮಾಡಿಕೊಂಡಿದೆ. ಭಾರತ ಮತ್ತು ರಷ್ಯಾ ದೇಶಗಳ ನಡುವಿನ ಸ್ನೇಹ ಸಂಬಂಧದ ಪ್ರತೀಕವಾಗಿರುವ ಬ್ರಹ್ಮೋಸ್ ಕ್ಷಿಪಣಿ ಅಭಿವೃದ್ಧಿಯನ್ನು ಮತ್ತಷ್ಟು ಅಭಿವೃದ್ಧಿ ಪಡಿಸಲು ಉಭಯ ದೇಶಗಳು ನಿರ್ಧರಿಸಿದ್ದು, 600 ಕಿ.ಮೀ ಅಥವಾ ಅದಕ್ಕಿಂತಲೂ ಹೆಚ್ಚು ದೂರ ಅಣ್ವಸ್ತ್ರ ಸಿಡಿತಲೆಯನ್ನು ಹೊತ್ತು ಕ್ರಮಿಸಬಲ್ಲ ಅತ್ಯಾಧುನಿಕ ಬ್ರಹ್ಮೋಸ್ ಕ್ಷಿಪಣಿ ತಯಾರು ಮಾಡಲು ರಷ್ಯಾ ಭಾರತಕ್ಕೆ ಸಹಕಾರ ನೀಡಲಿದೆ. ಪ್ರಸ್ತುತ ರಷ್ಯಾ ಮತ್ತು ಭಾರತ ತಯಾರಿಸುತ್ತಿರುವ ಈ ಬ್ರಹ್ಮೋಸ್ ಕ್ಷಿಪಣಿಗಳು ಪಾಕಿಸ್ತಾನದ ಯಾವುದೇ ಮೂಲೆಯನ್ನು ತಲುಪುವ ಸಾಮರ್ಥ್ಯ ಹೊಂದಿದೆ ಎಂದು ಹೇಳಲಾಗುತ್ತಿದೆ.
ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೊರ್ಮುಗಾವೋ ಗೆ ಚಾಲನೆ
ಭಾರತೀಯ ನೌಕಾದಳದ ಎರಡನೇ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೊರ್ಮುಗಾವೋ ಗೆ ಸೆಪ್ಟೆಂಬರ್ 17 ರಂದು ಚಾಲನೆ ನೀಡಲಾಯಿತು. ಮಜಗಾಂವ್ ಡಾಕ್ ಲಿಮಿಟೆಡ್ (ಎಂಡಿಎಲ್) ನಿರ್ದೇಶಿತ ಕ್ಷಿಪಣಿ ನಾಶಕ ಯುದ್ಧ ನೌಕೆ ಐಎನ್ಎಸ್ ಮೊರ್ಮುಗಾವೋ ನ್ನು ತಯಾರಿಸಿದ್ದು, ಶೇ.60 ರಷ್ಟು ಸ್ವದೇಶೀ ನಿರ್ಮಿತವಾಗಿದೆ. ರಹಸ್ಯವಾಗಿ ಕಾರ್ಯಾಚರಿಸುವ ವ್ಯವಸ್ಥೆ ಹೊಂದಿರುವ ಮೊರ್ಮುಗಾವೊ ಯುದ್ಧ ನೌಕೆಯನ್ನು ರು. 7,000 ಕೋಟಿ ವೆಚ್ಚದಲ್ಲಿ 15ಬಿ ಯೋಜನೆ ಅಡಿ ನಿರ್ಮಿಸಲಾಗಿದ್ದು ನೌಕೆಯು 2020ರ ವೇಳೆಗೆ ಸೇವೆಗೆ ಲಭ್ಯವಾಗಲಿದೆ. 163.2 ಮೀಟರ್ ಉದ್ದ, 7, 300 ಟನ್ ತೂಕವಿರುವ ಐಎನ್ಎಸ್ ಮೊರ್ಮುಗಾವೋ 30 ನಾಟ್ ಗರಿಷ್ಠ ವೇಗ ಹಾಗೂ 4,000 ನಾಟಿಕಲ್ ಮೈಲಿ ಸಾಮರ್ಥ್ಯವನ್ನು ಹೊಂದಿದೆ.
ವರುಣಾಸ್ತ್ರ ಸೇನೆಗೆ ಸೇರ್ಪಡೆ
ಸ್ವದೇಶಿ ನಿರ್ಮಿತ ಜಲಾಂತರ್ಗಾಮಿ ನೌಕಾ ವಿರೋಧಿ ಕ್ಷಿಪಣಿ ವರುಣಾಸ್ತ್ರವನ್ನು ಜೂನ್ ತಿಂಗಳಿನಲ್ಲಿ ಸೇನೆಗೆ ಸೇರ್ಪಡೆಗೊಳಿಸಲಾಗಿತ್ತು. ವರುಣಾಸ್ತ್ರ ಸಂಪೂರ್ಣ ಭಾರತದಲ್ಲೇ ನಿರ್ಮಾಣವಾಗಿದ್ದು, ಡಿಆರ್ ಡಿಒ ಮತ್ತು ನೌಕಾ ರಕ್ಷಣಾ ಪರಿಕರ ಸಂಶೋಧನಾ ಸಂಸ್ಥೆಗಳು ಜಂಟಿಯಾಗಿ ತಯಾರಿಸಿದ ಕ್ಷಿಪಣಿಯಾಗಿದೆ. ಸುಮಾರು 250 ಕಿ.ಮೀ ದೂರ ಕ್ರಮಿಸುವ ಸಾಮರ್ಥ್ಯ ಹೊಂದಿರುವ ವರುಣಾಸ್ತ್ರ ತನ್ನೊಂದಿಗೆ ಸುಮಾರು 250 ಕೆಜಿ ತೂಕದ ಸ್ಫೋಟಕಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿದೆ. ಇದರ ತೂಕ ಸುಮಾರು 1.25 ಟನ್ ಗಳಾಗಿದ್ದು, ಗಂಟೆಗೆ ಸುಮಾರು 40 ನಾಟಿಕಲ್ ಮೈಲು ವೇಗದಲ್ಲಿ ಕ್ರಮಿಸುತ್ತದೆ.
ನಾಲ್ಕನೇ ಪರೀಕ್ಷೆಯಲ್ಲೂ ಅಭೂತಪೂರ್ವ ಯಶಸ್ಸು ಕಂಡ ಅಗ್ನಿ-5
ಡಿಸೆಂಬರ್ 26ರಂದು "ದಿ ಗೇಮ್ ಚೆಂಜರ್" ಎಂದೇ ಖ್ಯಾತಿ ಪಡೆದಿರುವ ಭಾರತದ ಅತ್ಯಂತ ಪ್ರಬಲ ಮತ್ತು ಅತ್ಯಂತ ದೂರಗಾಮಿ ಕ್ಷಿಪಣಿ ಅಗ್ನಿ 5 ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಡಿಆರ್ ಡಿಒ ಈ ಪ್ರಬಲ ಅಣ್ವಸ್ತ್ರ ಕ್ಷಿಪಣಿಯನ್ನು ಸಿದ್ಧಪಡಿಸಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಒಳಗೊಂಡಂತೆ ಉತ್ತರ ಚೀನಾದ ಯಾವುದೇ ಭಾಗ ಮತ್ತು ಪಶ್ಚಿಮದಲ್ಲಿ ಯುರೋಪ್‌ನ ಕೊನೆಯ ಅಂಚಿನವರೆಗೂ ಕ್ಷಿಪಣಿಯು ತಲುಪುವ ಸಾಮರ್ಥ್ಯ ಹೊಂದಿದೆ. ಅಗ್ನಿ-5 ಮೂರು ಸ್ತರದ ಕ್ಷಿಪಣಿಯಾಗಿದ್ದು,17 ಮೀ. ಉದ್ದ ಮತ್ತು 1.5 ಟನ್ ಭಾರ ಹೊಂದಿದೆ. ಮೊದಲನೇ ಸ್ತರದ ರಾಕೆಟ್ ಎಂಜಿನ್, ಕ್ಷಿಪಣಿಯನ್ನು 40 ಕಿ.ಮೀ. ಎತ್ತರಕ್ಕೆ ಒಯ್ದರೆ, ಎರಡನೇ ಸ್ತರವು ಕ್ಷಿಪಣಿಯನ್ನು 150 ಕಿ.ಮೀ. ಎತ್ತರಕ್ಕೆ ನೂಕುತ್ತದೆ. 3ನೇ ಸ್ತರವು ಭೂಮಿಗಿಂತ 300 ಕಿ.ಮೀ. ಎತ್ತರಕ್ಕೆ ಕೊಂಡೊಯ್ಯುತ್ತದೆ. ಅಂತಿಮವಾಗಿ ಸುಮಾರು 800 ಕಿ.ಮೀ. ಎತ್ತರಕ್ಕೆ ಕ್ಷಿಪಣಿ ತಲುಪುತ್ತದೆ. ಸುಮಾರು 1 ಸಾವಿರ ಕೆಜಿ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಈ ಪ್ರಬಲ ಕ್ಷಿಪಣಿಗಿದ್ದು, ಪಾಕಿಸ್ತಾನದ ಬಹುತೇಕ ಪ್ರದೇಶಗಳು ಒಳಗೊಂಡಂತೆ ಉತ್ತರ ಚೀನಾದ ಯಾವುದೇ ಭಾಗ ಮತ್ತು ಪಶ್ಚಿಮದಲ್ಲಿ ಯುರೋಪ್‌ನ ಕೊನೆಯ ಅಂಚಿನವರೆಗೂ ಕ್ಷಿಪಣಿಯು ತಲುಪುವ ಸಾಮರ್ಥ್ಯ ಹೊಂದಿದೆ.
Advertisement