ಹಬ್ಬಗಳೆಂದ ಮೇಲೆ ರುಚಿರುಚಿಯಾದ ತಿಂಡಿ ತಿನಿಸು ಇರಲೇ ಬೇಕು. ಇಲ್ಲವೆಂದರೆ ಹಬ್ಬಕ್ಕೆ ಕಳೆ ಎಲ್ಲಿ? ಬಗೆಬಗೆಯಾದ ಖಾದ್ಯಗಳಿದ್ದರೆ ಮನೆಮಂದಿಯೆಲ್ಲ ಮನ ತಣಿಯುವಂತೆ ತಿಂದು, ಬಂದ ಅತಿಥಿಗಳಿಗೂ ಉಣಬಡಿಸಿದರೆ ಆಗ ಸಮಾಧಾನ. ಅಡುಗೆಯನ್ನು ಮನಸಾರೆ ತಿಂದು ಹೊಗಳಿದರಂತೂ ಮನೆಯಾಕೆಗೆ ಮಿತಿ ಮೀರಿದ ಖುಷಿ.
ನೈವೇದ್ಯ ಎಂದರೇನು?
ದೈನ್ಯದ ಬೇಡಿಕೆ ಅರ್ಥದ ಒಂದು ಸಂಸ್ಕೃತ ಶಬ್ದವಾದ ನೈವೇದ್ಯವು ಪೂಜಾಚರಣೆಯ ಭಾಗವಾಗಿ ತಿನ್ನುವ ಮೊದಲು ಒಬ್ಬ ಹಿಂದೂ ದೇವತೆಗೆ ಅರ್ಪಿಸಲಾದ ಆಹಾರ. ತಯಾರಿಕೆಯ ಅವಧಿಯಲ್ಲಿ ರುಚಿ ನೋಡುವುದು ಅಥವಾ ದೇವರಿಗೆ ಅರ್ಪಿಸುವ ಮೊದಲು ಆಹಾರವನ್ನು ತಿನ್ನುವುದು ನಿಷೇಧಿಸಲ್ಪಟ್ಟಿರುತ್ತದೆ. ಆಹಾರವನ್ನು ದೇವರ ಮುಂದೆ ಇಟ್ಟು ಪ್ರಾರ್ಥಿಸಲಾಗುತ್ತದೆ. ಪೂಜೆಯಲ್ಲಿ ನೈವೇದ್ಯ ಸಮರ್ಪಿಸೋದು ಅತೀ ಮುಖ್ಯ.
ಪ್ರತಿಯೊಂದು ದೇವತೆಗೆ ವಿಶಿಷ್ಟ ನೈವೇದ್ಯವು ನಿಶ್ಚಯಿಸಲ್ಪಟ್ಟಿರುತ್ತದೆ ಹಾಗೂ ಆ ನೈವೇದ್ಯವು ಆ ದೇವರಿಗೆ ಪ್ರಿಯವಾಗಿರುತ್ತದೆ. ಶ್ರೀ ವಿಷ್ಣುವಿಗೆ ಖೀರು ಅಥವಾ ಶಿರಾ, ಗಣಪತಿಗೆ ಮೋದಕ, ದೇವಿಗೆ ಪಾಯಸ. ದೇವತೆಗಳಿಗೆ ನಿಶ್ಚಯಿಸಲ್ಪಟ್ಟ ನೈವೇದ್ಯದಲ್ಲಿ ಆ ದೇವತೆಯ ಶಕ್ತಿಯು ಹೆಚ್ಚಿನ ಪ್ರಮಾಣದಲ್ಲಿ ಆಕರ್ಷಿತವಾಗುತ್ತದೆ ಎಂಬ ನಂಬಿಕೆ. ದೇವಿಗೆ ನೇವೇದ್ಯದ ನಂತರ ಪ್ರಸಾದವನ್ನು ಸೇವಿಸಿದರೆ ಆ ಶಕ್ತಿಯು ನಮಗೆ ಸಿಗುತ್ತದೆ ಎಂದು ಪುರಾಣಗಳಲ್ಲಿ ಹೇಳಲಾಗಿದೆ.
ವರಮಹಾಲಕ್ಷ್ಮಿ ನೈವೇದ್ಯಕ್ಕೆ ಇಡುವ ತಿಂಡಿ ತಿನಿಸುಗಳು
ವರಮಹಾಲಕ್ಷ್ಮಿ ಹಬ್ಬ ಹೆಸರೇ ಹೇಳುವಂತೆ ವರದಾತೆಯಾದ ಲಕ್ಷ್ಮಿಯನ್ನು ಪೂಜಿಸುವ ಹಬ್ಬವಾಗಿದೆ. ಹಬ್ಬದ ಸಂಭ್ರಮವನ್ನು ಹೆಚ್ಚಿಸಲು ದೇವರಿಗೆ ಪ್ರಸಾದ ರೂಪದಲ್ಲಿ ಖಾದ್ಯಗಳನ್ನು ಅರ್ಪಿಸುವುದು ಸಾಮಾನ್ಯ. ದೇವರನ್ನು ಸಂಪ್ರೀತಗೊಳಿಸಲು ಮಾಡುವ ಖಾದ್ಯ ಶುದ್ಧವಾಗಿರಬೇಕು. ಈ ದಿನದಂದು ಸುಮಂಗಲಿಯರು ಪ್ರಾತಃ ಕಾಲದಲ್ಲೇ ಎದ್ದು ಸ್ನಾನ ಮಾಡಿ ರಂಗವಲ್ಲಿ ಹಾಕಿ ದೇವರ ಕೋಣೆಯನ್ನು ಸ್ವಚ್ಛಗೊಳಿಸಿ ದೇವರನ್ನು ಅಲಂಕರಿಸಿ ವರಮಹಾಲಕ್ಷ್ಮಿ ಪೂಜೆಯನ್ನು ನೇರವೇರಿಸುತ್ತಾರೆ.
ಹಬ್ಬದಲ್ಲಿ ಮಾಡಲಾಗುವ ಖಾದ್ಯಗಳಲ್ಲಿ ಒಂದಾದ ಪುಳಿಯೋಗರೆಗೆ ಹುಳಿಯನ್ನ ಎಂದು ಕೂಡ ಹೇಳುತ್ತಾರೆ. ಹುಣಿಸೇ ಹುಳಿಯನ್ನೇ ಪ್ರಧಾನವಾಗಿರಿಸಿಕೊಂಡು ತಯಾರಿಸುವ ಈ ಅನ್ನದಲ್ಲಿ ಹುಳಿ ಮಾತ್ರವಲ್ಲದೆ ಇತರ ಎಲ್ಲಾ ಸಾಮಾಗ್ರಿಗಳನ್ನು ಸಮಾನವಾಗಿ ಬೆರೆಸಿ ತಯಾರಿಸಲಾಗುತ್ತದೆ. ಪುಳಿಯೋಗರೆ ನೇವೇದ್ಯಕ್ಕೆ ಇಟ್ಟು ಮನೆಯವರು ತಿಂದು ಇತರರಿಗೆ ಹಂಚಿದರೇ ಲಕ್ಷ್ಮಿ ಪ್ರಸನ್ನಳಾಗಿ ಮನೆಯಲ್ಲಿನ ದಾರಿದ್ರ್ಯ ನಿವಾರಣೆಯಾಗುತ್ತದೆ ಎಂಬ ನಂಬಿಕೆಯಿದೆ.
ಸರ್ವರಿಂದ ಪೂಜಿತವಾಗುವ ವರಮಹಾಲಕ್ಷ್ಮಿ ಹಬ್ಬದಂದು ಮಾಡಬೇಕಾದ ವಿಶೇಷ ಸಿಹಿತಿಂಡಿಗಳೆಂದರೆ ಹೋಳಿಗೆ. ಬಾಳೆ ಎಲೆತುಂಬ ಬಡಿಸಿದ ತಿನಿಸುಗಳಲ್ಲಿ ಹೋಳಿಗೆಗೆ ವಿಶೇಷ ಸ್ಥಾನ. ಇನ್ನು ವರಮಹಾಲಕ್ಷ್ಮಿಗೆ ನೇವೈದ್ಯಕ್ಕೆ ಹೋಳಿಗೆ, ಸಜ್ಜಿಗೆ, ರವೆ ಉಂಡೆ, ಶಾವಿಗೆ ಪಾಯಸ, ಕರ್ಜಿಕಾಯಿ ಮಾಡಿ ಒಟ್ಟು ಐದು ಬಗೆಯ ಸಿಹಿ ತಿನಿಸುಗಳನ್ನು ಇಟ್ಟು ಪೂಜೆ ಮಾಡುತ್ತಾರೆ.
ಹಾಗೆಯೇ ಲಕ್ಷ್ಮಿ ಪೂಜೆಗೆ ಕೋಡುಬಳೆ, ಚಕ್ಕುಲಿ, ನಿಪ್ಪಟ್ಟುಗಳನ್ನು ಮಡಿಯಿಂದ ಮಾಡಿ ಇಡುತ್ತಾರೆ. ಹಲವು ಬಗೆಯ ಖಾದ್ಯಗಳನ್ನು ಮಾಡಿ ಲಕ್ಷ್ಮಿಗೆ ಅರ್ಪಿಸುವುದರಿಂದ ದೇವಿ ಸಂತೃಪ್ತಳಾಗುತ್ತಾಳೆ ಎನ್ನುವ ಪ್ರತೀತಿಯಿದೆ. ಹಾಗೆಯೇ ಲಕ್ಷ್ಮಿ ಪೂಜೆಗೆ ಐದು ಬಗೆಯ ಹಣ್ಣುಗಳು, ಐದು ಬಗೆಯ ಹೂವು ಮತ್ತು ಐದು ಬಗೆಯ ಡ್ರೈ ಫ್ರೂಟ್ಸ್ ಗಳನ್ನು ಕಲಶದ ಮುಂದೆ ಇಟ್ಟು ಸಮರ್ಪಿಸಲಾಗುತ್ತದೆ. ಆಡಂಬರದ ಪೂಜೆ ಮಾಡೋದಕ್ಕೆ ಆಗದೆ ಇರುವವರು ಸಾಧಾರಣವಾಗಿ ಪೂಜೆ ಸಲ್ಲಿಸಬಹುದು. ಗೃಹಿಣಿಯರು ತಮ್ಮ ಅಂತಸ್ತಿಗನುಗುಣವಾಗಿ ಲಕ್ಷಿಗೆ ಪೂಜೆಯನ್ನು ಮಾಡುತ್ತಾರೆ
ಒಟ್ಟಿನಲ್ಲಿ, ಶ್ರಾವಣ ಮಾಸದ ಎರಡನೇ ಶುಕ್ರವಾರದಂದು ಬರುವ ವರಮಹಾಲಕ್ಷ್ಮಿ ದಿನದಂದು ಬೆಳಿಗ್ಗೆ ಎದ್ದು ಅಭ್ಯಂಜನ ಮಾಡಿ ಭಕ್ತಿಭಾವಗಳಿಂದ ವರಮಹಾಲಕ್ಷ್ಮಿ ಪೂಜೆ ಮುಗಿಯುತ್ತಿದ್ದ ಹಾಗೆ ಬಗೆಯ ತಿಂಡಿಗಳಿಂದ ಲಕ್ಷ್ಮಿಯ ಪೂಜೆ ಮಾಡಿ ಮನೆಮಂದಿಗೆಲ್ಲ ಬಡಿಸಿ, ಬಂದವರಿಗೂ ಹಂಚಿ ಸಂತೋಷ ಪಡುತ್ತಾರೆ.
- ಶಿಲ್ಪ.ಡಿ.ಚಕ್ಕೆರೆ
Advertisement