
ರಾಯಚೂರು: ತಮಿಳುನಾಡು ಸರ್ಕಾರವು ಮೇಕೆದಾಟು ಯೋಜನೆ ಬಗ್ಗೆ ಅನಗತ್ಯ ಹುಯಿಲೆಬ್ಬಿಸುತ್ತಿದೆ ಎಂದು ಬಿಜೆಪಿ ಮುಖಂಡ ಡಾ. ಸುಬ್ರಹ್ಮಣ್ಯನ್ ಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದರು.
ನಗರ ಹೊರವಲಯದ ಯಮಮರಸ್ ನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇಕೆದಾಟು ಯೋಜನೆಯನ್ನು ರಾಜಕೀಯ ಲಾಭಕ್ಕಾಗಿ ಎಐಡಿಎಂಕೆ ಸೇರಿದಂತೆ ಹಲವು ಪಕ್ಷಗಳು ಬಳಸಿಕೊಳ್ಳುತ್ತಿವೆ. ತಮಿಳುನಾಡು ಸರ್ಕಾರವು ಇಸ್ರೇಲ್ ಮಾದರಿಯಲ್ಲಿ ಸಮುದ್ರದ ನೀರನ್ನು ಕುಡಿಯಲು ಯೋಗ್ಯ ಮಾಡುವ ತಂತ್ರಜ್ಞಾನ ಅಳವಡಿಸಿಕೊಂಡಲ್ಲಿ ಸಮಸ್ಯೆಗೆ ಪರಿಹಾರ ತಾನಾಗಿಯೇ ದೊರೆಯಲಿದೆ.
ಅದರ ಬದಲಿಗೆ ನೆರೆಯ ರಾಜ್ಯಗಳೊಂದಿಗೆ ತಂಟೆ ತೆಗೆಯುವುದು ಸಲ್ಲದು ಎಂದರು. ಬ್ರಿಟಿಷರ ಕಾಲದಲ್ಲಿಯೇ ಕರ್ನಾಟಕಕ್ಕೆ ನೀರಾವರಿ ಯೋಜನೆಗಳ ಜಾರಿಗೆ ಸಂಬಂಧಿಸಿ ಅನ್ಯಾಯ ಮಾಡಲಾಗಿತ್ತು. ಆಗಿನ ಕಾಲಘಟ್ಟದಲ್ಲಿ ತಮಿಳುನಾಡಿನಲ್ಲಿಯೇ ಬ್ರಿಟಿಷರ ಆಡಳಿತ ಕೇಂದ್ರ ಇದ್ದ ಕಾರಣ ಹತ್ತಾರು ರೀತಿಯ ನೀರಾವರಿ ಸವಲತ್ತು ಪಡೆದುಕೊಳ್ಳಲಾಗಿದೆ. ಹಾಗಾಗಿ ಸದ್ಯ ಕರ್ನಾಟಕದೊಂದಿಗೆ ತಮಿಳುನಾಡು ಮೇಕೆದಾಟು ವಿಚಾರಕ್ಕೆ ತೊಡಕುಂಟು ಮಾಡುವುದು ಸೂಕ್ತವಲ್ಲ ಎಂದು ಹೇಳಿದರು.
ಜಯಲಲಿತಾ ಕೇಸ್
ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿ ತಮಿಳುನಾಡು ಮಾಜಿ ಸಿಎಂ ಜೆ. ಜಯಲಲಿತಾ ಮತ್ತು ಗೆಳತಿ ಶಶಿಕಲಾ ಶೀಘ್ರದಲ್ಲಿಯೇ ಮತ್ತೆ ಜೈಲು ಸೇರಲಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದ್ದು ಶೀಘ್ರ ತೀರ್ಪು ಹೊರಬೀಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement