ತಂಡದಲ್ಲಿದ್ದ ಇಬ್ಬರು ಅಂತಾರಾಷ್ಟ್ರೀಯ ಕಳ್ಳರು

ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ನಡೆದಿದ್ದ ಎನ್‍ಕೌಂಟರ್ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಮೃತ ಕಾಡುಗಳ್ಳರಲ್ಲಿ ಇಬ್ಬರು...
ಎನ್‍ಕೌಂಟರ್ ನಡೆದ ಸ್ಥಳ
ಎನ್‍ಕೌಂಟರ್ ನಡೆದ ಸ್ಥಳ

ಚಿತ್ತೂರು: ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಮಂಗಳವಾರ ಮುಂಜಾನೆ ನಡೆದಿದ್ದ ಎನ್‍ಕೌಂಟರ್ ಪ್ರಕರಣಕ್ಕೆ ಮತ್ತೊಂದು ತಿರುವು ದೊರೆತಿದ್ದು, ಮೃತ ಕಾಡುಗಳ್ಳರಲ್ಲಿ ಇಬ್ಬರು ಅಂತಾರಾಷ್ಟ್ರೀಯ ಮಟ್ಟದ ಖದೀಮರು ಇದ್ದರು ಎಂದು ತಿಳಿದುಬಂದಿದೆ.

ಈ ವಿಚಾರವನ್ನು ಸ್ವತಃ ಆಂಧ್ರಪ್ರದೇಶದ ಗೃಹ ಸಚಿವರಾದ ನಿಮ್ಮಕಾಯಿಲ ಚಿನರಾಜಪ್ಪ ಅವರು ತಿಳಿಸಿದ್ದಾರೆ. ಇನ್ನು ಎನ್‍ಕೌಂಟರ್ ವೇಳೆ ಕಾಡಿನೊಳಗೆ ಪರಾರಿಯಾಗಿರುವ ಇತರೆ
ಕಳ್ಳರಿಗಾಗಿ ಕಾರ್ಯಾಚರಣೆ ಮುಂದುವರಿದಿದ್ದು, ಅರಣ್ಯ ಸಂಪತ್ತು ರಕ್ಷಣೆಗಾಗಿ ಕಠಿಣ ಕ್ರಮ ತಪ್ಪದು ಎಂದು ಅವರು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಎನ್‍ಕೌಂಟರ್ ವೇಳೆ ಯಾವುದೇ ರೀತಿಯ ಮಾನವ ಹಕ್ಕುಗಳ ಉಲ್ಲಂಘನೆಯಾಗಿಲ್ಲ.  ಅರಣ್ಯಸಂಪತ್ತನ್ನು ಲೂಟಿ ಮಾಡಲು ಬಂದ ಕಳ್ಳರು ಪೊಲೀಸರ ಮೇಲೆ ದಾಳಿ ಮಾಡಿದಾಗ ಅನಿವಾರ್ಯವಾಗಿ ಗುಂಡು ಹಾರಿಸಲಾಗಿದೆ. ಪ್ರಕರಣದ ಸಂಪೂರ್ಣ ತನಿಖೆಗೆ ಆದೇಶಿಸಲಾಗಿದ್ದು, ಶೀಘ್ರದಲ್ಲಿಯೇ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಅವರು ಹೇಳಿದರು.

ಕುರುಚಲು ಕಾಡಿನಲ್ಲಿ ಹುಣ್ಣಿಮೆ ರಾತ್ರಿ ಕಾರ್ಯಾಚರಣೆ
ಶೇಷಾಚಲಂ ಅರಣ್ಯ ಕುರುಚಲು ಅರಣ್ಯ ಪ್ರದೇಶವಾಗಿದೆ. ಇಲ್ಲಿ ಹೇರಳವಾಗಿ ರಕ್ತಚಂದನದ ಮರಗಳ ಜೊತೆಗೆ ಜಾಲಿ, ಹೊಂಗೆ ಮರಗಳು ಮಾತ್ರ ಬೆಳೆಯುತ್ತವೆ. ಕಡಿಮೆ ಮಳೆ ಬೀಳುವ ಪ್ರದೇಶವಾದ ಕಾರಣ ನೆಲದಲ್ಲಿ ಹುಲ್ಲು ಹೆಚ್ಚು ಬೆಳೆಯದೆ ಬಹುತೇಕ ಬಯಲು ಪ್ರದೇಶದಂತೆ ಕಾಣುವ ಅರಣ್ಯ. ಬೆಟ್ಟ, ಗುಡ್ಡಗಳು ಇಲ್ಲದಿದ್ದರೆ ಇಲ್ಲಿ ಕಣ್ಣು ಹಾಯಿಸಿದಷ್ಟು ದೂರ ಮನುಷ್ಯರ ಚಲನವಲನ ಕಾಣಿಸುತ್ತದೆ. ಹಾಗಾಗಿಯೇ ದಂಧೆಕೋರರು ರಕ್ತಚಂದನ ಮರ ಕಡಿಯಲು ರಾತ್ರಿ ವೇಳೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಜೊತೆಗೆ ಈ ಪ್ರದೇಶದಲ್ಲಿ ಆನೆ, ಹುಲಿ, ಚಿರತೆಯಂತಹ ಕ್ರೂರ ಪ್ರಾಣಿಗಳು ಇಲ್ಲದ ಕಾರಣ ಯಾವುದೇ ಭಯ ಇಲ್ಲದೆ ಜನರು ಸಂಚರಿಸಬಹುದು. ಹುಣ್ಣಿಮೆ ರಾತ್ರಿಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಂಡು ಕಳ್ಳ ಸಾಗಣೆ ಮಾಡುವ ದಂಧೆಕೋರರು ಅದಕ್ಕಾಗಿ ಮೀಸಲಿಟ್ಟ ವಾಹನಗಳಲ್ಲಿ ಗಡಿ ದಾಟಿಸುವುದರಲ್ಲಿ ನೈಪುಣ್ಯತೆ ಹೊಂದಿರುವ ಚಾಲಕರಿಗೆ ದುಬಾರಿ ಸಂಬಳ ನೀಡಿ ಇರಿಸಿಕೊಂಡಿದ್ದಾರೆ.

ಪ್ರತಿದಿನ ರು5 ಸಾವಿರ ಕೂಲಿ..!
ಎನ್‍ಕೌಂಟರ್ ನಲ್ಲಿ ಮೃತಪಟ್ಟ 20 ಮಂದಿ ಪೈಕಿ ಬಹುತೇಕರು ತಮಿಳುನಾಡು ಮೂಲದ ಕೂಲಿಕಾರ್ಮಿಕರು. ಸ್ಥಳೀಯರನ್ನು ಕೂಲಿ ಕೆಲಸಕ್ಕೆ ನೇಮಿಸಿಕೊಂಡರೆ ಪೊಲೀಸರಿಗೆ ಮಾಹಿತಿ
ನೀಡುತ್ತಾರೆ ಎಂಬ ಕಾರಣಕ್ಕೆ ವೀರಪ್ಪನ್ ಹಳೇ ಸಹಚರರನ್ನು ಈ ಕೆಲಸಕ್ಕೆ ನೇಮಿಸಿಕೊಂಡು ದಂಧೆ ನಡೆಸುತ್ತಿದ್ದ. ಇವರಿಗೆ ದಿನಕ್ಕೆ ರು.5 ಸಾವಿರಕ್ಕೂ ಹೆಚ್ಚು ಕೂಲಿ ಜತೆಗೆ ಮರ ಕಡಿಯಲು ಬೇಕಾದ ನೂತನ ಪರಿಕರಗಳು ಕಾಡಿನಲ್ಲಿ ಸಂಚರಿಸಲು ಬೇಕಾದ ಸಾಮಗ್ರಿಗಳು ಮತ್ತು ಊಟ, ತಿಂಡಿ ಒದಗಿಸುತ್ತಿದ್ದರು. ಪೊಲೀಸರು ದಾಳಿ ಮಾಡಿದರೆ ಪ್ರತಿ ದಾಳಿ ಮಾಡುವ ಹಾಗೂ ತಪ್ಪಿಸಿಕೊಳ್ಳುವ ತಂತ್ರದ ಬಗ್ಗೆ ವಿಶೇಷ ತರಬೇತಿ ಸಹ ನೀಡುತ್ತಿದ್ದರು ಎಂದು ಆಂಧ್ರ ಪೊಲೀಸರು ತಿಳಿಸಿದ್ದಾರೆ.

ಸರ್ಕಾರಿ ವಾಹನಗಳಲ್ಲೇ ರವಾನೆಯಾಗುತ್ತಿತ್ತು ಊಟ
ಇನ್ನು ಸುಳ್ಳು ಹೇಳಿ ತಮಿಳುನಾಡಿನಿಂದ ಕರೆತಂದ ಕೂಲಿ ಕಾರ್ಮಿಕರಿಗೆ ಅನುಮಾನ ಬಾರದೇ ಇರಲಿ ಮತ್ತು ಅವರು ಇದು ಸರ್ಕಾರಿ ಕೆಲಸ ಎಂದು ನಂಬಲಿ ಎಂದು ದಂಧೆಕೋರರು ತಮ್ಮ ಪ್ರಭಾವವನ್ನು ಬಳಸಿಕೊಂಡು ಸರ್ಕಾರಿ ವಾಹನಗಳಲ್ಲೇ ಕೂಲಿ ಕಾರ್ಮಿಕರಿಗೆ ಊಟ ರವಾನೆ ಮಾಡುತ್ತಿದ್ದರು ಎಂಬ ಆಘಾತಾಕಾರಿ ಅಂಶ ಬೆಳಕಿಗೆಬಂದಿದೆ. ಅಂತಾರಾಷ್ಟ್ರೀಯ ಸ್ಮಗ್ಲರ್ ಗಳ ಸಂಪರ್ಕವಿರಿಸಿಕೊಂಡಿರುವ ಸ್ಥಳೀಯ ದಂಧೆಕೋರರು, ರಾಜಕಾರಣಿಗಳು ಮತ್ತು ಸ್ಥಳೀಯ ಪೊಲೀಸ ಅಧಿಕಾರಿಗಳ ಪ್ರಭಾವವನ್ನು ತಮ್ಮ ದಂಧೆಗೆ ಬಳಸಿಕೊಳ್ಳುತ್ತಿದ್ದರು ಎಂದು ತಿಳಿದುಬಂದಿದೆ.

ವಿದೇಶದಲ್ಲಿ ರಕ್ತ ಚಂದನಕ್ಕೆ ಚಿನ್ನದ ಬೆಲೆ
ವಿಶ್ವದ ಕೆಲವೇ ಕೆಲ ಪ್ರದೇಶಗಳಲ್ಲಿ ಮಾತ್ರ ರಕ್ತಚಂದನ ಮರಗಳು ಬೆಳೆಯುತ್ತವೆ. ಪ್ರಮುಖವಾಗಿ ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಮಾತ್ರ ಈ ಮರಗಳು ಬೆಳೆದಿದ್ದು, ಉಳಿದಂತೆ ಕರ್ನಾಟಕ, ಕೇರಳ ಮತ್ತು ಪಾಕಿಸ್ತಾನ ಕೆಲ ಪ್ರದೇಶಗಳಲ್ಲಿ ಮಾತ್ರ ಈ ಮರಳಗಳನ್ನು ಬೆಳೆಯಲಾಗುತ್ತದೆ. ರಕ್ತಚಂದನ ಮರಗಳಿಗೆ ವಿದೇಶಿ ಮಾರುಕಟ್ಟೆಗಳಲ್ಲಿ ಚಿನ್ನದ ಬೆಲೆ ಇದ್ದು, 1 ಕೆಜಿ ರಕ್ತಚಂದನ ಮರಕ್ಕೆ ಸುಮಾರು 2000 ಸಾವಿರದಿಂದ 15 ಸಾವಿರ ರು.ಗಳವರೆಗೂ ಮೌಲ್ಯವಿದೆ. ಚೀನಾ, ಜಪಾನ್ ಮತ್ತು ದುಬೈಗಳಲ್ಲಿ ಈ ರಕ್ತಚಂದನಕ್ಕೆ ಹೆಚ್ಚು ಬೇಡಿಕೆ ಇದೆ. ಕರ್ನಾಟಕದ ಮಂಗಳೂರು, ಮುಂಬೈ ಮತ್ತು ಕಾಂಡ್ಲ ಬಂದರುಗಳಿಂದ ಅಕ್ರಮವಾಗಿ ರಫ್ತು ಮಾಡಲಾಗುತ್ತಿದೆ. ಚೆನ್ನೈನಲ್ಲಿ ರಕ್ತ ಚಂದನದ ಒಂದು ಕೆಜಿ ಬೆಲೆ ರು.2000 ಇದ್ದರೆ, ಸಾಗರ ದಾಟಿಸಿ ವಿದೇಶಗಳಿಗೆ ಸೇರಿಸಿದರೆ ರು.5 ಸಾವಿರ ದಾಟುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com