
ನವದೆಹಲಿ: ಕರ್ನಾಟಕದ 14 ರೇಲ್ವೇ ಯೋಜನೆಗಳು ಸೇರಿದಂತೆ ವಿವಿಧ ರಾಜ್ಯಗಳ ಒಟ್ಟು 160 ಯೋಜನೆಗಳಿಗೆ ಕತ್ತರಿ ಹಾಕಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಈ ಪೈಕಿ ಕರ್ನಾಟಕದ 14 ಯೋಜನೆಗಳು ಸೇರಿದಂತೆ ದಕ್ಷಿಣ ಭಾರತದ 4 ರಾಜ್ಯಗಳ 47 ಯೋಜನೆಗಳಿಗೆ ಕತ್ತರಿ ಬೀಳಲಿದೆ. ಕೇಂದ್ರ ರೇಲ್ವೇ ಇಲಾಖೆಯಿಂದ ಈಗಾಗಲೇ ಘೋಷಣೆಯಾದ ಮತ್ತು ಇನ್ನೂ ಆರಂಭಗೊಳ್ಳದ ಪ್ರಮುಖ ಯೋಜನೆಗಳನ್ನು ಆರಂಭಿಸಲು ಕೇಂದ್ರ ಸರ್ಕಾರ ಈ 'ಬೃಹತ್' ಕತ್ತರಿ ಪ್ರಯೋಗಕ್ಕೆ ಮುಂದಾಗಿದೆ. ಕೇಂದ್ರದ ಈ ದಿಢೀರ್ ನಿರ್ಧಾರದಿಂದಾಗಿ ದೇಶದ ವಿವಿಧ ರಾಜ್ಯಗಳ ಸುಮಾರು 160 ಯೋಜನೆಗಳಿಗೆ ಕತ್ತರಿ ಬೀಳುತ್ತಿದ್ದು, ದಕ್ಷಿಣ ಭಾರತದ ಕರ್ನಾಟಕ, ತಮಿಳುನಾಡು ಮತ್ತು ಆಂಧ್ರಪ್ರದೇಶ ರಾಜ್ಯಗಳು ತಲಾ 14 ಯೋಜನೆಗಳನ್ನು ಕಳೆದುಕೊಳ್ಳಲ್ಲಿವೆ. ಕೇರಳ ರಾಜ್ಯ ಕೂಡ ತನ್ನ 5 ಯೋಜನೆಗಳನ್ನು ಕಳೆದುಕೊಳ್ಳಲಿದೆ ಎಂದು ತಿಳಿದು ಬಂದಿದೆ.
ಈ ಪೈಕಿ ತಮಿಳುನಾಡು ರಾಜ್ಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನಷ್ಟವಾಗಲಿದ್ದು, ತಮಿಳುನಾಡಿನ 14 ಯೋಜನೆಗಳ ಮೌಲ್ಯ 19,500 ಕೋಟಿಗಳಾಗಿದೆ. ಈ ಪಟ್ಟಿಯಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದ್ದು, ಕರ್ನಾಟಕ 10 ಸಾವಿರ ಕೋಟಿ ಮೌಲ್ಯದ ಯೋಜನೆಗಳನ್ನು ಮತ್ತು ಮೂರನೇ ಸ್ಥಾನದಲ್ಲಿರುವ ಆಂಧ್ರ ಪ್ರದೇಶ 9 ಸಾವಿರ ಕೋಟಿ ಮೌಲ್ಯದ ಯೋಜನೆಯನ್ನು ಕಳೆದುಕೊಳ್ಳಲಿವೆ. ಇನ್ನು ಕೇರಳ ರಾಜ್ಯ ಅತಿ ಕಡಿಮೆ ಅಂದರೆ 2, 300 ಕೋಟಿ ಮೌಲ್ಯದ ಯೋಜನೆಗಳನ್ನು ಕಳೆದುಕೊಳ್ಳಲಿದೆ.
ಕೇಂದ್ರ ಸರ್ಕಾರ ಕಡಿತಗೊಳಿಸಲು ನಿರ್ಧರಿಸುವ ಯೋಜನೆಗಳ ಪೈಕಿ ಬಹುತೇಕ ಯೋಜನೆಗಳು 2004 ಮತ್ತು 2012 ರ ನಡುವಿನಲ್ಲಿ ಘೋಷಣೆಯಾದದ್ದಾಗಿದ್ದು, ಅಂದಿನ ರೇಲ್ವೇ ಸಚಿವರಾದ ಲಾಲು ಪ್ರಸಾದ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಅವರು ಈ ಯೋಜನೆಗಳನ್ನು ಘೋಷಣೆ ಮಾಡಿದ್ದರು. ಇದಲ್ಲದೆ 1992 ಮತ್ತು 93ರಲ್ಲಿ ಘೋಷಣೆಯಾದ ಕೆಲ ಯೋಜನೆಗಳಿಗೂ ತಿಲಾಂಜಲಿ ಬಿಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
ಇನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಲು ನಿರ್ಧರಿಸಿರುವ ಈ ಎಲ್ಲ ಯೋಜನೆಗಳ ಪ್ರಗತಿ ಶೂನ್ಯವಾಗಿದ್ದು, ರೈಲ್ವೇ ಇಲಾಖೆಗೆ ಈ ಯೋಜನೆಗಳಿಂದ ಭಾರಿ ನಷ್ಟವಾಗುತ್ತಿದೆ. ಹೀಗಾಗಿಯೇ ಕೇಂದ್ರ ಸರ್ಕಾರ ಈ ಯೋಜನೆಗಳನ್ನು ಕೈ ಬಿಡಲು ನಿರ್ಧರಿಸಿದ್ದು, ಇನ್ನೂ ಆರಂಭಗೊಳ್ಳದ ಪ್ರಮುಖ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಉದಾಹರಣೆಗೆ 1996-97ರಲ್ಲಿ ಘೋಷಣೆಯಾದ ತಮಿಳುನಾಡು ಮತ್ತು ಕರ್ನಾಟಕವನ್ನು ಸಂಪರ್ಕಿಸುವ 13, 951ಕೋಟಿ ಮೌಲ್ಯದ ಸುಮಾರು 260 ಕಿ.ಮೀ ಉದ್ದದ ಬೆಂಗಳೂರು ಮತ್ತು ಸತ್ಯಮಂಗಲಂ ರೇಲ್ವೇ ಯೋಜನೆ ಘೋಷಣೆಯಾಗಿ ದಶಕಗಳೇ ಕಳೆದರೂ ಅದು ಇನ್ನೂ ಆರಂಭವಾಗಿಯೇ ಇಲ್ಲ.
ಅದರಂತೆಯೇ 1045 ಕೋಟಿ ಮೌಲ್ಯದ 2010-11ರಲ್ಲಿ ಘೋಷಣೆಯಾದ ಆಂಧ್ರದ ಕೋಟಿಪಲ್ಲಿ-ನರ್ಸಾಪುರ್ ಯೋಜನೆ ಕೂಡ ಇನ್ನೂ ಆರಂಭವಾಗಿಲ್ಲ. ಇಂತಹುದೇ 1992ರಿಂದ 2000ದ ಅವಧಿಯಲ್ಲಿ ಘೋಷಣೆಯಾದ ಇನ್ನೂ 7 ಯೋಜನೆಗಳು ಇನ್ನೂ ಆರಂಭವಾಗುವ ಹಂತದಲ್ಲೇ ಇದ್ದು, ಈ ಪೈಕಿ ಅತ್ಯಂತ ಹಳೆಯ ಯೋಜನೆ ಎಂದರೆ 1992-93ರಲ್ಲಿ ಘೋಷಣೆಯಾದ ಸುಮಾರು 225ಕೋಟಿ ಮೌಲ್ಯದ 81.2 ಕಿ.ಮೀ ಉದ್ದದ ವೈಟ್‌ಫೀಲ್ಡ್-ಬಂಗಾರಪೇಟೆ-ಕುಪ್ಪಂ ಯೋಜನೆ ಕೂಡ ಇನ್ನೂ ಆರಂಭವಾಗಿಲ್ಲ.
ರೇಲ್ವೇ ಇಲಾಖೆಯ ಮೂಲಗಳ ಪ್ರಕಾರ ಈ ಎಲ್ಲ ಯೋಜನೆಗಳನ್ನು ಆರಂಭಿಸಲು ರೇಲ್ವೇ ಇಲಾಖೆ ಸಿದ್ಧವಾಗಿದ್ದರೂ, ಭೂ ಸ್ವಾಧೀನ ಪ್ರಕ್ರಿಯೆಯಲ್ಲಿನ ವಿಳಂಬ ಮತ್ತು ಅನುಮತಿ ನೀಡಲು ಅರಣ್ಯ ಇಲಾಖೆ ತೋರುತ್ತಿರುವ ವಿಳಂಬ ನೀತಿ ಯೋಜನೆ ಆರಂಭಿಸಲು ತೊಡಕಾಗಿವೆ. ಬೆಂಗಳೂರು-ಸತ್ಯಮಂಗಲಂ ಯೋಜನೆಗೆ ಸಂಬಂಧಿಸಿದಂತೆ ಅರಣ್ಯ ಪ್ರದೇಶದಲ್ಲಿ ನಡೆದ ಸರ್ವೇಗೆ ಸಂಬಂಧಿಸಿದಂತೆ ತಮಿಳುನಾಡು ಸರ್ಕಾರ ಅನುಮತಿ ನೀಡದಿದ್ದರಿಂದ ಈ ಯೋಜನೆ ಆರಂಭಿಸಲು ವಿಳಂಭವಾಗುತ್ತಿದೆ ಎಂದು ರೇಲ್ವೇ ಇಲಾಖೆಯ ಮೂಲಗಳು ತಿಳಿಸಿವೆ.
ನೂತನ ಭೂ ಸ್ವಾಧೀನ ಕಾಯ್ದೆ ಜಾರಿಯಾದ ಬಳಿಕ ರೇಲ್ವೇ ಯೋಜನೆಗಳನ್ನು ಪೂರ್ಣಗೊಳಿಸಲು ಇಲಾಖೆಗೆ ಒಂದಿಂಚು ಜಾಗ ಕೂಡ ದೊರೆಯುತ್ತಿಲ್ಲ ಎಂದು ರೇಲ್ವೇ ಇಲಾಖೆಯ ಅಧಿಕಾರಿಗಳು ತಮ್ಮ ಅಸಹಾಯಕತೆಯನ್ನು ತೋಡಿಕೊಂಡಿದ್ದಾರೆ.
ಒಟ್ಟಾರೆ ಭೂಸ್ವಾಧೀನ, ಅನುಮತಿ ನೀಡುವಲ್ಲಿನ ವಿಳಂಬ ಮತ್ತು ಹಣಕಾಸಿನ ಮುಗ್ಗಟ್ಟಿನಂತಹ ವಿವಿಧ ಕಾರಣಗಳಿಂದಾಗಿ ರೇಲ್ವೇ ಇಲಾಖೆಯ ಪ್ರಮುಖ ಯೋಜನೆಗಳು ಕಡತಗಳಲ್ಲೇ ಧೂಳು ತಿನ್ನುತ್ತಿದ್ದು, ಇಂತಹ ಯೋಜನೆಗಳನ್ನು ಜಾರಿಗೊಳಿಸಲು ನಿರ್ಧರಿಸಿರುವ ಕೇಂದ್ರ ಸರ್ಕಾರ ಪ್ರಯೋಜನವಿಲ್ಲದ ಮತ್ತು ನಷ್ಟದಲ್ಲಿರುವ ಯೋಜನೆಗಳನ್ನು ಕೈ ಬಿಡಲು ನಿರ್ಧರಿಸಿದೆ. ಈ ಯೋಜನೆಗಳಿಗೆ ತೊಡಗಿಸುತ್ತಿರುವ ಹಣವನ್ನು ಇನ್ನೂ ಆರಂಭಗೊಳ್ಳದ ಪ್ರಮುಖ ಯೋಜನೆಗಳಲ್ಲಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Advertisement