
ಢಾಕಾ: ಬುರ್ದ್ವಾನ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ರೂವಾರಿ ಎಂದು ಹೇಳಲಾದ ಸಾಜೀದ್‌ನ ಪತ್ನಿಯೂ ಸೇರಿದಂತೆ ನಾಲ್ವರನ್ನು ಪೊಲೀಸರು ಸೋಮವಾರ ಬೆಳಗ್ಗೆ ಬಾಂಗ್ಲಾದೇಶದಲ್ಲಿ ಬಂಧಿಸಿದ್ದಾರೆ.
ಸಾಜೀದ್‌ನನ್ನು ಪ್ರಕರಣದ ಪ್ರಮುಖ ರೂವಾರಿ ಎಂದು ಹೇಳಲಾಗಿತ್ತು. ಬಾಂಗ್ಲಾದೇಶದ ನಿಷೇಧಿತ ಇಸ್ಲಾಮಿ ಉಗ್ರ ಸಂಘಟನೆಯಾದ ಜಮಾಲ್-ಉಲ್-ಮುಜಾಹಿದೀನ್(ಜೆಎಂಬಿ) ಸಂಘಟನೆಯ ಸದಸ್ಯರಾಗಿರುವ ಸಾಜೀದ್ ಪತ್ನಿ ಫಾತೀಮಾ ಬೇಗಂ, ಮೊಹ್ಮದ್ ಇಷ್ರಾತ್ ಅಲಿ ಶೇಖ್, ಮೊಹಮದ್ ಶೌಖತ್ ಸರ್ದಾರ್ ಹಾಗೂ ಅಬ್ದುಲ್ ಖಾಜಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸಿದ್ದಾರೆ.
ಫಾತೀಮಾಬೇಗಂ(ಸಾಜೀದ್ ಪತ್ನಿ) ಇತ್ತೀಚೆಗೆ ಹೊಸದಾಗಿ ರಚಿಸಲಾಗಿರುವ ಬಾಂಗ್ಲಾದೇಶದ ನಿಷೇಧಿತ ಜಮಾಲ್-ಉಲ್-ಮುಜಾಹಿದೀನ್ ಸಂಘಟನೆಯ ಮಹಿಳಾ ವಿಭಾಗದ ನಾಯಕಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಪರಾಧ ವಿಭಾಗದ ಪೊಲೀಸರ ವಿಶೇಷ ತನಿಖಾ ತಂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ತಮಗೆ ದೊರೆತ ಮಾಹಿತಿ ಮೇರೆಗೆ ಎನ್‌ಐಎ ತಂಡ ಬಾಂಗ್ಲಾದೇಶಕ್ಕೆ ತೆರಳಿದ್ದರು.
ಇದಕ್ಕೂ ಮುನ್ನ ಪಶ್ಚಿಮ ಬಂಗಾಳ ಪೊಲೀಸರು ಹಾಗೂ ಎನ್‌ಐಎ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳಾದ ಜೆಎಂಬಿ ಸಂಘಟನೆಯ ಸಾಜೀದ್ ಹಾಗೂ ಅಮ್ಜದ್ ಶೇಖ್ ಎಂಬುವವರನ್ನು ಬಂಧಿಸಿದ್ದರು. ಇಂದು ನಾಲ್ವರನ್ನು ಬಂಧಿಸುವ ಮೂಲಕ ಬುರ್ದ್ವಾನ್ ಸ್ಫೋಟದಲ್ಲಿ ಆರು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
Advertisement