
ಇಸ್ಲಾಮಾಬಾದ್: ಮುಂಬೈ ದಾಳಿ ರೂವಾರಿ ಮತ್ತು ಜಮಾತ್ ಉದ್ ದವಾ ಮುಖ್ಯಸ್ಥ ಝಕಿವುರ್ ರೆಹಮಾನ್ ಲಖ್ವಿಗೆ ಜಾಮೀನು ನೀಡಿರುವ ಕ್ರಮವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಪಾಕಿಸ್ತಾನ ಸರ್ಕಾರ ಅರ್ಜಿ ಸಲ್ಲಿಸಿದೆ.
ಭಯೋತ್ಪಾದನಾ ನಿಗ್ರಹ ವಿಶೇಷ ನ್ಯಾಯಾಲಯ ಲಖ್ವಿಗೆ ನೀಡಿರುವ ಜಾಮೀನನ್ನು ಪ್ರಶ್ನಿಸಿ ಪಾಕಿಸ್ತಾನದ ಆಂತರಿಕ ಸಚಿವಾಲಯ ಪಾಕಿಸ್ತಾನ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದೆ. ಈ ಹಿಂದೆ ಉಗ್ರ ಲಖ್ವಿಗೆ ಜಾಮೀನು ದೊರೆಯುತ್ತಿದ್ದಂತೆಯೇ ಭಾರತ ಮತ್ತು ವಿಶ್ವಸಮುದಾಯದ ಒತ್ತಾಯಕ್ಕೆ ಮಣಿದಿದ್ದ ಪಾಕಿಸ್ತಾನ ಸರ್ಕಾರ ಕಾನೂನು ಸುವ್ಯವಸ್ಥೆ ವಿಚಾರ ಮುಂದಿಟ್ಟು ಆತನನ್ನು ಬಂಧನಕ್ಕೊಳಪಡಿಸಿತ್ತು.
ಆದರೆ ಉಗ್ರ ಲಖ್ವಿ ಪಾಕಿಸ್ತಾನ ಸರ್ಕಾರದ ಈ ನಿರ್ಧಾರವನ್ನು ಇಸ್ಲಾಮಾಬಾದ್ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದ. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಕಳೆದ ವಾರ ಆತನ ವಿರುದ್ಧ ಬಂಧನ ಆದೇಶವನ್ನು ಅಮಾನತುಗೊಳಿಸಿತ್ತು.
ಇಸ್ಲಾಮಾಬಾದ್ ನ್ಯಾಯಾಲಯದ ಆದೇಶದಿಂದ ಲಖ್ವಿ ಹೊರಬರುತ್ತಾನೆ ಎಂದೇ ಭಾವಿಸಲಾಗಿತ್ತು. ಈ ಮಧ್ಯೆ ಲಖ್ವಿ ವಿರುದ್ಧ ಮತ್ತೆ ಹೊಸ ಕೇಸ್ ದಾಖಲಿಸಿದ ಪಾಕ್ ಸರ್ಕಾರ ಆತನನ್ನು ಮತ್ತೆ ಬಂಧನಕ್ಕೊಳಪಡಿಸಿತು. ಅನ್ವರ್ ಎಂಬಾತನನ್ನು ಅಪಹರಣ ಮಾಡಿದ ಆರೋಪದ ಮೇಲೆ ಉಗ್ರ ಲಖ್ವಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಮುಂಬೈ ದಾಳಿ ಪ್ರಕರಣದ ರೂವಾರಿಯಾಗಿರುವ ಲಖ್ವಿಯನ್ನು 2009ರಿಂದಲೂ ರಾವಲ್‌ಪಿಂಡಿ ಜೈಲಿನಲ್ಲಿಡಲಾಗಿದೆ.
Advertisement