
ನವದೆಹಲಿ: ಭಾನುವಾರ ನಾಪತ್ತೆಯಾಗಿರುವ ಏರ್ ಏಷ್ಯಾ ವಿಮಾನ ಪತ್ತೆಗಾಗಿ ಮಲೇಷ್ಯಾ ಸರ್ಕಾರಕ್ಕೆ ಭಾರತ ನೆರವಾಗಲು ಮುಂದಾಗಿದೆ.
ಮೂಲಗಳ ಪ್ರಕಾರ ಇಂದು ಬೆಳಗ್ಗೆಯಿಂದ ನಾಪತ್ತೆಯಾಗಿರುವ ವಿಮಾನದ ಹುಡುಕಾಟಕ್ಕಾಗಿ ಭಾರತ ನೌಕಾಪಡೆ ಅಧಿಕಾರಿಗಳು ನಿರ್ಧಾರ ಕೈಗೊಂಡಿದ್ದು, ಮಲೇಷ್ಯಾ ರಕ್ಷಣಾ ಪಡೆಗಳಿಗೆ ನೆರವು ನೀಡಲಿದ್ದಾರೆ. ಭಾರತೀಯ ನೌಕಾಪಡೆಗೆ ಸೇರಿದ ಒಟ್ಟು 3 ಹಡಗುಗಳು ಕಾರ್ಯಾಚರಣೆಗೆ ಇಳಿಯಲಿದ್ದು, ನೌಕಾಪಡೆಗೆ ಸೇರಿದ ಐಎನ್‌ಎಸ್ ರಾಜಾಲಿ ನೌಕೆ ಕೂಡ ಪತ್ತೆ ಕಾರ್ಯಾಚರಣೆಯಲ್ಲಿ ತೊಡಗಲಿದೆ ಎಂದು ತಿಳಿದುಬಂದಿದೆ.
ಈಗಾಗಲೇ ಚೆನ್ನೈನಲ್ಲಿ ಐಎನ್‌ಎಸ್ ರಾಜಾಲಿ ನೌಕೆ ಸನ್ನದ್ಧವಾಗಿದ್ದು, ನೌಕೆಯಲ್ಲಿರುವ ವಿಮಾನವನ್ನು ಸನ್ನದ್ಧವಾಗಿರುವಂತೆ ಸೂಚಿಸಲಾಗಿದೆ. ಹೀಗಾಗಿ ಯಾವುದೇ ಕ್ಷಣದಲ್ಲಿ ಆದೇಶ ಬರುವ ಸಾಧ್ಯತೆ ಇದ್ದು, ಆದೇಶಕ್ಕಾಗಿ ಅಧಿಕಾರಿಗಳು ಕಾಯುತ್ತಿದ್ದಾರೆ.
ಇದಲ್ಲದೆ ಭಾರತೀಯ ವಾಯುದಳಕ್ಕೆ ಸೇರಿದ ಪಿ-81 ವಿಮಾನವು ಸೇರಿದಂತೆ ಹಲವು ತಂತ್ರಜ್ಞರು ಕಾರ್ಯಾಚರಣೆಯಲ್ಲಿ ತೊಡಗಲಿದ್ದಾರೆ. ಪ್ರಸ್ತುತ ವಿಮಾನ ಪತ್ತೆ ಕಾರ್ಯಚರಣೆಯನ್ನು ಸ್ಥಗಿತಗೊಳಿಸಲಾಗಿದ್ದು, ನಾಳೆ ಮತ್ತೆ ಕಾರ್ಯಾಚರಣೆಯನ್ನು ಆರಂಭಿಸಲಾಗುತ್ತದೆ.
ಇಂಡೋನೇಷ್ಯಾದಿಂದ ಸಿಂಗಾಪುರಕ್ಕೆ ತೆರಳುತ್ತಿದ್ದ ಕ್ಯೂಜೆಡ್ 8501 ವಿಮಾನವು ಬೆಳಗ್ಗೆ 5.30ಕ್ಕೆ ಇಂಡೋನೇಷ್ಯಾದ ಸುರಬಯಾ ವಿಮಾನ ನಿಲ್ದಾಣದಿಂದ ಟೇಕ್ ಆಫ್ ಆಗಿತ್ತು. 155 ಮಂದಿ ಪ್ರಯಾಣಿಕರು, ಐವರು ಸಿಬ್ಬಂದಿಗಳು ಮತ್ತು ಇಬ್ಬರು ಪೈಲಟ್‌ಗಳನ್ನು ಹೊಂದಿದ್ದ ವಿಮಾನ ಬೆಳಗ್ಗೆ 8.30ಕ್ಕೆ ಸಿಂಗಾಪುರಕ್ಕೆ ತಲುಪಬೇಕಿತ್ತು.
ಆದರೆ ವಿಮಾನ ಮಾರ್ಗ ಮಧ್ಯೆ ನಾಪತ್ತೆಯಾಗಿದೆ. ಕೊನೆಯ ಬಾರಿಗೆ ರಾಡಾರ್‌ನಲ್ಲಿ ದಾಖಲಾಗಿರುವ ಸಂಪರ್ಕ ಮಾಹಿತಿಯನ್ವಯ ವಿಮಾನವು ಸಿಂಗಾಪುರ ಮತ್ತು ಜಕಾರ್ತಾ ನಗರಗಳ ಆಗ್ನೇಯ ಭಾಗದಿಂದ ತನ್ನ ಕೊನೆಯ ಸಂದೇಶವನ್ನು ರವಾನಿಸಿತ್ತು. ಹೀಗಾಗಿ ಮಲೇಷ್ಯಾ ಸರ್ಕಾರ ಅಲ್ಲಿಂದಲೇ ತನ್ನ ವಿಮಾನ ಪತ್ತೆ ಕಾರ್ಯಾಚರಣೆಯನ್ನು ಆರಂಭಿಸಿದೆ.
Advertisement