ನವದೆಹಲಿ: ದೇಶಾದ್ಯಂತ ನಡೆಯುತ್ತಿರುವ ಅಕ್ರಮ ವಿದ್ಯುತ್ ಕಳ್ಳತನವನ್ನು ತಡೆಯಲು ಕೇಂದ್ರ ಸರ್ಕಾರ ಭಾರಿ ಯೋಜನೆಯನ್ನೇ ಹಾಕಿಕೊಂಡಿದ್ದು, ಈ ಯೋಜನೆಗೆ ಬರೋಬ್ಬರಿ 25 ಸಾವಿರ ಕೋಟಿ ಖರ್ಚಾಗಲಿದೆ ಎಂದು ತಿಳಿದುಬಂದಿದೆ.
ವಿದ್ಯುತ್ ಕಳ್ಳತನದಿಂದಾಗಿ ಪ್ರತಿವರ್ಷ ಕೇಂದ್ರ ಸರ್ಕಾರದ ಬೋಕ್ಕಸಕ್ಕೆ ಲಕ್ಷಾಂತರ ಕೋಟಿ ರುಪಾಯಿ ಹೊರೆಯಾಗುತ್ತಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಬೃಹತ್ ಯೋಜನೆಯೊಂದನ್ನು ಕೇಂದ್ರ ಇಂಧನ ಇಲಾಖೆ ಕೈಗೆತ್ತಿಕೊಂಡಿದೆ. ಇದಕ್ಕಾಗಿ ಸುಮಾರು 25, 300 ಕೋಟಿ ರುಪಾಯಿಗಳನ್ನು ವ್ಯಯಿಸಲು ಕೇಂದ್ರ ಮುಂದಾಗಿದ್ದು, ಪ್ರಸ್ತುತ ಹಾಳುಬಿದ್ದಿರುವ ಮತ್ತು ನಿಷ್ಕ್ರಿಯಗೊಂಡಿರುವ ವಿದ್ಯುತ್ ಸರಬರಾಜು ಯಂತ್ರಗಳನ್ನು ಬದಲಿಸಲು ನಿರ್ಧರಿಸಿದೆ.
ದೇಶದ ಪ್ರಮುಖ ನಗರಗಳಲ್ಲಿಯೇ ಶೇ.40ರಷ್ಟು ವಿದ್ಯುತ್ ಕಳ್ಳತನವಾಗುತ್ತಿದೆ. ಹೀಗಾಗಿ ಹಳೆಯ ವಿದ್ಯುತ್ ವಿತರಣಾ ವ್ಯವಸ್ಥೆಯ ಆಧುನೀಕರಣಕ್ಕೆ ಕೇಂದ್ರ ಇಂಧನ ಇಲಾಖೆ ಒಪ್ಪಿಗೆ ಸೂಚಿಸಿದ್ದು, ದೇಶದ ಪ್ರತಿಯೊಂದು ನಗರಗಳಲ್ಲಿಯೂ ಮೀಟರಿಂಗ್ ವ್ಯವಸ್ಥೆಯನ್ನು ಜಾರಿಗೆ ತರಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಅಲ್ಲದೆ ಕೇಂದ್ರ ಸರ್ಕಾರದ ಈ ನೂತನ ಕ್ರಮ ಪ್ರಧಾನಿ ನರೇಂದ್ರ ಮೋದಿ ಅವರು ಚುನಾವಣಾ ಪೂರ್ವದಲ್ಲಿ ನೀಡಿದ್ದ 'ದಿನದ 24 ಗಂಟೆಗಳ ನಿರಂತರ ವಿದ್ಯುತ್' ಯೋಜನೆಯ ಆರಂಭಿಕ ಹೆಜ್ಜೆ ಎಂದು ಹೇಳಲಾಗುತ್ತಿದೆ.
2005ರಲ್ಲಿ ಗುಜರಾತ್‌ನಲ್ಲಿ ವಿದ್ಯುತ್ ಅಭಾವ ಎದುರಾದಾಗ ಅಂದಿನ ಮುಖ್ಯಮಂತ್ರಿಗಳಾಗಿದ್ದ ನರೇಂದ್ರ ಮೋದಿ ಅವರು ಇಂತಹುದೇ ಕಠಿಣ ನಿರ್ಧಾರ ಕೈಗೊಂಡಿದ್ದರು. ವಿದ್ಯುತ್ ಕಳ್ಳತನದಲ್ಲಿ ಸಿಕ್ಕಿಬೀಳುವ ಅಥವಾ ವಿದ್ಯುತ್ ಕಳ್ಳತನ ಆರೋಪ ಸಾಬೀತಾಗುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಿದ್ದಷ್ಟೇ ಅಲ್ಲದೆ ಈಡೀ ಗುಜರಾತ್ ರಾಜ್ಯಾದ್ಯಂತ ಹರಡಿದ್ದ ವಿದ್ಯುತ್ ಪ್ರಸರಣಾ ವ್ಯವಸ್ಥೆಯನ್ನೇ ಆಧುನೀಕರಿಸುವ ಮೂಲಕ ವಿದ್ಯುತ್ ಕಳ್ಳತನಕ್ಕೆ ಬ್ರೇಕ್ ಹಾಕಿದ್ದರು.
ಈದೀಗ ಕೇಂದ್ರದಲ್ಲಿಯೂ ಇದೇ ಮಾದರಿಯನ್ನು ಅನುಸರಿಸಲಾಗುತ್ತಿದ್ದು, ಆರಂಭಿಕ ಹಂತದಲ್ಲಿ ಪ್ರಸ್ತುತ ದೇಶಾದ್ಯಂತ ಇರುವ ವಿದ್ಯುತ್ ಪ್ರಸರಣ ಜಾಲವನ್ನು ಆಧುನೀಕರಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಮುಂದಾಗಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಹೊಸದೊಂದು ಯೋಜನೆಯನ್ನೇ ಹಾಕಿಕೊಂಡಿದ್ದು, ಈ ಯೋಜನೆಗೆ ಕೇಂದ್ರ ಸಚಿವ ಸಂಪುಟ ಕೂಡ ಒಪ್ಪಿಗೆ ಸೂಚಿಸಿದೆ.
ಯೋಜನೆಯ ಅನ್ವಯ ಪ್ರಾಥಮಿಕ ಹಂತದಲ್ಲಿ ದೇಶದಲ್ಲಿರುವ ಪ್ರಮುಖ ನಗರಗಳಲ್ಲಿರುವ ವಿದ್ಯುತ್ ಪ್ರಸರಣಾ ವ್ಯವಸ್ಥೆ ಅಂದರೆ ಟ್ರಾನ್ಸ್‌ಫಾರ್ಮರ್‌ಗಳು, ವಿದ್ಯುತ್ ಶೇಖರಣಾ ಕೇಂದ್ರಗಳು, ವಿದ್ಯುತ್ ಕಂಬಗಳನ್ನು ಆಧುನೀಕರಿಸಲಾಗುತ್ತದೆ. ಇದಲ್ಲದೆ ಕಾರ್ಖಾನೆಗಳಲ್ಲಿ, ರೈತರ ಹೊಲಗಳಲ್ಲಿ, ಮನೆಗಳಲ್ಲಿ ಅಕ್ರಮವಾಗಿ ಪಡೆಯಲಾಗಿರುವ ವಿದ್ಯುತ್ ಸಂಪರ್ಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಕೇಂದ್ರ ಸರ್ಕಾರದ ಈ ನೂತನ ಯೋಜನೆಯಿಂದಾಗಿ ವಿದ್ಯುತ್ ಇಲಾಖೆಯ ತಾಂತ್ರಿಕ ಮತ್ತು ವಾಣಿಜ್ಯ ವಿಭಾಗಗಳಿಗೆ ಉಂಟುಗುತ್ತಿದ್ದ ನಷ್ಟವನ್ನು ತಡೆಯಬಹುದಾಗಿದೆ. ಈ ಯೋಜನೆಯ ಒಟ್ಟು ಮೊತ್ತ 32, 600 ಕೋಟಿಗಳಾಗಲಿದ್ದು, ಈ ಪೈಕಿ ಕೇಂದ್ರ ಸರ್ಕಾರ 25, 300 ಕೋಟಿ ರು.ಗಳನ್ನು ಭರಿಸಲಿದೆ. ಉಳಿದ ಹಣವನ್ನು ಆಯಾ ರಾಜ್ಯ ಸರ್ಕಾರಗಳೇ ಖರ್ಚು ಮಾಡಬೇಕಿದೆ.
ಒಟ್ಟಾರೆ ವಿದ್ಯುತ್ ಕಳ್ಳತನದಿಂದಾಗಿ ಬೋಕ್ಕಸಕ್ಕೆ ಉಂಟಾಗುತ್ತಿರುವ ಲಕ್ಷಾಂತರ ಕೋಟಿ ರು.ಗಳ ನಷ್ಟವನ್ನು ತಡೆಯಲು ಕೇಂದ್ರ ಸರ್ಕಾರ ನಿರ್ಧರಿಸಿದ್ದು, ಅಕ್ರಮದಾರರಿಗೆ ಇನ್ನು ಮೂಗುದಾರ ಬೀಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಆದರೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಜಾರಿಗೆ ತರಲಿದೆ ಎಂಬುದನ್ನು ಕಾದು ನೋಡಬೇಕಿದೆ.
Advertisement