
ನವದೆಹಲಿ: ಮುಂದಿನ ಮೂರು ವರ್ಷದಲ್ಲಿ ಗಂಗಾ ನದಿ ಶುದ್ಧೀಕರಣ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದು ಕೇಂದ್ರ ಸಚಿವೆ ಉಮಾಭಾರತಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಯೋಜನೆಯಾದ ಗಂಗಾ ಶುದ್ಧೀಕರಣದ ಕೆಲಸಗಳು ಈಗಾಗಲೇ ಚಾಲ್ತಿಯಲ್ಲಿದ್ದು, ಯೋಜನೆಯ ಕಾಮಗಾರಿಗಳು ಮತ್ತು ಇತರೆ ಕಾರ್ಯಗಳು ಪ್ರಗತಿಯಲ್ಲಿವೆ. ಇನ್ನು ಯೋಜನೆಯ ಮುಂದಿನ ಭಾಗವನ್ನು ಆರಂಭಿಸಲು ಉತ್ತರ ಪ್ರದೇಶ ಸರ್ಕಾರದ ನೆರವು ಬೇಕಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರೊಂದಿಗೆ ಚರ್ಚಿಸಲು ನಿರ್ಧರಿಸಿದ್ದೇವೆ. ಹೀಗಾಗಿ ಡಿಸೆಂಬರ್ 20ರಂದು ಅಖಿಲೇಶ್ ಯಾದವ್ ಅವರೊಂದಿಗೆ ಸಭೆ ಏರ್ಪಡಿಸಲಾಗಿದ್ದು, ಅವರೊಂದಿಗೆ ಈ ಬಗ್ಗೆ ಚರ್ಚೆ ನಡೆಸುತ್ತೇವೆ ಎಂದು ಉಮಾಭಾರತಿ ಹೇಳಿದ್ದಾರೆ.
ಅಲ್ಲದೆ ಗಂಗಾನದಿ ಶುದ್ದೀಕರಣಕ್ಕಾಗಿ ಕೇಂದ್ರ ಸರ್ಕಾರ ಪ್ರಮುಖ ಮೂರು ಸಮಗ್ರ ಯೋಜನೆಗಳನ್ನು ರೂಪಿಸಲಾಗಿದ್ದು, ರಾಜ್ಯ ಸರ್ಕಾರದ ಸಹಕಾರದೊಂದಿಗೆ 3 ವರ್ಷದೊಳಗೆ ಪೂರ್ಣಗೊಳಿಸಲಾಗುತ್ತದೆ. ಅಲ್ಲದೆ ಯೋಜನೆಯ ಕುರಿತು ಜನತೆಗೆ ಮಾಹಿತಿ ನೀಡಲು ಕೇಂದ್ರ ಸರ್ಕಾರ ವೆಬ್ಸೈಟ್ಗೆ ಚಾಲನೆ ನೀಡಿದ್ದು, ಈ ಅಂತರ್ಜಾಲ ತಾಣದಲ್ಲಿ ಯೋಜನೆಯ ಪೂರ್ಣ ಮಾಹಿತಿಯನ್ನು ಪಡೆಯಬಹುದಾಗಿದೆ.
ಅಲ್ಲದೆ ಯೋಜನೆಗೆ ಸಂಬಂಧಿಸಿದಂತೆ ಕೇಂದ್ರಸರ್ಕಾರಕ್ಕೆ ಸಲಹೆ ನೀಡಬಯಸುವವರು ವೆಬ್ಸೈಟ್ನಲ್ಲಿ ಲಾಗಿನ್ ಆಗುವ ಮೂಲಕ ಸುಮಾರು 4 ಎಂಬಿ ಗಾತ್ರದೊಳಗಿನ ಫೈಲ್ಗಳನ್ನು ಅಪ್ಲೋಡ್ ಮಾಡಬಹುದು ಎಂದು ಉಮಾ ಭಾರತಿ ಹೇಳಿದರು.
ದೇಶದ ಜನರ ಬಹುಕಾಲದ ಬೇಡಿಕೆ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಕೂಸಾದ ಗಂಗಾನದಿ ಶುದ್ಧೀಕರಣ ಯೋಜನೆ ಪದೇ ಪದೇ ವಿಳಂಭವಾಗುತ್ತಿದ್ದು, ಈ ಬಗ್ಗೆ ಕಳೆದ ಸೆಪ್ಟೆಂಬರ್ 2ರಂದು ಕೇಂದ್ರ ಸರ್ಕಾರವನ್ನು ಸುಪ್ರೀಂಕೋರ್ಟ್ ಕೂಡ ತರಾಟೆಗೆ ತೆಗೆದುಕೊಂಡಿತ್ತು.
ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳನ್ನು ಜಾರಿಗೊಳಿಸಿದರೆ ಗಂಗಾನದಿಯನ್ನು ಶುದ್ಧಗೊಳಿಸಲು 200 ವರ್ಷಗಳೇ ಬೇಕು ಸುಪ್ರೀಂಕೋರ್ಟ್ ಕಿಡಿಕಾರಿತ್ತು. ಅಲ್ಲದೆ ಗಂಗಾನದಿ ಶುದ್ಧೀಕರಣಕ್ಕೆ ಸಂಬಂಧಿಸಿದಂತೆ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಕೇಂದ್ರಸರ್ಕಾರಕ್ಕೆ ಸೂಚಿಸಿತ್ತು.
Advertisement