
ಮುಂಬೈ: ಹಿಂದೂ ರಾಷ್ಟ್ರವಾಗಿರುವ ಭಾರತದಲ್ಲಿ ಹಿಂದೂ ಭಯೋತ್ಪಾದನೆಯನ್ನು ಹರಡುವುದಕ್ಕೆ ಯಾವುದೇ ಕಾರಣಗಳಿಲ್ಲ ಎಂದು ಶಿವಸೇನೆ ಹೇಳಿದೆ.
ಭಯೋತ್ಪಾದನೆಗೆ ಕೇಸರಿ ಬಣ್ಣವನ್ನು ಹಚ್ಚಿ ರಾಜಕೀಯದಾಟವನ್ನು ಆಡುವುದು ಕುಚೋದ್ಯತನದ ಹಾಗೂ ಸ್ವಾರ್ಥಪರ ರಾಜಕಾರಣವಾಗಿದೆ. ಮಾತ್ರವಲ್ಲದೆ ಪಾಕ್ ಪ್ರಾಯೋಜಕತ್ವದ ಭಯೋತ್ಪಾದನೆಗೆ ಹಸಿರು ಪರದೆಯನ್ನು ಹಾಕಿ ಮರೆಮಾಚುವುದು ಸ್ವಂತ ದೇಶಕ್ಕೆ ಬಗೆಯುವ ದ್ರೋಹವಾಗಿದೆ ಎಂದು ಶಿವಸೇನೆಯು ತನ್ನ ಮುಖವಾಣಿ ಸಾಮ್ನಾದಲ್ಲಿ ಕಿಡಿಕಾರಿದೆ.
ಹಿಂದೂ ಭಯೋತ್ಪಾದನೆ ಕುರಿತ ಚರ್ಚೆಯಲ್ಲಿ ಅತ್ಯಂತ ಬಲಯುತವಾಗಿ ತನ್ನ ವಾದವನ್ನು ಮಂಡಿಸಿರುವ ಶಿವಸೇನೆ, ಶೇಕಡಾ ನೂರು ಹಿಂದುಗಳಿರುವ ಭಾರತದಲ್ಲಿ ಭಯೋತ್ಪಾದನೆಯನ್ನು ಹರಡುವ ಯಾವುದೇ ಕಾರಣ ಅಥವಾ ಅನಿವಾರ್ಯತೆ ಹಿಂದೂಗಳಿಗಿಲ್ಲ ಎಂದು ಹೇಳಿತು.
ಕೆಲ ದಿನಗಳ ಹಿಂದಷ್ಟೇ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಅವರು ಕಾಂಗ್ರೆಸ್ ಪಕ್ಷವು ದೇಶದಲ್ಲಿ ಹಿಂದೂ ಭಯೋತ್ಪಾದನೆ ಎಂಬ ಪದಗಳನ್ನು ಬಳಕೆಗೆ ತರುವ ಮೂಲಕ ಭೀತಿವಾದ ವಿರುದ್ಧದ ದೇಶದ ಹೋರಾಟವನ್ನು ದುರ್ಬಲಗೊಳಿಸಿತು ಎಂದು ಆಪಾದಿಸಿದ್ದರು.
Advertisement