ಕರ್ನಾಟಕದ ಪ್ರಸಿದ್ಧ ಶಿವ ದೇವಾಲಯಗಳು

ಧರ್ಮದ ನೆಲೆಯ ಧಾರ್ಮಿಕ ತಾಣವಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆ. ‘ಮಾತು ಬಿಡ ಮಂಜುನಾಥ’ ಎಂಬಂತೆ ಇಲ್ಲಿ ಮಾತಿಗೆ ಹೆಚ್ಚು ಮಹತ್ವ, ಮನ್ನಣೆ...
ಶಿವ ದೇವಾಲಯಗಳು
ಶಿವ ದೇವಾಲಯಗಳು

ಶ್ರೀಕ್ಷೇತ್ರ ಧರ್ಮಸ್ಥಳ
ಧರ್ಮದ ನೆಲೆಯ ಧಾರ್ಮಿಕ ತಾಣವಾಗಿರುವ ಧರ್ಮಸ್ಥಳ ಮಂಜುನಾಥ ಸ್ವಾಮಿ ಸನ್ನಿಧಿ ದಕ್ಷಿಣ ಭಾರತೀಯರ ಆರಾಧ್ಯ ಕ್ಷೇತ್ರವಾಗಿದೆ. ‘ಮಾತು ಬಿಡ ಮಂಜುನಾಥ’ ಎಂಬಂತೆ ಇಲ್ಲಿ ಮಾತಿಗೆ ಹೆಚ್ಚು ಮಹತ್ವ, ಮನ್ನಣೆ. ಶ್ರೀಕ್ಷೇತ್ರ ಧರ್ಮಸ್ಥಳವು ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಒಂದು ಪ್ರಸಿದ್ಧ ಧಾರ್ಮಿಕ ತಾಣ.ಧರ್ಮಸ್ಥಳ ಮಂಜುನಾಥ ದೇವಾಲಯಕ್ಕೆ 8 ಶತಮಾನಗಳ ಇತಿಹಾಸವಿದ್ದು, ನೇತ್ರಾವತಿ ನದಿಯ ದಡದಲ್ಲಿ ನೆಲೆಸಿದೆ. ಇಲ್ಲಿನ ದೇವಸ್ಥಾನದಲ್ಲಿರುವ ಆರಾಧ್ಯ ದೈವ ಮಂಜುನಾಧ ಸ್ವಾಮಿಯ ವಿಗ್ರಹವನ್ನು ಮಂಗಳೂರಿನ ಕದ್ರಿ ಎಂಬ ಸ್ಥಳದಿಂದ ಉಡುಪಿಯ ಯತಿಗಳಾಗಿದ್ದ ಶ್ರೀ ವಾದಿರಾಜರು ಸ್ವತಃ ತಂದು ಪ್ರತಿಷ್ಠಾಪಿಸಿದರು ಎಂದು ಪುರಾಣಗಳು ಹೇಳುತ್ತವೆ. ಧರ್ಮಸ್ಥಳ ದಾನ ಧರ್ಮಕ್ಕೆ ಪ್ರಸಿದ್ಧವಾಗಿರುವುದಲ್ಲದೆ, ಭಕ್ತರಿಗೆ ನೈತಿಕ - ಸಾಂಸ್ಕೃತಿಕ ಕೇಂದ್ರವಾಗಿಯೂ ಆಕರ್ಷಿಸುತ್ತದೆ. ಭಕ್ತರು ನೇತ್ರಾವತಿ ನದಿಯಲ್ಲಿ ಪುಣ್ಯಸ್ನಾನ ಮಾಡಿ ಬಹಿರಂಗ ಶುದ್ಧಿಯೊಂದಿಗೆ ದೇವಸ್ಥಾನಕ್ಕೆ ಹೋಗಿ ದೇವರ ದರ್ಶನದೊಂದಿಗೆ ಅಂತರಂಗ ಶುದ್ಧಿಯನ್ನು ಮಾಡಿಕೊಂಡು ಮಾನಸಿಕ ಶಾಂತಿ, ನೆಮ್ಮದಿಯನ್ನು ಹೊಂದುತ್ತಾರೆ. ಮನದ ದುಃಖ, ನೋವನ್ನು ಮರೆಯುತ್ತಾರೆ.

ಕೋಟಿಲಿಂಗ
ಜಗದೀಶ, ಸರ್ವೇಶ, ಮಲ್ಲೇಶ, ಗೌರೀಶ- ಹೀಗೆ ನೂರಾರು ಹೆಸರುಗಳ ಶಿವನನ್ನು ಭಕ್ತರು ಎಲ್ಲೆಲ್ಲಿಯೂ ಕಂಡಿದ್ದಾರೆ. ಕಣ್ಮುಚ್ಚಿ ಧ್ಯಾನಿಸಿದರೆ ಸರ್ವೇಶ ಸಕಲ ಜೀವ ಜಗತ್ತಿನಲ್ಲಿ, ನಿರ್ಜೀವಿಗಳಲ್ಲಿ, ಹಸಿರ ಸಿರಿಯಲ್ಲಿ ಹೀಗೆ ಎಲ್ಲೆಡೆಯೂ ನೆಲೆಸಿದ್ದಾನೆ. ಹಲವು ದಾಸವರೇಣ್ಯರು, ಶಿವಶರಣರು ಶಿವನನ್ನು ಪದಗಳಲ್ಲಿ ಕೊಂಡಾಡಿದ್ದಾರೆ. ಒಂದಕ್ಕಿಂತ ಭಿನ್ನ, ವಿಶೇಷವೆಂಬಂತೆ ಶಿವನನ್ನು ಪೂಜಿಸಲು ದೇವಳಗಳನ್ನು ಸ್ಥಾಪಿಸಿ ಭಕ್ತಿ ಮೆರೆದಿದ್ದಾರೆ. ಇಂಥ ಪುಣ್ಯಕ್ಷೇತ್ರಕ್ಕೆ ಪಾದವಿರಸದಿದ್ದರೆ ಜೀವನ ಪಾವನವಾಗದು ಎಂಬಂಥ ಶ್ರದ್ಧಾ-ಭಕ್ತಿಗಳನ್ನು ಕಟ್ಟಿಕೊಟ್ಟಿರುವ ಕ್ಷೇತ್ರಗಳು ದೇಶ-ವಿದೇಶದಲ್ಲಿ ನೂರಾರಿವೆ. ಕರ್ನಾಟಕದಲ್ಲೂ ಇಂಥ ವೈಶಿಷ್ಟ್ಯ ತುಂಬಿದ ಕ್ಷೇತ್ರಗಳಲ್ಲಿ ಕೋಲಾರ ಜಿಲ್ಲೆಯ ಕೋಟಿಲಿಂಗ ಕ್ಷೇತ್ರ ಹೆಚ್ಚು ಚಾಲ್ತಿಯಲ್ಲಿದೆ. ರಾಜ್ಯದ ಪ್ರವಾಸೋದ್ಯಮಕ್ಕೆ ಈ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತಿದೆ. ಕೋಲಾರ ಜಿಲ್ಲೆಯ ಚಿನ್ನದಗಣಿ ಸಮೀಪ, ಕಮ್ಮಸಂದ್ರ ಗ್ರಾಮದ ಬಳಿ ವಿಹಂಗಮವಾಗಿರುವ 15 ಎಕರೆ ವಿಸ್ತಾರದ ಈ ಕ್ಷೇತ್ರದಲ್ಲಿ ಕೋಟಿಗಳ ಸಂಖ್ಯೆಯಲ್ಲಿ ಶಿವನ ಸ್ವರೂಪವೆನ್ನಲಾದ ಶಿವಲಿಂಗ ವ್ಯವಸ್ಥಿತವಾಗಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಗುತ್ತಿದೆ. ವಿಶ್ವದಲ್ಲೇ ಅತಿ ಎತ್ತರದ ಅಂದರೆ 33 ಮೀಟರ್ ಇರುವ ಶಿವಲಿಂಗ (108 ಅಡಿ)  ಹಾಗೂ ನಂದೀಶ್ವರ (35 ಅಡಿ) ಇರುವ ಖ್ಯಾತಿ ಇಲ್ಲಿನದು. ಮಹಾಶಿವರಾತ್ರಿಯಂದು 2 ಲಕ್ಷಕ್ಕೂ ಅಧಿಕ ಸಂಖ್ಯೆಯ ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಮುರುಡೇಶ್ವರ
ಹೊನ್ನಾವರ ಮತ್ತು ಭಟ್ಕಳದ ನಡುವಿದೆ ಮುರುಡೇಶ್ವರ. ರಾಷ್ಟ್ರೀಯ ಹೆದ್ದಾರಿಯಿಂದ ಒಂದು ಕಿ.ಮೀ ದೂರದಲ್ಲಿರುವ ಸಮುದ್ರ ಕಿನಾರೆಯ ಸುಂದರ ಪವಿತ್ರ ತಾಣವಿದು. ಪೂರ್ವಕ್ಕೆ ಗೋಪುರಗಟ್ಟಿರುವ ಬೆಟ್ಟಗಳು, ಪಶ್ಚಿಮದಲ್ಲಿ ಭೋರ್ಗರೆಯುತ್ತಿರುವ ಸಮುದ್ರ ಇದರ ನಡುವಿನ ದೇವಾಲಯ ಭಕ್ತರನ್ನು ಮತ್ತು ಪ್ರವಾಸಿಗಳನ್ನು ಆಕರ್ಷಿಸುತ್ತದೆ. ಮುರುಡೇಶ್ವರದಲ್ಲಿರುವ 123 ಅಡಿ ಎತ್ತರದ ಶಿವನ ಭವ್ಯ ಮೂರ್ತಿ ಅತೀ ದೂರಕ್ಕೆ ಕಾಣುತ್ತಿದ್ದು, ಇದು ಜಗತ್ತಿನಲ್ಲೇ ಅತೀ ಎತ್ತರದ ಶಿವವಿಗ್ರಹವಾಗಿದೆ. 10 ದಶ ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಮೂರ್ತಿಯನ್ನು ಶಿವಮೊಗ್ಗದ ಕಾಶಿನಾಥ ಮತ್ತು ಅವರ ಪುತ್ರ ಶ್ರೀಧರ್ ಅವರು ಇನ್ನಿತರ ಹಲವಾರು ಶಿಲ್ಪಿಗಳ ನೆರವಿನಿಂದ ಕಡೆದಿದ್ದಾರೆ. ದೇವಾಲಯದ ಎದುರಿಗೆ 20 ಅಂತಸ್ತಿನ ಬಹು ಎತ್ತರದ ಗೋಪುರವನ್ನು ನಿರ್ಮಿಸಲಾಗಿದೆ.

ಗೋಕರ್ಣ ಆತ್ಮಲಿಂಗ ಮಹಾಬಲೇಶ್ವರ
ಸಮುದ್ರ ತಟದಲ್ಲಿರುವ ಗೋಕರ್ಣದ ಮಹಾಬಲೇಶ್ವರ ಶಿವನ ದೇವಾಲಯವು ದೇಶದ ಎಲ್ಲ ಹಿಂದೂ ಭಕ್ತರಿಗೆ ಪುಣ್ಯ ಸ್ಥಳ. ಕಾಶಿ, ರಾಮೇಶ್ವರ ಹಾಗೂ ಗೋಕರ್ಣ ತ್ರಿಸ್ಥಲ ಶೈವಕ್ಷೇತ್ರಗಳೆಂದೇ ಖ್ಯಾತವಾಗಿವೆ. ಗೋಕರ್ಣದಲ್ಲಿನ ಮಹಾಬಲೇಶ್ವರ ದೇವಾಲಯದಲ್ಲಿರುವ ಶಿವಲಿಂಗವನ್ನು ರಾವಣನು ಇಲ್ಲಿಗೆ ತಂದನೆಂಬುದು ನಂಬಿಕೆ. ಆತನಲ್ಲಿ ವಿಶೇಷ ಶಕ್ತಿಯನ್ನು ತುಂಬುವುದಲ್ಲದೆ ಆತನನ್ನು ಅತ್ಯಂತ ಬಲಿಷ್ಠವಾಗಿಸಬಲ್ಲ ಲಿಂಗವಾದ ಆತ್ಮಲಿಂಗವನ್ನು ಆತ ಪಡೆದು ತಂದಿದ್ದನು. ಈಗಾಗಲೇ ದುಷ್ಟನಾಗಿದ್ದ ರಾಜನು ಮತ್ತಷ್ಟು ಬಲಿಷ್ಠನಾಗಬಾರದೆಂಬ ಕಾರಣದಿಂದ ದೇವತೆಗಳು ಗಣೇಶನ ಸಹಕಾರದೊಂದಿಗೆ ಆತ ಲಿಂಗವನ್ನು ಇಲ್ಲಿಯೇ ಬಿಡುವಂತೆ ತಂತ್ರ ಹೂಡಿದರು. ಮುಂದೆ ಮಹಾ ಬಲಶಾಲಿಯಾದ ರಾವಣನೇ ಬಲ ಬಿಟ್ಟು ಎಳೆದರೂ ಬಾರದೆ ಗಟ್ಟಿಯಾಗಿ ಭೂಮಿಯನ್ನು ಹಿಡಿದ ಶಿವ ಈ ಪವಿತ್ರ ಪುಣ್ಯಕ್ಷೇತ್ರದಲ್ಲಿ ಮಹಾಬಲೇಶ್ವರ ಎಂಬ ಹೆಸರಿನಿಂದ ಲಿಂಗರೂಪಿಯಾಗಿ ನೆಲೆಸಿದ ಎಂಬ ಪ್ರತೀತಿ ಇದೆ. ತಮಿಳು ಕವಿಗಳಾದ ಅಪ್ಪಾರ್ ಮತ್ತು ಸಂಬಂದಾರ್  ರವರ ರಚನೆ ಕೀರ್ತನೆಗಳಲ್ಲಿ ಉಲ್ಲೇಖಗೊಂಡಿದ್ದು, ತುಳು ನಾಡಿನ ಒಡೆಯನ ಹೊಗಳಿಕೆಗೆ ಸಾಕ್ಷಿಯಾಗಿವೆ. ಈ ಸ್ಥಳವು ಮೂಲವಾಗಿ ವಿಜಯನಗರ ಅರಸರಾದ ಕದಂಬರ ಆಳ್ವಿಕೆಯಲ್ಲಿತ್ತು.

ನಂಜನಗೂಡು ನಂಜುಂಡೇಶ್ವರ
ದಕ್ಷಿಣ ಭಾರತದ ದೊಡ್ಡ ದೇವಾಲಯಗಳಲ್ಲಿ ನಂಜನಗೂಡು ನಂಜುಂಡೇಶ್ವರ ದೇವಾಲಯವೂ ಒಂದಾಗಿದೆ. ಕಪಿಲಾ ನದಿಯ ದಂಡೆಯಲ್ಲಿ ಈ ದೇವಾಲಯವಿದೆ. 11ನೇ ಶತಮಾನದಲ್ಲಿ ಚೋಳರಿಂದ ಈ ದೇವಾಲಯ ವಿಸ್ತರಣೆಗೊಂಡಿತೆಂದು ಹೇಳಲಾಗಿದೆ. ಸುಮಾರು 385 ಅಡಿ ಉದ್ದ, 160 ಅಡಿ ಅಗಲದ ಈ ದೇವಾಲಯದಲ್ಲಿ 140ಕ್ಕೂ ಹೆಚ್ಚು ಕಂಬಗಳ ಸಂಕೀರ್ಣವಿದೆ. ಮಮ್ಮುಡಿ ಕೃಷ್ಣರಾಜ ಒಡೆಯರ್ ಅವರು 1845ರಲ್ಲಿ ನಂಜನಗೂಡು ನಂಜುಂಡೇಶ್ವರ ದೇವಾಲಯಕ್ಕೆ ಗೋಪುರ ನಿರ್ಮಿಸಿದರು. ಇಲ್ಲಿ ನಡೆಯುವ ರಥೋತ್ಸವಕ್ಕೆ ವಿವಿಧೆಡೆಯಿಂದ ಲಕ್ಷಾಂತರ ಭಕ್ತರು ಭೇಟಿ ಕೊಡುತ್ತಾರೆ. ವೈಭವದಿಂದ ನಡೆಯುವ ತೆಪ್ಪೋತ್ಸವವನ್ನು ಜನ ಕಣ್ತುಂಬಿಕೊಳ್ಳುತ್ತಾರೆ.

-ವಿಶ್ವನಾಥ್. ಎಸ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com