ಬಿಬಿಎಂಪಿ ಆಡಳಿತ ಮಟ್ಟದ ಸಭೆಯಲ್ಲಿ ಗದ್ದಲ
ಬಿಬಿಎಂಪಿ ಆಡಳಿತ ಮಟ್ಟದ ಸಭೆಯಲ್ಲಿ ಗದ್ದಲ

ಸದ್ಯದಲ್ಲೇ ವಾರ್ಡ್‌ಮಟ್ಟದ ಹೋರಾಟ

ಬಿಜೆಪಿ ಆಡಳಿತ ಅವಧಿಯ ಎಲ್ಲ ಅಕ್ರಮಗಳನ್ನು ಸಿಬಿಐಗೆ ನೀಡಬೇಕೆನ್ನುವ ಬಗ್ಗೆ ಸದ್ಯದಲ್ಲೇ...

ಬೆಂಗಳೂರು: ಬಿಜೆಪಿ ಆಡಳಿತ ಅವಧಿಯ ಎಲ್ಲ ಅಕ್ರಮಗಳನ್ನು ಸಿಬಿಐಗೆ ನೀಡಬೇಕೆನ್ನುವ ಬಗ್ಗೆ ಸದ್ಯದಲ್ಲೇ ವಾರ್ಡ್ ಮಟ್ಟದ ಹೋರಾಟ ನಡೆಸಲಾಗುವುದು ಎಂದು ಬಿಬಿಎಂಪಿ ಪ್ರತಿಪಕ್ಷ ನಾಯಕ ಮಂಜುನಾಥ ರೆಡ್ಡಿ ಹೇಳಿದ್ದಾರೆ.

ಬಿಜೆಪಿ ಅವಧಿಯಲ್ಲಿ 1000 ಕೋಟಿಗಿಂತ ಹೆಚ್ಚು ಹಣ ದುರ್ಬಳಕೆಯಾಗಿರುವ ಅಕ್ರಮಗಳು ಬಯಲಾಗಿದೆ. ಅದೆಲ್ಲವನ್ನೂ ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯ ಮಾಡುತ್ತಲೇ ಬಂದಿದ್ದೇವೆ. ಆದರೆ ಈಗ ಲೋಕಾಯುಕ್ತ ದಾಳಿಯಾಗಿದೆ ಎಂಬ ಕಾರಣಕ್ಕೆ ಸಿಬಿಐ ತನಿಖೆ ನಿರ್ಣಯ ಮಾಡಲಾಗಿದೆ. ಇದು ದುರುದ್ದೇಶದ ಕ್ರಮ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದ್ದಾರೆ.

ಖಾಸಗಿ ಕಟ್ಟಡದಲ್ಲಿ ಕಡತ ಸಿಕ್ಕದ ಮಾತ್ರಕ್ಕೆ ಬಿಜೆಪಿಯವರು ಮುನಿರತ್ನ ಅವರ ಕಚೇರಿ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ  ಅದು ಮುನಿರತ್ನ ಅವರ ಕಚೇರಿಯೇ ಇಲ್ಲವೇ ಎನ್ನುವುದು ಲೋಕಾಯುಕ್ತ ತನಿಖೆಯಿಂದ ತಿಳಿಯುತ್ತದೆ. ತನಿಖೆ ಸಮಯದಲ್ಲಿ ಸಿಬಿಐ ತನಿಖೆಗೆ ವಹಿಸುವುದು ನಿಯಮ ಉಲ್ಲಂಘನೆಯಾಗುತ್ತದೆ ಎಂದು ವಾದಿಸಿದರು.

ಮುನಿರತ್ನ ಪ್ರಕರಣ ಲೋಕಾಯುಕ್ತದಲ್ಲಿ ತನಿಖೆ ನಡೆಯುತ್ತಿದೆ. ಇಂತ ಸಂದರ್ಭದಲ್ಲಿ ಬಿಬಿಎಂಪಿ ಸಭೆಯಲ್ಲಿ ಆ ಬಗ್ಗೆ ಪ್ರಸ್ತಾಪಿಸುವಂತಿಲ್ಲ. ಆದರೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ನಿರ್ಣಯ ಮಾಡಲಾಗಿದೆ. ಇದು ಕೆಎಂಸಿ ಕಾಯ್ದೆಯ ಸ್ಪಷ್ಟ ಉಲ್ಲಂಘನೆ ಎಂದು ವಿರೋಧ ಪಕ್ಷ ಮಾಜಿ ನಾಯಕ ಗುಣಶೇಖರ್ ಹೇಳಿದರು.

ಬಿಜೆಪಿ ಬಣ್ಣ ಬಯಲು ಮಾಡುವೆ:
ಸತ್ಯ ಬಯಲಾಗುತ್ತದೆ ಎಂದು ನನಗೆ ಸಭೆಯಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ನಿಜಕ್ಕೂ ಅವಕಾಶ ನೀಡಿದರೆ, ನಾನು ಬಿಜೆಪಿ ಆಡಳಿತ ಅವಧಿಯಲ್ಲಿ ನಡೆದಿರುವ ಎಲ್ಲಾ ಅಕ್ರಮಗಳನ್ನೂ ಬಯಲು ಮಾಡುತ್ತೇನೆ. ಹಾಗಾಗಬಾರದು ಎಂಬ ಕಾರಣಕ್ಕೇ ನನಗೆ ಮಾತನಾಡಲು ಬಿಡುತ್ತಿಲ್ಲ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.

ಬಿಬಿಎಂಪಿಯ 1862 ಕೋಟಿ ಹಗರಣ ಸೇರಿದಂತೆ ಅನೇಕ ಅಕ್ರಮಗಳು ಬಯಲಾದಾಗ ಬಿಜೆಪಿಯವರು ಸಿಬಿಐ ತನಿಖೆ ಬಗ್ಗೆ ಮಾತನಾಡಲಿಲ್ಲ. ಆದರೆ ಈಗ ಮಾತನಾಡುತ್ತಿದ್ದಾರೆ ಎಂದರೆ ಇದರ ಹಿಂದೆ ರಾಜಕೀಯ ಉದ್ದೇಶವಿದೆ ಎಂದು ಆರೋಪಿಸಿದರು.

ಲೋಕಾಯುಕ್ತ ದಾಳಿ ನನ್ನ ಕಚೇರಿ ಮೇಲೆ ಆಗಿಲ್ಲ. ನನ್ನ ಕಚೇರಿಯಿಂದ ಯಾವುದೇ ಕಡತವನ್ನೂ ಅವರು ವಶಪಡಿಸಿಕೊಂಡಿಲ್ಲ. ಆದರೂ ಈ ಬಗ್ಗೆ ನಾನು ಈಗ ಮಾತನಾಡುವುದಿಲ್ಲ. ಲೋಕಾಯುಕ್ತರು ವಿಚಾರಣೆಗೆ ಕರೆದಾಗ ಉತ್ತರ ನೀಡುತ್ತೇನೆ ಎಂದು ಮುನಿರತ್ನ ಪ್ರತಿಕ್ರಿಯಿಸಿದರು.

ವ್ಯರ್ಥ ಸಭೆ, ವೃಥಾ ಖರ್ಚು

ಬಿಬಿಎಂಪಿ ಆಡಳಿತ ಅವಧಿಯ ಕೊನೆಯ ಸಭೆಗಳಿಗೆ ಹೆಚ್ಚಿನ ಮಹತ್ವ ಇರುತ್ತದೆ. ಆದರೆ ಈ ಮಹತ್ವವನ್ನೇ ಅರಿಯದೆ ಬಿಬಿಎಂಪಿ ಸದಸ್ಯರು ಎರಡು ಸಭೆಗಳನ್ನು ವ್ಯರ್ಥ ಮಾಡಿದರು. ಅಷ್ಟೇ ಅಲ್ಲ, ಆ ಮೂಲಕ ತೆರಿಗೆದಾರರ 4 ಲಕ್ಷ ಪೋಲಾಗುವಂತೆ ಮಾಡಿದರು.

Related Stories

No stories found.

Advertisement

X
Kannada Prabha
www.kannadaprabha.com