
ಚೆನ್ನೈ: ತಮಿಳುನಾಡಿನ ವಿಲ್ಲುಪುರಂನಲ್ಲಿ ನಿಂಬೆಹಣ್ಣು ದಾಖಲೆ ಬೆಲೆಗೆ ಮಾರಾಟವಾಗುವ ಮೂಲಕ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದೆ.
ಸಾಮಾನ್ಯವಾಗಿ ಒಂದು ನಿಂಬೆಹಣ್ಣಿನ ಬೆಲೆ ಎಷ್ಟಿರಬಹುದು..? 2 ರುಪಾಯಿ, 5 ರುಪಾಯಿ, 20 ರುಪಾಯಿ.. ಬೇಸಿಗೆ ಕಾಲವಾದ್ದರಿಂದ ಕೊಂಚ ಹೆಚ್ಚು ಎಂದುಕೊಂಡರೂ 25 ರುಪಾಯಿ ಇರಬಹುದು ಎಂದು ನೀವು ಭಾವಿಸಿದ್ದರೆ ಅದು ತಪ್ಪು. ಏಕೆಂದರೆ ತಮಿಳುನಾಡಿನಲ್ಲಿ ಚಮತ್ಕಾರಿ ನಿಂಬೆಹಣ್ಣೊಂದು ಬರೋಬ್ಬರಿ 23 ಸಾವಿರ ರುಪಾಯಿಗಳಾಗಿ ಮಾರಾಟವಾಗಿದೆ. ವಿಲ್ಲುಪುರಂನಲ್ಲಿನ ದೇವಾಲಯವೊಂದರ ಜಾತ್ರೆ ವೇಳೆ ದೇವರ ಬಳಿ ಇದ್ದ ನಿಂಬೆಹಣ್ಣನ್ನು ಹರಾಜು ಹಾಕಲಾಗಿದ್ದು, ಈ ಭಾರಿ ಹರಾಜಿನಲ್ಲಿ ನಿಂಬೆಹಣ್ಣು ದಾಖಲೆಗೆ ಬೆಲೆಗೆ ಮಾರಾಟವಾಗಿದೆ.
ವಿಲ್ಲುಪುರಂನ ಒಡ್ಡಾನೆಂಡಲ್ ಗ್ರಾಮದ ಇಡುಂಬನ್ ದೇವಾಲಯದಲ್ಲಿ ಹರಾಜು ನಡೆದಿದ್ದು, ಜಾತ್ರೆ ಸಂದರ್ಭದಲ್ಲಿ ದೇವಾಲಯದ ತ್ರಿಶೂಲಕ್ಕೆ ಚುಚ್ಚಿದ್ದ ನಿಂಬೆಹಣ್ಣನ್ನು ಹರಾಜು ಹಾಕಿದಾಗ ಅದು ಬರೊಬ್ಬರಿ 23 ಸಾವಿರ ರುಪಾಯಿಗಳಿಗೆ ಹರಾಜಾಗಿದೆ. ಪ್ರತೀ ವರ್ಷ ಇಲ್ಲಿ 11 ದಿನಗಳ ದೇವರ ಜಾತ್ರೆ ನಡೆಯುತ್ತದೆ. ಜಾತ್ರೆ ವೇಳೆ ದೇವರ ಮುಂದೆ ಇರುವ ತ್ರಿಶೂಲಕ್ಕೆ ನಿಂಬೆ ಹಣ್ಣನ್ನು ಚುಚ್ಚಲಾಗಿರುತ್ತದೆ. ಈ ನಿಂಬೆಹಣ್ಣನ್ನು ಪ್ರತಿನಿತ್ಯ ಪೂಜಿಸುವುದರಿಂದ ಇದರಲ್ಲಿ ಚಮತ್ಕಾರಿ ಶಕ್ತಿ ಇರುತ್ತದೆ. ಇದನ್ನು ಮನೆಯಲ್ಲಿಡುವುದರಿಂದ ಮನೆಯಲ್ಲಿರುವ ದುಷ್ಟಶಕ್ತಿಗಳು ನಾಶವಾಗಿ, ಒಳ್ಳೆಯದಾಗುತ್ತದೆ ಎಂದು ಜನರು ನಂಬಿದ್ದಾರೆ. ಹೀಗಾಗಿ ಪ್ರತೀವರ್ಷ ಈ ನಿಂಬೆಹಣ್ಣನ್ನು ಕೊಳ್ಳಲು ಸಾವಿರಾರು ಜನ ಹರಾಜು ಪ್ರಕ್ರಿಯೆಲ್ಲಿ ಪಾಲ್ಗೊಳ್ಳುತ್ತಾರೆ.
ಇನ್ನು ಈ ಬಾರಿಯ ಹರಾಜಿನಲ್ಲಿ ಒಟ್ಟು 11 ನಿಂಬೆಹಣ್ಣುಗಳನ್ನು ಹರಾಜು ಮಾಡಲಾಗಿದ್ದು, ದಾಖಲೆಗೆ ಬೆಲೆಗೆ ಮಾರಾಟವಾದ ನಿಂಬೆಯನ್ನು ಹೊರತು ಪಡಿಸಿ ಉಳಿದ 10 ನಿಂಬೆಹಣ್ಣುಗಳಿಂದ ದೇವಾಲಯದ ಬೊಕ್ಕಸಕ್ಕೆ ಸುಮಾರು 61, 200 ರು. ಆದಾಯ ಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿಯವರು ತಿಳಿಸಿದ್ದಾರೆ.
Advertisement