ತೃತೀಯ ರಂಗಕ್ಕೇ ಭವಿಷ್ಯ

ತೃತೀಯ ರಂಗಕ್ಕೇ ಭವಿಷ್ಯ
Updated on: 

ನವದೆಹಲಿ: ಲೋಕಸಭೆ ಚುನಾವಣೆ ನಂತರ ತೃತೀಯ ರಂಗಕ್ಕೇ ಭವಿಷ್ಯವಿರುವುದು ಎಂದು ಮುಲಾಯಂ ಹೇಳಿದ್ದಾರೆ.
  ತೃತೀಯ ರಂಗಕ್ಕೆ ಸೇರಿದ ವ್ಯಕ್ತಿಯೇ ಪ್ರಧಾನಿಯಾಗಲಿದ್ದಾರೆ ಎಂದಿರುವ ಮುಲಾಯಂ, ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ನೀವೇ ಪ್ರಧಾನಿ ಅಭ್ಯರ್ಥಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಇಲ್ಲ ಎಂದಷ್ಟೇ ಉತ್ತರಿಸಿದ್ದಾರೆ. ಈ ಬಗ್ಗೆ ನಾನು ಚಿಂತಿಸಿಯೇ ಇಲ್ಲ, ಎಲ್ಲದಕ್ಕೂ ಚುನಾವಣೆ ಮುಗಿಯಲಿ ಬಿಡಿ ಎಂದಿದ್ದಾರೆ.
ಜೊತೆಗೆ ಈ ವರ್ಷವೇ ಕಾಂಗ್ರೆಸ್ ಸಂಸತ್ತನ್ನು ವಿಸರ್ಜಿಸಿ ಚುನಾವಣೆಗೆ ಹೋಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.
ಮುಲಾಯಂ ಅವರ ತೃತೀಯ ರಂಗದ ಮಾತಿಗೆ ಜೆಡಿಎಸ್ ಧ್ವನಿಗೂಡಿಸಿದೆ. ಮುಂದಿನ ಚುನಾವಣೆಯಲ್ಲಿ ತೃತೀಯ ರಂಗಕ್ಕೇ ಭವಿಷ್ಯವಿರುವುದು ಎಂದು ಹೇಳಿದೆ.
ಮುಲಾಯಂ ನಂಬಲಿಕ್ಕಾಗದು: ಇದು ಎನ್‌ಡಿಎ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಯುನ ಹೇಳಿಕೆ. ಕಳೆದ 9 ವರ್ಷಗಳಿಂದ ಎಸ್‌ಪಿಯನ್ನು ನೋಡುತ್ತಲೇ ಬಂದಿದ್ದೇವೆ. ಇದರಲ್ಲಿ ಹೊಸದೇನಿಲ್ಲ. ಕಾಂಗ್ರೆಸ್ ಅನ್ನು ಬೈಯುತ್ತಲೇ ಬಂದಿದ್ದಾರೆ, ಜೊತೆಗೆ ಸರ್ಕಾರಕ್ಕೆ ಬೆಂಬಲವನ್ನೂ ನೀಡುತ್ತಾ ಬಂದಿದ್ದಾರೆ. ಹೀಗಾಗಿ ಮುಲಾಯಂ ಅವರ ಮಾತನ್ನು ಗಂಭೀರವಾಗಿ ಪರಿಗಣಿಸಬೇಕಾದ ಅಗತ್ಯವಿಲ್ಲ ಎಂದು ಜೆಡಿಎಸ್ ಹೇಳಿದೆ.
ಬಿಜೆಪಿ ಕೂಡ ಮುಲಾಯಂ ಮಾತಿಗೆ ಪ್ರತಿಕ್ರಿಯೆ ನೀಡಿದ್ದು, ಮುಲಾಯಂ ಹೇಳಿದಂತೆ ನಡೆಯಲ್ಲ ಎಂದಿದೆ. ಕಾಂಗ್ರೆಸ್ ಮೋಸ ಮಾಡುತ್ತಿದೆ ಎಂದಾದ ಮೇಲೆ ಬೆಂಬಲ ನೀಡಿರುವುದು ಏಕೆ ಎಂದು ಅದು ಪ್ರಶ್ನಿಸಿದೆ.
ಅಲ್ಲದೆ ಲೋಕಸಭೆಗೆ ಮಧ್ಯಂತರ ಚುನಾವಣೆ ಎದುರಾಗುವುದು ನಿಶ್ಚಿತ ಎಂದು ಬಿಜೆಪಿ ಹೇಳಿದೆ. ಆದರೆ ಜನರಿಗೆ ಮುಂದಿನ 5 ವರ್ಷ ಮನಮೋಹನ್ ಸಿಂಗ್ ಅವರೇ ಪ್ರಧಾನಿಯಾಗಿ ಮುಂದುವರಿಯುವುದು ಬೇಕಿಲ್ಲ ಎಂದು ಹೇಳಿದೆ.
ಇದೇ ವೇಳೆ ಅಲ್ಪಮತಕ್ಕೆ ಕುಸಿದಿರುವ ಮನಮೋಹನ್ ಸರ್ಕಾರಕ್ಕೆ ಮುಂದುವರಿಯುವ ಅರ್ಹತೆ ಇಲ್ಲ ಎಂದು ತೃಣಮೂಲ ಕಾಂಗ್ರೆಸ್ ಆರೋಪಿಸಿದೆ. ಈ ಕೂಡಲೇ ಮನಮೋಹನ್ ಸಿಂಗ್ ಸರ್ಕಾರ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದೆ.

ಬೆಂಬಲ ನೀಡೆವು: ಡಿಎಂಕೆ
ಈ ಹಿಂದೆ ಯುಪಿಎಗೆ ಬೆಂಬಲ ನೀಡಿ ಲಂಕಾ ಕಲಹದ ಹಿನ್ನೆಲೆಯಲ್ಲಿ ಬೆಂಬಲ ವಾಪಸ್ ಪಡೆದಿರುವ ಡಿಎಂಕೆ ಮತ್ತೆ ಯುಪಿಎಗೆ ಬೆಂಬಲ ನೀಡುವ ಮಾತೇ ಇಲ್ಲ ಎಂದು ಘೋಷಿಸಿದೆ. ಈ ಸಂಬಂಧ ಚೆನ್ನೈನಲ್ಲಿ ಮಾತನಾಡಿರುವ ಕರುಣಾನಿಧಿ ಅವರು, ಯುಪಿಎಗೆ ಬೆಂಬಲ ನೀಡಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ ಹೊರಗಿನಿಂದಲೂ ಕೂಡ ಬೆಂಬಲ ನೀಡುವುದಿಲ್ಲ. ಒಂದೊಮ್ಮೆ ಮುಂದೆ ಕೋಮು ಶಕ್ತಿಗಳು ಅಧಿಕಾರಕ್ಕೆ ಬಂದರೆ ಅದಕ್ಕೆ ನಮ್ಮ ಹೊಣೆ ಮಾಡುವಂತಿಲ್ಲ ಎಂದು ಹೇಳಿದ್ದಾರೆ.  

ಕಾಂಗ್ರೆಸ್ ಮೋಸ
ಕಾಂಗ್ರೆಸ್ ಮೊದಲಿನಿಂದಲೂ ಬೆನ್ನಿಗೆ ಚೂರಿ ಹಾಕುವ ಕೆಲಸ ಮಾಡಿಕೊಂಡೇ ಬಂದಿದೆ. ಸಿಬಿಐ ಮತ್ತು ತೆರಿಗೆ ಇಲಾಖೆಗಳನ್ನು ತನ್ನ ಮುಷ್ಟಿಯಲ್ಲಿಟ್ಟುಕೊಂಡು ಆಟವಾಡಿಸುತ್ತಿದೆ ಎಂದು ಮುಲಾಯಂ ಆರೋಪಿಸಿದ್ದಾರೆ.  ಇದಷ್ಟೇ ಅಲ್ಲ ತನಗೆ ಬೆಂಬಲ ನೀಡಿದವರನ್ನು ಕೆಟ್ಟದಾಗಿ ನಡೆಸಿಕೊಳ್ಳುವ ಚಾಳಿ ಕೂಡ ಕಾಂಗ್ರೆಸ್‌ಗಿದೆ. ಇದಕ್ಕೆ ಉದಾಹರಣೆ ಡಿಎಂಕೆಯ ಎ. ರಾಜಾ. 2ಜಿ ಹಗರಣದ ಸುಳಿಯಲ್ಲಿ ರಾಜಾ ಅವರನ್ನು ಸಿಲುಕಿಸಿದ್ದೇ ಕಾಂಗ್ರೆಸ್ ಪಕ್ಷ. ಈ ಮೂಲಕ ಬೆಂಬಲ ನೀಡಿದವರಿಗೆ ಮೋಸ ಮಾಡಿದೆ ಎಂದು ತೀಕ್ಷ್ಣವಾಗಿ ಆಪಾದಿಸಿದ್ದಾರೆ. ಕೋಮುವಾದಿ ಶಕ್ತಿಗಳ ಜೊತೆ ಕೈಜೋಡಿಸುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿರುವ ಅವರು, ಬಿಜೆಪಿಗೆ ಯಾವುದೇ ಕಾರಣಕ್ಕೂ ಬೆಂಬಲ ನೀಡುವುದಿಲ್ಲ ಎಂದಿದ್ದಾರೆ.

ಎಸ್‌ಪಿ ಸರ್ಕಾರ ಹೊಗಳಿದ ಚಿದು
ರಾಷ್ಟ್ರ ರಾಜಧಾನಿಯಲ್ಲಿ ಇಷ್ಟೆಲ್ಲಾ ಬೆಳವಣಿಗೆಗಳಾದರೂ, ಲಖನೌನಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಜೊತೆ ವೇದಿಕೆ ಹಂಚಿಕೊಂಡಿದ್ದ ಹಣಕಾಸು ಸಚಿವ ಪಿ. ಚಿದಂಬರಂ ರಾಜ್ಯ ಸರ್ಕಾರವನ್ನು ಹಾಡಿ ಹೊಗಳಿದ್ದಾರೆ. ಸರ್ಕಾರದ ಸಾಧನೆ ಚೆನ್ನಾಗಿದೆ. ಅಭಿವೃದ್ಧಿ ವಿಚಾರದಲ್ಲಿ ಉತ್ತರಪ್ರದೇಶ ಸರ್ಕಾರದ ಜೊತೆಗೆ ಕೇಂದ್ರ ಸರ್ಕಾರ ಇರಲಿದೆ ಎಂದು ಹೇಳುವ ಮೂಲಕ ಓಲೈಕೆ ತಂತ್ರ ಅನುಸರಿಸಿದ್ದಾರೆ.
ಇದರ ಜೊತೆಗೆ ಕಾಂಗ್ರೆಸ್ ನಾಯಕರು ಮುಲಾಯಂ ಅವರ ಹೇಳಿಕೆ ಸಂಬಂಧ ತೀಕ್ಷ್ಣವಾಗಿ ಪ್ರತಿಕ್ರಿಯೆ ನೀಡಲು ಹೋಗಿಲ್ಲ. ಬದಲಾಗಿ ಯಾರು ಮೋಸ ಮಾಡಿದ್ದಾರೆ ಎಂಬುದು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ ಎಂದು ಹೇಳಿದ್ದಾರೆ. ಅಲ್ಲದೆ ಮುಲಾಯಂ ನಮ್ಮ ಗೌರವಾನ್ವಿತ ಸ್ನೇಹಿತ ಎಂದು ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com