ಬೃಹತ್ ಪ್ರಮಾಣದ ಲೂಟಿಗೆ ಸ್ಕೆಚ್ ಹಾಕಿದ್ದರು..!

ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು...
ರಕ್ತಚಂದನ ಮರಗಳು (ಸಂಗ್ರಹ ಚಿತ್ರ)
ರಕ್ತಚಂದನ ಮರಗಳು (ಸಂಗ್ರಹ ಚಿತ್ರ)

ಚಿತ್ತೂರು: ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ಪ್ರಕರಣ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದ್ದು, ಇಡೀ ಅರಣ್ಯ ಸಂಪತನ್ನು ಒಮ್ಮೆಲೇ ಖಾಲಿ ಮಾಡಲು ಕಳ್ಳ ಸಾಗಣೆದಾರರು ಹವಣಿಸಿದ್ದರೇ ಎಂಬ ಶಂಕೆ ಮೂಡುತ್ತಿದೆ.

ಏಕೆಂದರೆ ಈ ಹಿಂದೆಯೂ ಕೂಡ ಸಾಕಷ್ಟು ಬಾರಿ ಕಳ್ಳರು ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ರಕ್ತ ಚಂದನ ಮರಗಳ ಕಳ್ಳತನಕ್ಕಾಗಿ ಬಂದಿದ್ದರು. ಆದರೆ ಒಮ್ಮೆಲೇ 150 ಮಂದಿ ಅರಣ್ಯದೊಳಗೆ ನುಗ್ಗಿರಲಿಲ್ಲ. ಹೀಗಾಗಿ ತನಿಖಾಧಿಕಾರಿಗಳಿಗೆ ಪ್ರಕರಣದ ಹಿಂದೆ ಅಂತಾರಾಷ್ಟ್ರೀಯ ಸ್ಮಗ್ಲರ್ ಗಳ ಕೈವಾಡವಿರುವ ಕುರಿತು ಶಂಕೆ ಮೂಡಿದೆ.

ಭಾರಿ ಪ್ರಮಾಣದ ಲೂಟಿಗೆ ಹೊಂಚುಹಾಕಿದ್ದ ಸ್ಮಗ್ಲರ್ ಗಳು 150 ಕ್ಕೂ ಹೆಚ್ಚು ಮಂದಿ ಕಾರ್ಮಿಕರನ್ನು ತಮಿಳುನಾಡಿನಿಂದ ಕರೆತಂದಿದ್ದರು. ಆದರೆ ಇಷ್ಟು ದೊಡ್ಡ ಮಟ್ಟದ ಕಾರ್ಮಿಕರನ್ನು ಕರೆತಂದಿದ್ದು ಯಾರು ಎಂಬುದು ಮಾತ್ರ ಈ ವರೆಗೂ ಪತ್ತೆಯಾಗಿಲ್ಲ. ಪೊಲೀಸ್ ಅಧಿಕಾರಿಗಳ ಅಭಿಪ್ರಾಯದಂತೆ ಇಷ್ಟು ದೊಡ್ಡ ಮಟ್ಟದ ಕಾರ್ಮಿಕರನ್ನು ಬೇರೆ ರಾಜ್ಯದ ಸ್ಮಗ್ಲರ್ ಗಳು ತಾವಾಗಿಯೇ ಇಲ್ಲಿಗೆ ಕರೆತರಲು ಸಾಧ್ಯವಿಲ್ಲ. ಇದರಲ್ಲಿ ಸ್ಥಳೀಯ ರಾಜಕಾರಣಿಗಳು ಅಥವಾ ಪ್ರಭಾವಿಗಳ ಕೈವಾಡವಿರುವ ಸಾಧ್ಯತೆ ಇದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸುಳ್ಳು ಮಾತನ್ನು ನಂಬಿ ಕೂಲಿಗೆ ಬಂದಿದ್ದ ಕಾರ್ಮಿಕರು
ಮೂಲಗಳ ಪ್ರಕಾರ ಚೆನ್ನೈ, ಆಂಧ್ರ ಪ್ರದೇಶ ಅಥವಾ ಬೆಂಗಳೂರು ಮೂಲದ ಅಂತಾರಾಷ್ಟ್ರೀಯ ಮಟ್ಟದ ರಕ್ತಚಂದನ ಸ್ಮಗ್ಲರ್ ಗಳು ತಮಿಳುನಾಡಿನ ವೇಲ್ಲೂರು, ತಿರುವಣ್ಣಾ ಮಲೈ, ವಿಳುಪುರಂ ಜಿಲ್ಲೆಗಳಿಂದ ಸುಮಾರು 150ಕ್ಕೂ ಹೆಚ್ಚು ಕಾರ್ಮಿಕರನ್ನು ಶೇಷಾಚಲಂ ಅರಣ್ಯ ಪ್ರದೇಶಕ್ಕೆ ಕರೆತಂದಿದ್ದರು ಎಂದು ಹೇಳಲಾಗುತ್ತಿದೆ. ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಭಾರಿ ಪ್ರಮಾಣದ ಲೂಟಿಗೆ ಸ್ಕೆಚ್ ಹಾಕಿದ್ದ ಇವರು, ಕಾರ್ಮಿಕರನ್ನು ಕರೆತರುವಾಗ ನಾವು ಸರ್ಕಾರದಿಂದ ಪರವಾನಗಿ ಪಡೆದಿದ್ದೇವೆ. ಕಾನೂನಿನಾತ್ಮಕವಾಗಿಯೇ ಮರಗಳನ್ನು ಕಡಿಯುತ್ತಿದ್ದೇವೆ ಎಂದು ಹೇಳಿ ಅವರನ್ನು ಕರೆತಂದಿದ್ದಾರೆ.

ಸ್ಮಗ್ಲರ್ ಗಳ ಮಾತನ್ನು ನಿಜವೆಂದು ನಂಬಿದ ಕಾರ್ಮಿಕರು ಅರಣ್ಯದಲ್ಲಿ ರಕ್ತಚಂದನ ಮರಗಳನ್ನು ಕಡಿಯಲು ಮುಂದಾಗಿದ್ದು, ಈ ಬಗ್ಗೆ ಖಚಿತ ಮಾಹಿತಿ ಪಡೆದಿದ್ದ ಆಂಧ್ರ ಪ್ರದೇಶದ ಸ್ಪೆಷಲ್ ಟಾಸ್ಕ್ ಫೋರ್ಸ್ ತಂಡ ದಿಢೀರ್ ದಾಳಿ ಮಾಡಿದಾಗ ತಬ್ಬಿಬ್ಬಾದ ಸ್ಮಗ್ಲರ್ ಗಳು ಪೊಲೀಸರ ಮೇಲೆ ಕಲ್ಲು, ಮಚ್ಚು ಮತ್ತು ದೊಣ್ಣೆಗಳಿಂದ ಹಲ್ಲೆ ನಡೆಸಿದ್ದಾರೆ. ಈ ವೇಳೆ ಸುಮಾರು 10ಕ್ಕೂ

ಹೆಚ್ಚು ಮಂದಿ ಪೊಲೀಸರು ಗಾಯಗೊಂಡಾಗ ಪೊಲೀಸರು ಅನಿವಾರ್ಯವಾಗಿ ಗುಂಡಿನ ದಾಳಿ ನಡೆಸಿದ್ದಾರೆ. ಆಗ ಗುಂಡೇಟಿಗೆ 20 ಮಂದಿ ಬಲಿಯಾಗಿದ್ದಾರೆ. ಉಳಿದವರು ಅರಣ್ಯದೊಳಗೆ ಓಡಿಹೋಗಿದ್ದಾರೆ. ಈ ಕಾರ್ಮಿಕರ ಪೈಕಿ ಬಹುತೇಕ ಮಂದಿ ತಿರುವಣ್ಣಾ ಮಲೈನಿಂದ ಬಂದವರಾಗಿದ್ದು, ಉಳಿದವರು ವಿಳುಪುರಂ, ವೇಲ್ಲೂರು ಜಿಲ್ಲೆಗಳ ಮೂಲದವರೆಂದು ಹೇಳಲಾಗುತ್ತಿದೆ.

ಇನ್ನು ಈ ಹಿಂದೆ ಇದೇ ರಕ್ತ ಚಂದನದ ಮರಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಅಂತಾರಾಷ್ಟ್ರೀಯ ಮಟ್ಟದ ಕಿಂಗ್ ಪಿನ್ ಓರ್ವನನ್ನು ಆಂಧ್ರಪ್ರದೇಶ ಪೊಲೀಸರು ಇಂಟರ್ ಪೋಲ್ ಪೊಲೀಸರ ನೆರವಿನಿಂದ ಬಂಧಿಸಿದ್ದರು. ಬಂಧಿತನನ್ನು ಗಂಗಿರೆಡ್ಡಿ ಎಂದು ಗುರುತಿಸಲಾಗಿತ್ತು. ಈತ ಮೂಲತಃ ಚಿತ್ತೂರು ಜಿಲ್ಲೆಯವನಾಗಿದ್ದು, ಸ್ಥಳೀಯ ಪ್ರಭಾವಿ ರಾಜಕಾರಣಿ ಕೂಡ ಆಗಿದ್ದ ಎಂದು ತಿಳಿದುಬಂದಿದೆ. ಅಲ್ಲದೆ ಈ ಶೇಷಾಚಲಂ ನಲ್ಲಿರುವ ಅಪಾರ ಪ್ರಮಾಣ ರಕ್ತಚಂದನ ಮರಗಳನ್ನು ಅಕ್ರಮವಾಗಿ ಕಡಿದು ವಿದೇಶಗಳಿಗೆ ರಫ್ತು ಮಾಡುತ್ತಿದ್ದನು ಎಂದು ಮೂಲಗಳು

ತಿಳಿಸಿವೆ. ಚೀನಾ, ದುಬೈ, ಜಪಾನ್ ದೇಶಗಳಲ್ಲಿ ರಕ್ತಚಂದನದ ಮರಗಳಿಗೆ ಭಾರಿ ಬೇಡಿಕೆ ಇದ್ದು, ಈ ದೇಶಗಳಿಗೆ ಗಂಗಿರೆಡ್ಡಿ ಅಕ್ರಮವಾಗಿ ರಕ್ತಚಂದನ ಮರಗಳನ್ನು ರವಾನೆ ಮಾಡುತ್ತಿದ್ದನು. ಈತನ ವಿರುದ್ಧ ಆಂಧ್ರ ಪ್ರದೇಶ ಪೊಲೀಸರು ಅರೆಸ್ಟ್ ವಾರೆಂಟ್ ಕೂಡ ಜಾರಿ ಮಾಡಿದ್ದರು. ಬಳಿಕ ದುಬೈಗೆ ತಲೆ ಮರೆಸಿಕೊಂಡಿದ್ದ ಈತನನ್ನು ಇತ್ತೀಚೆಗಷ್ಟೇ ಇಂಟರ್ ಪೋಲ್ ಪೊಲೀಸರು ಬಂಧಿಸಿದ್ದರು. ಬಳಿಕ ಆಂಧ್ರಪ್ರದೇಶ ಪೊಲೀಸರು ಹೈದರಾಬಾದ್ ಗೆ ಕರೆತಂದಿದ್ದರು.

ಇದೇ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಲೂಟಿಗೆ ಯತ್ನಿಸಿ ಸಿಕ್ಕಿಬಿದ್ದ ತಮಿಳುನಾಡು ಮೂಲದ ಸುಮಾರು 300 ಕಳ್ಳ ಸಾಗಣೆದಾರರ ವಿಚಾರಣೆಗಾಗಿ ಚಿತ್ತೂರಿನಲ್ಲಿ ವಿಶೇಷ ನ್ಯಾಯಾಲಯವನ್ನೇ ತೆರೆಯಲಾಗಿದ್ದು, ಇವರಿಂದ ಸುಮಾರು 20 ಸಾವಿರ ಕೋಟಿ ಮೌಲ್ಯದ ರಕ್ತ ಚಂದನ ಮರಗಳನ್ನು ವಶಪಡಿಸಿಕೊಳ್ಳಲಾಗಿದೆ. ಸರ್ಕಾರಿ ಗೋದಾಮುಗಳಲ್ಲಿ ಇವುಗಳನ್ನು ಶೇಖರಿಸಿಡಲಾಗಿದ್ದು, ಆನ್ ಲೈನ್ ಮೂಲಕ ಇವುಗಳನ್ನು ಮಾರಲು ಆಂಧ್ರಪ್ರದೇಶ ಸರ್ಕಾರ ನಿರ್ಧರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com