
ನವದೆಹಲಿ: ಅಲ್-ಖೈದ ಸಂಘಟನೆಯೂ ಭಾರತೀಯ ಉಗ್ರಗಾಮಿಗಳಿಗೆ ತರಬೇತಿ ನೀಡುತ್ತಿರುವ ಮಾಹಿತಿಯನ್ನು ಗುಪ್ತಚರ ಇಲಾಖೆ ಬಹಿರಂಗಗೊಳಿಸಿದೆ. ಅಲ್-ಖೈದ ಸಂಘಟನೆಯಿಂದ ತರಬೇತಿ ಪಡೆಯುತ್ತಿರುವ ಭಾರತೀಯ ಭಯೋತ್ಪಾದಕರು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬೃಹತ್ ದಾಳಿ ನಡೆಸಲು ಸಂಚು ರೂಪಿಸಿರುವುದಾಗಿ ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಹೊರ ಹಾಕಿದೆ.
ಪ್ರಸ್ತುತ ಸಿರಿಯಾ ಮತ್ತು ಇರಾಕಿನಲ್ಲಿ ಹಿಂಸಾಚಾರ ಮುಂದುವರೆದಿದ್ದು, ಪ್ರಾಣಾಪಾಯದಿಂದ ಭಾರತದತ್ತ ಮುಖ ಮಾಡುತ್ತಿರುವ ವಿದೇಶಿಯರನ್ನು ಟಾರ್ಗೆಟ್ ಮಾಡಿಕೊಂಡಿರುವ ಅಲ್-ಖೈದ ಸಂಘಟನೆ, ಅಂತಹವರನ್ನು ಅಪಹರಣ ಮಾಡಿ ತರಬೇತಿ ನೀಡುತ್ತಿರುವುದಾಗಿ ಗುಪ್ತಚರ ಇಲಾಖೆ ಹೇಳಿದೆ. ಈ ಭಯೋತ್ಪಾದಕ ಚಟುವಟಿಕೆಗೆ ಕೆಲ ಇಸ್ಲಾಮಿಕ್ ಉಗ್ರಗಾಮಿ ಸಂಘಟನೆಗಳು ಸಹಕಾರ ನೀಡುತ್ತಿರುವ ಮಾಹಿತಿಯನ್ನು ಹೊರ ಚೆಲ್ಲಿದೆ.
ಭಾರತೀಯ ಭದ್ರತಾ ಏಜೆನ್ಸಿಯ ಪ್ರಕಾರ ಅಲ್-ಖೈದ ಮತ್ತು ಇಂಡಿಯನ್ ಮುಜಾಹಿದ್ದೀನ್ ಸಂಘಟನೆಗಳು ಸ್ಥಳೀಯರನ್ನು ಗುರಿಯಾಗಿಸಿಕೊಂಡು, ಕಚ್ಚಾ ಶಸ್ತ್ರಾಸ್ತ್ರಗಳ ಮೂಲಕ ದಾಳಿ ನಡೆಸಲು ಸಚ್ಚಾಗಿವೆ. ಸಣ್ಣ ಪ್ರಮಾಣದ ದಾಳಿ ಮೂಲಕ ದೇಶದಲ್ಲಿ ಭಯೋತ್ಪಾದನೆ ಸೃಷ್ಟಿಸಲು ಮುಂದಾಗಿವೆ ಎಂದು ಮಾಹಿತಿ ನೀಡಿದೆ.
ದಕ್ಷಿಣಾ ಏಷ್ಯಾ ರಾಷ್ಟ್ರಗಳ ಮೇಲೆ ಅಲ್-ಖೈದ ಉಗ್ರ ಸಂಘಟನೆಯ ಕರಿನೆರಳು ಚಾಚಿದ್ದು, ದಾಳಿ ನಡೆಸಲು ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನಗಳಲ್ಲಿ ಉಗ್ರರಿಗೆ ತರಬೇತಿ ನೀಡುತ್ತಿರುವುದಾಗಿ ಭದ್ರತಾ ಏಜೆನ್ಸಿ ವಿವರಿಸಿದೆ.
ಕಳೆದ ಭಾನುವಾರ ಭಾರತ-ಪಾಕಿಸ್ಥಾನದ ವಾಘ ಗಡಿಯಲ್ಲಿ ನಡೆದ ಆತ್ಮಾಹುತಿ ಬಾಂಬ್ ದಾಳಿಯಿಂದಾಗಿ ಪಶ್ಚಿಮ ಭಾಗಗಳಲ್ಲಿ ಭಯೋತ್ಪಾದನಾ ಎಚ್ಚರಿಕೆಯನ್ನು ಘೋಷಿಸಲಾಗಿತ್ತು. ಅಲ್ಲದೆ ಭಯೋತ್ಪಾದಕ ಚಟುವಟಿಕೆ ಹೆಚ್ಚಾಗುತ್ತಿದ್ದ ಹಿನ್ನೆಲೆಯಲ್ಲಿ ಭಾರತೀಯ ಎರಡು ಹಡಗುಗಳನ್ನು ಭಾರತೀಯ ನೌಕಾ ಪಡೆ ವಾಪಸ್ ಕರೆಸಿಕೊಂಡಿತ್ತು.
ಅಲ್-ಖೈದಾ ಅಥವಾ ಇಸಿಸ್ ಸಂಘಟನೆಗಳು ಹೇಗೆ ಅಫ್ಘಾನಿಸ್ಥಾನದ ಸ್ಥಳೀಯ ಸಂಘಟನೆಗಳ ಸಹಕಾರ ಪಡೆಯುತ್ತಿವೆ ಎಂಬುದು ಪ್ರಶ್ನಾರ್ಥಕವಾಗಿದೆ ಎಂದು ರಾಷ್ಟ್ರೀಯ ತನಿಖಾ ದಳ ಅಚ್ಚರಿ ವ್ಯಕ್ತಪಡಿಸಿದೆ.
Advertisement