

ನವದೆಹಲಿ: ನಿರೀಕ್ಷೆಯಂತೆಯೇ ವಿಧಾನಸಭಾ ಚುನಾವಣಾ ಫಲಿಂತಾಶದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಿದ್ದು, ಜಾರ್ಖಂಡ್‌ನಲ್ಲಿ ಬಿಜೆಪಿ ಗೆಲುವಿನ ನಗೆ ಬೀರಿದೆ.
ಎರಡು ರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ ಬಹಿರಂಗವಾಗಿದ್ದು, ಕಣಿವೆ ರಾಜ್ಯದಲ್ಲಿ ಬಿಜೆಪಿ ಗಮರ್ನಾರ್ಹ ಪ್ರದರ್ಶನ ನೀಡಿದೆ. ಒಟ್ಟು 87 ಸ್ಥಾನಗಳ ಪೈಕಿ ಬಿಜೆಪಿ 25 ಸ್ಥಾನಗಳನ್ನು ಗಳಿಸಿದ್ದು, ಪಿಡಿಪಿ ಪಕ್ಷ 28 ಸ್ಥಾನಗಳೊಂದಿಗೆ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಇನ್ನು ಆಡಳಿತಾರೂಢ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ ಮೂರನೇ ಸ್ಥಾನಕ್ಕೆ ಕುಸಿದಿದ್ದು, ಕೇವಲ 15 ಸ್ಥಾನಗಳಲ್ಲಿ ಮಾತ್ರ ಗೆಲುವು ಸಾಧಿಸಿದೆ. ಇನ್ನು ಇತ್ತೀಚಿನ ದಿನಗಳಲ್ಲಿನ ಕಾಂಗ್ರೆಸ್ ಪಕ್ಷದ ಹೀನಾಯ ಪ್ರದರ್ಶನ ಕಣಿವೆ ರಾಜ್ಯದಲ್ಲಿಯೂ ಮುಂದುವರೆದಿದ್ದು, ಕೇವಲ 12 ಸ್ಥಾನಗಳ ಗಳಿಕೆಯೊಂದಿಗೆ 4ನೇ ಸ್ಥಾನಕ್ಕೆ ಕುಸಿದಿದೆ.
ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ನಿರ್ಗಮಿತ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನೇತೃತ್ವದ ನ್ಯಾಷನಲ್ ಕಾನ್ಫರೆನ್ಸ್ ಪಕ್ಷ 13 ಸ್ಥಾನಗಳನ್ನು ಕಳೆದುಕೊಂಡಿದ್ದು, ಕಾಂಗ್ರೆಸ್ ಪಕ್ಷ 5 ಸ್ಥಾನಗಳನ್ನು ಕಳೆದುಕೊಂಡಿದೆ. ಬದಲಾವಣೆ ಬಯಸಿದ್ದ ಕಣಿವೆ ರಾಜ್ಯದ ಜನತೆ ಈ ಬಾರಿಯೂ ಯಾವುದೇ ನಿರ್ದಿಷ್ಟ ಪಕ್ಷಕ್ಕೆ ಬಹುಮತ ನೀಡದೇ ಇರುವುದು ರಾಜಕೀಯ ಪಕ್ಷಗಳ ಗೊಂದಲಕ್ಕೆ ಕಾರಣವಾಗಿದ್ದು, ಕಣಿವೆ ರಾಜ್ಯದಲ್ಲಿ ಈಗಾಗಲೇ ಸರ್ಕಾರ ರಚನೆ ಕಸರತ್ತು ಆರಂಭವಾಗಿದೆ.
ಹಿಂದು ಮತಗಳೇ ಹೆಚ್ಚಾಗಿರುವ ಜಮ್ಮು ಕ್ಷೇತ್ರ ಬಹುತೇಕ ಬಿಜೆಪಿ ತೆಕ್ಕೆಗೆ ಜಾರಿದ್ದು, ಕಾಶ್ಮೀರದಲ್ಲಿ ನಿರ್ಣಾಯಕ ಪಾತ್ರ ವಹಿಸಿರುವ ಅಲ್ಪ ಸಂಖ್ಯಾತ ಮತಗಳು ಪಿಡಿಪಿಗೆ ವರದಾನವಾಗಿ ಪರಿಣಮಿಸಿವೆ. ಜಮ್ಮು ಮತ್ತು ಕಾಶ್ಮೀರ ವಿಧಾನಸಭೆ ಒಟ್ಟು 87 ಸದಸ್ಯ ಬಲ ಹೊಂದಿದ್ದು, ಸರ್ಕಾರ ರಚನೆಗೆ 44 ಸ್ಥಾನಗಳ ಅಗತ್ಯವಿದೆ. ಹೀಗಾಗಿ ಸ್ಪಷ್ಟ ಬಹುಮತ ಅಲ್ಲದೇ ಇದ್ದರೂ ಬಹುಮತದ ಸಮೀಪಕ್ಕೆ ಬಂದು ನಿಂತಿರುವ ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ಸರ್ಕಾರ ರಚನೆಗೆ ಸಿದ್ಧತೆ ನಡೆಸಿಕೊಂಡಿವೆ.
ಈಗಾಗಲೇ ಸರ್ಕಾರ ರಚನೆ ಕಸರತ್ತು ಆರಂಭವಾಗಿದ್ದು, ಪಿಡಿಪಿ ಮತ್ತು ಬಿಜೆಪಿ ಪಕ್ಷಗಳು ಪರಸ್ಪರ ಹೊಂದಾಣಿಕೆ ಮಾಡಿಕೊಂಡು ಸರ್ಕಾರ ರಚಿಸುವತ್ತ ಚರ್ಚೆಗಳು ಆರಂಭಗೊಂಡಿದ್ದರೂ, ಪಿಡಿಪಿ ಪಕ್ಷದ ಕೆಲ ಸದಸ್ಯರು ಕಾಂಗ್ರೆಸ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಕುರಿತು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು ಬಿಜೆಪಿ ಪಕ್ಷದ ಪ್ರಮುಖ ಮುಖಂಡರು ಪಿಡಿಪಿ ಪಕ್ಷದೊಂದಿಗೆ ತಾವು ಮೈತ್ರಿ ಮಾಡಿಕೊಳ್ಳಲು ಸಿದ್ಧ ಎಂದು ಈಗಾಗಲೇ ಘೋಷಣೆ ಮಾಡಿದ್ದು, ಚೆಂಡು ಈಗ ಪಿಡಿಪಿ ಪಕ್ಷದ ಅಂಗಳದಲ್ಲಿದೆ.
ಜಾರ್ಖಂಡ್‌ನಲ್ಲಿ ಬಿಜೆಪಿಗೇ ಜನಾದೇಶ
ಕಾಶ್ಮೀರ ಪರಿಸ್ಥಿತಿಯನ್ನು ಹೋಲಿಕೆ ಮಾಡಿ ನೋಡಿದರೆ ಜಾರ್ಖಂಡ್‌ನಲ್ಲಿ ಪರಿಸ್ಥಿತಿ ವ್ಯತಿರಿಕ್ತವಾಗಿದ್ದು, ಜಾರ್ಖಂಡ್ ಜನತೆ ಬಿಜೆಪಿ ಕೈ ಹಿಡಿದಿದ್ದಾರೆ. ಒಟ್ಟು 81 ಸ್ಥಾನಗಳನ್ನು ಹೊಂದಿರುವ ಜಾರ್ಖಂಡ್ ವಿಧಾನಸಭೆಯಲ್ಲಿ ಬಿಜೆಪಿ ಒಟ್ಟು 43 ಸ್ಥಾನಗಳನ್ನು ಗಳಿಸುವ ಮೂಲಕ ಸರ್ಕಾರ ರಚನೆಗೆ ಅಣಿಯಾಗುತ್ತಿದೆ.
ಇದೇ ಮೊದಲ ಬಾರಿಗೆ ಜಾರ್ಖಂಡ್ ಜನತೆ ಪಕ್ಷವೊಂದಕ್ಕೆ ಸಂಪೂರ್ಣ ಬಹುಮತ ನೀಡಿದ್ದು, ಸಂಪೂರ್ಣ ಬಹುಮತದೊಂದಿಗೆ ಬಿಜೆಪಿ ಇದೇ ಮೊದಲ ಬಾರಿಗೆ ಜಾರ್ಖಂಡ್‌ನಲ್ಲಿ ಸರ್ಕಾರ ರಚನೆ ಮಾಡುತ್ತಿದೆ. ಆಡಳಿತಾರೂಢ ಜಾರ್ಖಂಡ್ ಮುಕ್ತಿ ಮೋರ್ಚಾ ಪಕ್ಷ ಪ್ರಸಕ್ತ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕೆ ಕುಸಿದಿದ್ದು, ಕಾಂಗ್ರೆಸ್ ಪಕ್ಷ 7 ಸ್ಥಾನಗಳ ಗಳಿಕೆಯೊಂದಿಗೆ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.
ಜಾರ್ಖಂಡ್‌ನಲ್ಲಿಯೂ ಕಾಂಗ್ರೆಸ್ ಧೂಳಿಪಟವಾಗಿದ್ದು, ಕಳೆದ ಬಾರಿಯ ಚುನಾವಣೆಗೆ ಹೋಲಿಕೆ ಮಾಡಿದರೆ ಈ ಬಾರಿ ಕಾಂಗ್ರೆಸ್ ಬರೊಬ್ಬರಿ 14 ಸ್ಥಾನಗಳನ್ನು ಕಳೆದುಕೊಂಡಿದೆ.