

ಮುಂಬೈ: ರೂಪದರ್ಶಿಯೊಬ್ಬಳ ಮೇಲೆ ಪೊಲೀಸರೇ ಅತ್ಯಾಚಾರ ಮಾಡಿರುವ ಘಟನೆ ಮುಂಬೈನಲ್ಲಿ ನಡೆದಿದ್ದು, ತಾನು ಅತ್ಯಾಚಾರಕ್ಕೊಳಗಾಗಿದ್ದೇನೆ ಎಂದು ಮಾಡೆಲ್ ಮುಂಬೈ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ.
ಚಿತ್ರವೊಂದರ ಆಡಿಷನ್ ಗಾಗಿ ಆಗಮಿಸಿದ್ದ ತನ್ನನ್ನು ಪೊಲೀಸರು ಅತ್ಯಾಚಾರ ಮಾಡಿ, ತನ್ನ ಬಳಿ ಹಣ ಲಪಟಾಯಿಸಿದ್ದಾರೆ ಎಂದು 29 ವರ್ಷದ ರೂಪದರ್ಶಿಯೊಬ್ಬಳು ಮುಂಬೈ ಪೊಲೀಸ್ ಕಮಿಷನರ್ ರಾಕೇಶ್ ಮಾರಿಯಾ ಅವರಿಗೆ ದೂರು ನೀಡಿದ್ದಾಳೆ. ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ತನ್ನ ಮೇಲೆ ಹಲ್ಲೆ ನಡೆಸಿ, ಲೈಂಗಿಕವಾಗಿ ಬಳಸಿಕೊಂಡರು ಎಂದು ಆಕೆ ದೂರಿನಲ್ಲಿ ತಿಳಿಸಿದ್ದಾಳೆ.
ಬಳಿಕ ದೂರು ನೀಡಿರುವ ರೂಪದರ್ಶಿಯನ್ನು ತಮ್ಮ ಕಚೇರಿಗೆ ಕರೆಸಿಕೊಂಡಿದ್ದ ಮುಂಬೈ ಪೊಲೀಸ್ ಆಯುಕ್ತ ರಾಕೇಶ್ ಮಾರಿಯಾ ಅವರು, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಲೂಟಿ ಪ್ರಕರಣಗಳಡಿಯಲ್ಲಿ ದೂರು ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗುತ್ತಿರುವ ಇಬ್ಬರು ಸಹಾಯಕ ಪೊಲೀಸ್ ಇನ್ಸ್ ಪೆಕ್ಟರ್ ಗಳು, ಓರ್ವ ಕಾನ್ಸ್ ಟೇಬರಲ್, ಓರ್ವ ಮಹಿಳೆ ಸೇರಿದಂತೆ ಒಟ್ಟು 6 ಮಂದಿಯನ್ನು ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.
ರೂಪದರ್ಶಿ ನೀಡಿರುವ ದೂರಿನಲ್ಲೇನಿದೆ..?
ಪೊಲೀಸ್ ಆಯುಕ್ತರಿಗೆ ರೂಪದರ್ಶಿ ನೀಡಿರುವ ದೂರಿನಲ್ಲಿ, "ತಾನು ಚಿತ್ರವೊಂದರಲ್ಲಿ ಪಾತ್ರಕ್ಕಾಗಿ ಆಡಿಷನ್ ಗಾಗಿ ಕಳೆದ ಏಪ್ರಿಲ್ 3ರಂದು ರಾತ್ರಿ ಪಂಚತಾರಾ ಹೊಟೆಲ್ ಗೆ ಆಗಮಿಸಿದ್ದೆ. ಆಡಿಷನ್ ಮುಗಿಸಿಕೊಂಡು ಅದೇ ರಾತ್ರಿ ನಡೆದುಕೊಂಡು ಹೋಗುತ್ತಿದ್ದಾಗ ಹಿಂಬದಿಯಿಂದ ವಾಹನದಲ್ಲಿ ಬಂದಿದ್ದ ಪೊಲೀಸರು ನನ್ನನ್ನು ನೋಡಿ ವಾಹನದಲ್ಲಿ ಕುಳಿತುಕೊಳ್ಳುವಂತೆ ಹೇಳಿದರು.
ನಾನು ವಾಹನ ಹತ್ತುವುದಿಲ್ಲ ಎಂದಾಗ ಬಂಧಿಸುವುದಾಗಿ ಬೆದರಿಸಿ ಬಲವಂತವಾಗಿ ವಾಹನ ಹತ್ತಿಸಿಕೊಂಡು ಅಂಧೇರಿಯಲ್ಲಿರುವ ಸಾಕಿನಾಕ ಪೊಲೀಸ್ ಠಾಣೆಗೆ ಕರೆದೊಯ್ದರು. ನನ್ನ ಬಳಿ ಇದ್ದ ಹಣ ಮತ್ತು ಒಡವೆಗಳನ್ನು ಕಸಿದುಕೊಂಡ ಪೊಲೀಸರು, ಇಡೀ ರಾತ್ರಿ ನನ್ನ ಮೇಲೆ ನಿರಂತರ ಅತ್ಯಾಚಾರ ಮಾಡಿದರು.
ಬೆಳಗ್ಗೆ ನನ್ನನ್ನು ಬಿಡುಗಡೆ ಮಾಡಲು 4.5 ಲಕ್ಷ ಹಣ ನೀಡುವಂತೆ, ಹಣ ನೀಡದಿದ್ದರೆ ಜೈಲಿಗೆ ಅಟ್ಟುವುದಾಗಿ ಪೊಲೀಸರು ಹೇಳಿದರು. ಹೆದರಿದ ನಾನು ನನ್ನ ಸ್ನೇಹಿತರಿಗೆ ಕರೆ ಮಾಡಿದೆ. ನನ್ನ ಸ್ನೇಹಿತ ರಾತ್ರಿಯೆಲ್ಲಾ ಕಷ್ಟಪಟ್ಟ ವಿವಿಧ ಎಟಿಎಮ್ ಗಳಿಗೆ ತೆರಳಿ ಹಣ ತಂದು ಪೊಲೀಸರಿಗೆ ನೀಡಿ ಕರೆದುಕೊಂಡು ಹೋದ. ಘಟನೆಯಿಂದ ಭಯಭೀತಳಾಗಿದ್ದ ನಾನು ತಕ್ಷಣವೇ ಮುಂಬೈ ತೊರೆದೆ. ಬಳಿಕ ಸ್ನೇಹಿತರ ಧೈರ್ಯದೊಂದಿಗೆ ದೂರು ನೀಡುತ್ತಿದ್ದೇನೆ ಎಂದು ರೂಪದರ್ಶಿ ಹೇಳಿಕೊಂಡಿದ್ದಾಳೆ.