ಶಾರದಾ ಹಗರಣ: ಟಿಎಂಸಿಗೆ ನೋಟಿಸ್ ನೀಡಿದ ಸಿಬಿಐ

ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ...
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

ಕೋಲ್ಕತ್ತಾ: ಬಹುಕೋಟಿ ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು ತೃಣಮೂಲ ಕಾಂಗ್ರೆಸ್ ಪಕ್ಷಕ್ಕೆ ಸೋಮವಾರ ನೋಟಿಸ್ ಜಾರಿ ಮಾಡಿದೆ.

ಶಾರದಾ ಚಿಟ್ ಫಂಡ್ ಹಗರಣವನ್ನು ತನಿಖೆ ನಡೆಸುತ್ತಿರುವ ಸಿಬಿಐನ ಅಧಿಕಾರಿಗಳು, ಸ್ಪೀಡ್ ಪೋಸ್ಟ್ ನ ಮೂಲಕ ಟಿಎಂಸಿಯ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿಯಾಗಿರುವ ಸುಬ್ರತಾ ಬಕ್ಷಿ ಅವರಿಗೆ ನೋಟಿಸ್ ಕಳುಹಿಸಿದೆ. ನೋಟಿಸ್ ನಲ್ಲಿ ಪಕ್ಷದ ಎಲ್ಲಾ ಸಂಸದರ ಹಣಕಾಸು ವ್ಯವಹಾರ ಹಾಗೂ ಪಕ್ಷದ ಮುಖವಾಣಿಯಾಗಿರುವ ಜಾಗೋ ಬಾಂಗ್ಲಾ ಪತ್ರಿಕೆಯ 2010-14 ರವರೆಗಿನ ಮಾರಾಟ, ಮುದ್ರಣ, ಜಾಹೀರಾತು, ದೇಣಿಗೆ ಕುರಿತಂತೆ ಎಲ್ಲಾ ಮಾಹಿತಿಯನ್ನು ನೀಡುವಂತೆ ಸೂಚನೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆ ಸಿಬಿಐ ಅಧಿಕಾರಿಗಳು ಟಿಎಂಸಿ ಭವನಕ್ಕೆ ದೂರವಾಣಿ ಕರೆಮಾಡಿ ತನಿಖೆ ನಡೆಸಿದ್ದರು. ಸಿಬಿಐನ ಈ ಕ್ರಮಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಹಾಗೂ ಟಿಎಂಸಿ ಪಕ್ಷದ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಅಲ್ಲದೆ, ವಿಧಾನಸಭಾ ಅಧಿವೇಶನದ ವೇಳೆ ನನ್ನ ಪಕ್ಷವನ್ನು ಸ್ವಪ್ರಯತ್ನ ಹಾಗೂ ನಿಷ್ಠಾವಂತಳಾಗಿ ನನ್ನ ಸ್ವದುಡಿಮೆಯಿಂದ ನನ್ನ ಚಿತ್ರಕಲೆ ಮತ್ತು ಪುಸ್ತಕ ಮಾರಾಟದಿಂದ ಬಂದ ಹಣದಿಂದ ನಡೆಸುತ್ತಿದ್ದೇನೆ. ಯಾವುದೇ ಅಕ್ರಮದಿಂದ ಬಂದ ಹಣದಿಂದಲ್ಲ ಎಂದು ಹೇಳಿದ್ದರು.

ಈ ಹಿನ್ನೆಲೆಯಲ್ಲಿ ಸಿಬಿಐ ಜಾರಿ ಮಾಡಿರುವ ನೋಟಿಸ್ ನಲ್ಲಿ ನೇರವಾಗಿ ಮಮತಾ ಬ್ಯಾನರ್ಜಿ ಅವರ ಹೆಸರನ್ನು ಸೂಚಿಸಿಲ್ಲದಿದ್ದರೂ ಪರೋಕ್ಷವಾಗಿ ಮಮತಾ ಬ್ಯಾನರ್ಜಿ ಅವರನ್ನು ಗುರುಯಾರಿಸಿಕೊಂಡು ನೋಟಿಸ್ ಜಾರಿ ಮಾಡಿದೆ ಎಂದು ಹೇಳಲಾಗುತ್ತಿದೆ.

ಶಾರದಾ ಗ್ರೂಪ್ ನಡೆಸುತ್ತಿರುವ ಚಿಟ್‌ಫಂಡ್ ಸಮೂಹ ಸಂಸ್ಥೆಯಾಗಿರುವ ಶಾರದಾ ಗ್ರೂಪ್ ಮೀಡಿಯಾ ನಡೆಸುತ್ತಿದ್ದ ಪತ್ರಿಕೆ ಮತ್ತಿತರ ವಿಭಾಗಗಳ ಕೆಲಸಗಾರರಿಗೆ ವೇತನ ನೀಡಲಾಗಲಿಲ್ಲ.ಅಕ್ರಮ ವ್ಯವಹಾರಗಳ ಮೂಲಕ ಉದ್ಯೋಗಿಗಳನ್ನು ವಂಚಿಸಲಾಗುತ್ತಿದೆ ಎಂಬ ಮಾಹಿತಿ 2013ರಲ್ಲಿ ಬೆಳಕಿಗೆ ಬಂತು. ಅದೇ ವೇಳೆಗೆ ಬಂಗಾಳ, ಒಡಿಶಾ, ತ್ರಿಪುರಾ, ಜಾರ್ಖಂಡ್ ಮತ್ತು ಅಸ್ಸಾಂನ ಸಾವಿರಾರು ಜನರು ತಾವೂ ಹೂಡಿದ್ದ ಹಣ ವಾಪಸ್ ನೀಡುವಂತೆ ಆಗ್ರಹಿಸಿ ಶಾರದಾ ಚಿಟ್‌ಫಂಡ್ ವಿರುದ್ಧ ಪ್ರತಿಭಟನೆಗಿಳಿದರು. ಈ ಆರೋಪಗಳ ಸಂಬಂಧ ಪಶ್ಚಿಮ ಬಂಗಾಳ ಸರಕಾರ ತನಿಖೆಗೆ ಆಯೋಗವನ್ನೂ ರಚಿಸಿತ್ತು. 2013ರ ಏಪ್ರಿಲ್ 23 ರಂದು ಶಾರದಾ ಗ್ರೂಪ್ ಅಧ್ಯಕ್ಷ ಸುದಿಪ್ತ ಸೇನ್ ಹಾಗೂ ಅವರ ಇಬ್ಬರು ನಿಕಟ ವರ್ತಿಗಳ ಸಹಿತ ಕಾಶ್ಮೀರದ ಸೊನ್ಮಾರ್ಗ್‌ನಲ್ಲಿ ಬಂಧಿಸಲಾಗಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com