
ಬೆಂಗಳೂರು: ರಾಷ್ಟ್ರೀಯ ಕಾರ್ಯಕಾರಿಣಿಯ ಹಿನ್ನೆಲೆಯಲ್ಲಿ ಬುಧವಾರ ಸಂಜೆ ನಗರಕ್ಕೆ ಆಗಮಿಸಿದ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಭವ್ಯ ಸ್ವಾಗತ ದೊರೆಯಿತು.
ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಂಜೆ 7.15ಕ್ಕೆ ಬಂದಿಳಿದ ಅವರನ್ನು, ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಷಿ, ಕೇಂದ್ರ ಸಚಿವರಾದ ಸದಾನಂದಗೌಡ, ಅನಂತ ಕುಮಾರ್ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಹಲವು ಮುಖಂಡರು, ಪುಷ್ಪಗುಚ್ಛ ನೀಡುವ ಮೂಲಕ ಆತ್ಮೀಯವಾಗಿ ಬರಮಾಡಿಕೊಂಡರು.
ನಿಲ್ದಾಣದ ಗಣ್ಯಾತೀಗಣ್ಯರ ವಿಶೇಷ ಆಗಮನದ ಮುಖ್ಯದ್ವಾರದಲ್ಲಿ ಹೊರ ಬಂದ ಅಮಿತ್ ಶಾಗೆ, ಅಪಾರ ಸಂಖ್ಯೆಯಲ್ಲಿ ಸೇರಿದ್ದ ಪಕ್ಷದ ಕಾರ್ಯಕರ್ತರು ಜನಪದ ಕಲಾ ತಂಡಗಳ ವಾದ್ಯದೊಂದಿಗೆ, ಜೈ ಕಾರ ಕೂಗುವ ಮೂಲಕ ಸ್ವಾಗತ ಕೋರಿದರು. ಕಾರಿನಲ್ಲಿಯೇ ನಿಂತು ಕಾರ್ಯಕರ್ತರತ್ತ ಕೈಬೀಸಿ ಹರ್ಷ ವ್ಯಕ್ತಪಡಿಸಿದ ಅವರು, ನಂತರ ಬಿಗಿ ಭದ್ರತೆಯೊಂದಿಗೆ ನಗರಕ್ಕೆ ಆಗಮಿಸಿದರು. ಮಾಜಿ ಸಚಿವರಾದ ಸಿ.ಟಿ.ರವಿ, ಕಟ್ಟಾ ಸುಬ್ರಮಣ್ಯನಾಯ್ಡು, ಶಾಸಕರಾದ ಎಸ್. ಆರ್. ವಿಶ್ವ ನಾಥ್, ಎಸ್. ಮುನಿರಾಜು ಸೇರಿದಂತೆ ಹಲವು ಮುಖಂಡರು ಈ ವೇಳೆ ಹಾಜರಿದ್ದರು. ಅಮಿತ್ ಶಾ ಆಗಮನಕ್ಕೂ ಮುನ್ನ ಕಾರ್ಯಕರ್ತರೊಂದಿಗೆ ಸ್ವಾಗತ ಕೋರಲು ಕಾಯುತ್ತಿದ್ದ ಶಾಸಕ ಎಸ್.ಆರ್. ವಿಶ್ವನಾಥ್ ಅವರು ವೀರಗಾಸೆ ತಂಡದೊಂದಿಗೆ ಹೆಜ್ಜೆ ಹಾಕಿ, ಕಾರ್ಯಕರ್ತರನ್ನು ರಂಜಿಸಿದ್ದ ವಿಶೇಷವಾಗಿತ್ತು.
Advertisement