ಕಾಂಗ್ರೆಸ್ ಮುಕ್ತ ಭಾರತ ಕನಸು ನನಸಾಗುತ್ತಿದೆ: ಅಮಿತ್ ಶಾ

ಕಾಂಗ್ರೆಸ್ ಮುಕ್ತ ಭಾರತ ಕನಸು ನಿಧಾನವಾಗಿ ನನಸಾಗುತ್ತಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ (ಸಂಗ್ರಹ ಚಿತ್ರ)

ನವದೆಹಲಿ: ಕಾಂಗ್ರೆಸ್ ಮುಕ್ತ ಭಾರತ ಕನಸು ನಿಧಾನವಾಗಿ ನನಸಾಗುತ್ತಿದೆ ಎಂದು ಬಿಜೆಪಿ ಪಕ್ಷದ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಹೇಳಿದ್ದಾರೆ.

ಎರಡು ರಾಜ್ಯಗಳ ವಿಧಾನಸಭಾ ಚುನಾವಣೆಯ ಫಲಿತಾಂಶ ಹೊರ ಬೀಳುತ್ತಿದ್ದಂತೆಯೇ ನವದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅಮಿತ್ ಶಾ, ಎರಡೂ ರಾಜ್ಯಗಳಲ್ಲಿನ ಚುನಾವಣಾ ಫಲಿತಾಂಶ ಸಂತಸ ತಂದಿದೆ. ಬಿಜೆಪಿಯ ಮೇಲೆ ಭರವಸೆ ಇಟ್ಟು ಜನತೆ ಮತದಾನ ಮಾಡಿದ್ದಾರೆ. ಚುನಾವಣಾ ಪೂರ್ವದಲ್ಲಿ ನಾವು ಕೊಟ್ಟಿದ್ದ ಭರವಸೆಗಳನ್ನು ಖಂಡಿತವಾಗಿಯೂ ಪೂರ್ಣಗೊಳಿಸುತ್ತೇವೆ ಎಂದು ಜಾರ್ಖಂಡ್ ಜನತೆಯಲ್ಲಿ ಪ್ರಮಾಣ ಮಾಡುತ್ತೇನೆ.

ರಾಜಕೀಯವಾಗಿ 2014ನೇ ವರ್ಷ ಬಿಜೆಪಿ ಪಾಲಿಗೆ ಅತ್ಯಮೂಲ್ಯವಾಗಿದ್ದು, ಅಧಿಕ ಪ್ರಮಾಣದಲ್ಲಿ ಯಶಸ್ಸು ಗಳಿಸಿದ್ದೇವೆ. ಪ್ರಸಕ್ತ ಚುನಾವಣಾ ಯಶಸ್ಸಿನ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ಅವರ ನೇತೃತ್ವದ ಕೇಂದ್ರ ಸರ್ಕಾರ ಕೇವಲ 6 ತಿಂಗಳಲ್ಲೇ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದು, ಇದು ಬಿಜೆಪಿ ಮೇಲೆ ಜನತೆ ಭರವಸೆ ಇಡುವಂತೆ ಮಾಡಿದೆ. ಎರಡೂ ರಾಜ್ಯಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನಿರಂತರ ಪ್ರಚಾರದಲ್ಲಿ ಕೈಗೊಂಡ ಪರಿಣಾಮ ಯಶಸ್ಸು ಸಾಧಿಸಿದ್ದೇವೆ.

ಜಾರ್ಖಂಡ್‌ನಲ್ಲಿ ಇದೇ ಮೊದಲ ಬಾರಿಗೆ ಸ್ಥಿರ ಸರ್ಕಾರ ರಚನೆಯಾಗುತ್ತಿದ್ದು, ಜಾರ್ಖಂಡ್ ಜನತೆಯ ಬಹುದಿನಗಳ ಕನಸು ಈಡೇರುತ್ತಿದೆ. ಇನ್ನು ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿದ್ದು, ಶೇಕಡಾವಾರು ಮತಗಳಿಕೆಯಲ್ಲಿ ಬಿಜೆಪಿ ಶೇ.23ರಷ್ಟು ಮತ ಗಳಿಕೆ ಮಾಡಿದೆ. ಹೀಗಾಗಿ ಸಮಾನ ಚಿಂತಕ ಪಕ್ಷದೊಂದಿಗೆ ನಾವು ಸರ್ಕಾರ ರಚಿಸುವ ಕುರಿತು ಸಮಾಲೋಚನೆ ನಡೆಸುತ್ತೇವೆ.  ಎರಡೂ ರಾಜ್ಯಗಳಲ್ಲಿ ಕಾಂಗ್ರೆಸ್ ಮೂರು ಮತ್ತು ನಾಲ್ಕನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ. ಕಾಂಗ್ರೆಸ್ ಮುಕ್ತ ಭಾರತ ಕನಸು ನಿಧಾನವಾಗಿ ಈಡೇರುತ್ತಿದೆ.

ಪ್ರಮುಖವಾಗಿ ಎರಡೂ ರಾಜ್ಯಗಳಲ್ಲಿ ಯಶಸ್ಸಿಗೆ ಕಾರಣರಾದ ಬಿಜೆಪಿ ಕಾರ್ಯಕರ್ತರಿಗೆ ನಾನು ಹೃತ್ಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ ಎಂದು ಅಮಿತ್ ಶಾ ಹೇಳಿದರು.

ಎರಡು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಜೆಪಿ 2ನೇ ಸ್ಥಾನಕ್ಕೇರಿದೆ. ಒಟ್ಟು 87 ಕ್ಷೇತ್ರಗಳ ಪೈಕಿ ಬಿಜೆಪಿ 25 ಕ್ಷೇತ್ರಗಳಲ್ಲಿ ಜಯ ಗಳಿಸಿದ್ದು, ಪಿಡಿಪಿ ಪಕ್ಷ 28ರಲ್ಲಿ ಜಯ ಸಾಧಿಸಿದೆ. ಇನ್ನು ಜಾರ್ಖಂಡ್‌ನಲ್ಲಿ ಬಹುತೇಕ ಬಹುಮತ ಗಳಿಸಿರುವ ಬಿಜೆಪಿ ಒಟ್ಟು 81 ಕ್ಷೇತ್ರಗಳ ಪೈಕಿ 39 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದೆ. ಇಲ್ಲಿ ಕಾಂಗ್ರೆಸ್ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು, 20 ಸ್ಥಾನಗಳಿಸಿರುವ ಜಾರ್ಖಂಡ್ ಮುಕ್ತಿ ಮೋರ್ಚಾ 20 ಸ್ಥಾನಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com