
ನವದೆಹಲಿ: ಕಳೆದ 25 ವರ್ಷಗಳಲ್ಲೇ ಮೊತ್ತಮೊದಲ ಬಾರಿಗೆ ಜಮ್ಮು ಮತ್ತು ಕಾಶ್ಮೀರದಲ್ಲಿ ದಾಖಲೆ ಪ್ರಮಾಣದ ಮತದಾನ ನಡೆದಿದೆ.
ವಿಧಾನಸಭೆ ಚುನಾವಣೆಯ 5ನೇ ಮತ್ತು ಕೊನೆಯ ಹಂತದ ಮತದಾನ ಶನಿವಾರ ನಡೆದಿದ್ದು, ಶೇ.76 ಮತದಾನ ದಾಖಲಾಗಿದೆ. ಎಲ್ಲ ಹಂತಗಳನ್ನೂ ಪರಿಗಣಿಸಿದರೆ ಇಲ್ಲಿ ಒಟ್ಟಾರೆ ಶೇ.64ರಷ್ಟು ಮತದಾನ ದಾಖಲಾಗಿದೆ. ಇದು ಐತಿಹಾಸಿಕ ದಾಖಲೆ ಎಂದು ಉಪ ಚುನಾವಣಾ ಆಯುಕ್ತ ವಿನೋ ಜುಟ್ಶಿ ಬಣ್ಣಿಸಿದ್ದಾರೆ. ಇದೇ ವೇಳೆ ಜಾರ್ಖಂಡ್ ಕೂಡ ತನ್ನ ಈವರೆಗಿನ ಎಲ್ಲ ದಾಖಲೆಗಳನ್ನು ಮುರಿದು 5 ಹಂತಗಳಲ್ಲಿ ಶೇ.66 ಮತದಾನವನ್ನು ದಾಖಲಿಸಿಕೊಂಡಿವೆ. ಶನಿವಾರದ ಕೊನೆಯ ಹಂತದಲ್ಲಿ ಶೇ.71 ಮತದಾನ ದಾಖಲಾಗಿದೆ.
ಕಣಿವೆಯಲ್ಲಿ ಪಿಡಿಪಿಗೆ ಬಹುಮತ
ಉಗ್ರರ ಹಾವಳಿಯಿರುವ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಬಾರಿ ದಾಖಲೆ ಪ್ರಮಾಣದಲ್ಲಿ ಮತದಾನ ನಡೆದಿದೆ. ಪ್ರತ್ಯೇಕತಾವಾದಿಗಳ ಬಹಿಷ್ಕಾರದ ನಡುವೆಯೂ ಜನರು ಉತ್ಸಾಹದಿಂದ ಹಕ್ಕು ಚಲಾಯಿಸಿದ್ದಾರೆ. ಈ ಐತಿಹಾಸಿಕ ಬೆಳವಣಿಗೆಯು ಬಿಜೆಪಿಗೆ ಲಾಭವಾಗಿ ಪರಿಣಮಿಸಲಿದೆ ಎಂದೇ ನಂಬಲಾಗಿದೆ. ಅದರಲ್ಲೂ ಜಮ್ಮುವಿನಲ್ಲಿ ಬಿಜೆಪಿಯು ಅತ್ಯಂತ ಹೆಚ್ಚು ಸೀಟುಗಳನ್ನು ಗಳಿಸಲಿದೆ ಎಂದೇ ನಿರೀಕ್ಷಿಸಲಾಗಿದೆ.
ಆದರೆ ಸಮೀಕ್ಷೆಗಳು ಹೇಳುವ ಪ್ರಕಾರ, ಬಿಜೆಪಿಗೆ ಕಣಿವೆ ರಾಜ್ಯದಲ್ಲಿ ಸರ್ಕಾರ ರಚಿಸುವಷ್ಟು ಸೀಟುಗಳು ದೊರೆಯುವುದಿಲ್ಲ. ಬದಲಿಗೆ ಮೆಹಬೂಬಾ ಮುಫ್ತಿ ನೇತ್ಛತ್ವದ ಪಿಡಿಪಿ 32-41 ಸೀಟುಗಳನ್ನು ಗಳಿಸಿ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಆದರೆ ಸರ್ಕಾರ ರಚಿಸಲು 44 ಸೀಟುಗಳು ಬೇಕಾಗಿರುವ ಕಾರಣ ಇಲ್ಲಿ ಅತಂತ್ರ ವಿಧಾನಸಭೆ ನಿರ್ಮಾಣವಾಗುವ ಸಾಧ್ಯತೆ ಹೆಚ್ಚು. ಇಲ್ಲಿ ಪಿಡಿಪಿ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸುವ ಸಾಧ್ಯತೆಯೂ ಇದೆ.
ಸಮೀಕ್ಷೆ ಕೈಗೊಂಡ ಸಂಸ್ಥೆಗಳು
ಆ್ಯಕ್ಸಿಸ್ ಎಪಿಎಂ, ಎಬಿಪಿ ನ್ಯೂಸ್-ನೀಲ್‌ಸನ್, ಇಂಡಿಯಾ ಟಿವಿ ಮತ್ತು ಸಿ-ವೋಟರ್, ಇಂಡಿಯಾ ಟುಡೇ-ಸಿಸಿರೋ
ಜಾರ್ಖಂಡ್
ಬಿಜೆಪಿ ಮೈತ್ರಿಕೂಟ 37-52
ಜೆಎಂಎಂ 10-23
ಕಾಂಗ್ರೆಸ್ ಮೈತ್ರಿಕೂಟ 3-11
ಇತರೆ 8-12
ಜಮ್ಮು ಮತ್ತು ಕಾಶ್ಮೀರ
ಬಿಜೆಪಿ 27-33
ಕಾಂಗ್ರೆಸ್ 4-13
ಎನ್‌ಸಿ 8-14
ಪಿಡಿಪಿ 32-41
ಇತರೆ 2-8
Advertisement