
ನವದೆಹಲಿ: ಮರು ಮತಾಂತರ ವಿವಾದ ರಾಜ್ಯ ಸಭೆ ಕಲಾಪವನ್ನು ಸತತ ಮೂರನೇ ದಿನವೂ ಆಹುತಿ ತೆಗೆದುಕೊಂಡಿತು. ಈ ವಿಚಾರಕ್ಕೆ ಸಂಬಂಧಿಸಿ ಮೇಲ್ಮನೆಯಲ್ಲಿ ಒಂದಾಗಿ ಗದ್ದಲ ಎಬ್ಬಿಸಿದ ಪ್ರತಿಪಕ್ಷಗಳು ಪ್ರಧಾನಿ ಹೇಳಿಕೆಗೆ ಆಗ್ರಹ ಮುಂದುವರಿಸಿದವು. ಇದರಿಂದ ಬುಧವಾರದ ಕಲಾಪವನ್ನು ದಿನದ ಮಟ್ಟಿಗೆ ಮುಂದೂಡಬೇಕಾಯಿತು. ಸಭಾಪತಿ ಹಮೀದ್ ಅನ್ಸಾರಿ ಸೂಚನೆ ಹೊರತಾಗಿಯೂ ಗದ್ದಲ ಮುಂದುವರಿಸಿದ ಕಾಂಗ್ರೆಸ್ ಸದಸ್ಯ ಹನುಮಂತ ರಾವ್ ಅವರಿಗೆ ಅನಿವಾರ್ಯವಾಗಿ ಸದನದಿಂದ ಹೊರಹೋಗುವಂತೆ ಸೂಚಿಸಬೇಕಾಯಿತು.
ಇದಕ್ಕೂ ಮೊದಲು ಕಲಾಪ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್, ಎಸ್ಪಿ ಮತ್ತು ಎಡಪಕ್ಷಗಳು ಒಂದಾಗಿ ಮರು ಮತಾಂತರಕ್ಕೆ ಸಂಬಂಧಿಸಿದ ಚರ್ಚೆ ವೇಳೆ ಪ್ರಧಾನಿ ಹಾಜರಿರಬೇಕು, ಹೇಳಿಕೆ ನೀಡಬೇಕು ಎಂದು ಪಟ್ಟು ಹಿಡಿದವು. ಇದಕ್ಕೆ ಸರ್ಕಾರ ಒಪ್ಪಿಗೆ ಸೂಚಿಸದಾಗ ಬಾವಿಗಳಿದು ಪ್ರತಿಭಟನೆ ನಡೆಸಿದವು.
ಈ ವೇಳೆ ಪ್ರತಿಪಕ್ಷಗಳ ವಿರುದ್ಧ ತೀವ್ರ ಹರಿಹಾಯ್ದ ಸಚಿವರು, ಮರು ಮತಾಂತರ ವಿಚಾರಕ್ಕೆ ಸಂಬಂಧಿಸಿ ಚರ್ಚೆಗೆ ಸಿದ್ಧ. ಪ್ರತಿಪಕ್ಷಗಳ ಪ್ರಶ್ನೆಗೆ ಕೇಂದ್ರ ಗೃಹ ಸಚಿವ ರಾಜನಾತ್ ಸಿಂಗ್ ಉತ್ತರಿಸುವರು ಎನ್ನುವ ಭರವಸೆ ನೀಡಿದರು. ಆದರೆ, ಇದಕ್ಕೊಪ್ಪದ ಪ್ರತಿಪಕ್ಷಗಳು ಗದ್ದಲ ಮುಂದುವರಿಸಿದ ಕಾರಣ ಪ್ರಶ್ನೋತ್ತರ ಅವಧಿಯಲ್ಲಿ ಒಂದು ಬಾರಿ ಮತ್ತು ಮಧ್ಯಾಹ್ನದ ನಂತರ 3 ಬಾರಿ ಕಲಾಪ ಮುಂದೂಡಿದ ಸಭಾಪತಿ ಅಂತಿಮವಾಗಿ ಬುಧವಾರದ ಮಟ್ಟಿಗೆ ಕಲಾಪವನ್ನು ಮುಂದೂಡಿದರು.
ಅಲೀಗಡ: 'ಘರ್ ವಾಪ್ಸಿ' ರದ್ದು
ಡಿ.25 ರಂದು ಅಲೀಗಡದಲ್ಲಿ 400 ಮುಸ್ಲಿಮರನ್ನು ಹಿಂದೂ ಧರ್ಮಕ್ಕೆ ಮರು ಮತಾಂತರ ಮಾಡುವ ಕಾರ್ಯಕ್ರಮವನ್ನು ಧರಂ ಜಾಗರಣ್ ಮಂಚ್ ರದ್ದು ಮಾಡಿದೆ. ಜಿಲ್ಲಾಡಳಿತದ ಬೆದರಿಕೆ ಮತ್ತು ಆರೆಸ್ಸೆಸ್ ಮುಖಂಡರ ಸೂಚನೆಯಂತೆ ಈ ಕಾರ್ಯಕ್ರಮ ರದ್ದು ಮಾಡಲಾಗಿದೆ.
ಸರ್ಕಾರ ತಪ್ಪು ಮಾಡಿಲ್ಲ
'ಸರ್ಕಾರ ತಪ್ಪು ಮಾಡಿಲ್ಲ. ಹೀಗಾಗಿ ಪ್ರತಿ ಬಾರಿಯೂ ಪ್ರತಿಪಕ್ಷಗಳ ವಿರುದ್ಧ ಆಕ್ರಮಣಕಾರಿಯಾಗಿ ಮಾತನಾಡಬೇಕಿಲ್ಲ'. ಹೀಗೆಂದು ಸಂಪುಟ ಸದಸ್ಯರಿಗೆ ಪ್ರಧಾನಿ ಮೋದಿ ಸಲಹೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
Advertisement