ಕಾಂಗ್ರೆಸ್ ಆಯೋಜಿತ ನೆಹರು ವಿಚಾರಗೋಷ್ಠಿ: ಪ್ರಧಾನಿಗಿಲ್ಲ ಆಹ್ವಾನ

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಾರ್ಯಕ್ರಮದ ಮುಖ್ಯಸ್ಥರಾಗಿ ಭಾಷಣ...
ನರೇಂದ್ರಮೋದಿ-ಜವಹರ್ ಲಾಲ್ ನೆಹರು
ನರೇಂದ್ರಮೋದಿ-ಜವಹರ್ ಲಾಲ್ ನೆಹರು

ನವದೆಹಲಿ: ಜವಹರ್‌ಲಾಲ್ ನೆಹರು ಅವರ ಜನ್ಮದಿನೋತ್ಸವದ ಅಂಗವಾಗಿ ನ.17ರಂದು ಕಾಂಗ್ರೆಸ್ ಆಯೋಜಿಸಿರುವ ನೆಹರು ಕುರಿತ ಅಂತರಾಷ್ಟ್ರೀಯ ಮಟ್ಟದ ವಿಚಾರಗೋಷ್ಠಿಗೆ ಪ್ರಧಾನಿ ನರೇಂದ್ರಮೋದಿ ಅವರಗೆ ಕಾಂಗ್ರೆಸ್ ಆಹ್ವಾನ ನೀಡದಿರುವ ವಿಚಾರ ಇದೀಗ ತೀವ್ರ ಚರ್ಚೆಗೆ ಕಾರಣವಾಗಿದೆ.

ಸ್ವತಂತ್ರ ಭಾರತದ ಪ್ರಥಮ ಪ್ರಧಾನಿ ದಿವಂಗತ ಜವಹರ್ ಲಾಲ್ ನೆಹರು ಅವರ ಜನ್ಮದಿನೋತ್ಸವನ್ನು ವಿಜೃಂಭಣೆಯಿಂದ ಆಚರಿಸಲು ಕಾಂಗ್ರೆಸ್ ತೀರ್ಮಾನಿಸಿದೆ. ಈ ಹಿನ್ನೆಲೆಯಲ್ಲಿ ಚಾಚಾ ನೆಹರು ಅವರ 125ನೇ ಜನ್ಮದಿನದ ಸವಿನೆನಪಿಗಾಗಿ ಅವರ ಜೀವನ, ಸಾಧನೆ ಕುರಿತ ವಿಚಾರಗೋಷ್ಠಿ ನಡೆಸಲು ಮುಂದಾಗಿದೆ. ಈ ಕಾರ್ಯಕ್ರಮಕ್ಕೆ ವಿಶ್ವದಾದ್ಯಂತ ಹಲವು ರಾಷ್ಟ್ರಗಳನ್ನು ಆಹ್ವಾನಿಸಲಾಗಿದೆ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಆಹ್ವಾನ ಮಾಡದಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

ನ.17 ರಂದು ದೆಹಲಿಯ ವಿಜ್ಞಾನ ಭವನದಲ್ಲಿ 2 ದಿನಗಳ ಕಾಲ ನೆಹರು ಅವರ ಜೀವನ ಚರಿತ್ರೆ ಕುರಿತು ವಿಚಾರಗೋಷ್ಠಿ ನಡೆಯಲಿದೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ಆನಂದ್ ಶರ್ಮಾ, ನರೇಂದ್ರ ಮೋದಿಯವರಿಗೆ ಆಹ್ವಾನ ಪತ್ರ ರವಾನಿಸದಿರುವುದನ್ನು ಸ್ಪಷ್ಟಪಡಿಸಿದ್ದಾರೆ. ಇದೇ ವೇಳೆ ಮಾತನಾಡಿದ ಶರ್ಮಾ, ಈಗಾಗಲೇ ಕಾರ್ಯಕ್ರಮಕ್ಕೆ 54 ದೇಶಗಳ ನಾಯಕರಿಗೆ ಆಹ್ವಾನ ಪತ್ರ ರವಾನಿಸಲಾಗಿದ್ದು, ಅವರ ಆಗಮನದ ಕುರಿತು ಮಾಹಿತಿ ಕಲೆಹಾಕುತ್ತಿರುವುದಾಗಿ ವಿವರಿಸಿದರು.

ನ.14ರಂದು ಜವಹರಲಾಲ್ ನೆಹರು ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದ್ದು, ದೆಹಲಿಯ ತಲ್ಕತೋರ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದೆ.

ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಕಾರ್ಯಕ್ರಮದ ಮುಖ್ಯಸ್ಥರಾಗಿ ಭಾಷಣ ಮಾಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ನೆಹರು ಅವರ ದೃಷ್ಟಿಕೋನ ಕುರಿತ ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲ ಕಾರ್ಯಕರ್ತರೂ ಭಾಗಿಯಾಗಲಿದ್ದಾರೆ.  

ಈ ಮಧ್ಯೆ ಸರ್ಕಾರದ ವತಿಯಿಂದ ನೆಹರು ಅವರ ಹುಟ್ಟುಹಬ್ಬವನ್ನು ಸಡಗರದಿಂದ ಆಚರಿಸಲು, ಪ್ರಧಾನಿ ನರೇಂದ್ರ ಮೋದಿ ಸಹ ತೀರ್ಮಾನಿಸಿದ್ದಾರೆ. ಇದಕ್ಕಾಗಿ ಕೇಂದ್ರ ಸಾಂಸ್ಕೃತಿಕ ಇಲಾಖೆ ರೂ.20 ಕೋಟಿಯನ್ನು ಮೀಸಲಿಟ್ಟಿದ್ದು, ವಿವಿಧ ಯೋಜನೆಗಳನ್ನು ಕಾರ್ಯಗತಕ್ಕೆ ತರಲು ಚಿಂತನೆ ನಡೆಸಿದೆ.

ಜವಹರಲಾಲ್ ಅವರ ದೂರದೃಷ್ಟಿ ಯೋಜನೆಗಳನ್ನು ಜಾರಿಗೆ ತರವುದಕ್ಕಾಗಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರದಲ್ಲಿ ಇದಕ್ಕಾಗಿ ಪ್ರಮುಖ ಸದಸ್ಯರನ್ನೊಳಗೊಂಡ ಪ್ರತ್ಯೇಕ ಸಮಿತಿ ರಚಿಸಲಾಗಿತ್ತು.

ಇದೀಗ ನೂತನವಾಗಿ ರಚನೆಯಾಗಿರುವ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಈ ಸಮಿತಿಯಲ್ಲಿ ಕೆಲ ಬದಲವಾಣೆಗಳನ್ನು ತಂದಿದ್ದು, ಈ ಸಮಿತಿ ಪಟ್ಟಿಯಲ್ಲಿ ನೆಹರು ಕುಟುಂಬ ಸದಸ್ಯರ ಹೆಸರು ಸೇರ್ಪಡೆಯಾಗದಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com