
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಹೊಸ ಇತಿಹಾಸ ಬರೆದಿದ್ದಾರೆ. ಶ್ವೇತಭವನದಲ್ಲಿ ಆಯೋಜಿಸಿದ್ದ 2014ರ ವರ್ಷದ ತಮ್ಮ ಕೊನೆಯ ಪತ್ರಿಕಾಗೋಷ್ಠಿಯಲ್ಲಿ ಕೇವಲ ಮಹಿಳಾ ಪತ್ರಕರ್ತರ ಪ್ರಶ್ನೆಗಷ್ಟೇ ಅವರು ಉತ್ತರಿಸಿದ್ದಾರೆ.
ಸಾಮಾನ್ಯವಾಗಿ ಶ್ವೇತಭವನದ ಪತ್ರಿಕಾಗೋಷ್ಠಿಯಲ್ಲಿ ಪುರುಷರಿಗೇ ಹೆಚ್ಚಿನ ಆದ್ಯತೆ ಸಿಗುತ್ತದೆ. ಹೀಗಾಗಿ ಮಹಿಳಾ ಪತ್ರಕರ್ತರು ಅಧ್ಯಕ್ಷರ ಸುದ್ದಿಗಾಗಿ ಪಡುವ ಕಷ್ಟವನ್ನು ಅರಿಯುವ ಪ್ರಯತ್ನವಾಗಿ ಒಬಾಮ ಈ ರೀತಿ ಮಾಡಿದ್ದಾರೆ. ಶ್ವೇತ ಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಕೇವಲ ಮಹಿಳಾ ಪತ್ರಕರ್ತರ ಪ್ರಶ್ನೆಗಷ್ಟೇ ಉತ್ತರ ನೀಡಿದ್ದಾರೆ.
ಪುರುಷ ಪತ್ರಕರ್ತರು ಕೇಳಿದ ಪ್ರಶ್ನೆಯನ್ನು ಉದ್ದೇಶಪೂರ್ವಕವಾಗಿಯೇ ನಿರ್ಲಕ್ಷಿಸಿದ ಅವರು, ಉಪಸ್ಥಿತರಿದ್ದ ಎಲ್ಲ ಎಂಟು ಮಹಿಳಾ ಪತ್ರಕರ್ತರ ಪ್ರಶ್ನೆಗೂ ಉತ್ತರಿಸಿದ್ದಾರೆ.
ಮಹಿಳಾ ಪತ್ರಕರ್ತರು ಸುದ್ದಿ ಸಂಗ್ರಹಿಸಲು ಎದುರಿಸುವ ಸಮಸ್ಯೆಯನ್ನು ಗಮನದಲ್ಲಿಟ್ಟುಕೊಂಡೇ ಒಬಾಮ ಈ ರೀತಿ ಉದ್ದೇಶಪೂರ್ವಕವಾಗಿ ಮಾಡಿದ್ದಾರೆ ಎಂದು ಶ್ವೇತಭವನದ ವಕ್ತಾರ ತಿಳಿಸಿದ್ದಾರೆ.
Advertisement