ಅನಧಿಕೃತ ಶಾಲೆಗಳ ಅಧಿಕೃತ ಪಟ್ಟಿ ಅಲ್ಲ

ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿ ತಯಾರಿಸಿ ಕಾನೂನು ಕ್ರಮ ಜರುಗಿಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿ ತಯಾರಿಸಿ ಕಾನೂನು ಕ್ರಮ ಜರುಗಿಸಿ ಎಂದು ಆದೇಶ ಮಾಡಿ ಎರಡು ತಿಂಗಳು ಕಳೆದರೂ ಇನ್ನು ಶಿಕ್ಷಣ ಇಲಾಖೆಯಲ್ಲಿ ಮಾನ್ಯತೆಯಿಲ್ಲದ ಶಾಲೆಗಳ ಪಟ್ಟಿ ತಯಾರಾಗಿಲ್ಲ.

ಬೆಂಗಳೂರು ನಗರ ಜಿಲ್ಲೆಯ ಉತ್ತರ ಹಾಗೂ ದಕ್ಷಿಣ ವಿಭಾಗದಲ್ಲಿ ಮಾತ್ರ 1307 ಅನಧಿಕೃತ ಶಾಲೆಗಳ ಪಟ್ಟಿ ರೂಪಿಸಿ ಆಕ್ಷೇಪಣೆಗೆ ಕರೆಯಲಾಗಿದ್ದು, ಅದೂ ಅಂತಿಮವಲ್ಲ. ಇದನ್ನು ಹೊರತುಪಡಿಸಿ ಮತ್ಯಾವ ಜಿಲ್ಲೆಗಳ ಅನಧಿಕೃತ ಶಾಲೆಗಳ ಹೆಸರೂ ಹೊರಬಂದಿಲ್ಲ.

ಆರ್ಕಿಡ್ ಅಂತಾರಾಷ್ಟ್ರೀಯ ಶಾಲೆಯಲ್ಲಿ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣದ ನಂತರ ರಾಜ್ಯದಲ್ಲಿರುವ ಅನಧಿಕೃತ ಶಾಳೆಗಳ ಪಟ್ಟಿ ತಯಾರಿಸುವಂತೆ ಸಚಿವರು ಸೂಚಿಸಿದ್ದರು. ಅ.15ರೊಳಗೆ ಈ ಪಟ್ಟಿ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿನ ಮಾಹಿತಿ ಕೊರತೆ ಕಾರಣದಿದ ಇವತ್ತಿನವರೆಗೂ ಅದು ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಮಾಧ್ಯಮಗಳ ಗೊಂದಲವೂ ಅನಧಿಕೃತ ಶಾಲೆಗಳ ಪಟ್ಟಿ ತಯಾರಿಕೆಗೆ ತೊಡಕಾಗಿದೆ.

ಮಾಧ್ಯಮಗಳ ವಿವಾದವನ್ನು ಪರಿಗಣಿಸಿ ಅನಧಿಕೃತ ಶಾಲೆಗಳ ಪಟ್ಟಿ ತಯಾರಿಸಿದರೆ ಬಹುತೇಕ ಆಂಗ್ಲ ಮಾಧ್ಯಮ ಖಾಸಗಿ ಶಾಲೆಗಳು ಈ ಪಟ್ಟಿಗೆ ಸೇರಿ ಬಿಡುತ್ತವೆ. ಇನ್ನೊಂದೆಡೆ ಯಾವ ಶಾಲೆಗಳು ಅಧಿಕೃತ ಅಥವಾ ಅನಧಿಕೃತ ಎನ್ನುವುದಕ್ಕೆ ಸ್ಥಳೀಯ ಅಧಿಕಾರಿಗಳ ಬಳಿ ಮಾಹಿತಿಯೇ ಇಲ್ಲ. ಸಿಬಿಎಸ್‌ಇ ಅಥವಾ ಐಸಿಎಸ್‌ಇ ಶಾಲೆಗಳಿಗೆ ಅಧಿಕಾರಿಗಳು ಮನವಿ ಮಾಡಿ ಮಾನ್ಯತೆ ಪತ್ರ ನೀಡುವಂತೆ ಕೇಳಿಕೊಂಡಿದ್ದಾರೆ. ಶಾಲೆಗಳು ನೀಡುವ ಮಾಹಿತಿಗೆ ಇವರು ಕಾಯುತ್ತಿದ್ದಾರೆ.

ಆದರೆ ಶಿಕ್ಷಣ ಸಚಿವರು ಮಾತ್ರ ವಿಧಾನಪರಿಷತ್‌ನಲ್ಲಿ ಹೇಳಿಕೆ ನೀಡಿ ರಾಜ್ಯದಲ್ಲಿ 1050 ಅನಧಿಕೃತ ಶಾಲೆಗಳಿವೆ ಎಂದಿದ್ದಾರೆ. ಬೆಂಗಳೂರು ನಗರದವೊಂದರಲ್ಲೇ ಸಚಿವರು ಹೇಳಿದ್ದಕ್ಕಿಂತ 250 ಕ್ಕೂ ಹೆಚ್ಚು ಅನಧಿಕೃತ ಶಾಲೆಗಳಿವೆ. ಸಚಿವರು ಯಾವ ಆಧಾರದಲ್ಲಿ ಈ ಹೇಳಿಕೆ ನೀಡಿದ್ದಾರೆ ಎನ್ನುವುದು ತಿಳಿದುಬಂದಿಲ್ಲ. ಶಿಕ್ಷಣ ಇಲಾಖೆಯ ಅಧಿಕೃತ ವೆಬ್‌ಸೈಟ್‌ನಲ್ಲಿ ಹೇಳಿರುವಂತೆ ಬೆಂಗಳೂರು ಉತ್ತರದಲ್ಲಿ 798 ಹಾಗೂ ದಕ್ಷಿಣದಲ್ಲಿ 509 ಅನಧಿಕೃತ ಶಾಲೆಗಳ ಪಟ್ಟಿ ತಯಾರಿಸಲಾಗಿದೆ. ಈ ಶಾಲೆಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.

ಈ ಬಗ್ಗೆ ಶಿಕ್ಷಣ ಇಲಾಖೆಯನ್ನು ಪ್ರಶ್ನಿಸಿದಾಗಲೆಲ್ಲ ಇನ್ನೊಂದು ವಾರದಲ್ಲಿ ಮಾಹಿತಿ ಕಲೆ ಹಾಕಿ ವೆಬ್ ಸೈಟ್‌ನಲ್ಲಿ ಪ್ರಕಟಿಸುತ್ತೇವೆ ಎಂದು ಹೇಳುತ್ತಿದ್ದಾರೆ. ಅಧಿಕಾರಿಗಳಿಗೆ ನೀಡಿದ ಡೆಡ್‌ಲೈನ್ ಮುಗಿದು 25 ದಿನಗಳಾಗಿವೆ. ಸರ್ಕಾರಿ ಆದೇಶದ ಪ್ರಕಾರ ನ.28 ರಂದು ಎಲ್ಲ ಡಿಡಿಪಿಐಗಳೂ ಇಲಾಖೆ ವೆಬ್‌ಸೈಟ್‌ಗೆ ಜಿಲ್ಲಾವಾರು ಮಾಹಿತಿ ನೀಡಬೇಕಾಗಿತ್ತು. ಅದರಲ್ಲಿ ಅನಧಿಕೃತ ಶಾಲೆಗಳ ಹೆಸರು ಹಾಗೂ ವಿಳಾಸ ಇರಬೇಕು ಎಂದು ಸ್ಪಷ್ಟಪಡಿಸಲಾಗಿತ್ತು.


ಇಕ್ಕಟ್ಟಿನಲ್ಲಿ ಶಿಕ್ಷಣ ಇಲಾಖೆ

ಆರ್ಕಿಡ್ ಶಾಲೆಯ ಮಾನ್ಯತೆ ಸಂಬಂಧಿಸಿ ಕಠಿಣ ನಿಲುವು ತೆಗೆದುಕೊಂಡು ವಿದ್ಯಾರ್ಥಿಗಳನ್ನು  ವರ್ಗಾಯಿಸಲು ಸರ್ಕಾರ ಮುಂದಾಗಿತ್ತು. ಆದರೆ ಹೈ ಕೋರ್ಟ್‌ನಿಂದ ಸರ್ಕಾರದ ಆದೇಶಕ್ಕೆ ತಡೆಯಾಜ್ಞೆ ದೊರೆಯಿತು. ಅಂತಿಮವಾಗಿ ಈ ವರದಿ ಬಂದರೆ ಸಾವಿರಾರು ಶಾಲೆಗಳನ್ನು ಮುಚ್ಚಬೇಕಾಗುತ್ತದೆ. ವರ್ಷದ ಮಧ್ಯದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಬೇರೆ ಶಾಲೆಗಳಲ್ಲಿ ವ್ಯವಸ್ಥೆ ಮಾಡುವುದೂ ಅಸಾಧ್ಯ ಇದಕ್ಕೆ ಪರಿಹಾರ ಸಿಗುವುದೇ ಕಷ್ಟವಾಗಿದ್ದರಿಂದ ವರದಿ ವಿಳಂಬಕ್ಕೆ ಕಾರಣವಾಗುತ್ತಿದೆ.

ಶೀಘ್ರದಲ್ಲಿಯೇ ಸರ್ಕಾರಕ್ಕೆ ವರದಿ ಬರಲಿದೆ. ವೆಬ್‌ಸೈಟ್‌ನಲ್ಲಿ ಅನಧಿಕೃತ ಶಾಲೆಗಳ ಪಟ್ಟಿ ಪ್ರಕಟಿಸುತ್ತೇವೆ. ಆದರೆ ಮಾಧ್ಯಮ ಗೊಂದಲದ ಕಾರಣದಿಂದ ಪಟ್ಟಿ ತಯಾರಿಸಲು ವಿಳಂಬವಾಗುತ್ತಿದೆ.

ಮೊಹಮದ್ ಮೊಹಸೀನ್
ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com