ಉಗ್ರ ಲಖ್ವಿ ಜೈಲಿನಿಂದ ಹೊರ ಬರದಂತೆ ಪಾಕ್ ಕ್ರಮ ಕೈಗೊಳ್ಳಬೇಕು: ಭಾರತ

ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಪಾಕಿಸ್ತಾನ ಕೋರ್ಟ್ ಆದೇಶಿಸರುವ ಬಗ್ಗೆ ಭಾರತ ತೀವ್ರ ತೀವ್ರ...
ಝಕಿ ಉರ್ ರೆಹಮಾನ್ ಲಖ್ವಿ
ಝಕಿ ಉರ್ ರೆಹಮಾನ್ ಲಖ್ವಿ

ನವದೆಹಲಿ: ಮುಂಬೈ ದಾಳಿಯ ಪ್ರಮುಖ ರೂವಾರಿ, ಲಷ್ಕರ್-ಎ-ತೋಯ್ಬಾ ಉಗ್ರ ಸಂಘಟನೆಯ ಮುಖ್ಯಸ್ಥ ಝಕಿ ಉರ್ ರೆಹಮಾನ್ ಲಖ್ವಿ ಬಿಡುಗಡೆಗೆ ಪಾಕಿಸ್ತಾನ ಕೋರ್ಟ್ ಆದೇಶಿಸರುವ ಬಗ್ಗೆ ಭಾರತ ತೀವ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಅಲ್ಲದೆ ಉಗ್ರ ಲಖ್ವಿ ಜೈಲಿನಿಂದ ಹೊರ ಬರದಂತೆ ಪಾಕ್ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.

ಲಖ್ವಿಯನ್ನು ತಕ್ಷಣವೇ ಜೈಲಿನಿಂದ ಬಿಡುಗಡೆ ಮಾಡಬೇಕು ಎಂದು ಲಾಹೋರ್ ಕೋರ್ಟ್ ಆದೇಶಿಸಿದ ಕೆಲವೇ ಗಂಟೆಗಳಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಗೃಹ ಸಚಿವಾಲಯದ ಹಿರಿಯ ಅಧಿಕಾರಿಗಳು, ಈ ಬೆಳವಣಿಗೆಯಿಂದ ತೀವ್ರ ನಿರಾಶೆಯಾಗಿದೆ ಎಂದಿದ್ದಾರೆ.

ಮುಂಬೈ ದಾಳಿಯ ರೂವಾರಿ ಜೈಲಿನಿಂದ ಹೊರ ಬರದಂತೆ ನೋಡಿಕೊಳ್ಳಲು ಬೇಕಾದ ಎಲ್ಲಾ ರೀತಿಯ ಕಾನೂನು ಕ್ರಮಗಳನ್ನು ಪಾಕಿಸ್ತಾನ ಸರ್ಕಾರ ತೆಗೆದುಕೊಳ್ಳಬೇಕು ಮತ್ತು ಈ ಕುರಿತು ಭಾರತಕ್ಕೆ ಖಚಿತಪಡಿಸಬೇಕು ಎಂದು ಗೃಹ ಸಚಿವಾಲಯದ ಅಧಿಕಾರಿಗಳು ಆಗ್ರಹಿಸಿದ್ದಾರೆ.

ಲಖ್ವಿ ಬಂಧನ ಕಾನೂನು ಬಾಹಿರ ಎಂದಿರುವ ಲಾಹೋರ್ ಹೈಕೋರ್ಟ್, ಪಾಕಿಸ್ತಾನದ ರಾವಲ್ಪಿಂಡಿ ಜೈಲಿನಲ್ಲಿರುವ ಲಖ್ವಿಯನ್ನು ಕೂಡಲೇ ಬಿಡುಗಡೆ ಮಾಡುವಂತೆಆದೇಶಿಸಿದೆ.


ಪಾಕಿಸ್ತಾನ ಸರ್ಕಾರ ಲಖ್ವಿಯ ರಹಸ್ಯ ದಾಖಲೆ ಪತ್ರಗಳು ಮತ್ತು ಆತನ ಚಟುವಟಿಕೆಯ ವಿವರ ಸಲ್ಲಿಸುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ಲಾಹೋರ್ ಕೋರ್ಟ್, ಸಾರ್ವಜನಿಕ ಶಾಂತಿ ಮತ್ತು ಸುವ್ಯವಸ್ಥೆ ಕಾಯಿದೆಯಡಿ ಲಖ್ವಿ ಬಂಧನವನ್ನು ರದ್ದುಗೊಳಿಸಿ, ಬಿಡುಗಡೆಗೆ ಆದೇಶಿಸಿದೆ.


ಝಕಿ ಉರ್ ರೆಹಮಾನ್ ಲಖ್ವಿ ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ 2009ರಿಂದಲೂ ಜೈಲುವಾಸದಲ್ಲಿದದ್ದು, ಕಳೆದ ವರ್ಷ ಡಿ.18ರಂದು ಭಯೋತ್ಪಾದನಾ ನಿಗ್ರಹ ಕೋರ್ಟ್ ಲಖ್ವಿಗೆ ಜಾಮೀನು ನೀಡಿತ್ತು. ಆದರೆ ಮತ್ತೆ ಆತನನ್ನು ಬಂಧಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಲಖ್ವಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದನು. ನಂತರ ಹೈಕೋರ್ಟ್ ಆತನ ಬಂಧನದ ಆದೇಶ ಅಮಾನತಿನಲ್ಲಿಟ್ಟು ಜಾಮೀನು ನೀಡಿತ್ತು.

ಪಾಕಿಸ್ತಾನ ಕೋರ್ಟ್ ಲಖ್ವಿಗೆ ಹಲವು ಬಾರಿ ಜಾಮೀನು ನೀಡಿದರೂ, ಭಾರತದ ಒತ್ತಡಕ್ಕೆ ಮಣಿದು ಪಾಕಿಸ್ತಾನ ಸರ್ಕಾರ ಉಗ್ರನ ಬಿಡುಗಡೆಯನ್ನು ತಡೆಯುತ್ತಾ ಬಂದಿದೆ. ಈಗ ಮತ್ತೆ ಉಗ್ರನ ಬಿಡುಗಡೆಗೆ ಕೋರ್ಟ್ ಆದೇಶಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com