
ಮುಂಬೈ: ಭಾರತೀಯ ನೌಕಾಪಡೆಗೆ ಮತ್ತೊಂದು ಅತ್ಯಾಧುನಿಕ ಜಲಾಂತರ್ಗಾಮಿ ಸೇರ್ಪಡೆಗೊಂಡಿದ್ದು, ಮುಂಬೈ ಡಾಕ್ ಯಾರ್ಡ್ ನಲ್ಲಿ ನಿರ್ಮಾಣಗೊಂಡಿರುವ ಜಲಾಂತರ್ಗಾಮಿಯನ್ನು ಸೋಮವಾರ ನೌಕಾಪಡೆಗೆ ಸೇರ್ಪಡೆಗೊಳಿಸಲಾಯಿತು.
ಭಾರತೀಯ ಸೇನೆಯನ್ನು ಆಧುನೀಕರಣಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರದಿಂದಾಗಿ ನೌಕಾಪಡೆಗೆ ಇಂದು ಮತ್ತೊಂದು ಅತ್ಯಾಧುನಿಕ ಜಲಾಂತರ್ಗಾಮಿ ನೌಕೆ ಸೇರ್ಪಡೆಯಾಗಿದೆ. ಫ್ರಾನ್ಸ್ ದೇಶ ವಿನ್ಯಾಸಗೊಳಿಸಿರುವ ಮತ್ತು ದೇಶದಲ್ಲೇ ನಿರ್ಮಾಣಗೊಂಡಿರುವ ಜಲಾಂತರ್ಗಾಮಿ ನೌಕೆಯನ್ನು ಇಂದು ಲೋಕಾರ್ಪಣೆ ಮಾಡಲಾಯಿತು. ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಅವರು ಈ ನೂತನ ಜಲಾಂತರ್ಗಾಮಿ ನೌಕೆಯನ್ನು ನೌಕಾಪಡೆಗೆ ಸೇರ್ಪಡೆ ಗೊಳಿಸಿದರು. 10 ವರ್ಷಗಳ ಹಿಂದಿನ ರಕ್ಷಣಾ ಇಲಾಖೆಯ ಯೋಜನೆಯ ಅಡಿಯಲ್ಲಿ ಈ ಜಲಾಂತರ್ಗಾಮಿ ನಿರ್ಮಾಣಗೊಂಡಿದೆ. 10 ವರ್ಷಗಳ ಹಿಂದೆ ಈ ಯೋಜನೆ ಆರಂಭಗೊಂಡಾಗ ಇದರ ವೆಚ್ಛ ಸುಮಾರು 5 ಸಾವಿರ ಕೋಟಿ ರು.ಗಳೆಂದು ಅಂದಾಜಿಸಲಾಗಿತ್ತು. ಆದರೆ ಇದೀಗ ಈ ಯೋಜನೆ ವೆಚ್ಚ ಸುಮಾರು 23 ಸಾವಿರ ಕೋಟಿ ರು.ಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಇನ್ನು ಹಿಂದೂ ಮಹಾಸಾಗರದಲ್ಲಿ ಪ್ರಾಬಲ್ಯ ಸಾಧಿಸಲು ಹವಣಿಸುತ್ತಿರುವ ನೆರೆ ಚೀನಾ ದೇಶ, ಈಗಾಗಲೇ ತನ್ನ ಜಲಾಂತರ್ಗಾಮಿಗಳನ್ನು ಹಿಂದೂ ಮಹಾಸಾಗರದ ಆಯಕಟ್ಟಿನ ಪ್ರದೇಶದಲ್ಲಿ ನಿಲ್ಲಿಸಿದೆ. ಹೀಗಾಗಿ ಚೀನಾಕ್ಕೆ ಸೆಡ್ಡುಹೊಡೆಯಲು
ಭಾರತಕ್ಕೆ ಇಂತಹ ಜಲಾಂತರ್ಗಾಮಿ ನೌಕೆಗಳ ಅವಶ್ಯಕತೆ ಇದೆ ಎಂದು ಹಿರಿಯ ಸೇನಾಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಪ್ರಸ್ತುತ ಭಾರತದ ಬಳಿ 13 ಜಲಾಂತರ್ಗಾಮಿ ನೌಕೆಗಳಿದ್ದು, ಮತ್ತಷ್ಟು ಜಲಾಂತರ್ಗಾಮಿ ನೌಕೆಗಳ ನಿರ್ಮಾಣ ಕಾರ್ಯಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದೆ.
ಇನ್ನು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ ಸುಮಾರು 50 ಸಾವಿರ ಕೋಟಿ ರು.ವೆಚ್ಚದಲ್ಲಿ ಈ ಹಿಂದೆ 6 ಸಾಂಪ್ರದಾಯಿಕ ಡೀಸೆಲ್-ಎಲೆಕ್ಟ್ರಿಕ್ ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಲು ನಿರ್ಧಾರ ಕೈಗೊಂಡಿತ್ತು. ಇದಕ್ಕಾಗಿ ಫ್ರಾನ್ಸ್ ಮೂಲದ ಸಂಸ್ಥೆ ಡಿಸಿಎನ್ ಎಸ್ ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಈ ಸಂಸ್ಥೆಯ ಸಹಯೋಗದೊಂದಿಗೆ ಪ್ರಸ್ತುತ ನೌಕಾಪಡೆಗೆ ಸೇರ್ಪಡೆಯಾಗಿರುವ ಜಲಾಂತರ್ಗಾಮಿ ನೌಕೆಯನ್ನು ಸಿದ್ಧಪಡಿಸಲಾಗಿದೆ. ಮೂಲಗಳ ಪ್ರಕಾರ ಕೇಂದ್ರಸರ್ಕಾರ ಮತ್ತೆರಡು ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, ಲಾರ್ಸೆನ್ ಮತ್ತು ಟರ್ಬೋ ಎಂಬ ಸಂಸ್ಥೆಗಗಳ ಸಹಯೋಗದೊಂದಿಗೆ ಅಣ್ವಸ್ತ್ರಗಳನ್ನು ಹೊತ್ತೊಯ್ಯಬಲ್ಲ ಎರಡು ಜಲಾಂತರ್ಗಾಮಿ ನೌಕೆಗಳನ್ನು ನಿರ್ಮಾಣ ಮಾಡಲು ಮುಂದಾಗಿದ್ದು, ಇದು ಮುಂಬರುವ 2018ರಲ್ಲಿ ಸಮುದ್ರಕ್ಕಿಳಿಯಲಿದೆ ಎಂದು ತಿಳಿದುಬಂದಿದೆ.
Advertisement