ಜೀವನಪ್ರೀತಿ ಮೂಡಿಸುವ ಟಾಪ್ 10 ಅಸಲಿ ಕೊರೊನಾ ಪಾಸಿಟಿವ್ ಕಥೆಗಳು- 2021

ಕಲಿಯುಗದ ಮನುಷ್ಯರಲ್ಲಿ ಮನುಷ್ಯತ್ವ ಉಳಿದಿಲ್ಲ ಎನ್ನುವ ಆಪಾದನೆಗಳ ನಡುವೆ ಕೊರೊನಾ ಕಾಲದಲ್ಲಿ ಅಚ್ಚರಿಯ ಘಟನೆಗಳು ಜರುಗಿದವು. 2021ರಲ್ಲಿ ನಮ್ಮಲ್ಲೇ ಪ್ರಕಟವಾದ ಈ ಸುದ್ದಿಗಳಲ್ಲಿ ಆಯ್ದ ಕೆಲವನ್ನು ನಿಮ್ಮ ಮುಂದಿಡುತ್ತಿದ್ದೇವೆ. ಪಾಸಿಟಿವ್ ಎಂದರೆ ಬೆಚ್ಚುವ ಈ ಸಂದರ್ಭದಲ್ಲಿ ಇವು ನಮ್ಮಲ್ಲಿ ಪಾಸಿಟಿವಿಟಿ ತುಂಬಬಲ್ಲವು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಅದ್ದೂರಿ ವಿವಾಹಕ್ಕೆ ಬ್ರೇಕ್: ಸರಳ ವಿವಾಹವಾದ ಜೋಡಿ: ಕೋವಿಡ್ ರಿಲೀಫ್ ಫಂಡ್ ಗೆ 37 ಲಕ್ಷ ರೂ. ದೇಣಿಗೆ!

ತಿರುಪ್ಪೂರ್: ತಮಿಳುನಾಡಿನ ವಿಶೇಷ ಜೋಡಿಯೊಂದು ತಮ್ಮ ಅದ್ದೂರಿ ವಿವಾಹಕ್ಕೆ ಬ್ರೇಕ್ ಹಾಕಿ ಅದೇ ಹಣವನ್ನು ಕೋವಿಡ್- ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ. ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಅನು ಮತ್ತು ಅರುಳ್ ಪ್ರಾಣೇಶ್ ಜೋಡಿ ಸರಳವಾಗಿ ವಿವಾಹವಾಗಿ ಬಾಕಿ ಹಣವನ್ನು ಕೋವಿಡ್ ರಿಲೀಫ್ ಫಂಡ್ ಗೆ ದೇಣಿಗೆಯಾಗಿ ನೀಡಿದೆ.

ಇದೇ ಜೂನ್ 14ರಂದು ಈ ಜೋಡಿಯ ವಿವಾಹ ನೆರವೇರಿದ್ದು, ಮದುವೆಗಾಗಿ ಈ ಜೋಡಿ 50 ಲಕ್ಷ  ರೂಗಳನ್ನು ಅಂದಾಜಿಸಿತ್ತು. ಆದರೆ ಕೊರೋನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸರಳವಾಗಿ ವಿವಾಹವಾಗಿದ್ದಾರೆ. ಇವರ ಮದುವೆಗೆ ಸುಮಾರು 13 ಲಕ್ಷ ರೂ. ಖರ್ಚಾಗಿದ್ದು ಬಾಕಿ 37 ಲಕ್ಷ ರೂಗಳನ್ನು ಕೋವಿಡ್ ರಿಲೀಫ್ ಫಂಡ್ ಗೆ ನೀಡಿದ್ದಾರೆ. ಈ ಪೈಕಿ ಕೆಲ ಸರ್ಕಾರಿ ಸಂಸ್ಥೆಗಳಿಗೆ ಮತ್ತೆ ಒಂದಷ್ಟು ಹಣವನ್ನು ಸರ್ಕಾರೇತರ ಸಂಘ ಸಂಸ್ಥೆಗಳಿಗೆ ನೀಡಿದೆ ಎನ್ನಲಾಗಿದೆ.

3 ಸಾವಿರಕ್ಕೂ ಹೆಚ್ಚು ಕೋವಿಡ್ ರೋಗಿಗಳಿಗೆ ದೈಹಿಕ ಶಿಕ್ಷಕನಿಂದ ಉಚಿತ ಯೋಗಾಭ್ಯಾಸ

ಮೈಸೂರು: ಕೊರೋನಾದಿಂದಾಗಿ ಹಲವು ಶಿಕ್ಷಕರು ಆನ್ ಲೈನ್ ತರಗತಿಗೆ ಬದಲಾಗಿದ್ದಾರೆ. ನಾಲ್ಕು ಗೋಡೆಗಳ ಮಧ್ಯೆ ತರಗತಿ ನಡೆಸಲು ಸೀಮಿತರಾಗಿದ್ದಾರೆ. ಆದರೆ ಅವರುಗಳ ನಡುವೆ 39 ವರ್ಷದ ದೈಹಿಕ ಶಿಕ್ಷಣ  ತರಬೇತುದಾರ ಡಾ. ಆರ್ ರಾಘವೇಂದ್ರ ವಿಭಿನ್ನವಾಗಿ ನಿಲ್ಲುತ್ತಾರೆ. ಮೈಸೂರಿನ ಶೇಷಾದ್ರಿಪುರಂ ಕಾಲೇಜಿನ ಎನ್ಎಸ್ ಎಸ್ ಅಧಿಕಾರಿಯಾಗಿರುವ ರಾಘವೇಂದ್ರ ಒಂದು ಹೆಜ್ಜೆ ಮುಂದೆ ಹೋಗಿ ಕೋವಿಡ್ ರೋಗಿಗಳಿಗೆ ನೇರವಾಗಿ ಯೋಗ ತರಗತಿ ನಡೆಸಿದ್ದಾರೆ.

ಮೈಸೂರು ಭಾಗದ ಕೋವಿಡ್ ಸೋಂಕಿತರಿಗೆ ಉಚಿತವಾಗಿ ಯೋಗ ಮತ್ತು ಉಸಿರಾಟದ ವ್ಯಾಯಾಮ ಕಲಿಸಿಕೊಡುತ್ತಿದ್ದಾರೆ. ಮಂಡ್ಯ-ಮೈಸೂರು ಭಾಗದ 3 ಸಾವಿರ ಕೋವಿಡ್ ರೋಗಿಗಳಿಗೆ ಯೋಗ ಮತ್ತು ಉಸಿರಾಟದ ವ್ಯಾಯಾಮ ಹೇಳಿಕೊಡುವ ಮೂಲಕ ವಾಪಸ್ ಅವರು ತಮ್ಮ ಸಹಜ ಜೀವನಕ್ಕೆ ಮರಳುವಂತೆ ಮಾಡಿದ್ದಾರೆ.

ನಿವೃತ್ತಿ ನಂತರವೂ ಕೋವಿಡ್ ಸೋಂಕಿತರಿಗೆ ನೆರವಾಗಲು ಸೇವೆಗೆ ಮರಳಿದ 66 ವರ್ಷದ ನರ್ಸ್!

ಮೈಸೂರು: ನಮ್ಮ ಮಧ್ಯೆ ಅದೆಷ್ಟೋ ಜನ ಸಹೃದಯಿಗಳು ಇರುತ್ತಾರೆ. ಬೇರೊಬ್ಬರ ಬಾಳಿಗೆ ಬೆಳಕಾಗಲು ಬಯಸುವ ಇವರು, ಸಮಾಜ ಸೇವೆಗೆ ತಮ್ಮ ಜೀವನವನ್ನೇ ಮುಡುಪಾಗಿಟ್ಟಿರುತ್ತಾರೆ. ದೇಶದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗಳಿಗೆ ವಿಶೇಷ ಗೌರವ ಹಾಗೂ ಸ್ಥಾನವಿದೆ. ಕೊರೋನಾ ಸಾಂಕ್ರಾಮಿಕ ರೋಗ ಆರಂಭವಾದ ಬಳಿಕವಂತೂ ವೈದ್ಯಕೀಯ ಸಿಬ್ಬಂದಿಗಳಿಗೆ ಬೇಡಿಕೆಗಳು ಹೆಚ್ಚಾಗಿದೆ. 

ಮೈಸೂರಿನ 66 ವರ್ಷದ ನರ್ಸ್ ಒಬ್ಬರು ನಿವೃತ್ತಿ ಪಡೆದಿದ್ದರೂ, ಸಾಂಕ್ರಾಮಿಕ ರೋಗ ಹಿನ್ನೆಲೆಯಲ್ಲಿ ಕೋವಿಡ್ ಸೋಂಕಿತರಿಗೆ ಸಹಾಯ ಮಾಡಲು ಮರಳಿ ತಮ್ಮ ಸೇವೆಯನ್ನು ಆರಂಭಿಸಿದ್ದಾರೆ. ಚಾಮರಾಜನಗರ ಜಿಲ್ಲೆಯ ಹಾನೂರು ತಾಲೂಕಿನ ಕೊಳ್ಳೇಗಾಲದ ನಿವಾಸಿಯಾಗಿರುವ ಗೀತಾ ಅವರು ನಿವೃತ್ತಿ ಬಳಿಕವೂ ಕೋವಿಡ್ ಸೋಂಕಿತರಿಗೆ ನೆರವು ನೀಡಿ ಇತರರಿಗೆ ಪ್ರೇರಣೆ ನೀಡುತ್ತಿದ್ದಾರೆ. 

ಅನಾಥ ಕೋವಿಡ್ ಸೋಂಕಿತರ ಮೃತದೇಹಗಳಿಗೆ ಅಂತ್ಯ ಸಂಸ್ಕಾರ: ಶವಗಳಿಗೆ ಗೌರವಪೂರ್ಣ ವಿದಾಯ: ಹಿರಿಯೂರಿನ ಹಿರಿಯ

ಚಿತ್ರದುರ್ಗ: ಹಿರಿಯೂರಿನಲ್ಲಿ ಹಳೇಯ ಪೀಠೋಪಕರಣ ಅಂಗಡಿ ನಡೆಸುತ್ತಿರುವ ಮಿಲನ್ ರಫೀಕ್ ಜೊತೆಗೆ ಅಕ್ಕಪಕ್ಕದವರು ಮಾತನಾಡುವುದಿಲ್ಲ. ಮಿಲನ್ ರಫೀಕ್ ಮಾಡುತ್ತಿರುವ ಸಮಾಜ ಸೇವೆಗಾಗಿ ಅವರ ಸ್ನೇಹಿತರು ಮತ್ತು ಸಂಬಂಧಿಕರು ಅವರನ್ನು ತ್ಯಜಿಸಿದ್ದಾರೆ,

ತಮ್ಮ ಮಾರುತಿ ಓಮ್ನಿ ಕಾರನ್ನು ಶವ ಸಾಗಣೆ ವಾಹನವನ್ನಾಗಿಸಿಕೊಂಡಿರುವ ರಫೀಕ್, ಅದರಲ್ಲೆ ಕೋವಿಡ್ ಶವಗಳನ್ನು ಸ್ಮಶಾನಕ್ಕೆ ಸಾಗಿಸಿ ಅಂತ್ಯ ಸಂಸ್ಕಾರ ಮಾಡುತ್ತಾರೆ. ಇದುವರೆಗೂ ಸುಮಾರು 200 ಶವಗಳ ಅಂತ್ಯ ಸಂಸ್ಕಾರ ಮಾಡಿದ್ದು, ಅದರಲ್ಲಿ 80 ಕೋವಿಡ್ ನಿಂದ ಮೃತಪಟ್ಟ ಶವಗಳಾಗಿವೆ, ಪ್ರತಿಯೊಂದು ಶವವನ್ನು ಗೌರವ ಪೂರ್ಣವಾಗಿ ಬೀಳ್ಕೋಡುಗೆ ನೀಡಬೇಕೆಂಬುದೇ ಅವರ ಉದ್ದೇಶ.

ಕೋವಿಡ್ ಸಂಕಷ್ಟ: ಗ್ರಾಮೀಣ ಭಾಗದ ಗ್ರಂಥಾಲಯಗಳಿಗೆ ಪುಸ್ತಕ ನೀಡಿ, ಮಕ್ಕಳಿಗೆ ನೆರವಾಗುತ್ತಿರುವ ವಿದ್ಯಾರ್ಥಿಗಳು

ಬೆಂಗಳೂರು: ಮಹಾಮಾರಿ ಕೊರೋನಾ ವೈರಸ್ ಶಿಕ್ಷಣ ಕ್ಷೇತ್ರದ ಮೇಲೆ ಗಂಭೀರ ಪರಿಣಾಮವನ್ನು ಬೀರಿದೆ. ಓದುವ ಆಸಕ್ತಿ ಇದ್ದರೂ ವ್ಯವಸ್ಥೆ, ಸೌಲಭ್ಯಗಳಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಿದ್ಯಾರ್ಥಿಗಳಿಗೆ ನಗರದಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿರುವ ಕೆಲ ವಿದ್ಯಾರ್ಥಿಗಳು ನೆರವಿನ ಹಸ್ತ ಚಾಚಿದ್ದಾರೆ. 

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾ ಮಹಾದೇವನ್ ಅವರ ಮಾರ್ಗದರ್ಶನದಲ್ಲಿ ಬೆಂಗಳೂರಿನ ಅಂತರಾಷ್ಟ್ರೀಯ ಶಾಲೆಯ ವಿದ್ಯಾರ್ಥಿಗಳಾದ ಪ್ರಣೀತ್ ಗುಡ್ಲದಾನ, ಆರ್ಯನ್ ಗುಪ್ತಾ ಮತ್ತು ಹರೀಶ್ ಶಂಕರ್, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದ್ದಾರೆ. 

ಕೋವಿಡ್ ಸೋಂಕಿತರಿಗೆ ನೆರವಾಗಲು ಪಿಂಚಣಿ ಹಣ ದಾನ ಮಾಡಿದ 70 ವರ್ಷದ ವೃದ್ಧೆ!

ಮೈಸೂರು: ಕೋವಿಡ್ ಕಾಲದಲ್ಲಿ ದುಡಿಮೆಯಿಲ್ಲದೆ ದಿನ ದೂಡುವುದೇ ಕಷ್ಟ. ಇಂಥ ಸಂಕಷ್ಟದ ಸಮಯದಲ್ಲೂ ಕೆಲವರು ಸಹಾಯಕ್ಕೆ ನಿಲ್ಲುತ್ತಿದ್ದಾರೆ. ಅಂಥವರೇ ರಿಯಲ್ ಲೈಫ್ ಹೀರೋಸ್. ಹಿರೇನಹಳ್ಳಿ ನಿವಾಸಿಯಾಗಿರುವ 70 ವರ್ಷದ ವೃದ್ಧೆಯೊಬ್ಬರು ಇಂಥದ್ದೇ ಕಾರ್ಯವನ್ನು ಮಾಡಿ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. 

ಕೊರೋನಾ ಸೋಂಕಿತರ ಸಂಕಷ್ಟಕ್ಕೆ ಮಿಡಿದಿರುವ 70 ವರ್ಷದ ವೃದ್ಧೆ ಶಾರದಮ್ಮ ಎಂಬುವವರು, ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನಲ್ಲಿರುವ ಕೋವಿಡ್ ಕೇರ್ ಕೇಂದ್ರಕ್ಕೆ ತಾವು ಸಂರಕ್ಷಿಸಿದ್ದ ರೂ.10,000 ಪಿಂಚಣಿ ಹಣವನ್ನು ನೀಡಿದ್ದಾರೆ.  ತಹಶೀಲ್ದಾರ್ ಶಿವಮೂರ್ತಿಯವರಿಗೆ ಹಣವನ್ನು ನೀಡಿರುವ ಶಾರದಮ್ಮ ಅವರು, ಸೋಂಕಿತರಿಗೆ ಬಿಸ್ಕೆಟ್ ಸೇರಿದಂತೆ ಇನ್ನಿತರೆ ತಿನಿಸುಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ. 

ಕೋವಿಡ್-19 ವಿಶೇಷ ಆಸ್ಪತ್ರೆಯಲ್ಲಿ 300 ಸೋಂಕಿತ ಗರ್ಭಿಣಿ ಮಹಿಳೆಯರಿಗೆ ಯಶಸ್ವಿ ಹೆರಿಗೆ

ಬೆಂಗಳೂರು: ಬೆಂಗಳೂರು ನಗರದ ಸರ್ಕಾರಿ ಕೋವಿಡ್-19 ವಿಶೇಷ ಹೆರಿಗೆ ಆಸ್ಪತ್ರೆಯಲ್ಲಿ ಕೇವಲ 78 ದಿನಗಳಲ್ಲಿ ಕೊರೊನಾ ಸೋಂಕಿತ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸಲಾಗಿದೆ. ಕೋವಿಡ್‌ ಪೀಡಿತ ಗರ್ಭಿಣಿಯರಿಗೆ ಚಿಕಿತ್ಸೆ ಒದಗಿಸುತ್ತಿರುವ ವೈದ್ಯರು, ಶನಿವಾರ 300ನೇ ಹೆರಿಗೆಯನ್ನು ಮಾಡಿಸಿದ್ದಾರೆ.

ನಗರದ ಎಚ್‌.ಎಸ್.ಐ.ಎಸ್. ಘೋಷಾ ಆಸ್ಪತ್ರೆಯ ವೈದ್ಯರು 78 ದಿನಗಳಲ್ಲಿ ಕೊರೊನಾ ಸೋಂಕಿತ 300 ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆಗಳನ್ನು ಮಾಡಿಸಿದ್ದಾರೆ. ಆಸ್ಪತ್ರೆಯಲ್ಲಿ  ಈವರೆಗೆ ಕೋವಿಡ್ ಪೀಡಿತ 554 ಗರ್ಭಿಣಿಯರು ದಾಖಲಾಗಿದ್ದಾರೆ. ಸದ್ಯ 15 ಮಂದಿ ಕೋವಿಡ್‌ ಪೀಡಿತ ಗರ್ಭಿಣಿಯರು ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. ಯಶಸ್ವಿ 300 ಹೆರಿಗೆಗಳಲ್ಲಿ 159 ಮಂದಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 141 ಮಂದಿಗೆ ಸಹಜ ಹೆರಿಗೆ ಮಾಡಿಸಲಾಗಿದೆ.

ಕೋವಿಡ್ ರೋಗಿ ಸಾಯುವ ಮುನ್ನ ಆಕೆಯ ಕಿವಿಯಲ್ಲಿ 'ಇಸ್ಲಾಂ ಪ್ರಾರ್ಥನೆ' ಪಠಿಸಿದ ಹಿಂದೂ ವೈದ್ಯೆ!

ಕೋಝಿಕೋಡ್: ಪಾಲಕ್ಕಾಡ್‌ನ ಪಟ್ಟಂಬಿಯ ಖಾಸಗಿ ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿದ್ದ ಮುಸ್ಲಿಂ ಯುವತಿಯೋರ್ವಳಿಗೆ ಹಿಂದೂ ವೈದ್ಯೆಯೊಬ್ಬರು ಶಹಾದತ್ ಪಠಿಸಿದ್ದು ನಂತರ ಯುವತಿ ಕಣ್ಣುಮುಚ್ಚಿರುವ ಘಟನೆ ಕೇರಳದಲ್ಲಿ ನಡೆದಿದೆ. 

ಇಸ್ಲಾಂನಲ್ಲಿ ಸಾಯುವ ಮುನ್ನ ಅವರ ಕಿವಿಯಲ್ಲಿ ಶಹಾದತ್ ಪಠಿಸಲಾಗುತ್ತದೆ. ಇನ್ನು ಕೊರೋನಾ ಮಾರ್ಗಸೂಚಿ ಕಾರಣ ಕೊನೆಯ ಗಳಿಗೆಯಲ್ಲಿ ರೋಗಿಯ ಸಮೀಪ ಯಾರೂ ಇಲ್ಲದ ಪರಿಸ್ಥಿತಿಯನ್ನು ಮನಗಂಡ ಡಾ. ರೇಖಾ ಕೃಷ್ಣನ್ ಅವರು ಯುವತಿಯ ಕಿವಿಯಲ್ಲಿ ಶಹಾದತ್ ಪಠಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. 

'ನಾನು ನನ್ನ ಜೀವನ ಅನುಭವಿಸಿದ್ದೇನೆ': ಕಿರಿಯ ರೋಗಿಗಾಗಿ ತನ್ನ ಬೆಡ್ ಬಿಟ್ಟುಕೊಟ್ಟ 85 ವರ್ಷದ ಕೋವಿಡ್ ಸೋಂಕಿತ!

ನಾಗ್ಪುರ: "ನಾನು ನನ್ನ ಜೀವನ ಸಾಕಷ್ಟು ಅನುಭವಿಸಿದ್ದೇನೆ." ಎಂದ 85 ವರ್ಷದ ಕೋವಿಡ್ -19 ರೋಗಿಯೊಬ್ಬರು ತಾವಿದ್ದ ಬೆಡ್ ಅನ್ನು ಯುವ ಕೋವಿಡ್ ರೋಗಿಗೆ ಸ್ವಯಂಪ್ರೇರಣೆಯಿಂದ ಬಿಟ್ಟುಕೊಟ್ಟಿದ್ದು ಅವರು ಮಂಗಳವಾರ ತಮ್ಮ ಸ್ವಗೃಹದಲ್ಲಿ ನಿಧನರಾದ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸದಸ್ಯ ನಾರಾಯಣ್ ದಾಭಲ್ಕರ್ ಅವರಿಗೆ ಕೆಲ ದಿನಗಳ ಹಿಂದೆ ಕೋವಿಡ್ ಕಾಣಿಸಿಕೊಂಡಿದೆ. ಅವರನ್ನು ಚಿಕಿತ್ಸೆಗಾಗಿ ನಾಗ್ಪುರದ ಇಂದಿರಾಗಾಂಧಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಲಾಕ್ ಡೌನ್ ನಿಂದ ಉದ್ಯೋಗ ನಷ್ಟ; 110 ನಿರುದ್ಯೋಗಿ ಗ್ರಾಮಸ್ಥರಿಗೆ ಉದ್ಯೋಗ ನೀಡಿದ ಉದ್ಯಮಿ!

ಗದಗ: ಕೋವಿಡ್-19 ನಿಂದ ಉಂಟಾಗಿರುವ ಅವಾಂತರ ಗ್ರಾಮೀಣ ಪ್ರದೇಶಗಳಲ್ಲೂ ತನ್ನ ಪ್ರಭಾವ ತೋರುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಕಳೆದುಕೊಂಡ ಅನೇಕರು ನಿರುದ್ಯೋಗಿಗಳಾಗಿ ಮುಂದೇನು ಎಂಬ ಪ್ರಶ್ನೆ ಎದುರಿಸುತ್ತಿದ್ದಾರೆ. ಆದರೆ ಗದಗದ ಶಿಗ್ಲಿ ಗ್ರಾಮದ ಮಹದೇವ್ ಬದಾಮಿ ಎಂಬ ಉದ್ಯಮಿ 110 ನಿರುದ್ಯೋಗಿ ಗ್ರಾಮಸ್ಥರಿಗೆ ಸ್ವಾವಲಂಬನೆಯ ಬದುಕು ಕಟ್ಟಿಕೊಳ್ಳುವುದಕ್ಕೆ ಸಹಕರಿಸಿ ತಾವೂ ಅಭಿವೃದ್ಧಿ ಹೊಂದಿದ್ದಾರೆ. 

ವಸ್ತ್ರ ವಿನ್ಯಾಸಕಾರ ಹಾಗೂ ಟೈಲರ್ ಆಗಿರುವ ಮಹಾದೇವ ಬದಾಮಿ ಅನುಪಮಾ ಡ್ರೆಸೆಸ್ ನ ಮಾಲಿಕರಾಗಿದ್ದಾರೆ. ಹೊಲಿಗೆ ಕೆಲಸಕ್ಕೆ ಹಲವಾರು ಕೌಶಲ್ಯಯುಕ್ತ ಹೊಲಿಗೆ ಕಾರ್ಮಿಕರನ್ನು ಜಿಲ್ಲೆಯ ಹಲವು ಪ್ರದೇಶಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಿದ್ದರು.

ಹೆಚ್ಚಿನ ಪಾಸಿಟಿವ್ ಸ್ಟೋರಿಗಳಿಗೆ: www.kannadaprabha.com/specials

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com