ಹಿನ್ನೋಟ 2016: ಇಸ್ರೋ ಉಪಗ್ರಹ ಉಡಾವಣೆಗಳು

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1ಇ ಯನ್ನು ಜನವರಿ 20ರಂದು ಯಶಸ್ವಿಯಾಗಿ ಉಡಾವಣೆ ನಡೆಸಿತು.
ಹಿನ್ನೋಟ 2016: ಇಸ್ರೋ ಉಪಗ್ರಹ ಉಡಾವಣೆಗಳು
ಹಿನ್ನೋಟ 2016: ಇಸ್ರೋ ಉಪಗ್ರಹ ಉಡಾವಣೆಗಳು
Updated on

ಜನವರಿ 20-ಐಆರ್ ಎನ್ ಎಸ್ ಎಸ್-1ಇ ಉಪಗ್ರಹ ಉಡಾವಣೆ
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ( ಇಸ್ರೋ) 5ನೇ ನೌಕಾಯಾನ ಉಪಗ್ರಹ ಐಆರ್ ಎನ್ಎಸ್ಎಸ್-1ಇ ಯನ್ನು ಜನವರಿ 20ರಂದು ಯಶಸ್ವಿಯಾಗಿ ಉಡಾವಣೆ ನಡೆಸಿತು. ಐಆರ್ ಎನ್ಎಸ್ಎಸ್-1 ಇ  ಉಪಗ್ರಹವನ್ನು ಪಿಎಸ್ಎಲ್ ವಿ- ಸಿ31 ಉಪಗ್ರಹ ವಾಹಕ ಯಶಸ್ವಿಯಾಗಿ ಕಕ್ಷೆ ಸೇರಿಸಿತ್ತು. -ಐಆರ್ ಎನ್ ಎಸ್ ಎಸ್ 1ಇ ಉಪಗ್ರಹ ಈಗಾಗಲೇ ಉಡಾವಣೆಯಾಗಿರುವ ಏಳು ಸರಣಿ ಉಪಗ್ರಹಗಳೊಂದಿಗೆ ಸೇರಿ ಮ್ಯಾಪಿಂಗ್  ಹಾಗೂ ಟ್ರ್ಯಾಕಿಂಗ್ ಜೊತೆಗೆ ರಸ್ತೆ, ವಾಯು ಮತ್ತು ಸಮುದ್ರ ಸಂಚಾರಕ್ಕೆ ಸಂಬಂಧಿಸಿದ ಸೇವೆಗಳನ್ನು ವಿಸ್ತರಿಸಲು ನೆರವಾಗುತ್ತಿದೆ. ಈಗಾಗಲೇ ಅಂತರಿಕ್ಷದಲ್ಲಿ ಕಾರ್ಯಾಚರಣೆಯಲ್ಲಿರುವ ಇತರ ನಾಲ್ಕು ಉಪಗ್ರಹಗಳೊಂದಿಗೆ  ಸೇರಿ ಐಆರ್ ಎನ್ ಎಸ್ ಎಸ್ 1ಇ ಕೆಲಸ ಮಾಡುತ್ತಿದೆ.

ಮಾರ್ಚ್ 10-ಐಆರ್ ಎನ್ ಎಸ್ ಎಸ್-1ಎಫ್ ಉಪಗ್ರಹ ಉಡಾವಣೆ

ಇಸ್ರೋದ ಮಹತ್ವಕಾಂಕ್ಷಿಯ ಭಾರತೀಯ ಪ್ರಾದೇಶಿಕ ಪಥದರ್ಶಕ ಉಪಗ್ರಹ ವ್ಯವಸ್ಥೆ (ಐಆರ್ಎನ್‌ಎಸ್ಎಸ್) ಸರಣಿಯ ಆರನೇ ಉಪಗ್ರಹ ಐಆರ್ ಎನ್‌ಎಸ್ಎಸ್1ಎಫ್ ಅನ್ನು ಕಳೆದ ಮಾರ್ಚ್ 10 ರಂದು ಯಶಸ್ವಿಯಾಗಿ  ಉಡಾವಣೆ ಮಾಡಲಾಯಿತು. ಪಿಎಸ್‌ಎಲ್‌ವಿ-ಸಿ32 ಉಡಾವಣಾ ವಾಹಕ ಯಶಸ್ವಿಯಾಗಿ ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹವನ್ನು ಕಕ್ಷೆಗೆ ಸೇರಿಸಿತು. ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹಅಮೆರಿಕದ ಜಿಪಿಎಸ್ ರೀತಿಯ  ವ್ಯವಸ್ಥೆಯಾಗಿದ್ದು, 1425 ಕೆ.ಜಿ. ತೂಕದ ಐಆರ್‌ಎನ್‌ಎಸ್‌ಎಸ್‌ 1ಎಫ್ ಉಪಗ್ರಹವು 14 ವರ್ಷಗಳ ಕಾಲ ಕೆಲಸ ಮಾಡಲಿದೆ.

ಏಪ್ರಿಲ್ 28-ಐಆರ್ ಎನ್ ಎಸ್ ಎಸ್-1ಜಿ ಉಪಗ್ರಹ ಉಡಾವಣೆ
ಭಾರತದ ಮೊಟ್ಟ ಮೊದಲ ಪ್ರಾದೇಶಿಕ ದಿಕ್ಸೂಚಿ ಉಪಗ್ರಹ ವ್ಯವಸ್ಥೆಯ 7ನೇ ಮತ್ತು ಅಂತಿಮ ಉಪಗ್ರಹ ಐಆರ್​ಎನ್​ಎಸ್​ಎಸ್-1ಜಿ ಏಪ್ರಿಲ್ 28ರಂದು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. ಆಂಧ್ರ ಪ್ರದೇಶದ  ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಅಂತರಿಕ್ಷ ಕೇಂದ್ರದಿಂದ ಇಸ್ರೋ ಸಂಸ್ಥೆ ಮಹತ್ವಾಕಾಂಕ್ಷಿ ಯೋಜನೆ ಐಆರ್​ಎನ್​ಎಸ್​ಎಸ್-1ಜಿ ಯನ್ನು  ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು. ಸುಮಾರು 1,425 ಕೆ.ಜಿ. ತೂಕದ  ಐಆರ್​ಎನ್​ಎಸ್​ಎಸ್-1ಜಿ ಉಪಗ್ರಹವನ್ನು ಪಿಎಸ್​ಎಲ್​ವಿ-ಸಿ33 ರಾಕೆಟ್ ಮೂಲಕವಾಗಿ ಯಶಸ್ವಿಯಾಗಿ  ಅಂತರಿಕ್ಷಕ್ಕೆ ರವಾನಿಸಿತ್ತು. ಐಆರ್​ಎನ್​ಎಸ್​ಎಸ್-1ಜಿ ಉಪಗ್ರಹ ಐಆರ್​ಎನ್​ಎಸ್​ಎಸ್ 1ಎ, 1ಬಿ, 1ಸಿ, 1ಡಿ, 1ಇ ಮತ್ತು  1ಎಫ್  ಉಪಗ್ರಹಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು, ಭಾರತದಾದ್ಯಂತ ಪ್ರಾದೇಶಿಕ ಸಂಚಾರ ಮಾರ್ಗಸೂಚಿಗೆ ತಂತ್ರಜ್ಞಾನ ಸಹಕಾರವನ್ನು ನೀಡುತ್ತಿದೆ.

ಜೂನ್ 22-ಕಾರ್ಟೋಸ್ಯಾಟ್-2ಸಿ ಉಪಗ್ರಹ ಉಡಾವಣೆ
ಕಾರ್ಟೋಸ್ಯಾಟ್-2ಸಿ ಉಪಗ್ರಹವನ್ನು ಭಾರತ ಜೂನ್ 22ರಂದು ಉಡಾವಣೆ ಮಾಡಿತ್ತು. ಬಾಹ್ಯಾಕಾಶದಿಂದ ಭೂಮಿಯ ಮೇಲೆ ನಿಗಾವಹಿಸುವ ಕಾರ್ಟೋಸ್ಯಾಟ್ ಉಪಗ್ರಹ ಗಡಿಭಾಗ ಹಾಗೂ ಕರಾವಳಿ ಪ್ರದೇಶ, ಹವಾಮಾನ,  ಕೃಷಿ, ಭೂ ನಕ್ಷೆ ಸೇರಿದಂತೆ ಹಲವು ಮಾಹಿತಿಗಳನ್ನು ನೀಡುತ್ತಿದೆ. ರಕ್ಷಣಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿಸಲಿದ್ದು, ನೆರೆರಾಷ್ಟ್ರಗಳಿಂದ ಕ್ಷಿಪಣಿ ಉಡಾವಣೆ ಮಾಡಿದರೂ ಇದು ಮಾಹಿತಿ ನೀಡಲಿದೆ. ಇದನ್ನು ಅಹಮದಾಬಾದ್‌ನ ಸ್ಪೇಸ್  ಅಪ್ಲಿಕೇಷನ್ ಸೆಂಟರ್(ಎಸ್‌ಎಸಿ)ನಲ್ಲಿ ನಿರ್ಮಿಸಲಾಗಿದ್ದು,  690 ಕಿಲೋ ತೂಕವನ್ನು ಹೊಂದಿದೆ. ಹೈ ರೆಸಲೂಷನ್‌ನ ಫೋಟೋ ಮತ್ತು ವಿಡಿಯೋಗಳನ್ನು ಚಿತ್ರೀಕರಿಸುವ ಸಾಮರ್ಥ್ಯ ಹೊಂದಿದ್ದು, ಇದರಲ್ಲಿ 0.65 ರೆಸಲ್ಯೂಷನ್‌ನ  ಪ್ಯಾಂಕ್ರೋಮ್ಯಾಟಿಕ್  ಕ್ಯಾಮೆರಾವನ್ನು ಅಳವಡಿಸಲಾಗಿದೆ. ಇದರಿಂದ ಫೋಟೋ ಮಾತ್ರವಲ್ಲದೆ ವಿಡಿಯೋಗಳನ್ನು ರೆಕಾರ್ಡ್ ಮಾಡಿ ಕಂಪ್ರೆಸ್ ಮಾಡಿ, ಶೇಖರಿಸಲು ಹಾಗೂ ರವಾನಿಸುವುದಕ್ಕೆ ಕೂಡ ಅವಕಾಶ ಕಲ್ಪಿಸಲಾಗಿದೆ. ಈ  ಮೂಲಕ ಅಮೆರಿಕ ಮತ್ತು ಚೀನಾ ಉಪಗ್ರಹಗಳಿಗೆ ಸರಿಸಮವಾಗಿರುವ ಕಣ್ಗಾವಲು ಉಪಗ್ರಹ ಉಡಾವಣೆ ಮಾಡಿದ ಕೀರ್ತಿ ಇದೀಗ ಭಾರತದ್ದಾಗಿದೆ. ಚೀನಾ 2014ರಲ್ಲೇ 0.65 ಹೈ ರೆಸಲ್ಯೂಷನ್ ಕ್ಯಾಮೆರಾ ಹೊಂದಿರುವ ‘ಯೋಗಾನ್  24’ ಉಪಗ್ರಹ ಉಡಾವಣೆ ಮಾಡಿತ್ತು.

ಸೆಪ್ಟೆಂಬರ್ 8-ಇನ್ಸಾಟ್‌-3ಡಿಆರ್‌ ಉಪಗ್ರಹ ಉಡಾವಣೆ
ಇನ್ಸಾಟ್‌-3ಡಿಆರ್‌ ಉಪಗ್ರಹ ದೇಶೀಯವಾಗಿ ಅಭಿವೃದ್ಧಿಪಡಿಸಿದ ಹವಾಮಾನ ಮುನ್ಸೂಚನೆ ನೀಡುವ ಉಪಗ್ರಹವಾಗಿದ್ದು, ಸಾಗರದ ಮೇಲ್ಭಾಗದಲ್ಲಿ ಬೀಸುವ ಮಾರುತಗಳನ್ನು ವೀಕ್ಷಿಸುವ ಮೂಲಕ  ಚಂಡಮಾರುತವನ್ನು  ಮೊದಲೇ ಗ್ರಹಿಸಿ ಎಚ್ಚರಿಕೆ ನೀಡುತ್ತದೆ. ಈ ಹವಾಮಾನ ಉದ್ದೇಶಿತ ಉಪಗ್ರಹವನ್ನು ಕಳೆದ ಸೆಪ್ಟೆಂಬರ್ 8ರಂದು ಜಿಎಸ್‌ಎಲ್‌ವಿ- ಎಫ್05 ಉಡಾವಣಾ ವಾಹಕದ ಮೂಲಕ ಉಡಾವಣೆ ಮಾಡಲಾಗಿತ್ತು.

ಸೆಪ್ಟೆಂಬರ್ 26-ಸ್ಕಾಟ್ ಸ್ಯಾಟ್-1 ಉಪಗ್ರಹ ಉಡಾವಣೆ
ಬಹುಪಯೋಗಿ ಸ್ಕಾಟ್ ಸ್ಯಾಟ್-1 ಉಪಗ್ರಹವನ್ನು ಸೆಪ್ಟೆಂಬರ್ 26ರಂದು ಉಡಾವಣೆ ಮಾಲಾಗಿತ್ತು. ಇಸ್ರೋದ ಅತ್ಯಂತ ಯಶಸ್ವಿ ಉಡಾವಣಾ ವಾಹಕ ಪಿಎಸ್ ಎಲ್ ವಿ-ಸಿ35 ಮೂಲಕ ಉಪಗ್ರಹವನ್ನು ಕಕ್ಷೆಗೆ ಸೇರಿಸಲಾಗಿತ್ತು.  ಸ್ಕಾಟ್​ಸ್ಯಾಟ್-1 ಸಾಗರ ಮತ್ತು ಹವಾಮಾನ ಕುರಿತ ಅಧ್ಯಯನ ಸೇರಿ ವಿವಿಧ ಉದ್ದೇಶಗಳಿಗೆ ಬಳಕೆಯಾಗುತ್ತಿದೆ. ಸ್ಕಾಟ್​ಸ್ಯಾಟ್-1 ಉಪಗ್ರಹವು ಓಶಿಯನ್​ ಸ್ಯಾಟ್-2 ಯೋಜನೆಯ ಮುಂದುವರಿದ ಭಾಗವಾಗಿದ್ದು, ಹವಾಮಾನ  ವರದಿ ಮತ್ತು ಮುನ್ಸೂಚನೆ, ಗಾಳಿಯ ದಿಕ್ಕು ಮತ್ತು ಚಲನೆ ಸೇರಿ ಹಲವು ಪ್ರಮುಖ ದತ್ತಾಂಶವನ್ನು ನಿಯಂತ್ರಣ ಕೇಂದ್ರಕ್ಕೆ ರವಾನಿಸುತ್ತಿದೆ.

ಅಕ್ಟೋಬರ್ 05- ಜಿಸ್ಯಾಟ್-18 ಉಪಗ್ರಹ ಉಡಾವಣೆ
ಭಾರತದ ಅತ್ಯಾಧುನಿಕ ಸಂವಹನ ಉಪಗ್ರಹ ಜಿಸ್ಯಾಟ್-18ನ್ನು ಅಕ್ಟೋಬರ್ 5ರಂದು ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾದ ಕೊವುರೌನಲ್ಲಿರುವ  ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು.  ಸುಮಾರು 3,404 ಕೆ.ಜಿ. ತೂಕ ಹೊಂದಿದ್ದ ಜಿಸ್ಯಾಟ್-18 ಅನ್ನು ಏರಿಯಾನ್-5 ವಿಎ-231 ರಾಕೆಟ್ ಮೂಲಕ ಉಡಾವಣೆ ಮಾಡಲಾಗಿತ್ತು. ಜಿಸ್ಯಾಟ್-18 ಉಪಗ್ರಹ ಅತ್ಯಾಧುನಿಕ ಸಂವಹನ ಉಪಗ್ರಹವಾಗಿದ್ದು, ಈಗಾಗಲೇ  ಕಾರ್ಯ ನಿರ್ವಹಿಸುತ್ತಿರುವ 14 ಸಂವಹನ ಉಪಗ್ರಹಗಳೊಂದಿಗೆ ಸೇವೆ  ಸಲ್ಲಿಸಲಿದೆದ್ದು, ಜಿಸ್ಯಾಟ್ ಸಿಬ್ಯಾಂಡ್, ಕೆ.ಯು. ಬ್ಯಾಂಡ್​ಗಳನ್ನು ಹೊಂದಿದೆ. ಈ ಉಪಗ್ರಹ 15 ವರ್ಷಗಳ ಕಾಲ ಸೇವೆ ಸಲ್ಲಿಸುತ್ತಿದೆ.

ಡಿಸೆಂಬರ್ 7-ರಿಸೋರ್ಸ್ ಸ್ಯಾಟ್-2ಎ ಉಪಗ್ರಹ ಉಡಾವಣೆ
ರಿಸೋರ್ಸ್ ಸ್ಯಾಟ್ ಉಪಗ್ರಹವನ್ನು ಡಿಸೆಂಬರ್ 7ರಂದು ಉಡಾವಣೆ ಮಾಡಲಾಗಿದ್ದು, ದೂರ ಸಂವೇದಿ ದತ್ತಾಂಶ ಸೇವೆಗಳಿಗೆ ಈ ಬಹುಪಯೋಗಿ ಉಪಗ್ರಹವನ್ನು ಬಳಸಿಕೊಳ್ಳಲಾಗುತ್ತಿದೆ. ಪ್ರಮುಖವಾಗಿ ಭಾರತೀಯ ಕೃಷಿ  ಕ್ಷೇತ್ರಕ್ಕೆ ಹೆಚ್ಚಿನ ಪ್ರಯೋಜನವಾಗಲಿದ್ದು, ದೇಶ-ವಿದೇಶಗಳಲ್ಲಿನ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆಯಲ್ಲಿ ಈ ಉಪಗ್ರಹದ ಮಾಹಿತಿ ಅತ್ಯಂತ ಉಪಯುಕ್ತವಾಗಿದೆ. ಉಪಗ್ರಹದಲ್ಲಿರುವ ಮೂರು ಹಂತಗಳ ಕ್ಯಾಮೆರಾ  ವ್ಯವಸ್ಥೆಯ ಮೂಲಕ ಮಾಹಿತಿ ಮತ್ತು ಚಿತ್ರಗಳನ್ನು ರವಾನೆಯಾಗುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com